ದುಷ್ಟ ಶಕ್ತಿಗಳ ವಿರುದ್ಧ ವಿಜಯದ ಸಂಕೇತ……
ರಾಜಪ್ರಭುತ್ವ ವ್ಯವಸ್ಥೆಯಲ್ಲಿನ ಒಳ್ಳೆಯ ಮತ್ತು ಕೆಟ್ಟ ನಡವಳಿಕೆಗಳ ಅರ್ಥ ಮತ್ತು ಪ್ರಜಾಪ್ರಭುತ್ವದಲ್ಲಿ ಅದೇ ಮೌಲ್ಯಗಳ ಅರ್ಥ ಒಂದಷ್ಟು ಪರಿವರ್ತನೆ ಹೊಂದಿದೆ.
ರಾಜನೇ ಪ್ರತ್ಯಕ್ಷ ದೇವರು ಎಂಬ ಪರಿಕಲ್ಪನೆಯ ಸ್ಥಿತಿಯಲ್ಲಿ ರಾಜ ನಿಷ್ಠೆಯೇ ಒಳ್ಳೆಯತನದ ಸಂಕೇತ. ಅದಕ್ಕೆ ವಿರುದ್ಧದ ಎಲ್ಲವೂ ದ್ರೋಹ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ ಇಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದರ ಗೆರೆಯೇ ಮಾಯವಾಗಿದೆ.
ಹಣ ಅಧಿಕಾರ ಆಸ್ತಿ ಪೌರುಷಗಳೇ ಒಳ್ಳೆಯ ಗುಣಗಳು ಮತ್ತು ಬಡತನವೇ ಶಾಪ ಎಂಬಲ್ಲಿಗೆ ಈಗ ಬಂದು ನಿಂತಿದೆ.
ಒಳಗಿನ ಮತ್ತು ಹೊರಗಿನ ದುಷ್ಟ ಶಕ್ತಿಗಳ ವಿರುದ್ಧ ಜಯಿಸುವುದು ಹೇಗೆ ?
ಅರಿಷಡ್ವರ್ಗಗಳಾದ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಗಳನ್ನು ಗೆಲ್ಲುವುದಕ್ಕಿಂತ ನಿಯಂತ್ರಣ ಸಾಧಿಸುವುದು ಬಹಳ ಮುಖ್ಯ. ಜೊತೆಗೆ ಅದೇ ಅರಿಷಡ್ವರ್ಗಗಳನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ಅವಕಾಶ ಆಧುನಿಕ ಕಾಲದಲ್ಲಿ ಇದೆ. ಆದರೆ ಅದಕ್ಕಾಗಿ ಸಾಕಷ್ಟು ಸಾಧನೆ ಮಾಡಬೇಕಾಗುತ್ತದೆ. ವೈಯಕ್ತಿಕ ಜ್ಞಾನದ ಮಟ್ಟವನ್ನು ವೃದ್ಧಿಸಿಕೊಳ್ಳಬೇಕಾಗುತ್ತದೆ.
ಹಾಗೆಯೇ ಆಯುಧ ಪೂಜೆ. ರಾಜಪ್ರಭುತ್ವದಲ್ಲಿ ಕತ್ತಿ ಗುರಾಣಿ ಬಂದೂಕು ಸಿಡಿಮದ್ದು ಬಾಂಬುಗಳೇ ನಿಜವಾದ ಆಯುಧಗಳು. ಆದರೆ ಪ್ರಜಾಪ್ರಭುತ್ವದಲ್ಲಿ ಮಾನವೀಯತೆಯೇ ಆಯುಧಗಳು ಎಂಬ ಅರಿವು ಮೂಡಬೇಕಿದೆ.
ವಾಹನಗಳೆಂಬ ನಿರ್ಜೀವ ವಸ್ತುಗಳಿಗೆ ಬೇಕಿರುವುದು ಪೂಜೆಯಲ್ಲ. ಅವುಗಳ ಸುಸ್ಥಿತಿ ಮತ್ತು ನಮ್ಮ ಜವಾಬ್ದಾರಿ ಬಹಳ ಮುಖ್ಯ. ಇಂದು ಅಪಘಾತಗಳು ಬದುಕಿನ ಭಾಗವಾಗಿ ಸಹಜವಾಗುತ್ತಿರುವಾಗ ವಾಹನಗಳ ಚಾಲನೆಯ ಕೌಶಲ್ಯ ಮತ್ತು ನಿಯಂತ್ರಣ ಮುಖ್ಯವೇ ಹೊರತು ನಿಂಬೆಹಣ್ಣು ಇಡುವುದಲ್ಲ.
ಜಂಬೂ ಸವಾರಿ, ಜಾನಪದ ಕಲೆಗಳ ಪ್ರದರ್ಶನ, ರಾಜ ದರ್ಬಾರ್, ಮೆರವಣಿಗೆ ಎಲ್ಲವೂ ಸಾಂಪ್ರದಾಯಿಕ ಸಾಂಸ್ಕೃತಿಕ ಉತ್ಸವಗಳು ಮತ್ತು ಮೇಲ್ನೋಟದ ಆಕರ್ಷಣೆ ಮಾತ್ರ. ನಿಜವಾದ ದಸರಾ ನಮ್ಮೊಳಗೆ ನಮ್ಮೊಂದಿಗೆ ಸಾಧಿಸಬೇಕಾಗಿರುವ ಕೆಟ್ಟ ನಡವಳಿಕೆಗಳ ಮೇಲಿನ ವಿಜಯೋತ್ಸವ. ಹಾಗೆ ಮಾಡಿದಲ್ಲಿ ಅದು ಸಾಮೂಹಿಕವಾಗಿ ಪ್ರಭಾವ ಬೀರಿ ಸಾಮಾಜಿಕವಾಗಿ ಸಹ ಪರಿಣಾಮ ಮತ್ತು ಫಲಿತಾಂಶಗಳನ್ನು ನೀಡುತ್ತದೆ. ಭ್ರಷ್ಟಾಚಾರ ಜಾತಿ ಪದ್ದತಿ ಮೋಸ ವಂಚನೆ ಕಲಬೆರಕೆ ಮುಂತಾದ ರಾಕ್ಷಸ ಗುಣಗಳು ಕಡಿಮೆಯಾಗಿ ಈ ಉತ್ಸವಗಳ ಮಹತ್ವ ಹೆಚ್ಚಾಗುತ್ತದೆ.
ಅದನ್ನು ಹೊರತುಪಡಿಸಿ ಯಾವುದೇ ಹಬ್ಬಗಳ ಅದ್ದೂರಿತನ ಕೇವಲ ತೋರಿಕೆಯ ಅತ್ಯಂತ ಕೃತಕ ಆಚರಣೆ ಅಥವಾ ಪ್ರದರ್ಶನವಾಗುತ್ತದೆ. ಅದು ಎಷ್ಟೇ ಶತಮಾನಗಳಿಂದ ನಡೆದು ಬರುತ್ತಿದ್ದರೂ ಪ್ರಯೋಜನವಿಲ್ಲ.
ಇಡೀ ಮಾಧ್ಯಮ ಲೋಕ ದಸರಾ ಹಬ್ಬದ ಬಾಹ್ಯ ಆಚರಣೆಗಳನ್ನೇ ಗುರಿಯಾಗಿಸಿ ಚರ್ಚೆ ಸಂವಾದ ಪ್ರಸಾರ ಮಾಡುತ್ತವೆ. ಒಳನೋಟಗಳನ್ನು ಮಂಥನ ಮಾಡಿ ದುಷ್ಟ ಶಕ್ತಿಗಳ ಕನಿಷ್ಠ ಪರಿವರ್ತನೆಗೆ ಸ್ವಲ್ಪವೂ ಪ್ರಯತ್ನಿಸುವುದಿಲ್ಲ. ಅದೇ ಆಧುನಿಕ ಕಾಲದ ದುರಂತ.
ಕಣ್ಣಿಗೆ ಕಾಣುವುದನ್ನು ಹೃದಯಕ್ಕೆ ಮುಟ್ಟಿಸುವ ಕೆಲಸವಾಗಬೇಕಿದೆ. ದೃಶ್ಯ ವೈಭವಕ್ಕಿಂತ ಆತ್ಮ ಜ್ಞಾನ ಮುಖ್ಯ ಎಂಬ ಅರಿವು ಮೂಡಬೇಕಿದೆ. ಆಗ ಮಾತ್ರ ವಿಜಯ ದಶಮಿ, ಆಯುಧ ಪೂಜೆ, ಏಕಾದಶಿಗಳಿಗೆ ಒಂದು ಅರ್ಥ ಬರುತ್ತದೆ.
ಆತ್ಮಾವಲೋಕನವೇ ಮಹಾ ದಸರಾ ಮತ್ತು ಬದುಕಿನ ತೃಪ್ತಿಯೇ ನಿತ್ಯ ಹಬ್ಬ….
ಎಲ್ಲರಿಗೂ ಆಯುಧ ಪೂಜೆ – ವಿಜಯ ದಶಮಿ ಮತ್ತು ದಸರಾ ಹಬ್ಬದ ಶುಭಾಶಯಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……