ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ಅವರ ಹುಟ್ಟುಹಬ್ಬ ಮತ್ತು ಅದರ ಅಂಗವಾಗಿ ಮಕ್ಕಳ ದಿನಾಚರಣೆ………
ಈ ಕ್ಷಣದಲ್ಲಿ ನಿಮಗೆ ಭಾರತದ ಬಗೆಗೆ ಯಾವ ಅಭಿಪ್ರಾಯ – ದೃಷ್ಟಿಕೋನ – ನಿಲುವು ಇದೆಯೋ ಅದಕ್ಕೆ ಮೂಲ ಕಾರಣ ಜವಹರಲಾಲ್ ನೆಹರು……
ಒಂದು ವೇಳೆ ನಿಮ್ಮ ಅಭಿಪ್ರಾಯ….
ಈ 75 ವರ್ಷಗಳಲ್ಲಿ ಭಾರತ ಅತ್ಯಂತ ಭ್ರಷ್ಟವಾಗಿ, ವ್ಯವಸ್ಥೆ ಅಧೋಗತಿಗೆ ಇಳಿದಿದೆ, ವಿಶ್ವದ ಇತರೆ ಅಭಿವೃದ್ಧಿ ದೇಶಗಳನ್ನು ನೋಡಿದಾಗ ನಾವು ತಲೆ ತಗ್ಗಿಸಬೇಕಾಗಿದೆ. ಜನರ ಜೀವನಮಟ್ಟ ಕುಸಿದಿದೆ, ಅರಾಜಕತೆ ಎಲ್ಲೆಲ್ಲೂ ತಾಂಡವವಾಡುತ್ತಿದೆ ಎನಿಸಿದರೆ ಅದಕ್ಕೆ ನೆಹರು ಅವರನ್ನೇ ಹೆಚ್ಚಾಗಿ ಹೊಣೆ ಮಾಡಬೇಕಾಗುತ್ತದೆ.
ಒಂದು ವೇಳೆ ನಿಮ್ಮ ಅಭಿಪ್ರಾಯ…..
ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ಇಂದು ತಲೆ ಎತ್ತಿ ನಿಂತಿದೆ, ಬಲಿಷ್ಠ ಸೈನಿಕ ಮತ್ತು ಆರ್ಥಿಕ ಶಕ್ತಿಯಾಗಿದೆ, ಅತ್ಯುತ್ತಮ ಪ್ರಜಾಪ್ರಭುತ್ವ ಮತ್ತು ಸರ್ವತಂತ್ರ ಸ್ವತಂತ್ರ ರಾಷ್ಟ್ರವಾಗಿದೆ, ನಾವೆಲ್ಲರೂ ಇರುವುದರಲ್ಲಿ ಬಹುತೇಕ ಉತ್ತಮ ಜೀವನ ನಡೆಸುತ್ತಿದ್ದೇವೆ. ಹಲವಾರು ಕೊರತೆಗಳ ನಡುವೆಯೂ ನಮ್ಮ ತಂದೆ ತಾಯಿಗಳ ಕಾಲಕ್ಕಿಂತ ಈಗ ನಮ್ಮ ಬದುಕು ಸಮಾಧಾನಕರವಾಗಿದೆ ಎಂದು ಅನಿಸುವುದಾದರೆ ಅದಕ್ಕೂ ಪಂಡಿತ್ ನೆಹರು ಅವರೇ ಕಾರಣ….
ಬೃಹತ್ ವಿಸ್ತೀರ್ಣದ ವೈವಿಧ್ಯಮಯ ನೆಲ ಭಾರತ ಎಂಬ ಹೆಸರಿನಲ್ಲಿ ಅನೇಕ ಪ್ರಾಂತ್ಯಗಳ ಒಕ್ಕೂಟವಾಗಿ, ಪ್ರಜಾಸತ್ತಾತ್ಮಕ ಸಂವಿಧಾನಾತ್ಮಕ ಸ್ವಾತಂತ್ರ್ಯ ಗಣರಾಜ್ಯವಾಗಿ ಅಸ್ತಿತ್ವಕ್ಕೆ ಬಂದಾಗ ಅದರ ನಾಯಕತ್ವ ವಹಿಸಿದ್ದು ನೆಹರು. ಸುಮಾರು 14 ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದರು.
ಇತಿಹಾಸವನ್ನು ಅಂದಿನ ಕಾಲಘಟ್ಟಕ್ಕೆ ಅನುಗುಣವಾಗಿ ನಾವು ಪರಿಗಣಿಸಿದರೆ ಅದು ಹೆಚ್ಚು ವಾಸ್ತವಿಕವಾಗಿ ನಮಗೆ ಪರಿಚಯವಾಗುತ್ತದೆ. ಇಲ್ಲದಿದ್ದರೆ ಇಂದಿನ ದಿನಗಳಲ್ಲಿ ಪರಿಣಾಮ ಫಲಿತಾಂಶ ಆಧರಿಸಿ ಅಂದಿನ ಇತಿಹಾಸ ವಿಮರ್ಶಿಸಿದರೆ ಆಗ ಬೇರೆಯದೇ ಅರ್ಥ ದೊರೆಯುತ್ತದೆ.
ಕೆಲವು ಅಪವಾದಗಳ ನಡುವೆಯೂ ನೆಹರು ಪ್ರಜ್ಞಾವಂತ, ಬುದ್ದಿವಂತ ಮತ್ತು ದೂರದೃಷ್ಟಿಯ ನಾಯಕರಾಗಿದ್ದರು. ಹೆಚ್ಚಿನ ಓದು, ಪ್ರವಾಸ ಮತ್ತು ಗಾಂಧಿಯವರ ಪ್ರಭಾವದಿಂದಾಗಿ ಭಾರತದ ಸಂಸ್ಕೃತಿಯನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದರು. ಭಿನ್ನತೆಯಲ್ಲೂ ಐಕ್ಯತೆಯ ಮಹತ್ವ ಮತ್ತು ಸರ್ವ ಧರ್ಮಗಳ ಸಮನ್ವಯದ ಪ್ರಾಮುಖ್ಯತೆಯನ್ನು ಬಲ್ಲವರಾಗಿದ್ದರು. ಆ ಕಾರಣದಿಂದಲೇ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸದೆ ವಿವೇಚನೆಯಿಂದ ಕಾರ್ಯನಿರ್ವಹಿಸಿದರು.
ಆಗಿನ್ನೂ ಕೃಷಿ ಪ್ರಧಾನವಾದ, ಗುಡಿ ಕೈಗಾರಿಕೆಗಳ, ಅನಕ್ಷರಸ್ಥ, ಗಾಢವಾದ ನಂಬಿಕೆಗಳ, ಬಡತನವೇ ಪ್ರಧಾನವಾಗಿದ್ದ ಸಮಾಜವನ್ನು ಆರ್ಥಿಕವಾಗಿ ಮುನ್ನಡೆಸಲು ಸಾರ್ವಜನಿಕ ಸಹಭಾಗಿತ್ವದ ಅನೇಕ ಉದ್ದಿಮೆಗಳನ್ನು ಸ್ಥಾಪಿಸಿದರು. ಆ ಉದ್ದಿಮೆಗಳ ಉದ್ಯೋಗಿಗಳ ಮೊಮ್ಮಕ್ಕಳೇ ಇಂದಿನ ಆಧುನಿಕ ಭಾರತೀಯ ಸಮಾಜದ ಕೃಷಿ ಹೊರತುಪಡಿಸಿ ಇತರ ಎಲ್ಲಾ ಕ್ಷೇತ್ರಗಳನ್ನು ಮುನ್ನಡೆಸುತ್ತಿರುವ ಯುವ ಜನಾಂಗ.
ಅದೇ ಮೊಮ್ಮಕ್ಕಳೇ ಇಂದು ಚಾಚಾ ನೆಹರು ಅವರನ್ನು ಬೇರೆ ಬೇರೆ ಕಾರಣಕ್ಕಾಗಿ ತೀವ್ರವಾಗಿ ಟೀಕಿಸುತ್ತಿರುವವರು ಎಂಬುದು ವಿಪರ್ಯಾಸ.
ಕೃಷಿ ಮತ್ತು ಸಮಗ್ರ ಅಭಿವೃದ್ಧಿಗಾಗಿ, ಬಡತನ ನಿರ್ಮೂಲನೆಗಾಗಿ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಿದರು. ಅದು ಈ ವ್ಯವಸ್ಥೆಯಲ್ಲಿ ಸಾಧಾರಣ ಯಶಸ್ಸು ಗಳಿಸಲು ಮಾತ್ರ ಸಾಧ್ಯವಾಯಿತು.
ಆಗಿನ ರಕ್ಷಣಾ ದೃಷ್ಟಿಯಿಂದ ಸೈನಿಕವಾಗಿ ಅಷ್ಟೇನು ಪ್ರಬಲವಾಗಿಲ್ಲದ ಮತ್ತು ಇಡೀ ವಿಶ್ವವನ್ನೇ ಕಾಡಿದ ಎರಡು ಮಹಾಯುದ್ಧಗಳ ಭಯದಿಂದ ನೆಹರು ಅವರು ಭಾರತದ ಸುಭದ್ರತೆಗಾಗಿ ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿದರು. ಈಗ ಅದು ಟೀಕೆಗೆ ಒಳಗಾದರು ಆಗ ಅದು ಭಾರತದ ರಕ್ಷಣೆಯ ದೃಷ್ಟಿಯಿಂದ ಅತ್ಯಂತ ಒಳ್ಳೆಯ ಮತ್ತು ಪರಿಣಾಮಕಾರಿ ನೀತಿಯಾಗಿತ್ತು.
ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಇಂದು ಬಲಿಷ್ಠ ಮರವಾಗಿ ಬೆಳೆಯಲು ನೆಹರು ಅವರ ಪ್ರಾಮಾಣಿಕತೆ ಕಾರಣವಾಯಿತು ಎಂಬುದನ್ನು ಮರೆಯಬಾರದು. ಅದೇ ಸಮಯದಲ್ಲಿ ಸ್ವಾತಂತ್ರ್ಯ ಪಡೆದ ಪಾಕಿಸ್ತಾನ ಮತ್ತು ಆಫ್ರಿಕಾದ ಕೆಲವು ದೇಶಗಳ ಇಂದಿನ ಅರಾಜಕತೆಯನ್ನು ಗಮನಿಸಿದಾಗ ನಮಗೆ ಇದರ ಮಹತ್ವ ಅರಿವಾಗುತ್ತದೆ.
ಆ, ಒಂದಷ್ಟು ಭ್ರಷ್ಟಾಚಾರ, ಅನುವಂಶಿಕ ಆಡಳಿತಕ್ಕೆ ದಾರಿ ಮಾಡಿಕೊಟ್ಟಿದ್ದು, ಕಾಶ್ಮೀರದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸದಿರುವುದು, ಚೀನಾದ ಆಕ್ರಮಣ ತಡೆಯಲು ವಿಫಲವಾಗಿದ್ದು ಮುಂತಾದ ಟೀಕೆಗಳು ಅವರ ಮೇಲಿದೆ. ಆಗಿನ್ನೂ ರಾಜಪ್ರಭುತ್ವದಿಂದ, ಬ್ರಿಟಿಷರ ಗುಲಾಮಿತನದ ಪ್ರಭಾವದಿಂದಾಗಿ ಹೊರಬರುತ್ತಿದ್ದ ಸಂದರ್ಭದಲ್ಲಿ, ಆಧುನಿಕ ಸಂಪರ್ಕ ಸಾಧನಗಳು, ಮಾಧ್ಯಮಗಳು ಹೆಚ್ಚಿನ ಪ್ರಭಾವ ಇಲ್ಲದೇ ಇದ್ದ ಸಮಯದಲ್ಲಿ ಸಹಜವಾಗಿ ಒಂದಷ್ಟು ದೌರ್ಜನ್ಯಗಳು, ಪಕ್ಷಪಾತಗಳು, ಅನ್ಯಾಯಗಳು ಆಗಿರುವುದು ನಿಜ.
ಈಗಿನ ಕಾಲದಲ್ಲೇ ಅಪ್ಪ ಮಕ್ಕಳು ಮೊಮ್ಮಕ್ಕಳ ರಾಜಕೀಯ, ಜಾತೀಯತೆ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ತುಂಬಿ ತುಳುಕುತ್ತಿರುವಾಗ ಆಗ ಇದು ಇದ್ದದ್ದು ಆಶ್ಚರ್ಯವೇನು ಇಲ್ಲ.
ಒಟ್ಟಿನಲ್ಲಿ ಸ್ವಾತಂತ್ರ್ಯ ನಂತರದ ಭಾರತದ ಒಟ್ಟು ಆಡಳಿತಾತ್ಮಕ ಅಭಿವೃದ್ಧಿ ಗಮನಿಸಿದಾಗ ಜವಹರಲಾಲ್ ನೆಹರು ಅವರನ್ನು ಆಧುನಿಕ ಭಾರತದ ಅಡಿಪಾಯ ಹಾಕಿದ ಶಿಲ್ಪಿ ಎಂದು ಕರೆಯಲು ಅರ್ಹ ವ್ಯಕ್ತಿ ಎಂದು ಪರಿಗಣಿಸಬಹುದು.
ಉಳಿದದ್ದು ಭಾರತದ ಇತಿಹಾಸವನ್ನು ನೀವು ಗ್ರಹಿಸುವ ದೃಷ್ಟಿಕೋನವನ್ನು ಅವಲಂಬಿಸಿದೆ.
ಜವಹರಲಾಲ್ ನೆಹರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುನ್ನು ಹೇಳುತ್ತಾ…..
ನಿಮ್ಮ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಗೌರವಿಸುತ್ತಾ….
ಮಕ್ಕಳ ಬಗೆಗೆ ಬರೆಯಲು ಮನಸ್ಸೇಕೋ ಹಿಂಜರಿಯುತ್ತಿದೆ.
ಭಾವನೆಗಳು ಮುದುಡುತ್ತಿದೆ,
ಅಕ್ಷರಗಳು ತಡಕಾಡುತ್ತಿವೆ.
ನಮ್ಮ ವಠಾರದ ಮಕ್ಕಳ ಬಳಿ ಮಾತನಾಡುತ್ತಿರುವಾಗ ಮಗುವೊಂದು ತೋಡಿಕೊಂಡ ವೇದನೆಯ ತೊದಲು ನುಡಿಗಳು, ನಿಮ್ಮ ನಮ್ಮ ಆತ್ಮಾವಲೋಕನಕ್ಕಾಗಿ………..
“ನಾನು ……..ನಾನು ………ನಿಶ್ಚಲ..ಅಂತ,
1st standard ಓದ್ತಿದೀನಿ.
ನಂಗೆ…..ನಂಗೆ ಈವಾಗ ಆರು ವರ್ಷ ವಯಸ್ಸು.
ನಂಗೆ…..ನಂಗೆ……ದಿನಾ ಅಳು ಬರುತ್ತೆ.
ಯಾವಾಗಲೂ ಅಳ್ತಾನೇ ಇರ್ತೀನಿ. ಸ್ಕೂಲಲ್ಲಿ ಫ್ರೆಂಡ್ಸ್ ಎಲ್ಲಾ ಇದ್ರೂ ಅಳು ಮಾತ್ರ ಬರ್ತಾನೆ ಇರುತ್ತೆ. ಯಾಕೆ ಗೊತ್ತಾ. ನಂಗೆ…..ನಂಗೆ…….ತುಂಬಾ ತುಂಬಾ ಕಷ್ಟ ಇದೆ.
ಅಮ್ಮ ಹೇಳ್ತಾಳೆ. ಕಷ್ಟ ಬಂದ್ರೆ ದೇವ್ರನ್ನ ಬೇಡ್ಕೋ ದೇವ್ರೇ ಎಲ್ಲಾ ಸರಿ ಮಾಡ್ತಾನೆ ಅಂತ.
ನಾನು …..ನಾನು …..ದೇವ್ರನ್ನ ಬೇಡ್ಕೊಂಡೆ. ಸರಿ ಮಾಡಲೇ ಇಲ್ಲ. ಅದ್ಕೆ …..ಅದ್ಕೆ …..ಅಂಕಲ್ ನಿಮ್ಗೆ ಕೇಳ್ತಿದೀನಿ.
ಅಪ್ಪಾ ಅಮ್ಮಾ ಆಗೋದು ದಿನಾ ಜಗಳ ಆಡೋಕಾ. ಇಬ್ಬರು…… ಇಬ್ಬರು………. ಫೈಟಿಂಗ್ ಮಾಡೋಕಾ. …..ಆಮೇಲೆ ಪಕ್ಕದ್ಮನೇವ್ರು ಬಂದು ಬಿಡಸ್ಬೇಕಾ.
ಅವೊತ್ತೊಂದಿನ ಪೋಲಿಸ್ ಅಂಕಲ್ ಬಂದು ಬಿಡಿಸಿದ್ರು ….
ನಮ್…..ನಮ್…..ಟೀಚರ್ ಹೇಳ್ತಾರೆ….ದೊಡ್ಡೋರಾದ್ಮೇಲೆ ಬುದ್ದಿ ಬರುತ್ತೆ ಅಂತಾ….ಹಂಗಾದ್ರೆ ನಮ್ಮಪ್ಪಾಅಮ್ಮಂಗೆ ಬುದ್ಧಿ ಬಂದಿಲ್ವಾ ….
ಅಪ್ಪ ಯಾರೋ ಅಂಟಿ ಜೊತೆ ಮಾತಾಡ್ತಾರೆ ಅಂತ ಅಮ್ಮ ದಿನಾ ಜಗಳ ಮಾಡ್ತಾರೆ ……
ಅಮ್ಮ ತಾತನ ಮನೆಯಿಂದ ಅಪ್ಪನ ಬಿಸಿನೆಸ್ ಗೆ ದುಡ್ಡು ತರ್ಲಿಲ್ಲ ಅಂತ ಜಗಳ ಮಾಡ್ತಾರೆ.
ದಿನಾ ಇದನ್ನೇ ನೋಡಿ…ನೋಡಿ ….ನಂಗೆ ಅಳು ಬರ್ತಾನೆ ಇರುತ್ತೆ.
ಒಂದಿನ…..ಒಂದಿನ……ಟಿವಿಯಲ್ಲಿ ನೋಡ್ದೆ. ಪುಟ್ಡ ಬೇಬಿನ ಅವರಪ್ಪ ಅಮ್ಮ ಜೋಕಾಲಿ ಆಡುಸ್ತಾ….ಆಡುಸ್ತಾ …… ಚಂದಮಾಮ ಕಥೆ ಹೇಳ್ತಾ ……ಹೇಳ್ತಾ……….ಚಾಕಲೇಟ್ ತಿನ್ನುಸ್ತಾ ಇದ್ರು……
ನಂಗೂ ನಮ್ಮಪ್ಪಾಅಮ್ಮ ಹಂಗೇ ಆಡಿಸ್ಬೇಕು ಅಂತ ಇಷ್ಟ.
ಆದ್ರೆ……ಆದ್ರೆ……ಅವರು ದಿನಾ ಜಗಳಾನೇ ಆಡ್ತಿರ್ತಾರೆ…..
ಅದೂ ಅಲ್ದೆ …..ಇಬ್ಬರೂ ಜಗಳಾ ಆಡ್ದಾಗ ಬೇರೆಯವರೆಲ್ಲಾ ಬಂದು ನಿಂಗೆ….ನಿಂಗೆ ಅಪ್ಪಾ ಬೇಕಾ…..ಅಮ್ಮಾ ಬೇಕಾ……ಅಂತ ಕೇಳ್ತಾರೆ.
ಆಗಾ ನಂಗೆ ಜಾಸ್ತಿ….ಜಾಸ್ತಿ….ಅಳು ಬರುತ್ತೆ. ನಂಗೆ….ನಂಗೆ ಇಬ್ರೂ ಬೇಕು.ಆದ್ರೆ ಇಬ್ರೂ ಸಿಕ್ತಾಇಲ್ಲ.
ಅಜ್ಜಿ ಹೇಳ್ತಾಳೆ ಎಲ್ಲಾರ್ ಮನೇಲೂ ಇದೇ ಗೋಳು ಅಂತ.
ಆಂಟಿ ಅಂಕಲ್ ನಿಮ್ಮನೇಲೂ ಜಗಳಾ ಆಡ್ತೀರಾ. ನಿಮ್ ಮಗೂನು ಹಿಂಗೇ ಅಳುತ್ತಾ ……….
ನಂಗೇ ಮತ್ತೆ ಅಳು ಬರ್ತಾ ಇದೆ………….
ದೇವ್ರನ್ನ ಕೇಳ್ಕೋತೀನಿ …..ದೇವ್ರೆ ದೇವ್ರೇ ನನ್ನ …..ನನ್ನ ……ಯಾವೊತ್ತೂ ದೊಡ್ಡದಾಗಿ ಮಾಡಬೇಡ.ನಾನು ಮಗುವಾಗೇ ಇರ್ತೀನಿ ……..
ದೊಡ್ಡೋರಾದ್ರೆ ಜಗಳಾ ಮಾಡ್ತಾನೇ ಇರ್ಬೇಕಾಗುತ್ತೆ ……
ಹೂಂ…….ಹೂಂ……ಹೂಂ……ಹೂಂ……….ಹೂಂ…..
Sorry …….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……