ಶಿರ್ವ: ನವೆಂಬರ್ 19 (ಹಾಯ್ ಉಡುಪಿ ನ್ಯೂಸ್) ಮಕ್ಕಳೊಂದಿಗೆ ವಾಸವಾಗಿದ್ದ ಶಿರ್ವದ ಮಹಿಳೆಯೋರ್ವರ ಮನೆಗೆ ನುಗ್ಗಿದ ಖದೀಮ ಕಳ್ಳರು ಬಾಗಿಲಿಗೂ ಹಾನಿ ಮಾಡದೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಶ್ರೀಮತಿ ಬಲ್ಕೀಸ್ ಬಾನು ಎಂಬವರು ಶಿರ್ವ ನಿವಾಸಿ ಯಾಗಿದ್ದು ತನ್ನ ಮಕ್ಕಳೊಂದಿಗೆ ದಿನಾಂಕ: 18.11.2022 ರಂದು ರಾತ್ರಿ ಮನೆಯ ಎಲ್ಲಾ ಬಾಗಿಲನ್ನು ಭದ್ರಪಡಿಸಿ ಮಲಗಿರುತ್ತಾರೆ ಎಂದು ಹೇಳಿ ಕೊಂಡಿದ್ದು , ದಿನಾಂಕ: 19.11.2022 ರಂದು ಬೆಳಗ್ಗಿನ ಜಾವ 3:00 ಗಂಟೆಗೆ ಬಾತ್‌ರೂಮ್‌ಗೆ ಹೋಗಲೆಂದು ಎದ್ದು ನೋಡಿದಾಗ ಮನೆಯ ಹಿಂದುಗಡೆಯ ಲೈಟ್ ಆನ್ ಇದ್ದು ಹಿಂದುಗಡೆ ಬಾಗಿಲು ಕೂಡ ತೆರೆದಿರುತ್ತದೆ.
ಇದನ್ನು ಕಂಡು, ಆ ಕೂಡಲೇ ಬಲ್ಕೀಸ್ ಬಾನುರವರು ತನ್ನ ಮಗನನ್ನು ಎಬ್ಬಿಸಿ ಆತನಿಗೆ ವಿಚಾರ ತಿಳಿಸಿದ್ದು ನಂತರ ನೋಡಿದಾಗ ಮನೆಯ ಹಿಂದುಗಡೆಯ ಮರದ ಬಾಗಿಲಿಗೆ ಹಾಕಿದ್ದ ಟವರ್ ಲಾಕನ್ನು ಪಕ್ಕದಲ್ಲಿದ್ದ ಕಿಟಕಿಯ ಮುಖಾಂತರ ಯಾವುದೋ ಸಾಧನವನ್ನು ಬಳಸಿ ಮೋಟಾರ್ ಸೈಕಲಿನ ಸೈಡ್ ಮಿರರ್ ಉಪಯೋಗಿಸಿ ಯಾರೋ ಕಳ್ಳರು ಟವರ್ ಲಾಕ್ ತೆಗೆದು ಮನೆಯ ಒಳಗಡೆ ಪ್ರವೇಶಿಸಿ ಕೋಣೆಯ ಒಳಗಡೆ ಇದ್ದ ಮರದ ಕಪಾಟಿನ ಒಳಗಡೆ ಇಟ್ಟಿದ್ದ ಬಂಗಾರದ ಸೊತ್ತುಗಳಾದ 24 ಗ್ರಾಮ್ ತೂಕದ ಖಡ್ಗ ತರಹದ ಕೈ ಬಲೆ -1, 28 ಗ್ರಾಮ್ ತೂಕದ ಬಂಗಾರದ ಉದ್ದ ಸರ -1, 16 ಗ್ರಾಮ್ ತೂಕದ ಮುತ್ತಿನ ಹಾರ-1, 6 ಗ್ರಾಮ್ ತೂಕದ ಉಂಗುರ-2. 16 ಗ್ರಾಮ್ ತೂಕದ ರಿಂಗ್ ಇದ್ದ ಬ್ರಾಸ್‌ಲೈಟ್ -1, 16 ಗ್ರಾಮ್ ತೂಕದ ಕೈ ಬಲೆ-1 ಈ ಎಲ್ಲಾ ಸೊತ್ತುಗಳನ್ನು ಹೊರಗಡೆ ಬ್ಯಾಗ್‌ನಲ್ಲಿಟ್ಟಿದ್ದ ಬೀಗದ ಕೀಯನ್ನು ಉಪಯೋಗಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ.
ಈ ಸಮಯದಲ್ಲಿ ಕಪಾಟಿನ ಬಾಗಿಲು, ಹಾಗೂ ಮನೆಯ ಹಿಂದಿನ ಬಾಗಿಲಿಗೆ ಹಾನಿ ಆಗಿರುವುದಿಲ್ಲ. ಕಳವಾದ ಬಂಗಾರದ ಸೊತ್ತುಗಳ ಅಂದಾಜುಮೌಲ್ಯ ರೂ 4.24.000/- ಆಗಬಹುದು ಎಂದು ಪೊಲೀಸರಿಗೆ ದೂರು ನೀಡಿದ್ದು , ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.