ಬ್ರಾಹ್ಮಣರು, ವೈಶ್ಯರು, ಜೈನರು, ಒಕ್ಕಲಿಗರು, ಲಿಂಗಾಯತರು ಮುಂತಾದ ಯಾರು ಮೀಸಲಾತಿ ಪಡೆಯಲು ಒತ್ತಾಯಿಸುತ್ತಿದ್ದಾರೋ, ಬಯಸುತ್ತಿದ್ದಾರೋ, ಪ್ರತಿಭಟನೆ ಮಾಡುತ್ತಿದ್ದಾರೋ, ಬೆಂಬಲಿಸುತ್ತಿದ್ದಾರೋ, ಒಪ್ಪಿಕೊಳ್ಳುತ್ತಿದ್ದಾರೋ, ಇಷ್ಟಪಡುತ್ತಿದ್ದಾರೋ ಅವರುಗಳನ್ನು ಇನ್ನು ಮೇಲೆ ಹೊಲೆಯ, ಮಾದಿಗ ಚಮ್ಮಾರ, ಕೊರಚ, ಕೊರಮ, ಕಲ್ಲುಕುಟಿಗ ಹೀಗೆ ಬೇರೆ ಬೇರೆ ಜಾತಿಗಳ ಹೆಸರಿನಿಂದ ಕರೆಯಬೇಕು ಮತ್ತು ಹಾಗೇ ದಾಖಲಿಸಬೇಕು….
ಹಾಗೆಯೇ ಈಗಿನ ದಲಿತರ ಸಂಪೂರ್ಣ ಮೀಸಲಾತಿ ಸೌಲಭ್ಯ ಪಡೆಯಲು ಈ ಮೇಲ್ಜಾತಿಗಳು ಕನಿಷ್ಠ ಹತ್ತು ವರ್ಷ ಊರ ಹೊರಗಿನ ಜಾಗಗಳಲ್ಲಿ ವಾಸಿಸುವುದು ಕಡ್ಡಾಯ ಮಾಡಬೇಕು. ಯಾರನ್ನು ಅನವಶ್ಯಕವಾಗಿ ಮುಟ್ಟಿಸಿಕೊಳ್ಳಬಾರದು. ದೇವಸ್ಥಾನಗಳಿಗೆ ಪ್ರವೇಶಿಸಬಾರದು.
ಜೊತೆಗೆ ಈಗಿನ ದಲಿತ – ಅಸ್ಪೃಶ್ಯ ಜಾತಿಗಳನ್ನು ಬ್ರಾಹ್ಮಣ ವೈಶ್ಯ ಗೌಡ ವೀರಶೈವ ಮುಂತಾದ ಹೆಸರುಗಳಿಂದ ಕರೆಯಬೇಕು. ಅವರಿಗೆ ಇರುವ ಮೀಸಲಾತಿಯನ್ನು ತೆಗೆದುಹಾಕಬೇಕು. ದೇವಸ್ಥಾನಗಳಿಗೆ ಅವರೇ ಅರ್ಚಕರಾಗಬೇಕು. ಹೋಮ ಹವನ ಮದುವೆ ಪೂಜೆ ಗೃಹ ಪ್ರವೇಶ ನಾಮಕರಣ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸಲು ಈಗಿನ ದಲಿತ ಸಮುದಾಯಗಳಿಗೆ ಅನುಮತಿ ಮತ್ತು ಅಧಿಕಾರ ನೀಡಬೇಕು.
ಒಟ್ಟಿನಲ್ಲಿ ಮೀಸಲಾತಿ ಮತ್ತು ಜಾತಿ ವ್ಯವಸ್ಥೆ ಅದಲು ಬದಲು ಆಗಬೇಕು. ಆಗ ಸಮುದಾಯಗಳ ಪ್ರತಿಕ್ರಿಯೆ ಹೇಗಿರಬಹುದು……..
ಜಾತಿ ಎಂದರೆ ಪ್ರಾಣ ಬಿಡುವವರು, ಜಾತಿಗಾಗಿ ಸ್ವಂತ ಮಗಳು ಅಳಿಯನನ್ನೇ ಮರ್ಯಾದಾ ಹತ್ಯೆ ಮಾಡುವವರು ಇರುವಾಗ ಜಾತಿಯ ಹೆಸರಿನಲ್ಲಿ ಲಾಭ ಪಡೆಯಲು ಯಾವುದೇ ಹಂತಕ್ಕೆ ಹೋಗುವವರು ಇದನ್ನು ಒಪ್ಪಿಕೊಳ್ಳುವರೇ….
ನಿಜಕ್ಕೂ ಇಂದಿನ ಖಾಸಗೀಕರಣದ ಸಮಯದಲ್ಲಿ ಮೀಸಲಾತಿ ಕೇವಲ ಕಾಗದದ ಆದೇಶ ಮಾತ್ರ. ಅದರ ಪರಿಣಾಮ ಅಲ್ಪ. ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿಯೇ 2.5 ಲಕ್ಷ ಉದ್ಯೋಗಿಗಳಿದ್ದಾರೆ. ಇನ್ನು ಅದಾನಿ, ಟಾಟಾ, ಬಿರ್ಲಾ, ಬ್ಯಾಂಕಿಂಗ್, ಇನ್ಫೋಸಿಸ್, ವಿಪ್ರೋ, ವೈದ್ಯಕೀಯ, ಶಿಕ್ಷಣ, ಅಮೆಜಾನ್ ಸೇರಿ ಅಸಂಖ್ಯಾತ ಎಂ.ಎನ್.ಸಿ. ಮುಂತಾದ ಖಾಸಗಿ ಕಂಪನಿಗಳಲ್ಲಿ ಲಕ್ಷ ಲಕ್ಷ ಉದ್ಯೋಗಿಗಳು ಮೀಸಲಾತಿಯ ಹೊರಗಿದ್ದಾರೆ. ಸರ್ಕಾರಿ ಉದ್ಯೋಗಗಳು ಇತ್ತೀಚಿನ ತೀರಾ ಕಡಿಮೆ.
ಆದರೂ ಮೀಸಲಾತಿ ದೊಡ್ಡ ಚರ್ಚೆಯ ವಿಷಯವಾಗಿದೆ. ಇದು ತುಂಬಾ ಹಾಸ್ಯಾಸ್ಪದ. ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿ ಮಾಡದೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸದೆ, ವಿಷಪೂರಿತ ಹಾಗು ಅಸೂಯೆ – ದ್ವೇಷ ಪೂರಿತ ಮನಸ್ಸುಗಳನ್ನು ಪೋಷಿಸಿ ಈಗ ಮೀಸಲಾತಿಯನ್ನು ಇಷ್ಟ ಬಂದಂತೆ ರಾಜಕೀಯವಾಗಿ ಹಂಚಿದರೆ ಪ್ರಯೋಜನವೇನು…..
ದಯವಿಟ್ಟು ಮೀಸಲಾತಿಯ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಕನಿಷ್ಠ ತಿಳಿವಳಿಕೆ ಮತ್ತು ವಿಶಾಲ ಮನೋಭಾವ ಹಾಗು ಹೃದಯ ಶ್ರೀಮಂತಿಕೆ ಇರಲಿ…..
ಮೀಸಲಾತಿ…….
ಪ್ರತಿಕ್ರಿಯಿಸುವ ಮುನ್ನ…………….
ಕೆಲವು ಅಸಮಾನತೆಗಳನ್ನು ಹೋಗಲಾಡಿಸಲು ವ್ಯವಸ್ಥೆ ರೂಪಿಸಿಕೊಂಡ ಒಂದು ವಿಧಾನ ಮೀಸಲಾತಿ.
ಭಾರತದಲ್ಲಿ ಬಹುಮುಖ್ಯ ಮೀಸಲಾತಿಗಳು……
ಜಾತಿ ಆಧಾರಿತ,
ಲಿಂಗ ಆಧಾರಿತ,
( ಗಂಡು ಹೆಣ್ಣು ಮತ್ತು ಇದೀಗ ಲೈಂಗಿಕ ಅಲ್ಪಸಂಖ್ಯಾತರು )
ಪ್ರದೇಶದ ಆಧಾರಿತ,
( ನಗರ ಮತ್ತು ಗ್ರಾಮೀಣ )
ಅಂಗ ವೈಕಲ್ಯ ಆಧಾರಿತ,
ಆರ್ಥಿಕ ಪರಿಸ್ಥಿತಿ ಆಧಾರಿತ………
ಶಿಕ್ಷಣ ಉದ್ಯೋಗ ಭಡ್ತಿ ಚುನಾವಣೆ ಪ್ರವೇಶ ಪ್ರಯಾಣ ಸೌಲಭ್ಯ ಹಂಚಿಕೆ ಮುಂತಾದ ವಿಷಯಗಳಲ್ಲಿ ಮೀಸಲಾತಿ ನೀಡಲಾಗುತ್ತದೆ……
ಸಾಮಾಜಿಕ ಆರ್ಥಿಕ ಶೈಕ್ಷಣಿಕ ಮತ್ತು ಪ್ರಾಕೃತಿಕ ಅಸಮಾನತೆಯ ಜೊತೆಗೆ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವೂ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರು ಶೋಷಣೆಗೆ ಒಳಗಾದಾಗ ಅವರಿಗೆ ಮೀಸಲಾತಿ ಕಲ್ಪಿಸಲಾಗುತ್ತದೆ.
ಜಾತಿಯ ಕಾರಣದಿಂದ ಮುಟ್ಟಿಸಿಕೊಳ್ಳದ – ಶೋಷಿತರಾದ ವರ್ಗಕ್ಕೆ ನ್ಯಾಯ ದೊರಕಿಸಿಕೊಡಲು ಮೀಸಲಾತಿ ಕೊಡಲಾಗಿದೆ.
ನಗರ ಪ್ರದೇಶದ ಸೌಕರ್ಯಗಳನ್ನು ಗಮನಿಸಿ ಇನ್ನೂ ಅದರಿಂದ ವಂಚಿತರಾದ ಗ್ರಾಮೀಣ ಜನರಿಗೆ ಮೀಸಲಾತಿ ನೀಡಲಾಗುತ್ತದೆ.
ಆರೋಗ್ಯವಂತ ಸಾಮಾನ್ಯ ವ್ಯಕ್ತಿಯ ಜೊತೆ ಸ್ಪರ್ಧೆ ಮಾಡಲು ಕಷ್ಟವಾಗುವ ಅಂಗವಿಕಲರಿಗೆ ಮೀಸಲಾತಿ ನೀಡಲಾಗುತ್ತದೆ.
ಬಡತನದ ಕಾರಣಕ್ಕಾಗಿ ಶ್ರೀಮಂತರ ಶೋಷಣೆ ತಪ್ಪಿಸಲು ಆರ್ಥಿಕ ಮೀಸಲಾತಿ ನೀಡಲಾಗುತ್ತದೆ.
ನಿರ್ಲಕ್ಷಿತ ದ್ವಿಲಿಂಗಿಗಳಿಗೆ ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರೋತ್ಸಾಹದಾಯಕವಾಗಿ ಮೀಸಲಾತಿ ನೀಡಲಾಗಿದೆ.
ಹೌದು ಇದೆಲ್ಲವೂ ನ್ಯಾಯಯುತವಾದುದು ಮತ್ತು ಸಮಾಜದ ಶಾಂತಿ ಮತ್ತು ಸಮಾನತೆಗಾಗಿ ಅವಶ್ಯಕತೆ ಇದೆ ಎಂದು ಮೇಲ್ನೋಟಕ್ಕೆ ಎಲ್ಲರಿಗೂ ಅನಿಸುತ್ತದೆ.
ಸಾಹಿತ್ಯ ಸಂಗೀತ ಲಲಿತ ಕಲೆ ವಿಜ್ಞಾನ ಕ್ರೀಡೆ ಮುಂತಾದ ಕ್ರಿಯಾತ್ಮಕ ಕ್ಷೇತ್ರಗಳಲ್ಲಿ ಮೀಸಲಾತಿ ಇರದೆ ಪ್ರತಿಭೆಯನ್ನು ಆಧರಿಸಲಾಗುತ್ತದೆ. ಆದರೆ ದುರ್ಭಲರನ್ನು ವೇದಿಕೆಗೆ ತರಲು ಪರೋಕ್ಷವಾಗಿ ಮೀಸಲಾತಿಯ ಅವಶ್ಯಕತೆ ಇರುತ್ತದೆ.
ಈಗ ಯೋಚಿಸುವ ಸರದಿ ನಮ್ಮದು.
ಇದರ ಪ್ರಕಾರ ಸಮಾಜವನ್ನು ಸುವ್ಯವಸ್ಥಿತ ಮತ್ತು ಮಾನವೀಯ ನೆಲೆಯಲ್ಲಿ ಮುನ್ನಡೆಸಿಕೊಂಡು ಹೋಗಲು ಅಸಮಾನ ಸಮಾಜದಲ್ಲಿ ಅವಶ್ಯಕತೆ ಇರುವವರಿಗೆ ಮೀಸಲಾತಿ ಖಂಡಿತ ಕೊಡಬೇಕು.
ಆದರೆ ಸಮಸ್ಯೆ ಇರುವುದು ಅದರ ಅನುಷ್ಠಾನ ಮತ್ತು ನಿರ್ವಹಣೆಯಲ್ಲಿ……..
ಸ್ವಾತಂತ್ರ್ಯ ನಂತರ ನಮ್ಮ ವ್ಯವಸ್ಥೆ ಬಹಳಷ್ಟು ಹಾದಿ ತಪ್ಪಿದೆ. ಯಾವುದೇ ಯೋಜನೆಯಾದರೂ ಅದು ಆ ಸಂದರ್ಭದ ಬಲಿಷ್ಠರ ಪಾಲಾಗುತ್ತದೆ. ಆಡಳಿತಶಾಹಿ ಮತ್ತು ಮಧ್ಯವರ್ತಿ ವರ್ಗ ಎಲ್ಲವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತದೆ. ದುರ್ಬಲರು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ.
” ವ್ಯವಸ್ಥೆಯ ಅಸಮಾನತೆಯ ರೋಗಕ್ಕೆ ಮೀಸಲಾತಿ ಎಂಬ ಅಸಮಾನತೆಯ ಔಷಧಿಯನ್ನು ಕೊಡಲಾಗುತ್ತದೆ “
ಬಹಳ ಸಲ ಇದರಿಂದ ರೋಗಿ ಚೇತರಿಸಿಕೊಂಡರು ಕೆಲವೊಮ್ಮೆ ಅಡ್ಡ ಪರಿಣಾಮಗಳು ದೊಡ್ಡ ಪ್ರಮಾಣದಲ್ಲಿ ಆಗುತ್ತದೆ.
ನಮ್ಮ ರಾಜಕೀಯ ವ್ಯವಸ್ಥೆಯ ದುರಾದೃಷ್ಟ ನೋಡಿ. ಶೋಷಿತರನ್ನು ಮೀಸಲಾತಿಯಿಂದ ಸಮಾನತೆಯೆಡಗೆ ತರುವ ಮುಖಾಂತರ ನಿಧಾನವಾಗಿ ಮೀಸಲಾತಿಯ ಅವಶ್ಯಕತೆಯನ್ನೇ ಇಲ್ಲವಾಗಿಸುವ ಬದಲಿಗೆ ಅದನ್ನೇ ಹೆಚ್ಚು ಹೆಚ್ಚು ಮಾಡುವ ಪರಿಸ್ಥಿತಿಗೆ ತಲುಪಿದ್ದೇವೆ.
ಸಾಮಾನ್ಯ ಸ್ಥಿತಿಯಲ್ಲಿ ಇದರ ಬಗ್ಗೆ ಚರ್ಚೆ ಮಾಡುವುದು ಕಷ್ಟ. ಹೇಗೆ ವಿಮರ್ಶಿಸಿದರು ಸ್ಪಷ್ಟ ಉತ್ತರ ದೊರೆಯುವುದಿಲ್ಲ. ಅದರ ಫಲಾನುಭವಿಗಳು ಅದನ್ನು ಸಮರ್ಥಿಸುತ್ತಾರೆ ಮತ್ತು ಅದರಿಂದ ವಂಚಿತರಾದವರು ಅದನ್ನು ವಿರೋಧಿಸುತ್ತಾರೆ.
ಇಡೀ ವ್ಯವಸ್ಥೆಯನ್ನು ಎಲ್ಲಾ ದೃಷ್ಟಿಕೋನದಿಂದ ನಿಷ್ಪಕ್ಷಪಾತವಾಗಿ ನೋಡಿ ಅದರ ಅವಶ್ಯಕತೆಯ ತೀರ್ಮಾನ ಮತ್ತು ಅದರ ಅನುಷ್ಠಾನದ ಬಗ್ಗೆ ಕ್ರಮಕೈಗೊಳ್ಳುವವರು ಸದ್ಯಕ್ಕೆ ಯಾರೂ ಕಾಣುತ್ತಿಲ್ಲ. ಚುನಾವಣಾ ರಾಜಕೀಯ ಅದಕ್ಕೆ ಆಸ್ಪದ ಕೊಡುವುದಿಲ್ಲ.
ರಾಜಕೀಯ ಪಕ್ಷಗಳ ಮತ್ತು ಮಾಧ್ಯಮಗಳ ಚರ್ಚೆಗಳೇ ನಮ್ಮ ಅಭಿಪ್ರಾಯ ಮೂಡಿಸುವ ಪ್ರಬಲ ಅಸ್ತ್ರಗಳಾಗಿರುವಾಗ ಸತ್ಯದ ಹುಡುಕಾಟ ಬಹಳ ಕಷ್ಟ.
ಮುಂದೆ…………
ಆದರೂ……….
ಎಲ್ಲಾ ರೀತಿಯ ಮೀಸಲಾತಿ ಪಡೆಯುತ್ತಿರುವವರು ನಮ್ಮದೇ ಜನ.
ಅದನ್ನು ತೀವ್ರವಾಗಿ ದ್ವೇಷಿಸದೆ ವಿಶಾಲ ಮನೋಭಾವದಿಂದ ಸ್ವೀಕರಿಸೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……