Spread the love

ನಾಸಾ – ಇಸ್ರೋ
ವರ್ಸಸ್
ಎಲೆಕ್ಟ್ರಾನಿಕ್ ಮಾಧ್ಯಮಗಳು……

ವಿಜ್ಞಾನಿಗಳು
ವರ್ಸಸ್
ಜ್ಯೋತಿಷಿಗಳು ಮತ್ತು
ಧರ್ಮ ಗುರುಗಳು….

ಜನಗಳು
ವರ್ಸಸ್
ಕುರಿಗಳು…….

ಪ್ರಕೃತಿಯ ಸಹಜತೆ
ವರ್ಸಸ್
ಮನುಷ್ಯನ ಅಸಹಜತೆ…..

ಸಹಸ್ರಾರು ವರ್ಷಗಳ ಪ್ರಾಕೃತಿಕ ಸಹಜತೆಗೆ ವಿವಿಧ ಬಣ್ಣ ನೀಡಿ ಜನರನ್ನು ಮೂರ್ಖರಾಗಿಸಬಹುದು ಎಂಬುದೇ ಒಂದು ಆಶ್ಚರ್ಯಕರ ವಿಷಯ.

ಪಬ್ಲಿಕ್ ಟಿವಿ, ಸುವರ್ಣ ಟಿವಿ, ಟಿವಿ 9,
ಬಿಟಿವಿ, ನ್ಯೂಸ್ 18, ಟಿವಿ ಫಸ್ಟ್, ಸಮಯ ಟಿವಿ ಹೀಗೆ ಸಾಲು ಸಾಲು ಸುದ್ದಿ ವಾಹಿನಿಗಳು…..

ಕ್ಯಾಪ್ಟನ್ ರಂಗನಾಥ್, ಅಜಿತ್ ಹನುಮಕ್ಕನವರ್, ರಂಗನಾಥ್ ಭಾರದ್ವಾಜ್, ಹರೀಶ್ ನಾಗರಾಜ್, ಚಂದನ್ ಶರ್ಮ, ರಾಧಿಕಾ ಹಿರೇಗೌಡರ್,
ಭಾವನಾ ನಾಗಯ್ಯ ಹೀಗೆ ಸಾಲು ಸಾಲು ಪತ್ರಕರ್ತರೆಂಬ ನಿರೂಪಕರು……

ನೇರ ದಿಟ್ಟ ನಿರಂತರ,
ನಾವು ಸುಳ್ಳು ಹೇಳುವುದಿಲ್ಲ,
ಭರವಸೆಯ ಬೆಳಕು,
ಇದು ಯಾರ ಆಸ್ತಿಯೂ ಅಲ್ಲ,
ನಾವು ಯಾರಿಗೂ ಹೆದರುವುದಿಲ್ಲ,
ಉತ್ತಮ ಸಮಾಜಕ್ಕಾಗಿ,
ಇದು ನಿಮ್ಮ ಟಿವಿ,
ಸತ್ಯ ಹೇಳಲು ಭಯ ಪಡುವುದಿಲ್ಲ,
ಭ್ರಷ್ಟರ ಬೇಟೆ,
ಹೀಗೆ ಸಾಲು ಸಾಲು ಟ್ಯಾಗ್ ಲೈನ್ ಗಳು……

ಬ್ರಹ್ಮಾಂಡ ಗುರೂಜಿ, ಆನಂದ ಗುರೂಜಿ, ನರೇಂದ್ರ ಬಾಬು ಗುರೂಜಿ, ರವಿಶಂಕರ್ ಗುರೂಜಿ, ಆರ್ಯವಧನ ಗುರೂಜಿ, ಆ ಗುರೂಜಿ, ಈ ಗುರೂಜಿ ಹೀಗೆ ಸಾಲು ಸಾಲು ಮಹರ್ಷಿ ಜ್ಯೋತಿಷಿ ಗುರೂಜಿಗಳು…….

ಆದರೂ ಇಡೀ ಸಮಾಜಕ್ಕೆ, ಸಂವಿಧಾನಕ್ಕೆ, ವೈಚಾರಿಕ ಮನೋಭಾವಕ್ಕೆ, ಸತ್ಯಕ್ಕೆ, ಮನುಷ್ಯತ್ವಕ್ಕೆ ವಂಚಿಸುತ್ತಾ, ಕಳ್ಳರು, ಸುಳ್ಳರು, ವಂಚಕರಂತೆ ಮೌಡ್ಯ ಬಿತ್ತುತ್ತಾ,
ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿ ಜನರನ್ನು ಪ್ರಚೋದಿಸುತ್ತಾ ತಮ್ಮ ಬದುಕನ್ನು ಬದುಕನ್ನು ಸಾಗಿಸುತ್ತಿರುವ ಬಹಳಷ್ಟು ಮಾಧ್ಯಮ ಮಿತ್ರರ ಗಮನಕ್ಕೆ……

ಗ್ರಹಣ………‌

ನಮಗೆ ಖಾಯಿಲೆಯಾದಾಗ ಸಾಮಾನ್ಯವಾಗಿ ನಾವು ಹೋಗುವುದು ಡಾಕ್ಟರ್ ಬಳಿಗೆ,

ನಮ್ಮ ಮನೆಯಲ್ಲಿ ಕಳ್ಳತನ ದರೋಡೆ ಆದಾಗ ಅಥವಾ ನಮಗೆ ಬೆದರಿಕೆ ಉಂಟಾದಾಗ ನಾವು ಸಂಪರ್ಕಿಸುವುದು ಪೋಲಿಸರನ್ನು….

ನಮಗೆ ಯಾವುದೇ ರೀತಿಯ ಅನ್ಯಾಯವಾದರೆ ನಾವು ನ್ಯಾಯಾಲಯದಲ್ಲಿ ನ್ಯಾಯ ಕೇಳುತ್ತೇವೆ…..

ನೀರಾವರಿ ಇಲಾಖೆ, ವಿದ್ಯುತ್ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ, ಅಬಕಾರಿ ಇಲಾಖೆ, ಸಂಸ್ಕೃತಿ ಇಲಾಖೆ, ಮಹಿಳಾ ಇಲಾಖೆ, ಮಕ್ಕಳ ಇಲಾಖೆ ಹೀಗೆ ಬದುಕಿಗೆ ಸಂಬಂಧಿಸಿದ ಎಲ್ಲಾ ಕ್ಷೇತ್ರಗಳಿಗೂ ಅಧಿಕೃತವಾಗಿ ಸರ್ಕಾರದ ಇಲಾಖೆಗಳು ಇವೆ. ಅವು ನೀಡುವ ಮಾಹಿತಿಯೇ ಬಹಳಷ್ಟು ಸತ್ಯ ಮತ್ತು ಅಂತಿಮ ಹಾಗೂ ವಾಸ್ತವಕ್ಕೆ ಹತ್ತಿರ ಎಂದು ಈ ವ್ಯವಸ್ಥೆಯಲ್ಲಿ ನಾವೆಲ್ಲರೂ ಒಪ್ಪಿದ್ದೇವೆ.

ಇಲ್ಲಿಯೂ ಒಂದಷ್ಟು ಅನ್ಯಾಯ ಅಕ್ರಮ ಭ್ರಷ್ಟಾಚಾರ ಇದ್ದರೂ ಇದನ್ನು ಒಪ್ಪದೆ ಬೇರೆ ದಾರಿ ಇಲ್ಲ. ನಾವೇ ಸೃಷ್ಟಿಸಿಕೊಂಡ ಅಧೀಕೃತ ವ್ಯವಸ್ಥೆ ಇದು.

ಹಾಗೆಯೇ ಖಗೋಳ ವಿಜ್ಞಾನದ ಬಗ್ಗೆ ಅಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಲು ಇಸ್ರೋ ಎಂಬ ಅಧೀಕೃತ ಸಂಸ್ಥೆ ಇದೆ. ಅದು ತನ್ನ ಸಂಪೂರ್ಣ ಅಧ್ಯಯನದ ಮಿತಿಯಲ್ಲಿ ವಿಶ್ವದ ಎಲ್ಲಾ ಖಗೋಳ ವಿಜ್ಞಾನದ ಸಂಪರ್ಕ ಬಳಸಿ ಮಾಹಿತಿ ಸಂಗ್ರಹಿಸಿ ನಮಗೆ ವಾತಾವರಣದ ಯಾವುದೇ ಏರಿಳಿತಗಳನ್ನು ತಿಳಿಸುತ್ತದೆ.

ಅದರ ಪ್ರಕಾರ,
ಭೂಮಿ, ಚಂದ್ರ, ಸೂರ್ಯನ ಸುತ್ತುವಿಕೆಯ ನಡುವಿನ ನೆರಳು ಬೆಳಕಿನಾಟವೇ ಗ್ರಹಣ. ಇದೊಂದು ಅಂತರಿಕ್ಷದ ಸಹಜ ಕ್ರಿಯೆ. ಅದರಿಂದ ಏನಾದರೂ ಗಂಭೀರವಾದ ಪರಿಣಾಮವಾಗುವುದಿದ್ದರೆ ಅವರೇ ಮಾಹಿತಿ ನೀಡುತ್ತಾರೆ ಮತ್ತು ಎಚ್ಚರಿಸುತ್ತಾರೆ.

ನೋಡಿ, ನಾಗರಿಕತೆಯ ಪ್ರಾರಂಭದಲ್ಲಿ ಡಾಕ್ಟರ್ ಪೋಲೀಸ್ ಸರ್ಕಾರ ಏನೂ ಇಲ್ಲದಿದ್ದ ಸಂದರ್ಭದಲ್ಲಿ ಆಗಿನ ಜನರೇ ಅನುಭವದ ಆಧಾರದ ಮೇಲೆ ತಮ್ಮ ಸಮಸ್ಯೆಗಳನ್ನು ಸಾಧ್ಯವಾದ ಮಟ್ಟಿಗೆ ಬಗೆಹರಿಸಿಕೊಳ್ಳುತ್ತಿದ್ದರು.

ಅದೇ ರೀತಿ ಖಗೋಳದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ತಮ್ಮ ಅನುಭವದ ಜ್ಞಾನದಿಂದಲೇ ಗುರುತಿಸಿ ಮಾಹಿತಿ ನೀಡುತ್ತಿದ್ದರು. ಇದು ಬಹುತೇಕ ನಿಜವೇ ಆಗಿರುತ್ತಿತ್ತು. ಭಾರತದಲ್ಲಿ ಮಾತ್ರವಲ್ಲ ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಇದೇ ರೂಡಿಯಲ್ಲಿತ್ತು.

ಗಿಡಮೂಲಿಕೆಗಳೇ ಔಷಧಗಳಾಗಿ, ಪಂಚಾಯತಿ ಕಟ್ಟೆಗಳೇ ನ್ಯಾಯಾಲಯಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಆ ಕಾಲಘಟ್ಟದಲ್ಲಿ ಅವ್ಯವಸ್ಥೆ, ಅನ್ಯಾಯ, ಅಸಮಾನತೆ, ಅಸಮರ್ಪಕ ನಿರ್ವಹಣೆಯ ವಿರುದ್ದವಾಗಿ ಈಗ ಆಧುನಿಕ ಪ್ರಜಾಪ್ರಭುತ್ವ, ತಂತ್ರಜ್ಞಾನ ಮತ್ತು ಅಧೀಕೃತ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಹಿಂದಿನ ವ್ಯವಸ್ಥೆ ಕೆಲವು ಉತ್ತಮ ರೀತಿಯಲ್ಲಿ ಇದ್ದರೂ ಬೃಹತ್ ಜನಸಂಖ್ಯೆಯಲ್ಲಿ ಅವು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಸಾರ್ವತ್ರಿಕ ನ್ಯಾಯ ಕಲ್ಪಿಸುವಲ್ಲಿ ವಿಫಲವಾಗಿವೆ.

ಇದರ ಆಧಾರದಲ್ಲಿ,
ಗ್ರಹಣ ಎಂದರೇನು ?
ಅದು ಹೇಗೆ ಸಂಭವಿಸುತ್ತವೆ ?
ಅದರ ಪರಿಣಾಮಗಳೇನು ?
ಯಾವ ರೀತಿಯ ಮುನ್ನೆಚ್ಚರಿಕೆ ವಹಿಸಬೇಕು ?
ಎಂದು ಅಧೀಕೃತ ಖಗೋಳ ವಿಜ್ಞಾನಿಗಳು ನೀಡುವ ಮಾಹಿತಿಯೇ ನಮಗೆ ಸದ್ಯದ ವಾಸ್ತವ.

ಟಿವಿ ಮಾಧ್ಯಮಗಳಲ್ಲಿ ಕುಳಿತು ಕುಂಕುಮ ವಿಭೂತಿ ಕಾಷಯಾ ತೊಟ್ಟು ಶ್ಲೋಕಗಳನ್ನು ಪಠಿಸುತ್ತಾ ಕೋಟ್ಯಾನುಕೋಟಿ ದೂರದ ಖಗೋಳ ವೈಚಿತ್ರ್ಯ ವಿಸ್ಮಯಗಳ ಬಗ್ಗೆ ಮಾತನಾಡುವುದರಲ್ಲಿ ಸ್ವಲ್ಪ ಮಟ್ಟಿಗೆ ನಿಜವಿದ್ದರೂ ಅದು ಸಾರ್ವತ್ರಿಕವಲ್ಲ, ಅಧೀಕೃತವಲ್ಲ, ಸಂಪೂರ್ಣ ನಂಬಿಕೆಗೆ ಅರ್ಹವಲ್ಲ.

ರಾಶಿಗಳ ಆಧಾರದಲ್ಲಿ ಪ್ರತಿ ವ್ಯಕ್ತಿಯ ಬದುಕಿನಲ್ಲಿ ಏನೇನೂ ಬದಲಾವಣೆ ಆಗುತ್ತದೆ. ಇನ್ನೇನೋ ಅವಘಡ ಸಂಭವಿಸುತ್ತದೆ ಎಂದು ಪ್ರಕೃತಿಯ ಸಹಜ ಕ್ರಿಯೆಯನ್ನು ಭೂತ ಮಾಡಲಾಗಿದೆ.
ಸೃಷ್ಟಿಯ ಅಗಾಧತೆ, ವೈವಿಧ್ಯತೆ, ಬೃಹತ್ ಜನಸಂಖ್ಯೆಯ ಬಗ್ಗೆ ಅವರಿಗೆ ಕಲ್ಪನೆ ಇಲ್ಲದೆ ಸಂಕುಚಿತವಾಗಿ ಮಾತನಾಡುತ್ತಾರೆ.

ಮತ್ತೊಮ್ಮೆ ಮಗದೊಮ್ಮೆ ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ. ಹೇಗಿದ್ದರೂ ಆ ಸ್ವಾತಂತ್ರ್ಯ ನಿಮಗಿದೆ.
ಯೋಚಿಸಲು ಪ್ರೇರೇಪಿಸುವುದಷ್ಟೇ ಈ ಲೇಖನದ ಉದ್ದೇಶ….

ಹಾಗೆಯೇ ಮಾಧ್ಯಮಗಳು ಹೇಗೆ ಜನರನ್ನು ದಾರಿ ತಪ್ಪಿಸುತ್ತಿವೆ ಎಂಬುದು ಸಹ ಜನರ ತಿಳಿವಳಿಕೆಯ ಅರಿವು ಮೂಡಿಸಬೇಕಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಮತ್ತು ಅತ್ಯಂತ ಜವಾಬ್ದಾರಿಯುತ ಅಂಗ ಎಂಬುದನ್ನು ಅರ್ಥಮಾಡಿಸಬೇಕಿದೆ……..

ಶಿಕ್ಷಕರು, ವಿಜ್ಞಾನಿಗಳು, ಚಿಂತಕರು, ಸಮಾಜ ಸುಧಾರಕರು, ಹೋರಾಟಗಾರರು, ವೈಚಾರಿಕ ಪ್ರಜ್ಞೆಯವರು ಹೀಗೆ ಸಾಲು ಸಾಲು ಜವಾಬ್ದಾರಿಯುತ ನಾಗರಿಕರು ಧ್ವನಿ ಎತ್ತರಿಸಬೇಕಿದೆ……..

ಎಲ್ಲರಿಗೂ ಒಳ್ಳೆಯದಾಗಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!