Spread the love

ಹುಚ್ಚು ಕನಸುಗಳು ಬೆನ್ನೇರಿ……

ಒಂದು ಸವಾರಿ……

ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ,

ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ,

ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ,

ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ,

ಚಿಕನ್, ಮಟನ್, ಫಿಶ್, ಪೋರ್ಕ್, ಭೀಫ್ ಗಳೇ,

ಸೀರೆ, ಲಂಗ, ಬುರ್ಖಾ, ಜೀನ್ಸ್, ಚೂಡಿದಾರ್ ಗಳೇ,

ಪ್ಯಾಂಟ್, ಷರ್ಟ್, ಪಂಚೆ, ಲುಂಗಿ, ಪೈಜಾಮಾಗಳೇ,

ಹರಿಶಿನ, ಕುಂಕುಮ, ವಿಭೂತಿ, ಧೂಪ, ಪರ್ ಪ್ಯೂಮ್ ಗಳೇ,

ರೋಜಾ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಕಾಕಡಾಗಳೇ,

ಒಂದು ಜಡೆ, ಎರಡು ಜಡೆ, ಬಾಬ್ ಕಟ್, ಹೇರ್ ಕಟ್ ಗಳೇ,

ಗೌಡ, ಲಿಂಗಾಯತ, ದಲಿತ, ಬ್ರಾಹ್ಮಣ, ಕುರುಬ, ಹಿಂದುಳಿದ ವರ್ಗಗಳೇ,

ಶಿಯಾ, ಸುನ್ನಿ, ಕ್ಯಾಥೋಲಿಕ್, ಪ್ರಾಟೆಸ್ಟೆಂಟ್, ಜೈನ, ಬೌದ್ಧ, ಪಾರ್ಸಿ, ಯಹೂದಿಗಳೇ,

ಕರಿಯ, ಬಿಳಿಯ, ಕೆಂಚ, ಗೋದಿ ಮೈ ಬಣ್ಣಗಳೇ,

ಶಿವ, ಜೀಸಸ್, ಪೈಗಂಬರ್, ಗುರುನಾನಕ್, ಬುದ್ದ, ಮಾಹಾವೀರರುಗಳೇ,

ರಾಮ, ಇಮ್ರಾನ್, ಜೇಕಬ್, ಸರ್ದಾರ್, ಪಠಾಣ್, ಠಾಕೂರ್ ಗಳೇ,

ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಸಂಸ್ಕೃತಗಳೇ,

ಕಣ್ಣು, ಕಿವಿ, ಮೂಗು, ಬಾಯಿ, ಕಿಡ್ನಿ, ಹೃದಯಗಳೇ,

ಬಿಪಿ, ಶುಗರ್, ಕ್ಯಾನ್ಸರ್, ಏಡ್ಸ್, ವೈರಸ್ ಗಳೇ,

ಡಾಕ್ಟರ್, ಆಕ್ಟರ್, ಬೆಗ್ಗರ್, ಮಿನಿಸ್ಟರ್, ರಾಬರ್ಸಗಳೇ,

ಅಪ್ಪ, ಅಮ್ಮ, ಅಣ್ಷ, ತಮ್ಮ, ತಂಗಿ, ಬಂಧುಗಳೇ,……………

ಪ್ರಕೃತಿಯಲ್ಲಿ ಎಲ್ಲಾ ಒಂದೇ ಕಣ್ರಯ್ಯಾ,

ಇಲ್ಲಿ ಯಾವುದನ್ನೂ ಸೃಷ್ಟಿಸಲು ಸಾಧ್ಯವಿಲ್ರಯ್ಯ,
ಯಾವುದನ್ನೂ ನಾಶ ಮಾಡಲು ಸಾಧ್ಯವಿಲ್ರಯ್ಯ,

ರೂಪ ಆಕಾರ ಗುಣಗಳು ಮಾತ್ರ ಬೇರೆಯಾಗಿರುತ್ತದ್ರಯ್ಯ,

ತಾರತಮ್ಯ ಎಲ್ಲಾ ನಿಮ್ಮ ಭ್ರಮೆಯಯ್ಯ,

ಇಷ್ಟು ಸರಳ ವಿಷಯ ಅರ್ಥವಾಗಲು ಸಹಸ್ರಾರು ವರ್ಷ ಬೇಕೇನ್ರಯ್ಯ,

ಆದರೂ ನಾವು ಹೇಳಿಕೊಳ್ಳುತ್ತೇವೆ,

ಮಾನವ ಮುಂದುವರಿದ ನಾಗರೀಕ ಸಮಾಜದ,
ಅತ್ಯಂತ ಬುದ್ಧಿವಂತ ಪ್ರಾಣಿಯೆಂದು,

ಇದು ನಿಜವೇ ? ನನಗೇಕೊ ಅನುಮಾನ.!!

ಪ್ರಕೃತಿಯ ಮಡಿಲಲ್ಲಿ ಸಮಾನತೆ ಸಾಧಿಸಲು……….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು.

ಬ್ರಾಹ್ಮಣರ ಎಲ್ಲಾ ಅಗ್ರಹಾರಗಳನ್ನು ನಾಶಪಡಿಸಬೇಕು. ಊರ ಒಳಗಿನ ಎಲ್ಲರ ಜೊತೆ ಸಹಜವಾಗಿ ಬದುಕುವಂತೆ ಮಾಡಬೇಕು.

ಹಾಗೆಯೇ,
ಜಾತಿಗಳ ಆಧಾರದ ಮೇಲೆ ಅಸ್ತಿತ್ವದಲ್ಲಿರುವ ಎಲ್ಲಾ ಕೇರಿ ಹಟ್ಟಿ ಬೀದಿ ಓಣಿ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ಪ್ರದೇಶಗಳನ್ನು ನಾಶಪಡಿಸಿ ಅದರ ನೆನಪೂ ಉಳಿಯದಂತೆ ಮಾಡಬೇಕು.

ಅದೇರೀತಿ ,
ಒಂದು ಪ್ರತ್ಯೇಕ ಸ್ಥಳಗಳಲ್ಲಿ ಒಟ್ಟಾಗಿ ಗುಂಪು ಗುಂಪಾಗಿ ವಾಸಿಸುತ್ತಿರುವ ಮುಸ್ಲಿಂ ಕ್ರಿಶ್ಚಿಯನ್ ಜೈನ್ ಭೌದ್ದರು ಸಿಖ್ಖರು ಪಾರ್ಸಿಗಳು ಮುಂತಾದವರನ್ನು ಅಲ್ಲಿಂದ ಬೇರ್ಪಡಿಸಿ ಊರ ಒಳಗೆ ಚದುರಿದಂತೆ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು‌.

ಜಾತಿ ಹೆಸರೇಳುವುದು ಅವಮಾನ ಅನಾಗರಿಕತೆ,
” ಭಾರತೀಯತೆ ” ಒಂದು ಹೆಮ್ಮೆ ಎಂದು ಹೇಳಲು ಯುವ ಜನಾಂಗವನ್ನು ಪ್ರೇರೇಪಿಸಬೇಕು.

ಜಾತಿ ಧರ್ಮ ನಂಬಿಕೆ ಸಂಪ್ರದಾಯಗಳಿಗಿಂತ ನಾಗರಿಕ ಪ್ರಜ್ಞೆ ಆಧುನಿಕ ಸಮಾಜದ ಮುಖ್ಯ ಗುಣಲಕ್ಷಣಗಳು ಎಂದು ಭಾವಿಸುವಂತಾಗಬೇಕು.

ಯಾರಾದರೂ ಸ್ವಯಂ ಇಚ್ಛೆಯಿಂದ ಅಧೀಕೃತ ಜಾತಿಯ ಕಾಲಂನಲ್ಲಿ ಜಾತಿಯ ಹೆಸರು ನಮೂದಿಸದೆ ” ಭಾರತೀಯ ” ಎಂದು ಬರೆಯಲು ಅವಕಾಶ ಕಲ್ಪಿಸಬೇಕು ಮತ್ತು ಅವರಿಗೆ ಏನಾದರೂ ಒಂದಷ್ಟು ಪ್ರೋತ್ಸಾಹಕ ಕೊಡುಗೆ ನೀಡಬೇಕು.

ಅಂತರಜಾತೀಯ ವಿವಾಹವಾಗಿ 15 ವರ್ಷ ಪೂರೈಸಿದ ಕುಟುಂಬಕ್ಕೆ, ಕೌಟುಂಬಿಕ ನ್ಯಾಯಾಲಯ ಇದನ್ನು ದೃಡಪಡಿಸಿದಲ್ಲಿ ,
ಅವರ ಕುಟುಂಬಕ್ಕೆ ಜೀವನ ಪರ್ಯಂತ ಯಾವುದೇ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆ ಸರ್ಕಾರ ಒದಗಿಸಬೇಕು.

ಅಸ್ಪೃಶ್ಯತೆ ಆಚರಣೆ ದೇಶ ದ್ರೋಹಕ್ಕೆ ಸಮಾನ ಎಂದು ಘೋಷಿಸಬೇಕು.
ಪಂಕ್ತಿಬೇದ, ಜಾತಿಯ ಆಧಾರದ ಪಕ್ಷಪಾತ, ಪ್ರವೇಶ ನಿಷೇಧ, ವ್ಯಕ್ತಿಯ ಸ್ವಾತಂತ್ರ್ಯ ಕ್ಕೆ ಧಕ್ಕೆ ತರುವ ಆಚರಣೆ ಇರುವ ಎಲ್ಲಾ ದೇವ ಮಂದಿರಗಳನ್ನು ಸರ್ಕಾರ ವಶಕ್ಕೆ ಪಡೆಯಬೇಕು.

ಎಲ್ಲಾ ಮಂದಿರ, ಮಸೀದಿ, ಚರ್ಚು, ಗುರುದ್ವಾರ, ಭೌದ್ದ ಜೈನ ಪಾರ್ಸಿ ಮಂದಿರಗಳನ್ನು ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸಬೇಕು.
ಅಲ್ಲಿ ನಂಬಿಕೆಯ ಆಚರಣೆಗಳಿಗಿಂತ ಧ್ಯಾನ ಕೇಂದ್ರಗಳಂತೆ ಕಾರ್ಯನಿರ್ವಾಹಿಸಲು ಹೆಚ್ಚಿನ ಆಧ್ಯತೆ ಕೊಡಬೇಕು.

ಹೆಸರುಗಳ ಮುಂದೆ ಜಾತಿ ಸೂಚಕ ಪದವನ್ನು ನಿಷೇಧಿಸಬೇಕು.

ಹೊಟ್ಟೆಯಲ್ಲಿರುವ ಮಗುವಿನ ಲಿಂಗ ಪರೀಕ್ಷೆ ನಿಷೇಧಿಸಿದಂತೆ ಜಾತಿಯನ್ನು ಮದುವೆ ಚುನಾವಣೆ ಮುಂತಾದ ಸಾರ್ವಜನಿಕ ಕಾರ್ಯಗಳಲ್ಲಿ ಬಹಿರಂಗ ಪಡಿಸಿದಂತೆ ನಿಷೇಧವಿರಬೇಕು.

ಜಾತಿ ಹೆಸರಿನ ಮತ್ತು ಜಾತಿ ಆಧಾರಿತ ಸಂಘಟನೆಗಳನ್ನು ನಿಷೇಧಿಸಬೇಕು. ಅದಕ್ಕೆ ಬದಲಾಗಿ ಕ್ರೀಡಾ, ಸಾಂಸ್ಕೃತಿಕ, ಸಾಹಿತ್ಯಕ ಸಾಹಸ ಸಂಘಟನೆಗಳನ್ನು ಪ್ರೋತ್ಸಾಹಿಸಬೇಕು.

ಇಷ್ಟಾದರೂ ದಲಿತ ವರ್ಗದವರಿಗೆ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಏಕೆಂದರೆ ಈಗಲೂ ತಳ ಜಾತಿಗಳು ಮುಖ್ಯವಾಹಿನಿಯಿಂದ ದೂರವಿದ್ದು ಅಸಮಾನತೆಯಿಂದ ಬಳಲುತ್ತಿವೆ.

ಅದಕ್ಕಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ,
ಅ – ಅಗಸ, ಈ – ಈಶ, A – Apple, D – Dog ಎಂಬ ಕ್ರಮವನ್ನು ಕೇವಲ Supplement ಆಗಿ ಕಲಿಸಿ ಮುಖ್ಯ ಶಿಕ್ಚಣ ಇಲ್ಲಿನ ಬದುಕಿನ ಅವಶ್ಯಕತೆ, ಕ್ರಿಯಾತ್ಮಕತೆ, ಸಹಜತೆ ಮತ್ತು ಜೀವಪರ ನಿಲುವಿನ ಕ್ರಮವನ್ನು ರೂಪಿಸಬೇಕು.
SSLC ನಂತರದ ಒಂದು ವರ್ಷದ ಶಿಕ್ಷಣವನ್ನು ಕಡ್ಡಾಯವಾಗಿ ದೈಹಿಕ ಮತ್ತು ಮಾನಸಿಕ ತರಬೇತಿಯ ಕ್ರಮವಾಗಿ ( Military training ) ರೂಪಿಸಬೇಕು.

ಶಿಕ್ಷಣದ ಗುಣಮಟ್ಟವನ್ನು ಅತ್ಯಂತ ಮೇಲ್ದರ್ಜೆಗೆ ಏರಿಸಿ ಅದರ ಖರ್ಚನ್ನು ಕಡಿಮೆಗೊಳಿಸಿ, ಕೃಷಿ ಮತ್ತು ಅದಕ್ಕೆ ಪೂರಕ ಉದ್ಯೋಗ ಸೃಷ್ಟಿಸಿ, ಭಾರತ ಹೊರತುಪಡಿಸಿ ಇಡೀ ವಿಶ್ವದ ಆಹಾರದ ಅವಶ್ಯಕತೆ ಗಮನಿಸಿ ಆ ವಸ್ತುಗಳನ್ನು ರಪ್ತು ಮಾಡಲು ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.

ನಿರುದ್ಯೋಗಿಗಳಿಗೆ ಕೆಲಸ ಸಿಗುವವರೆಗೂ ಒಂದಷ್ಟು ತೃಪ್ತಿದಾಯಕ ಭತ್ಯೆ ನೀಡಿದರೆ, ಹೆಚ್ಚು ಹೆಚ್ಚು ಉದ್ಯೋಗ ಕಲ್ಪಿಸಿದರೆ ಮೀಸಲಾತಿಯ ಪ್ರಭಾವ ಕಡಿಮೆಯಾಗಬಹುದು.

ಜಾತಿಯತೆಯನ್ನೇ ನಾಶ ಮಾಡಿದರೆ ಜಾತಿಯ ಮೀಸಲಾತಿ ಪ್ರಶ್ನೆಯೇ ಉದ್ಭವವಾಗುವುದಿಲ್ಲ.

ಪರೋಕ್ಷವಾಗಿ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ..

ಹೀಗೆ ಹಲವಾರು ವಿಚಾರಗಳು ಮನದಲ್ಲಿ ಮೂಡುತ್ತದೆ. ಇದೂ ಸಂಪೂರ್ಣ ಪರಿಪೂರ್ಣ ಅಲ್ಲ. ವಾಸ್ತವವಾಗಿ ಕಾರ್ಯರೂಪಕ್ಕೆ ಬರುವಾಗ ಪ್ರಾಯೋಗಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಒಂದಷ್ಟು ಬದಲಾವಣೆಗಳೂ ಅವಶ್ಯ.

ಇದು ಈಗಿನ ಜನರ ಮನೋಭಾವದಲ್ಲಿ‌ ಕಷ್ಟ ಎನಿಸಿದರೂ ಒಳ್ಳೆಯ ವಾತಾವರಣ ಮತ್ತು ನಂಬಿಕೆ ಸೃಷ್ಟಿಯಾದರೆ ಸಾಧ್ಯವಾಗಲೂ ಬಹುದು.
ಸಾಮಾಜಿಕ ನ್ಯಾಯವನ್ನು ಗಮನದಲ್ಲಿಟ್ಟುಕೊಂಡು,
ಹಾಗಾಗಲಿ ಎಂದು ಆಶಿಸುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!