Spread the love

ನಾಲ್ಕೈದು ವರ್ಷಗಳಿಂದ ಹಿರಿಯರೊಬ್ಬರು ನನಗೆ ಪರಿಚಿತರು. ಸಾಮಾಜಿಕ ಜಾಲತಾಣಗಳಲ್ಲಿ ನಾನು ಬರೆಯುವ ಲೇಖನಗಳನ್ನು ತಪ್ಪದೇ ಓದುತ್ತಾರೆ. ವಾರಕ್ಕೊಮ್ಮೆಯಾದರೂ ಆ ಬಗ್ಗೆ ಮೊಬೈಲಿನಲ್ಲಿ ಚರ್ಚಿಸುತ್ತಾರೆ.

ಸಮಕಾಲೀನ ಸಮಸ್ಯೆಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಮುಖ್ಯವಾಗಿ ಶೋಷಿತರು ಕಾಲಕ್ರಮೇಣ ಬೆಳವಣಿಗೆ ಹೊಂದಿದ ನಂತರ ಶೋಷಕರಾಗಿ ಪರಿವರ್ತನೆ ಹೊಂದುವ ಬಗ್ಗೆ ತುಂಬಾ ದುಃಖ ಮತ್ತು ವಿಷಾದ ವ್ಯಕ್ತಪಡಿಸುತ್ತಾರೆ.

ಒಬ್ಬ ವ್ಯಕ್ತಿ ತಾನು ಸಾಮಾಜಿಕ ಮತ್ತು ಆರ್ಥಿಕ ಅಸ್ಪೃಶ್ಯತೆ ಅನುಭವಿಸಿ ಮುಂದೆ ಉತ್ತಮ ಸ್ಥಾನ ಗಳಿಸಿದ ಮೇಲೆ ತನ್ನ ಪರಿವಾರ ಅಥವಾ ಸಮುದಾಯದ ಹಿತಾಸಕ್ತಿಯ ಪರವಾಗಿ ಕೆಲಸ ಮಾಡದೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ವರ್ತಿಸುವ ಅಥವಾ ಪ್ರತಿಕ್ರಿಯಿಸುವ ಬಗ್ಗೆ ತುಂಬಾ ಕೋಪ ವ್ಯಕ್ತಪಡಿಸುತ್ತಾರೆ.

ಮಾನವೀಯ ಮೌಲ್ಯಗಳ ಪುನರುಜ್ಜೀವನದ ನನ್ನ ಆಶಯಗಳು ಮತ್ತು ಪ್ರಯತ್ನಗಳು ಯಶಸ್ವಿಯಾಗುವುದು ತುಂಬಾ ಕಷ್ಟ ಮತ್ತು ನಿಧಾನ. ಏಕೆಂದರೆ ಒಬ್ಬರು ಒಳ್ಳೆಯ ಮಾರ್ಗದಲ್ಲಿ ನಡೆಯುವ ಪರಿವರ್ತನೆ ಹೊಂದಿದರೆ ಅದೇ ಸಮಯದಲ್ಲಿ ಅದಕ್ಕೆ ವಿರುದ್ಧವಾಗಿ ಸುಮಾರು 10 ಜನ ಕೆಟ್ಟವರಾಗಿ ಬದಲಾಗುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ನಿರಾಸೆ ವ್ಯಕ್ತಪಡಿಸುತ್ತಾರೆ.

ಅವರ ಬಗೆಗೆ ನನಗೆ ಹೆಚ್ವಿನ ಮಾಹಿತಿ ಇರಲಿಲ್ಲ. ಹೀಗೆ ಮಾತನಾಡುತ್ತಾ ಒಮ್ಮೆ ಅವರ ವಾಸಸ್ಥಾನ ಮತ್ತು ವಿಳಾಸ ಕೇಳಿದೆ. ಅವರು ನಾನು ವೃದ್ದಾಶ್ರಮದಲ್ಲಿ ಇರುವುದಾಗಿ ಹೇಳಿದರು. ನನಗೆ ಆಶ್ಚರ್ಯವಾಯಿತು. ” ಏಕೆ ನಿಮಗೆ ಹೆಂಡತಿ ಮಕ್ಕಳು ಮತ್ತು ಕುಟುಂಬ ಇಲ್ಲವೇ ” ಎಂದು ಕೇಳಿದೆ.

” ಇದ್ದಾರೆ, ಆದರೂ ನಾನು ಮಾತ್ರ ವೃದ್ದಾಶ್ರಮದಲ್ಲಿ ಇರುವುದಾಗಿ ” ಹೇಳಿದರು. ಬಹುಶಃ ಏನಾದರು ವೈಯಕ್ತಿಕ ಸಮಸ್ಯೆ ಇರಬಹುದು ಎಂದು ಭಾವಿಸಿದೆ.

ಮತ್ತೆ ಬೇರೆ ವಿಷಯ ಮಾತನಾಡುತ್ತಾ ಸಮಯ ಸರಿದಾಗ ಅವರ ಕುಟುಂಬದ ಬಗ್ಗೆ ಕೇಳಿದೆ. ಅವರು ಕೊಟ್ಟ ಉತ್ತರ
” ಎಲ್ಲರೂ ಇದ್ದರು. ಆದರೆ ಈಗ ಇರುವುದು ‘ ನಾನು ಮತ್ತು ಅವನು ಮಾತ್ರ……” ಎಂದು ನಿಗೂಢವಾಗಿ ಹೇಳಿದರು.

ಮತ್ತೆ ಮಾತು ಮುಂದುವರಿಸಲಿಲ್ಲ. ನನಗೆ ನಾನು ಮತ್ತು ಅವನು ಎಂಬ ಮಾತೇ ಕಾಡತೊಡಗಿತು. ಅವನು ಎಂದರೆ ಯಾರು ? ಅಕ್ಕಮಹಾದೇವಿಯ ಚನ್ನಮಲ್ಲಿಕಾರ್ಜುನ ಇರಬಹುದೇ ? ಅಥವಾ ಬೇರೆ ದೇವರನ್ನು ನಂಬಿರಬಹುದೇ ? ಮನುಷ್ಯರ ಮೇಲಿನ ನಂಬಿಕೆ ಕಳೆದುಕೊಂಡಿದ್ದಾರೆಯೇ ? ಸ್ಥಿತಪ್ರಜ್ಞೆಗೆ ಜಾರಿದ್ದಾರೆಯೇ ? ಹೀಗೆ ನಾನಾ ಯೋಚನೆಗಳು ಕಾಡುತ್ತಿವೆ.

ಮೂರು ಕೋಟಿ ದೇವರುಗಳನ್ನು ಪೂಜಿಸುವ ನಾವು ಜೀವ – ಬದುಕು ನೀಡುವ ತಂದೆ ತಾಯಿಯನ್ನು ಅವರ ಎಲ್ಲಾ ದೌರ್ಬಲ್ಯಗಳ ನಡುವೆ ಮನೆಯಲ್ಲಿ ಇಟ್ಟುಕೊಂಡು ಸಾಕಲು ಬಲವಾದ ಕಾರಣ ಬೇಕೆ ? ಅದು ಒಂದು ಸಹಜ ಧರ್ಮ ಎಂದು ಭಾವಿಸಿಲ್ಲವೇ ? ಆಧುನಿಕ ಕಾಲದಲ್ಲಿ ಮದುವೆ ಎಂಬುದು ಮನೆ ಮತ್ತು ಮನೆಯ ವಿಭಜನೆಯ ಮಾರ್ಗ ಎಂದು ಅರ್ಥಮಾಡಿಕೊಳ್ಳಬೇಕೆ ಅಥವಾ ಒಪ್ಪಿಕೊಳ್ಳಬೇಕೆ ?…..

ಹಿಂದೆ ಏನೂ ಇಲ್ಲದಿದ್ದಾಗ ಅಂದರೆ ಮನುಷ್ಯನ ಮೂಲಭೂತ ಸೌಕರ್ಯಗಳಿಗೇ ಕೊರತೆ ಇದ್ದಾಗ ಸಂಬಂಧಗಳು – ಮೌಲ್ಯಗಳು ಹೆಚ್ಚು ಆಪ್ತವಾಗಿದ್ದವು. ಆದರೆ ಈಗ ಶಿಕ್ಷಣ – ಸಂಪರ್ಕ – ಆರ್ಥಿಕ ಪರಿಸ್ಥಿತಿ ಸೇರಿ ಎಲ್ಲವೂ ತಕ್ಕಮಟ್ಟಿಗೆ ಅನುಕೂಲಕರವಾಗಿರುವಾಗ, ಕಾನೂನಿನ ಸ್ವಾತಂತ್ರ್ಯ – ಸಮಾನತೆ ದೊರಕಿರುವಾಗ ಮನುಷ್ಯ ಸಂಬಂಧಗಳು ಶಿಥಿಲವಾದವೇ ?

ಇದೇ ಸಂಸ್ಕೃತಿ ವ್ಯಾಪಕವಾಗಿ ಸಮಾಜದಲ್ಲಿ ಬೆಳೆದು ಇದೇ ಪರಿಸ್ಥಿತಿ ನಮಗೇ ಸೃಷ್ಟಿಯಾದರೆ ಎಂಬ ಕಲ್ಪನೆಯೇ ಭಯ ಮತ್ತು ವಿಷಾದ ಮೂಡಿಸುತ್ತಿದೆ. ಆದ್ದರಿಂದಲೇ ನಾವುಗಳು ವೇಗ ಮತ್ತು ಸ್ಪರ್ಧಾ ಜಗತ್ತಿನಲ್ಲಿ ಕೇವಲ ಹಣ ಅಧಿಕಾರದ ಹಿಂದೆ ಮಾತ್ರ ಸಾಗದೇ ಮತ್ತೆ ಕನಿಷ್ಠ ಮಟ್ಟದಲ್ಲಾದರೂ ಮಾನವೀಯ ಮೌಲ್ಯಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.

ಇಂದು ನಾವು ಕೇವಲ ನಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಮಾತ್ರ ಗಮನಿಸದೆ ಇದನ್ನು ಒಂದು ಸಂಸ್ಕೃತಿಯಾಗಿ ಬೆಳೆಸಬೇಕು. ಆಗ ಮಾತ್ರ ಬದಲಾವಣೆ ಸಾಧ್ಯ. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ಬೆಂಗಳೂರಿಗೆ ಸುಮಾರು 100 ಕಿಲೋಮೀಟರ್ ಅಂತರದಲ್ಲಿ ಇರುವ ವೃದ್ದಾಶ್ರಮದಲ್ಲಿ ಅವರು ಇರುವುದಾಗಿ ಹೇಳಿದರು. ಅವರನ್ನು ಶೀಘ್ರವಾಗಿ ಭೇಟಿ ಮಾಡುತ್ತೇನೆ. ಅವರ ಹೇಳಿಕೆಯ ಅರ್ಥವನ್ನು ಗ್ರಹಿಸಲು ಪ್ರಯತ್ನಿಸುತ್ತೇನೆ.

ಅಲ್ಲಿಯವರೆಗೂ ನನ್ನನ್ನು ಕಾಡುತ್ತಿರುವ ಪ್ರಶ್ನೆ ” ನಾನು ಮತ್ತು ಅವನು ಮಾತ್ರ ಎಂಬ ವಾಕ್ಯದಲ್ಲಿ ‘ ಅವನು ‘ ಯಾರು…..”

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!