ಕಾರ್ಕಳ: ದಿನಾಂಕ 17-12-2022 (ಹಾಯ್ ಉಡುಪಿ ನ್ಯೂಸ್) ಕಾರ್ಕಳದ ರಬ್ಬರ್ ತೋಟವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೇರಳದ ಕೂಲಿ ಕಾರ್ಮಿಕನ ಸಾವು ಆತ್ಮಹತ್ಯೆ ಅಲ್ಲ, ಇದೊಂದು ಕೊಲೆ ಎಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳ ,ಮಲಪ್ಪುರಂ,ಎಡಕ್ಕಾರು ,ಮೋತೆಡಮ್,ಎನ್ನಕ್ಕರಕ್ಕಳ್ಳಿ ನಿವಾಸಿ ಸುಧಾ ಕೆ.ಎಸ್ (55) ಇವರ ಗಂಡ ಟಿ ಕೆ ಗೋಪಿನಾಥನ್ ನಾಯರ್ ರವರು ರಬ್ಬರ್ ಎಸ್ಟೇಟ್‌ಗಳಲ್ಲಿ ಟ್ಯಾಪಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದು ಅವರನ್ನು 2022 ರ ಜೂನ್ ತಿಂಗಳಿನಲ್ಲಿ ಆರ್ ವಿವೇಕಾನಂದ ಶೆಣೈ ಮತ್ತು ದಿಲೀಪ್ ಜಿ ಎಂಬವರು ಸಾಣೂರು ಗ್ರಾಮದ ಶುಂಟಿಗುಡ್ಡೆ ಎಂಬಲ್ಲಿರುವ ತಮ್ಮ ರಬ್ಬರ್ ಪ್ಲಾಂಟೇಷನ್‌ನಲ್ಲಿ ಟ್ಯಾಪರ್ ಕೆಲಸಕ್ಕೆ ನೇಮಕ ಮಾಡಿ ಅಲ್ಲಿಯೇ ಗುಡಿಸಲಿನಲ್ಲಿ ಉಳಿದುಕೊಳ್ಳಲು ಬಿಟ್ಟಿದ್ದರು ಎನ್ನಲಾಗಿದೆ.
ನಂತರ ಸುಧಾ ಕೆ.ಎಸ್ ರವರು ತಿಳಿದು ಕೊಂಡಂತೆ ಆರ್ ವಿವೇಕಾನಂದ ಶೆಣೈ, ದಿಲೀಪ್ ಜಿ, ಮತ್ತು ಇತರರು ಇವರು ಸುಧಾ ಕೆ. ಎಸ್ ಇವರ ಗಂಡನಿಗೆ ಸರಿಯಾಗಿ ಸಂಬಳವನ್ನು ನೀಡದೇ ಹಾಗೂ ಅಗತ್ಯವಿದ್ದಾಗ ರಜೆಯನ್ನೂ ನೀಡದೇ ತೊಂದರೆ ನೀಡುತ್ತಿದ್ದು ಹಾಗೂ ಕೆಲಸವನ್ನು ಬಿಟ್ಟರೆ ಕೊಲೆ ಮಾಡುವುದಾಗಿ ಗಂಡನಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿದ್ದಾರೆ.
ಸುಧಾ ಕೆ. ಎಸ್ ರವರ ಗಂಡ ಫೋನ್ ಕರೆ ಮಾಡಿ ಮಾತನಾಡುತ್ತಿದ್ದಾಗ ತಾನು ಒಬ್ಬನೇ ಇಲ್ಲಿ ಇದ್ದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರೆಲ್ಲ ಇವರ ಕಿರುಕುಳದಿಂದ ಬಿಟ್ಟುಹೋಗಿರುತ್ತಾರೆ. ಕೆಲವು ದಿನಗಳ ಹಿಂದೆ ಕೇರಳದಿಂದ ಕೆಲಸಕ್ಕೆಂದು ಬಂದವರೊಬ್ಬರು ಇವರೆಲ್ಲರ ಕಿರುಕುಳದಿಂದ ತಾನು ಇಲ್ಲಿ ಇರುವುದಿಲ್ಲ ಒಂದೆರಡು ದಿನಗಳಲ್ಲಿ ಬಿಟ್ಟುಹೋಗುತ್ತೇನೆಂದು ಹೇಳುತ್ತಿದ್ದು ಇದರಿಂದ ಹೆದರಿದ ಸುಧಾ ಕೆ. ಎಸ್ ರವರ ಗಂಡ ದಿನಾಂಕ 17/10/2022 ರಂದು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಿ 2-3 ಮೊಬೈಲ್ ನಂಬರ್‌ಗಳನ್ನು ಕಳುಹಿಸುತ್ತೇನೆ ಇವುಗಳನ್ನು ಮೊಬೈಲ್ ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ಸಂಜೆಯ ಸಮಯ ತಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್‌ಗಳನ್ನು ಪೋಲೀಸರಿಗೆ ತಿಳಿಸಿ ದೂರು ನೀಡುವಂತೆ ತಿಳಿಸಿರುತ್ತಾರೆ ಎಂದು ಸುಧಾ ಕೆ.ಎಸ್ ಆರೋಪಿಸಿದ್ದಾರೆ.
ದಿನಾಂಕ 19/10/2022 ರಂದು ಅಪಾದಿತ ದಿಲೀಪ್ ಫೋನ್ ಮಾಡಿ ಗಂಡ ಕಾಣಿಸುತ್ತಿಲ್ಲ ಮಿಸ್ಸಿಂಗ್ ದೂರು ನೀಡಲು ಅವರ ಆಧಾರ್ ಕಾರ್ಡ್ ಕಳುಹಿಸಿ ಎಂದು ಹೇಳಿ ನಂತರ ಗಂಡ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ತಿಳಿಸಿದ್ದು ಸುಧಾ ಕೆ. ಎಸ್ ರವರ ಮಗ ಕೂಡಲೇ ಬಂದು ನೋಡಿದಾಗ ಸುಧಾ ಕೆ. ಎಸ್ ರವರ ಗಂಡ ಎಸ್ಟೇಟ್‌ನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತಪಟ್ಟ ಬಗ್ಗೆ ತಿಳಿಯಿತು ಎಂದಿದ್ದಾರೆ.ಮೃತರ ಗಂಡನಿಗೆ ಪೆಟ್ರೋಲ್ ಸುರಿದುಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡುವ ಯಾವುದೇ ಮನಸ್ಥಿತಿ ಇಲ್ಲದಿದ್ದು ಅಪಾದಿತರು ತಮ್ಮ ಕ್ರಿಮಿನಲ್ ಹಿನ್ನೆಲೆಯ ಅಪಾದಿತರೊಂದಿಗೆ ಸುಧಾ ಕೆ. ಎಸ್ ಇವರ ಗಂಡನಿಗೆ ಹಿಂಸೆ ನೀಡಿ ಆತ್ಮಹತ್ಯೆ ಮಾಡಲು ಪ್ರಚೋದಿಸಿರುತ್ತಾರೆ ಎಂದು ಸುಧಾ ಕೆ.ಎಸ್ ರವರು ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.