Spread the love

ಮಾನವ ಪ್ರೇಮಿ, ಆರ್ತರ ಸ್ನೇಹಿ ಅಮರ ಸೇವಾದರ್ಶಿ ಸಂತ ಲಾರೆನ್ಸರ ಹಬ್ಬದ ಸಂದರ್ಭ

ಕವಿತಾನಮನ

============

ಲಾರೆನ್ಸರು ಸೇವಾದರ್ಶಿಯಾಗಿ ಪರಮಸಭೆಯ ಸೊತ್ತಿನ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದವರು. ಅಂದಿನ ಆಡಳಿತಾಶಾಹಿಗಳು ಪರಮಸಭೆಯ ಸೊತ್ತನ್ನು ತಮ್ಮ ಅಧೀನಕ್ಕೆ ಒಪ್ಪಿಸಲು ಆದೇಶಿಸುತ್ತಾರೆ. ಆದರೆ ಲಾರೆನ್ಸರು ಬಡವರಿಗಾಗಿದ್ದ ಸಂಪತ್ತನ್ನು ಆಡಳಿತಕ್ಕೆ ಒಪ್ಪಿಸಿ ಅವರಿಂದ ಮೆಚ್ಚುಗೆ ಪಡೆಯುವುದರ ಬದಲು, ಆಡಳಿತವನ್ನು ಎದುರು ಹಾಕಿಕೊಂಡು ಸಮಸ್ತ ಸಂಪತ್ತನ್ನು ಬಡಬಗ್ಗರಿಗೆ ಹಂಚಿ ಏಸು ಬಾಳಿದ ಆದರ್ಶವನ್ನು ಮೆರೆಯುತ್ತಾರೆ. ಇದರಿಂದ ಕ್ರುದ್ಧಗೊಂಡ ಆಡಳಿತ ವರ್ಗ ಲಾರೆನ್ಸರನ್ನು ‌ತೆರೆದ ಪ್ರದೇಶದಲ್ಲಿ ಕಾವಲಿಯಲ್ಲಿ ಸುಟ್ಟು ಕೊಲ್ಲುವ ಫರ್ಮಾನನ್ನು ನೀಡುತ್ತದೆ. ಆದರೆ ಈ ಸಂಕಷ್ಟದಲ್ಲೂ ಲಾರೆನ್ಸರು ಪ್ರಾಣಭಿಕ್ಷೆ ಕೇಳಲಿಲ್ಲ. ಅಮರ ಸೇವಾದರ್ಶಿ ಸಾಮಾಜಿಕ ಬದ್ಧತೆಗೆ ನಮಗೆ ಸದಾ ಮಾರ್ಗದರ್ಶಿ.

ಹೊನ್ನ ಆಸೆಗೆ ಬಾಗಲಿಲ್ಲ, ಸುಪ್ಪತ್ತಿಗೆ ಬಯಸಲಿಲ್ಲ, ರಾಜಾಶ್ರಯದ ಬಯಕೆ ಸೆಳೆಯಲಿಲ್ಲ…

ಮುಂದೆ ಸುಡುವ ಕಾವಲಿ ಇದ್ದರೂ,
ಪ್ರಾಣದ ಭಯ ಕಾಡಲಿಲ್ಲ
ಶಿಕ್ಷೆಗಾಗಿ ಕ್ಷಮೆಯ ಭಿಕ್ಷೆ ಬೇಡಲಿಲ್ಲ

ಕಾರಣವೊಂದೇ….
ತಾನು ಆರ್ತರ ಕಾಯಬೇಕು,
ಏಸು ಬಾಳಿದ ಸಂದೇಶ ಅನುಕರಿಸಬೇಕು

ಹಿಡಿದೆಳೆದರು, ಸುಡುವ ಕಾವಲಿಗೆ ಸರಪಳಿ ಬಿಗಿದರು
ತೊಗಲು ಸುಟ್ಟು ದೇಹ ಬೇಯತೊಡಗಿತು…

ಇಲ್ಲ ಚೀರಾಟ, ಕೊಸರಾಟ
ಸ್ಮಿತವದನನ ಪ್ರಭೆ ಪ್ರಕಾಶ
ಸೊತ್ತು, ಹೊನ್ನು ನಗಣ್ಯ
ಬಡ ಬಗ್ಗರೇ ನೈಜ ಆಸ್ತಿ, ಸಾಮ್ರಾಜ್ಯ

ಬೆಂದಿತೊಂದು ಮಗ್ಗುಲು,
ಇಲ್ಲ ನೋವು, ಹತಾಶೆಯ ಅಳಲು!
ಪಸರುವ ನಡುವೆ ದಿವ್ಯಧೂಪದ ಘಮಲು
ಪೂರ್ತಿ ಬೆಂದಿದೆ; ಕರೆ ಸಂತನಿಂದ ಬದಲಿಸಿ ಕಾಯಿಸಲು ಮತ್ತೊಂದು ಹಸಿ ಮಗ್ಗುಲು

ಶಿಕ್ಷೆ ನೀಡುವ ಕೈಗಳೇ ಸುಟ್ಟವು ಮಾನವ ಪ್ರೇಮಿಯ ಕಾವಿನಿಂದ
ಸಂಪತ್ತು ಕರಗಿತು ತ್ಯಾಗದ ಶಾಖದಿಂದ
ನಂಬಿದ ಬಡವರಿಗೆ ಸಂತನ ಪ್ರಾಣ ತರ್ಪಣದಿಂದ.

ಆದರೆ ! ಇಂದೇನು?
ಸಂತ ಬಯಸುವ ಜನರು ವ್ಯವಸ್ಥೆಯಿಂದ ವ್ಯವಸ್ಥಿತವಾಗಿ ದೂರ, ವ್ಯಾಧಿಷ್ಠರು, ವ್ಯಸನಿಗಳು,ಪಾಪಿಷ್ಠರೆಂದು ಜರೆಯಲ್ಪಟ್ಟವರು, ಸಂತನಿಗೆ ಪ್ರಿಯವಾದರೂ, ಸಂತನ ಹೆಸರಿನ ಆಡಳಿತಕ್ಕೆ ಭಾರ;
ಆತನ ಆದರ್ಶಗಳು ಇನ್ನೂ ದೂರ ದೂರ!

ಬದಲಿಸಬೇಕು ನಾವೆಲ್ಲರೂ ಸಮಾಜಮುಖಿಯಾಗಿ ಮಗ್ಗುಲ

ಆಗಲೇ ಸೇವಾದರ್ಶಿಯ ಬಲಿದಾನದ ಆಶಯ ಸಾಕಾರ…

====================
-ಅಶ್ವಿನಿ ಲಾರೆನ್ಸ್ ಮೂಡುಬೆಳ್ಳೆ

error: No Copying!