ಪಡುಬಿದ್ರಿ: ಅಕ್ಟೋಬರ್ 14 (ಹಾಯ್ ಉಡುಪಿ ನ್ಯೂಸ್ ) ಸಾರ್ವಜನಿಕ ಸೇವೆಯಲ್ಲಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಿಗೆ ಯುವಕರೀರ್ವರು ಬಸ್ಸನ್ನು ಅಡ್ಡ ಗಟ್ಟಿ ಹಲ್ಲೆ ನಡೆಸಿದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.
ಗದಗ ಜಿಲ್ಲೆ ,ರೋಣ ತಾಲೂಕಿನ ಬೆನಹಾಳ ಗ್ರಾಮದ ನಿವಾಸಿ ಲಕ್ಕಪ್ಪ ಶರಣಪ್ಪ ಕಂಬಳಿ (32)ಇವರು ಮಂಗಳೂರಿನ 3 ನೇ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ಸು ಚಾಲಕ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/10/2022 ರಂದು KA-19-F-3464 ನೇ ನಂಬ್ರದ ಮಂಗಳೂರು-ಕಬ್ಬರಗಿ ರೂಟಿನ ಬಸ್ಸು ಚಾಲಕನಾಗಿ ಲಕ್ಕಪ್ಪ ಶರಣಪ್ಪ ಕಂಬಳಿ ಮತ್ತು ನಿರ್ವಾಹಕರಾಗಿ ಹಾಲಸಿದ್ದಪ್ಪ ಎಂಬುವವರು ಕರ್ತವ್ಯದಲ್ಲಿದ್ದು, 7:15 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ ಕೊಪ್ಪಳ ಜಿಲ್ಲೆಯ ಕಬ್ಬರಗಿಗೆ ಹೊರಟು, ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಾ ಸಮಯ 8:15 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಪೇಟೆಯ ಕಾರ್ಕಳ ಜಂಕ್ಷನ್ ನಲ್ಲಿ ಬಸ್ಸಿನಿಂದ ಇಬ್ಬರು ಪ್ರಯಾಣಿಕರನ್ನು ಇಳಿಸಿ ಹೊರಡುವ ವೇಳೆ KA-20-MD-5675 ನೇ ನಂಬ್ರದ ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಕಿರಣ್ ಆಳ್ವ ಬಸ್ಸಿನ ಎದುರು ಅಡ್ಡ ನಿಲ್ಲಿಸಿ, ಬಸ್ಸು ಮುಂದೆ ಹೋಗದಂತೆ ತಡೆದು ಕಿರಣ್ ಆಳ್ವ ಹಾಗೂ ಪ್ರವೀಣ್ ಕುಂದರ್ ಎಂಬವರು ಕಾರಿನಿಂದ ಇಳಿದು, ಬಸ್ಸಿನ ಹೊರಗೆ ಬಲಬದಿ ಚಾಲಕನ ಸೀಟಿನ ಬಳಿ ಬಂದು ಲಕ್ಕಪ್ಪ ಶರಣಪ್ಪ ಕಂಬಳಿ ಯವರಿಗೆ ಬೈದು ಸೀಟಿನಿಂದ ಬಾಗಿಲಿನ ಮುಖಾಂತರ ಹೊರಗೆ ಎಳೆದು ಹಾಕಿ, ಕೈಯಿಂದ ಹೊಡೆದಿದ್ದು, ಆಗ ಬಿಡಿಸಲು ಬಂದ ಬಸ್ಸು ನಿರ್ವಾಹಕ ಹಾಲಸಿದ್ದಪ್ಪ ರವರಿಗೆ ಕೂಡ ಇಬ್ಬರೂ ಸೇರಿ ಕೈಯಿಂದ ಹೊಡೆದು ಕಾಲಿಂದ ತುಳಿದು ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ದೂರಿದ್ದಾರೆ.
ಅವರ ಹಲ್ಲೆಯಿಂದ ಲಕ್ಕಪ್ಪ ಶರಣಪ್ಪ ಕಂಬಳಿ ಯವರ ಮುಖಕ್ಕೆ, ಎದೆಗೆ ಗುದ್ದಿದ ನೋವು ಹಾಗೂ ನಿರ್ವಾಹಕ ಹಾಲಸಿದ್ದಪ್ಪ ರವರ ಬಲಕೈಗೆ, ಬಲಕಾಲಿಗೆ ಗುದ್ದಿದ ನೋವು ಮತ್ತು ಬಲಕೈಗೆ ಗಾಯವಾಗಿ ರಕ್ತ ಬಂದಿರುತ್ತದೆ . ಘಟನೆಯ ಸಮಯ ನಿರ್ವಾಹಕ ಹಾಲಸಿದ್ದಪ್ಪ ರವರ ಸಮವಸ್ತ್ರದ ಅಂಗಿಯ 3 ಗುಂಡಿಗಳು ಕಿತ್ತು ಹೋಗಿದ್ದು, ಅವರ ಕಿಸೆಯಲ್ಲಿದ್ದ ದಿನದ ಕಲೆಕ್ಷನ್ ಹಣ 6158/- ರೂಪಾಯಿ ಅಲ್ಲಿ ಎಲ್ಲೋ ಬಿದ್ದು ಹೋಗಿರುತ್ತದೆ. ನಂತರ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .