Spread the love

ಮಾರಾಟವಾದ ಒಬ್ಬ ಪತ್ರಕರ್ತ ಸಾವಿರ ಭಯೋತ್ಪಾದಕರಿಗೆ ಸಮ….

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್……… ಹೇಳಿದ್ದಾರೆ ಎಂಬ ಒಂದು ವಾಕ್ಯದ ಸಾಲು ಹಿಡಿದು…..

ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಕೆಲವು ಪತ್ರಕರ್ತರಿಗೆ ದೀಪಾವಳಿ ಹಬ್ಬದ ಉಡುಗೊರೆಯ ನೆಪದಲ್ಲಿ ಸಿಹಿಯ ಜೊತೆಗೆ ಒಂದಷ್ಟು ಹಣವನ್ನೂ ನೀಡಲಾಗಿದೆ ಎಂಬ ಸುದ್ದಿ ಮಾಧ್ಯಮಗಳಿಂದಲೇ ಪ್ರಚಾರವಾಗಿದೆ.

ಇದರಲ್ಲಿ ಎಷ್ಟರ ಮಟ್ಟಿಗೆ ನಿಜವಿರಬಹುದು ಎಂದು ಆತ್ಮೀಯ ಪತ್ರಕರ್ತ ಮಿತ್ರರೊಂದಿಗೆ ಮಾತನಾಡಿದೆ. ಏಕೆಂದರೆ ಅಧಿಕೃತವಾಗಿ ದಾಖಲೆಗಳ ಸಮೇತ ಈ ರೀತಿಯ ಸುದ್ದಿಗಳು ನಮ್ಮಂತ ಸಾಮಾನ್ಯರಿಗೆ ಸಿಗುವುದಿಲ್ಲ. ಕೇವಲ ಆತ್ಮಸಾಕ್ಷಿಯ ಮಾತುಗಳಿಂದ ಮಾತ್ರ ಒಂದಷ್ಟು ಸತ್ಯ ಮತ್ತು ವಾಸ್ತವದ ಹತ್ತಿರ ಹೋಗಬಹುದು.

ಆಡಳಿತಗಾರರು ಮತ್ತು ಪತ್ರಕರ್ತರ ಸಂಬಂಧ ಹಿಂದಿನಿಂದಲೂ ಇದೆ. ಪತ್ರಕರ್ತರಿಗೆ ಹಣ ಜಮೀನು ಪ್ರಶಸ್ತಿ ಅಧಿಕಾರ ಮುಂತಾದ ಆಮಿಷಗಳನ್ನು ಒಡ್ಡಿ ತಮ್ಮ ಪರವಾಗಿ ಸುದ್ದಿಯ ರೂಪದಲ್ಲಿ ಜನಾಭಿಪ್ರಾಯ ಮೂಡಿಸುವ ವ್ಯವಸ್ಥಿತ ತಂತ್ರಗಾರಿಕೆ ಮಾಡುತ್ತಲೇ ಇರುತ್ತಾರೆ. ಆಗ ಭ್ರಷ್ಟರು ಕಡಿಮೆ ಸಂಖ್ಯೆಯಲ್ಲೂ ನಿಷ್ಠರು ಹೆಚ್ಚಿನ ಸಂಖ್ಯೆಯಲ್ಲೂ ಇರುತ್ತಿದ್ದರು. ಆದರೆ ‌ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಸಂಪೂರ್ಣ ಪ್ರಾಮಾಣಿಕರು ತುಂಬಾ ಕಡಿಮೆ ಇದ್ದಾರೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಇದ್ದಂತೆ.

ಜೊತೆಗೆ ಮಾಧ್ಯಮ ಭ್ರಷ್ಟಾಚಾರ ಕೇವಲ ಹಣಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಸೈದ್ಧಾಂತಿಕ ಭ್ರಷ್ಟಾಚಾರ, ಸ್ವಾರ್ಥ, ಸಂಕುಚಿತ ಮತ್ತು ಉದ್ದೇಶ ಪೂರ್ವಕ ನಿಂದನಾ ಭ್ರಷ್ಟಾಚಾರ ಸಹ ಸೇರಿರುತ್ತದೆ. ಅಲ್ಲದೆ ಪತ್ರಕರ್ತರ ಜೀವ ವಿರೋಧಿ ನಿಲುವು ತುಂಬಾ ಅಪಾಯಕಾರಿ ಸಹ. ಅದನ್ನೇ ಬಾಬಾ ಸಾಹೇಬ್ ಹೇಳಿರುವುದು.

ಇಂದಿನ ಸ್ಪರ್ಧಾ ಜಗತ್ತಿನಲ್ಲಿ ವೈದ್ಯರು, ಶಿಕ್ಷಕರು, ಪತ್ರಕರ್ತರು ಕಾರ್ಪೊರೇಟ್ ಧಣಿಗಳ ಹಿಡಿತದಲ್ಲಿ ಸಿಲುಕಿದ್ದಾರೆ. ಇವರು ಅವರ ಮುಖವಾಡಗಳು ಮಾತ್ರ. ಜೊತೆಗೆ ‌ಇವರು ಜಾಗತೀಕರಣದ ಅಡಿಯಾಳುಗಳು.

ಹಾಗೆಂದು ಮಾಧ್ಯಮ ಭ್ರಷ್ಟಾಚಾರವನ್ನು ನಿರ್ಲಕ್ಷಿಸುವಂತಿಲ್ಲ. ಶಾಸಕಾಂಗ ಮತ್ತು ಕಾರ್ಯಾಂಗದ ಭ್ರಷ್ಟಾಚಾರಕ್ಕಿಂತ ನ್ಯಾಯಾಂಗ ಮತ್ತು ಮಾಧ್ಯಮ ರಂಗದ ಭ್ರಷ್ಟಾಚಾರ ಇಡೀ ವ್ಯವಸ್ಥೆಯೇ ಕುಸಿಯುವಂತೆ ಮಾಡುತ್ತದೆ. ಅದರಲ್ಲೂ ದುರ್ಬಲ ವರ್ಗಗಳ ಧ್ವನಿಯೇ ಅಡಗಿ ಹೋಗುತ್ತದೆ.

ಆ ದೃಷ್ಟಿಯಿಂದ ಮುಖ್ಯಮಂತ್ರಿಗಳ ಕಚೇರಿಯ ಈ ಹಣದ ಬಾಕ್ಸ್ ಹಂಚಿಕೆ ತುಂಬಾ ಗಂಭೀರವಾದುದು. ಚುನಾವಣಾ ವರ್ಷದಲ್ಲಿ ಹೀಗೆ ಸಾರ್ವಜನಿಕ ಜನಾಭಿಪ್ರಾಯ ರೂಪಿಸುವ ಪತ್ರಕರ್ತರನ್ನೇ ವ್ಯಾಪಾರ ಮಾಡಿ ಕೊಂಡುಕೊಂಡರೆ ಮತ್ತು ಕೆಲವು ಪತ್ರಕರ್ತರು ಮಾರಾಟವಾದರೇ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತದೆ.

ಈಗಾಗಲೇ ಕೆಲವು ಪತ್ರಕರ್ತರು ಮಾರಾಟವಾಗಿದ್ದಾರೆ. ಅವರು ಹೇಳುವುದು ಸಂಪೂರ್ಣ ಪ್ರಾಮಾಣಿಕವಲ್ಲ. ಹಣ ಪ್ರೇರಿತ ಸುಳ್ಳು ಸುದ್ದಿಗಳನ್ನು ‌ನಿಜವೆಂದು ನಂಬಿಸುತ್ತಿದ್ದಾರೆ. ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಾಗಿದ್ದ ಪತ್ರಕರ್ತರು ಆಡಳಿತ ಪಕ್ಷದ ಪಕ್ಕದಲ್ಲಿ ಕುಳಿತಿದ್ದಾರೆ.
ಪ್ರಜಾಪ್ರಭುತ್ವದ ಕಾವಲುಗಾರ ಬಾಗಿಲ ಬಳಿ ನಿಯತ್ತಿನಿಂದ ಕಾವಲು ಕಾಯದೆ ಬಿಸ್ಕತ್ತು ಹಾಕಿದ ವ್ಯಕ್ತಿಯ ಜೊತೆ ಕುಳಿತು ಆಟವಾಡುತ್ತಿದ್ದಾನೆ. ಕಳ್ಳ ಮನೆ ಪ್ರವೇಶಿಸಿಯಾಗಿದೆ. ಮುಂದಿನ ದೃಶ್ಯಗಳು ನಿಮ್ಮ ಊಹೆಗೆ ಬಿಟ್ಟದ್ದು…..

ಆದ್ದರಿಂದ ದಯವಿಟ್ಟು ಸುದ್ದಿಯ ನಿಖರತೆಯನ್ನು ಅರ್ಥಮಾಡಿಕೊಂಡು ನಮ್ಮ ನಮ್ಮ ವಿವೇಚನೆ ಬಳಸಿ ನಾವೇ ಸ್ವತಂತ್ರ ನಿರ್ಧಾರ ಕೈಗೊಳ್ಳಬೇಕು. ಮಾಧ್ಯಮ ಸುದ್ದಿಗಳನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಳ್ಳಬಾರದು. ಅವರಲ್ಲಿಯೂ ಭ್ರಷ್ಟರು ಇರುತ್ತಾರೆ ಎಂಬ ಪ್ರಜ್ಞೆ ಸಾರ್ವಜನಿಕರಲ್ಲಿ ಜಾಗೃತಗೊಳಿಸಲು ಮುಂದಿನ ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಲು ಪ್ರಯತ್ನಿಸಲಾಗುತ್ತಿದೆ.

ಮಾಧ್ಯಮ ಆತ್ಮಾವಲೋಕನ ಮತ್ತು ಸಾರ್ವಜನಿಕ ಜಾಗೃತಿಯೇ ಈ ಕಾರ್ಯಕ್ರಮದ ಮೂಲ ಉದ್ದೇಶ. ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಕರ್ತರಿಗೆ ನಮ್ಮನ್ನೂ ಸಾರ್ವಜನಿಕರು ನೋಡುತ್ತಿದ್ದಾರೆ. ನಾವು ಯಾವುದೇ ರೀತಿಯ ಭ್ರಷ್ಟಾಚಾರದಲ್ಲಿ‌ ತೊಡಗಬಾರದು‌ ಎಂದು ಎಚ್ಚರಿಸಲು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ.
ಕಾರ್ಯಕ್ರಮದ ಇತರೆ ವಿವರಗಳನ್ನು ಇನ್ನೆರಡು ದಿನಗಳಲ್ಲಿ ಪ್ರಕಟಿಸಲಾಗುವುದು.

ರಾಜಕಾರಣಿಗಳ, ಅಧಿಕಾರಿಗಳ, ಮತದಾರರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪತ್ರಕರ್ತರೇ ಶಾಸಕರಂತೆ ತಮ್ಮನ್ನು ಮಾರಿಕೊಂಡರೆ ಅದಕ್ಕಿಂತ ನಾಚಿಕೆ ಗೇಡು ಇನ್ನೊಂದಿಲ್ಲ. ಕೆಲವು ಪತ್ರಕರ್ತರು ಆ ಕೊಡುಗೆಯನ್ನು ನಿರಾಕರಿಸಿ ವಾಪಸ್ಸು ಕಳುಹಿಸಿದ ಸುದ್ದಿಗಳು ಇವೆ.

ಇನ್ನು ಮುಖ್ಯಮಂತ್ರಿ ಕಚೇರಿಯ ಬಗ್ಗೆ ಬರೆಯುವುದು ಏನೂ ಇಲ್ಲ. ಏಕೆಂದರೆ ಬಹುತೇಕ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಿಗೆ ಇದು ಸಹಜ ನಡವಳಿಕೆ. ಅನೇಕ ಮಂತ್ರಿಗಳು, ವಿರೋಧ ಪಕ್ಷಗಳ ಪ್ರಮುಖರು ಕೆಲವು ರಾಜಕೀಯ ಪತ್ರಕರ್ತರಿಗೆ ಅನಧಿಕೃತವಾಗಿ ತಿಂಗಳ ಮಾಮೂಲಿ ಸಹ ನೀಡುತ್ತಿದ್ದಾರೆ ಎಂಬ ಮಾಹಿತಿ ಇದೆ.

ಮೇಲ್ನೋಟಕ್ಕೆ ತಾವು ತುಂಬಾ ಪ್ರಾಮಾಣಿಕರು ಎಂದು ಹೇಳುವ ಈ ರಾತ್ರಿ 7/8/9 ಗಂಟೆಯ ದೊಡ್ಡ ಗಂಟಲಿನ ದೃಶ್ಯ ಮಾಧ್ಯಮದ ಪತ್ರಕರ್ತರು ಪರೋಕ್ಷವಾಗಿ ಸಾಕಷ್ಟು ಲಾಭಗಳನ್ನು ಸರ್ಕಾರದಿಂದ ಪಡೆಯುತ್ತಾರೆ. ಆರೋಪ ಮಾಡಿದರೆ‌ ದಾಖಲೆ ಕೊಡಿ ಎನ್ನುತ್ತಾರೆ. ದಾಖಲೆ ಕೊಟ್ಟರೆ ನ್ಯಾಯಾಲಯದಲ್ಲಿ ಸಾಬೀತು ಮಾಡಿ ಎನ್ನುತ್ತಾರೆ. ಅದು ನಮ್ಮಂತವರಿಂದ ಸಾಧ್ಯವೇ…..

ಅವರು ಮಾತ್ರ ಇತರರ ಮೇಲೆ ಯಾವುದೇ ದಾಖಲೆಗಳು ಇಲ್ಲದಿದ್ದರೂ ಆರೋಪ ಮಾಡುತ್ತಾರೆ. ಏಕೆಂದರೆ ಅವರು ಪತ್ರಕರ್ತರು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!