Spread the love

ಹೃದಯ ವಿದ್ರಾವಕ ಘಟನೆ……..

ವರ್ಣಿಸಲು ಪದಗಳಿಲ್ಲ, ಸುಮ್ಮನಿರಲು ಮನಸ್ಸು ಬಿಡುತ್ತಿಲ್ಲ, ಸೃಷ್ಟಿಯ ನಿಯಮದ ಬಗ್ಗೆ ಅಸಮಾಧಾನ, ದೇವರ ಕಲ್ಪನೆಯ ಬಗ್ಗೆ ಆಕ್ರೋಶ, ಆ ಜನರ ನಿರ್ಲಿಪ್ತತೆ ಬಗ್ಗೆ ಬೇಸರ, ನಮ್ಮ ಅಸಹಾಯಕತೆ ಬಗ್ಗೆ ವಿಷಾದವಾಗುತ್ತಿದೆ. ಛೇ…ಛೇ…..

ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಸಿನಿಮಾ ವೀಕ್ಷಿಸಿದ್ದಕ್ಕಾಗಿ ಉತ್ತರ ಕೊರಿಯಾದ ಪ್ರೌಡ ಶಾಲೆಯ ಇಬ್ಬರು ಬಾಲಕರನ್ನು ಉತ್ತರ ಕೊರಿಯಾ ಸರ್ಕಾರ ಗಲ್ಲಿಗೇರಿಸಿದೆ….

ಇರಾನ್ ಚೀನಾ ದಂತ ದೇಶಗಳಲ್ಲಿ ಸಹ ವಿವಿಧ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವಾಗ ಇಷ್ಟೊಂದು ಅಮಾನವೀಯ ಘಟನೆ ನಡೆದಾಗಲೂ ಉತ್ತರ ಕೊರಿಯಾದ ಜನರಿಂದ ಪ್ರತಿಭಟನೆಯ ಯಾವ ಸುದ್ದಿಗಳು ಇಲ್ಲಿಯವರೆಗೆ ಇನ್ನೂ ತಲುಪಿಲ್ಲ.

ಈ ರಾಕ್ಷಸ ಘಟನೆಯ ವಿರುದ್ಧ ವಿಶ್ವದ ಜನ ಧ್ವನಿ ಎತ್ತಲು ಸಾಧ್ಯವಿಲ್ಲವೇ. ಅವನ್ಯಾರೋ ( Kim jong un ) ಕಿಮ್ ಜಾಂಗ್ ಉನ್ ಎಂಬ ಅಧ್ಯಕ್ಷ – ಭೂಮಿಯ ಮೇಲಿನ ರಾಕ್ಷಸ ಅಷ್ಟೊಂದು ಪ್ರಬಲನೇ ಅಥವಾ ಇಡೀ ಉತ್ತರ ಕೊರಿಯಾ ಜನ ದಂಗೆ ಏಳದಷ್ಟು ಅಸಹಾಯಕರೇ ಅಥವಾ ಅಷ್ಟೊಂದು ಭಯ ಹುಟ್ಟಿಸಿರುವನೇ ಅಥವಾ ಅವನಲ್ಲಿಯೂ ಆ ದೇಶದ ಜನ ಮೆಚ್ಚುವಂತ ಮತ್ತು ತನ್ನ ದೌರ್ಬಲ್ಯ ಮೀರುವಂತ ಒಳ್ಳೆಯ ಆಡಳಿತಾತ್ಮಕ ಲಕ್ಷಣಗಳು ಇರಬಹುದೇ… ಆ ಕಾರಣದಿಂದ ಜನ ಅವನ ಬಗ್ಗೆ ಸಹಾನುಭೂತಿ ಹೊಂದಿರಬಹುದೇ….

ಹೀಗೆ ವಿಧವಿಧವಾಗಿ ಯೋಚಿಸುತ್ತಿದ್ದೇನೆ.

ಆ ದೇಶದ ಸೈನಿಕರು ಸಹ ಮನುಷ್ಯರಲ್ಲವೇ, ಅಧ್ಯಕ್ಷನ ದೌರ್ಜನ್ಯ, ತಿಕ್ಕಲುತನದ ವಿರುದ್ಧ ದಂಗೆ ಏಳಬಹುದಿತ್ತಲ್ಲವೇ, ಅದಕ್ಕೆ ಜನ ಬೆಂಬಲ ಸಿಗುತ್ತಿತ್ತಲ್ಲವೇ ಅಥವಾ ನನಗೆ ಆ ದೇಶದ ಬಗ್ಗೆ ಇರುವ ಮಾಹಿತಿ ತುಂಬಾ ಕಡಿಮೆಯೇ ಒಂದೂ ಅರ್ಥವಾಗುತ್ತಿಲ್ಲ….

ಆದರೆ ಏನೂ ಅರಿಯದ ಆ ಪುಟ್ಟ ಬಾಲಕರು ತಾವು ಏನು ತಪ್ಪು ಮಾಡುತ್ತಿದ್ದೇವೆ ಎಂಬುದರ ಅರಿವಾಗುವ ಮೊದಲೇ ಹೆಣವಾಗಿರುವುದು ಅತ್ಯಂತ ನೋವಿನ ಸಂಗತಿ. ಆ ದೇಶದ ಕಾನೂನಿನಲ್ಲಿ ಆ ರೀತಿಯ ಸಿನಿಮಾ ನೋಡುವುದು ಅಪರಾಧ ಎಂದು ಹೇಳಲಾಗಿದೆ. ಆದರೆ ಅದಕ್ಕೆ ಆ ಬಾಲಕರಿಗೆ ಕನಿಷ್ಠ ಶಿಕ್ಷೆ ವಿಧಿಸಬಹುದಿತ್ತು. ಅವರ ತಪ್ಪು ತಿದ್ದಿಕೊಳ್ಳಲು ಮತ್ತೊಂದು ಅವಕಾಶ ನೀಡಬಹುದಿತ್ತು. ಏಕೆಂದರೆ ಅವರು ಕಾನೂನಿನ ಪ್ರಕಾರವೇ ಮಾಡಿರಬಹುದಾದ ಅಪರಾಧ ತೀರಾ ಗಂಭೀರವೇನು ಅಲ್ಲ. ಅಲ್ಲದೇ ಆ ದೇಶ ಅವನ್ಯಾರೋ ಅಧ್ಯಕ್ಷನಿಗೆ ಮಾತ್ರ ಸೇರಿದ್ದಲ್ಲ.

ಹೌದು, ಇಷ್ಟೇ ಹೃದಯ ವಿದ್ರಾವಕ ಘಟನೆಗಳು ಇತರ ಕಡೆಯೂ ನಡೆಯುತ್ತದೆ. ಆದರೆ ಆಕಸ್ಮಿಕಗಳನ್ನು ಹೊರತುಪಡಿಸಿ ಈ ರೀತಿಯ ಉದ್ದೇಶಪೂರ್ವಕ ಮತ್ತು ಅಹಂಕಾರದ ಅಮಾನವೀಯ ಘಟನೆಗಳಿಗೆ ಒಂದು ಮನುಷ್ಯ ಪ್ರಾಣಿ ಕಾರಣವಾಗುವುದು ಮತ್ತು ಅದು ಇನ್ನೂ ಜೀವಂತವಿರುವುದು ಮಾತ್ರ ಸಹಿಸಲು‌ ಸಾಧ್ಯವಾಗುತ್ತಿಲ್ಲ.

ಅಂತಹ ಒಂದು ದುಷ್ಟ ಶಕ್ತಿಯನ್ನು ಮಣಿಸಲು ಅತಿಮಾನುಷ ಶಕ್ತಿ ಅಸ್ತಿತ್ವದಲ್ಲಿ ಇಲ್ಲವಲ್ಲ ಎಂದು ಮನಸ್ಸು ಚಡಪಡಿಸುತ್ತಿದೆ. ನಮ್ಮ ಮಕ್ಕಳಿಗೆ ಆ ರೀತಿಯ ಶಿಕ್ಷೆ ಪ್ರಕಟವಾದಾಗ ನಮ್ಮ ಮನಸ್ಥಿತಿ ಹೇಗಿರಬಹುದು ಎಂದು ಒಮ್ಮೆ ಕಲ್ಪಿಸಿಕೊಳ್ಳಿ. ಕರಳು ಕಿತ್ತು ಬರುತ್ತದೆ. ಆಕ್ರೋಶ ಉಕ್ಕಿ ಹರಿಯುತ್ತದೆ……

ಹಾಗೆಯೇ ಉತ್ತರ ಕೊರಿಯಾದ ಜನರಲ್ಲಿ ಈ ರೀತಿಯ ಭಾವನೆಗಳು ಉಕ್ಕಿ ಆ ನರ ರಾಕ್ಷಸನ ಅಧಿಕಾರ ಬೇಗ ಕೊನೆಯಾಗಲಿ ಎಂದು ಆಶಿಸುತ್ತಾ….

ಆ ಇಬ್ಬರು ಬಾಲಕರನ್ನು ಉಳಿಸಿಕೊಳ್ಳಲಾಗದ ಈ ಪ್ರಕೃತಿ, ದೇವರು, ಧರ್ಮ ಮತ್ತು ಮನುಷ್ಯ ಸಮಾಜದ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!