ಹಿರಿಯಡ್ಕ: ಅಕ್ಟೋಬರ್ 21(ಹಾಯ್ ಉಡುಪಿ ನ್ಯೂಸ್) ಕಳ್ಳತನದ ಅಪರಾಧಿಯೋರ್ವನನ್ನು ನ್ಯಾಯಾಲಯದ ಆದೇಶದ ಮೇರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕರೆದೊಯ್ಯುವಾಗ ಆತ ಪೊಲೀಸರಿಂದ ತಪ್ಪಿಸಿಕೊಂಡು ಓಡಿ ಹೋದ ಘಟನೆ ಹಿರಿಯಡ್ಕದಲ್ಲಿ ನಡೆದಿದೆ.
ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ರಾಹೀಕ್ (22) ಎಂಬವನನ್ನು ಠಾಣಾಧಿಕಾರಿಯವರು ದಿನಾಂಕ 19/10/2022 ರಂದು ಬಂಧಿಸಿ ದಿನಾಂಕ 20/10/2022 ರಂದು ಆತನನ್ನು ಎ.ಸಿ.ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಧೀಶರು ಕುಂದಾಪುರ ಅವರ ಮುಂದೆ ಹಾಜರುಪಡಿಸಲು ಕುಂದಾಪುರ ಪೊಲೀಸ್ ಠಾಣೆ ಸಿಬ್ಬಂದಿಯವರು ಆರೋಪಿಯನ್ನು ಭದ್ರತೆಯಲ್ಲಿ ಖಾಸಗಿ ವಾಹನದಲ್ಲಿ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿ ಮೊಹಮ್ಮದ್ ರಾಹೀಕ್ ಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದು , ನ್ಯಾಯಾಧೀಶರ ಆದೇಶದಂತೆ ಆರೋಪಿಯನ್ನು ಕುಂದಾಪುರದಿಂದ ಹೊರಟು ಹಿರಿಯಡ್ಕ ದ ಜಿಲ್ಲಾ ಕಾರಾಗೃಹ ಕಾಜಾರಗುತ್ತು ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿ ಮೊಹಮ್ಮದ್ ರಾಹೀಕ್ ನನ್ನು ಕೆಳಗೆ ಇಳಿಸುತ್ತಿದ್ದಂತೆ ಆರೋಪಿ ಭದ್ರತಾ ಸಿಬ್ಬಂದಿಯವರನ್ನು ತಳ್ಳಿ ಹಾಕಿ ಹೊಟ್ಟೆಗೆ ಹೊಡೆದು ದೂಡಿ ಹಾಕಿ ಹತ್ತಿರದಲ್ಲಿದ್ದ ಕಾಡಿನ ಕಡೆ ಓಡಿ ಹೋಗಿ ತಪ್ಪಿಸಿಕೊಂಡು ತಲೆಮರೆಸಿಕೊಂಡಿರುತ್ತಾನೆ ಎಂದು ಭದ್ರತೆಯಲ್ಲಿದ್ದ ಪೊಲೀಸರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .