ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಕೋರುತ್ತಾ ಒಂದು ವಿಮರ್ಶಾತ್ಮಕ ಮುಕ್ತ ಅನಿಸಿಕೆ…………
ಸೂಪರ್ ಮ್ಯಾನ್ or ಸ್ಟಂಟ್ ಮ್ಯಾನ್…..
Quality ಮತ್ತು Quantity
ಸುಮಾರು ಎಂಟು ವರ್ಷಗಳು ಕಳೆದವು……….
ಅಚ್ಚೇದಿನ್ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿಯವರ ಈ ಎಂಟು ವರ್ಷಗಳನ್ನು ಹೇಗೆ ನೋಡುವುದು, ಹೇಗೆ ಅರ್ಥೈಸುವುದು…..
ಲಕ್ಷ ಲಕ್ಷ ಅಭಿಪ್ರಾಯಗಳು ನಮ್ಮ ಮುಂದಿವೆ. ನರೇಂದ್ರ ಮೋದಿ ಒಬ್ಬ ಸಂತ ಎಂದು ಪ್ರಾರಂಭವಾಗಿ ದೇಶವನ್ನು ಹೀನಾಯ ಪರಿಸ್ಥಿತಿಗೆ ತಂದರು ಎಂಬಲ್ಲಿಗೆ ಬಂದು ನಿಲ್ಲುತ್ತದೆ.
ಅಂತಿಮ ಅಭಿಪ್ರಾಯ ಮತ್ತು ತೀರ್ಮಾನ ನಿಮ್ಮದೇ ಆದರೂ ಯಾವ ಅಂಶಗಳ ಆಧಾರದ ಮೇಲೆ ಇದನ್ನು ನಿರ್ಧರಿಸಬೇಕು ಎಂಬುದನ್ನು ಮಾತ್ರ ಇಲ್ಲಿ ಹೇಳಲಾಗಿದೆ.
ತುಂಬಾ ಸರಳವಾದ ಒಂದು ಲೆಕ್ಕಾಚಾರ…..
ಭೂತ – ಭವಿಷ್ಯದ ಆಧಾರದ ಮೇಲೆ ಸಮರ್ಥನೆ ಅಥವಾ ವಿರೋಧ ಬೇಡ. ಕೇವಲ ಅವರ ಎಂಟು ವರ್ಷಗಳ ಆಡಳಿತದಲ್ಲಿ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ನಮ್ಮ ನೆಲೆಯಲ್ಲಿ ನಿಂತು ನೋಡೋಣ.
ಈ ಎಂಟು ವರ್ಷಗಳಲ್ಲಿ ನಮ್ಮ ವೈಯಕ್ತಿಕ ಬದುಕಿನಲ್ಲಿ ಆಗಿರುವ ಬದಲಾವಣೆ, ಹಾಗೆಯೇ ನಮ್ಮ ಕುಟುಂಬ, ನಮ್ಮ ಬೀದಿ, ನಮ್ಮ ಊರು ನಮ್ಮ ಹೋಬಳಿ, ತಾಲ್ಲೂಕು, ಜಿಲ್ಲೆ , ರಾಜ್ಯ ಮತ್ತು ದೇಶ ಇವೆಲ್ಲವೂ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಆಗಿದೆಯೇ ಅಥವಾ ಮೊದಲಿಗಿಂತ ಕಠಿಣ ಪರಿಸ್ಥಿತಿ ಎದುರಾಗಿದೆಯೇ ?
ತುಂಬಾ ನಿಷ್ಪಕ್ಷಪಾತವಾಗಿ ಯೋಚಿಸಬೇಕು. 360 ಡಿಗ್ರಿ ದೃಷ್ಟಿಕೋನದಿಂದ ಪರಿಶೀಲಿಸಬೇಕು. ಇಲ್ಲಿ ಬೇರೆಯವರಿಗೆ ಉತ್ತರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ಉತ್ತರ ಹೇಳಬೇಕಿದೆ.
ಇಲ್ಲಿ ಮತ್ತೊಂದು ವಿಷಯ ನೆನಪಿಡಿ, ನರೇಂದ್ರ ಮೋದಿ ನಮ್ಮ ದೊಡ್ಡಪ್ಪ ಅಲ್ಲ, ರಾಹುಲ್ ಗಾಂಧಿ ನಮ್ಮ ಚಿಕ್ಕಪ್ಪ ಅಲ್ಲ, ಮಮತಾ ಬ್ಯಾನರ್ಜಿ ಮಾಯಾವತಿಯವರು ನಮ್ಮ ಆಂಟಿಯರಲ್ಲ. ಅವರು ನಮ್ಮಿಂದ ಅಜಗಜಾಂತರ ದೂರದಲ್ಲಿದ್ದಾರೆ. ಅವರಿಂದ ನಮಗೆ ವೈಯಕ್ತಿಕವಾಗಿ ಯಾವುದೇ ಲಾಭವೂ ಇಲ್ಲ ನಷ್ಟವೂ ಇಲ್ಲ.
ಈ ಮಣ್ಣಿನಲ್ಲಿ ಹುಟ್ಟಿದ್ದೇವೆ, ಇಲ್ಲಿನ ಗಾಳಿ ನೀರು ಆಹಾರ ಸೇವಿಸಿದ್ದೇವೆ. ಈ ದೇಶಕ್ಕೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ. ವ್ಯಕ್ತಿ ಮುಖ್ಯವಲ್ಲ ದೇಶ ಮುಖ್ಯ.
ಜಾತಿ ಧರ್ಮ ಭಾಷೆ ಎಲ್ಲವೂ ಮನುಷ್ಯನ ಸೃಷ್ಟಿ. ಮನುಷ್ಯನ ಏಳಿಗೆಯೇ ನಿಜವಾದ ಅಭಿವೃದ್ಧಿ. ಆ ದೃಷ್ಟಿಕೋನದಿಂದ ಆಡಳಿತವನ್ನು ನೋಡಬೇಕು.
ಅತ್ಯುತ್ತಮ ಆಡಳಿತ ಎಂಬ ಭಜನೆಯಾಗಲಿ ಅಥವಾ ಕೆಟ್ಟ ಆಡಳಿತ ಎಂಬ ದ್ವೇಷವೂ ಒಳ್ಳೆಯದಲ್ಲ. ಯಾವುದೋ ಪಕ್ಷ ಅಥವಾ ಪಂಥದ ವಕ್ತಾರರಂತೆ ಮಾತನಾಡುವುದು ಸುಲಭ. ಏಕೆಂದರೆ ಅವರನ್ನು ಹೊಗಳಲು ಮತ್ತು ಟೀಕಿಸಲು ಹಲವಾರು ಕಾರಣಗಳು ಸಿಗುತ್ತವೆ. ಅಂಕಿಅಂಶಗಳು ದೊರೆಯುತ್ತದೆ. ಆದರೆ ಅದು ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ.
ಕೆಲವು ಆರ್ಥಿಕ ತಜ್ಞರು, ರಾಜಕೀಯ ಚಿಂತಕರು, ಮಾಧ್ಯಮ ಪಂಡಿತರುಗಳು ಹಲವಾರು ವೇದಿಕೆಗಳಲ್ಲಿ ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕರು ಮೋದಿಯವರ ಆಡಳಿತದ ಬಗ್ಗೆ ಲೇಖನಗಳನ್ನು ಬರೆಯುತ್ತಾರೆ. ಆದರೆ ನಾವುಗಳು ಇವುಗಳ ಪ್ರಭಾವಕ್ಕೆ ಒಳಗಾಗಬಾರದು. ಇದನ್ನು ಒಂದು ಮಾಹಿತಿ ಎಂದು ಪರಿಗಣಿಸಿ ಇದರ ಆಧಾರದ ಮೇಲೆ ನಾವೇ ಚಿಂತಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳಬೇಕು.
ನಮ್ಮಲ್ಲಿ ಸ್ವತಂತ್ರ ಚಿಂತನೆಯ ಕೊರತೆ ಬಹಳ ಇದೆ. ನಾವು ತಜ್ಞರಲ್ಲದೇ ಇರಬಹುದು. ಆದರೆ ಯೋಚಿಸುವ ಶಕ್ತಿ ಇದೆಯಲ್ಲವೇ, ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲಿ ಸಿಗುತ್ತದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ನಾನೇ ಆಗಲಿ ಅಥವಾ ಯಾರೇ ಆಗಿರಲಿ ಏನೇ ಬರೆದರು ಅದು ನಮ್ಮ ಅಭಿಪ್ರಾಯ ಮಾತ್ರ. ದೇಶದ ಪ್ರತಿ ವ್ಯಕ್ತಿಯ ಸ್ವತಂತ್ರ ಚಿಂತನೆ ಬೆಳೆಸಿಕೊಂಡರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ. ಚುನಾವಣಾ ರಾಜಕೀಯದಲ್ಲಿ ತನ್ನ ಮತವನ್ನು ಜವಾಬ್ದಾರಿಯಿಂದ ಚಲಾಯಿಸಲು ಸಾಧ್ಯ.
ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ 8 ವರ್ಷದ ಆಡಳಿತವನ್ನು ವಿಮರ್ಶಿಸಬೇಕು. ಈ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೇರಿದೆಯೇ ಅಥವಾ ಕುಸಿದಿದೆಯೇ, ಜಾತಿ ಧರ್ಮಗಳ ಸಾಮಾಜಿಕ ಸಾಮರಸ್ಯ ಉತ್ತಮವಾಗಿದೆಯೇ ಅಥವಾ ಹದಗೆಟ್ಟಿದೆಯೇ, ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ, ಅವರು ಘೋಷಿಸುವ ಯೋಜನೆಗಳು ಕೇವಲ ಪುಸ್ತಕದಲ್ಲಿ ಮಾತ್ರವೇ ಅಥವಾ ವಾಸ್ತವವಾಗಿ ಜಾರಿಯಾಗುತ್ತಿದೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸ್ಥೆಗಳನ್ನು ಅವರು ಸರಿಯಾಗಿ ನಿಭಾಯಿಸುತ್ತಿದ್ದಾರೆಯೇ ಅಥವಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆಯೇ ಅಥವಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಯೇ, ಅವರ ಪ್ರತಿ ಮಾತುಗಳಲ್ಲಿ ಇರುವ ಸ್ವಾಭಾವಿಕತೆ ಅಥವಾ ಕೃತಕತೆ ಎಷ್ಟು, ಅದರಲ್ಲಿ ಅಡಗಿರುವ ಪ್ರೀತಿ ವಿಶ್ವಾಸ ಕರುಣೆ ಸ್ವಾರ್ಥ – ನಿಸ್ವಾರ್ಥ ದ್ವೇಷ ಅಸೂಯೆ ಕ್ರೌರ್ಯದ ಪ್ರಮಾಣ ಯಾರ ಬಗ್ಗೆ ಹೇಗಿದೆ, ಭರವಸೆ ಮತ್ತು ಕಾರ್ಯಗತಗೊಳಿಸುವಿಕೆ ಇವುಗಳ ನಡುವಿನ ಅಂತರ ಎಷ್ಟಿದೆ ಮುಂತಾದ ವಿಷಯಗಳನ್ನು ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ನಮ್ಮ ಮನದಲ್ಲಿ ಚಿಂತನ ಮಂಥನ ನಡೆಸಬೇಕು.
ಇಲ್ಲಿಯೂ ನಮಗೆ ಲಾಭವಾಗುವ ವಿಷಯಗಳು ಉತ್ತಮ ಮತ್ತು ತೊಂದರೆಯಾಗುವ ವಿಷಯಗಳು ಕೆಟ್ಟದ್ದು ಎಂಬ ಆಧಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸದೆ ಒಟ್ಟು ದೇಶದ ಹಿತಾಸಕ್ತಿಯಿಂದ ನೋಡಬೇಕು. ಆಗ ಮಾತ್ರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಆಡಳಿತದ ಬಗ್ಗೆ ನಿಷ್ಪಕ್ಷಪಾತ ಮತ್ತು ವಾಸ್ತವ ವಿಮರ್ಶೆ ಸಾಧ್ಯ. ಅಷ್ಟು ಸಮಯ ಮತ್ತು ಆಸಕ್ತಿ ಇದ್ದರೆ ಮಾತ್ರ ಇದರ ಬಗ್ಗೆ ಒಂದಷ್ಟು ಖಚಿತವಾಗಿ ಮಾತನಾಡಬಹುದು. ಅವರ ಅವಧಿಯ Quality ಮತ್ತು Quantity ಯ ಪ್ರಮಾಣ ನಿರ್ಧರಿಸಬಹುದು.
ಭಾರತದ ಶ್ರೀಮಂತರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ, ಆರ್ಥಿಕ ಗಾತ್ರ ಹೇಗೆ ಬೆಳೆಯುತ್ತಿದೆ, ದೇಶದ ಜಾಗತಿಕ ವರ್ಚಸ್ಸು ಹೇಗೆ ವೃದ್ಧಿಸುತ್ತಿದೆ ಎಂದು ಯೋಚಿಸುವ ಮನಸ್ಸುಗಳು ಹಾಗೆಯೇ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ನಿರ್ಗತಿಕರು, ಸಾಮಾನ್ಯ ವರ್ಗದ ಜನ ಹೇಗೆ ನರಳುತ್ತಿದ್ದಾರೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕು.
ಬುಲೆಟ್ ಟ್ರೈನ್ ಮತ್ತು ಹಸಿವಿನ ಸಾವು ಎರಡೂ ನಿಮ್ಮನ್ನು ಕಾಡಬೇಕು, ಗಾಂಧಿ ಮತ್ತು ಗೋಡ್ಸೆ ಅರ್ಥವಾಗಬೇಕು, ಅಂಬೇಡ್ಕರ್ ಮತ್ತು ಮನುಸ್ಮೃತಿಯ ವಾಸ್ತವ ಪ್ರಜ್ಞೆ ಇರಬೇಕು. ಕಾರ್ಲ್ ಮಾರ್ಕ್ಸ್ ಮತ್ತು ಗೌತಮ್ ಅದಾನಿ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
ಆಗ ಭಾರತದ ದಿಕ್ಕು ದೆಸೆಯ ಬಗ್ಗೆ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದು. ಮೋದಿಯವರ ಸಾಮರ್ಥ್ಯ ಮತ್ತು ಯೋಗ್ಯತೆ ಅಳೆಯಬಹುದು. ಅದರೊಂದಿಗೆ ನಮ್ಮ ಅರ್ಹತೆಗಳನ್ನು, ಮಾನವೀಯತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಬಹುದು.
ಸ್ವಾವಲಂಬನೆಯ ಭಾರತ ಆಗಬೇಕಾದರೆ ಸ್ವಾಭಿಮಾನಿ ಭಾರತ ಮೊದಲ ಆಧ್ಯತೆಯಾಗಬೇಕು. ಗುಲಾಮಗಿರಿ ಅಥವಾ ಭಜನೆ ಮಂಡಳಿ ಬಿಡಿ. ಸ್ವತಂತ್ರ ಚಿಂತನೆ ಬೆಳೆಸಿಕೊಳ್ಳಿ. ಮನಸ್ಸಿನ ಅಗಾಧವಾದ ಸರೋವರದಲ್ಲಿ ಸ್ವಚ್ಛಂದವಾಗಿ ವಿಹರಿಸಿ. ಸ್ವಾತಂತ್ರ್ಯದ ಸವಿಯನ್ನು ಅನುಭವಿಸಿ…..
ಭಾರತದ ಪ್ರಧಾನಿ ನರೇಂದ್ರ ದಾಮೋದರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಾ………….
ಕೆಲವರಿಗೆ ಬೇಸರವಾಗಬಹುದು,
ಕೆಲವರಿಗೆ ಸಂತೋಷವಾಗಬಹುದು,
ಆದರೂ ನನ್ನ ಅಭಿಪ್ರಾಯ ಹೀಗಿದೆ…………
ಬಹುಶಃ ಗಾಂಧಿ ನಂತರ ನಮ್ಮ ದೇಶದಲ್ಲಿ ಬಹುತೇಕ ಎಲ್ಲಾ ಜನರ ಬಾಯಲ್ಲಿ ಅತಿಹೆಚ್ಚು ಉಚ್ಚಾರಣೆಯಾಗುತ್ತಿರುವ ಹೆಸರು ಮೋದಿ.
ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದರಿಂದ ಇಡೀ ದೇಶ ದಾಸ್ಯದಿಂದ ಮುಕ್ತವಾಗಲು ಹಾತೊರೆಯುತ್ತಿದ್ದ ಕಾರಣದಿಂದಾಗಿ ಅದು ಎಷ್ಟು ಬೇಗ ಬರಬಹುದು ಮತ್ತು ಗಾಂಧಿ ಅದನ್ನು ಸಾಧಿಸಬಹುದು ಎಂಬ ಕುತೂಹಲ ಭಾರತದ ಜನರಿಗೆ ಇದ್ದ ಕಾರಣ ಜನರು ಪ್ರತಿನಿತ್ಯ ಗಾಂಧಿ ಹೆಸರು ನೆನಪಿಸಿಕೊಳ್ಳುತ್ತಿದ್ದರು.
ಮೋದಿ ಹೆಸರು ಅದೇ ಮಟ್ಟದಲ್ಲಿ ನೆನಪಿಸಿಕೊಳ್ಳಲು ಎರಡು ಮುಖ್ಯ ಕಾರಣವೆಂದರೆ ಸಂಪರ್ಕ ಕ್ರಾಂತಿಯ ಫಲವಾಗಿ ಟಿವಿ ಮೊಬೈಲ್ ಮತ್ತು ಅಂತರ್ಜಾಲ ಸೌಕರ್ಯ ಬಹುತೇಕ ಭಾರತದ ಎಲ್ಲಾ ಪ್ರದೇಶದಲ್ಲಿ ಹರಡಿರುವುದರಿಂದ ಮತ್ತು ನೋಟ್ ಬ್ಯಾನ್ ಮಾಡಿದ ಕಾರಣ ಇಡೀ ಜನಸಮುದಾಯದ ಪ್ರತಿ ಕ್ಷಣದ ಅವಶ್ಯಕತೆಯಾದ ಹಣವನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿದ್ದರಿಂದ ಸಹಜವಾಗಿ ಇದಕ್ಕೆ ಕಾರಣವಾದ ಮೋದಿಯವರ ಹೆಸರು ಎಲ್ಲರಿಗೂ ತಿಳಿಯಿತು.
ಇದು ಕೇವಲ ಹೆಸರಿನ ಪರಿಚಯದ ಹೋಲಿಕೆ ಮಾತ್ರ ಸಾಧನೆ ಮತ್ತು ವ್ಯಕ್ತಿತ್ವದ ದೃಷ್ಟಿಯಿಂದ ಅಲ್ಲ. ಏಕೆಂದರೆ ಗುಜರಾತಿನ ಈ ಇಬ್ಬರದೂ ವಿರುದ್ಧ ದಿಕ್ಕಿನ ಚಿಂತನೆಗಳು.
ಮೋದಿಯವರ ಆಡಳಿತಾತ್ಮಕ ಸಾಧನೆಗಳ ದೊಡ್ಡ ಪಟ್ಟಿ ಅವರ ಅಭಿಮಾನಿಗಳು ನೀಡಿದರೆ, ಅವರ ವಿಫಲತೆಯ ಪಟ್ಟಿಯನ್ನು ಅವರ ವಿರೋಧಿಗಳು ನೀಡುತ್ತಾರೆ.
ಅದು ವ್ಯಕ್ತಿ ಪಕ್ಷ ಮತ್ತು ಸಿದ್ದಾಂತ ಪ್ರೇರಿತ……….
ಆದರೆ ಭಾರತ, ಭಾರತೀಯತೆ ಮತ್ತು ಭಾರತೀಯನ ದೃಷ್ಟಿಯಿಂದ ಅವರು ಹೇಗೆ ಕಾಣಬಹುದು………..
ವೈಯಕ್ತಿಕ ಬದುಕಿನ ಬಹುತೇಕ ಸಂಬಂಧಗಳನ್ನು ಅವರು ತ್ಯಜಿಸಿರುವುದರಿಂದ, ಯೌವ್ವನದ ದಿನಗಳಿಂದಲೇ ಸಂಘ ಸಂಸ್ಥೆ ಮತ್ತು ಅಧಿಕಾರ ಕೇಂದ್ರದ ಸುತ್ತಲೇ ಇರುವುದರಿಂದ, ಶ್ರೀಮಂತರ ಒಡನಾಟ ಹೆಚ್ಚು ಜೊತೆಯಾಗಿರುವುದರಿಂದ ಅವರನ್ನು ಹಣದ ಮೋಹ ಈಗಿನ ರಾಜಕಾರಣಿಗಳಷ್ಟು ಕಾಡಿಲ್ಲ. ಮೇಲ್ನೋಟಕ್ಕೆ ನಮಗೆ ಇರುವ ಮಾಹಿತಿಯಂತೆ ಯಾವುದೇ ದುರಭ್ಯಾಸಗಳಿಗೂ ಒಳಗಾದಂತೆ ಕಾಣುತ್ತಿಲ್ಲ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡಿದ್ದಾರೆ. ಹಿಂದುತ್ವ ಮತ್ತು ದೇಶಸೇವೆ ಮೊದಲ ಆದ್ಯತೆ ಎಂದು ಪರಿಗಣಿಸಿತ್ತಾರೆ………….
ಆದರೆ,………
ಹಣದ ವ್ಯಾಮೋಹಕ್ಕೆ ಬದಲಾಗಿ ಪ್ರಚಾರದ ಮೋಹ ಅವರಿಗೆ ಗೀಳಿನಂತೆ ಇರುವುದು ಕಂಡುಬರುತ್ತದೆ. ಪ್ರತಿ ಕ್ಷಣ ಪ್ರತಿ ಕಾರ್ಯಕ್ರಮದ ಮೂಲ ಉದ್ದೇಶಕ್ಕಿಂತ ಅದರಿಂದ ಸಿಗಬಹುದಾದ ಪ್ರಚಾರಕ್ಕೆ ಅವರ ಮನ ಹಾತೊರೆಯುವುದನ್ನು ಗುರುತಿಸಬಹುದು.
ಆಡಳಿತಾತ್ಮಕ ಸಾಮರ್ಥ್ಯಕ್ಕಿಂತ ವ್ಯಾಪಾರಿ ಮನೋಭಾವ ಅವರ ಪ್ರತಿ ನಡೆಯಲ್ಲೂ ಕಾಣಬಹುದು. ಗುಜರಾತಿನ ಜನರ ಸಹಜ ಗುಣ ಇದು ಎಂದು ಕೇಳಲ್ಪಟ್ಟಿದ್ದೇನೆ. (ಅದರ ಬಗ್ಗೆ ಖಚಿತವಾಗಿ ಹೇಳುವಷ್ಟು ಗುಜರಾತಿನ ಜನರ ಜೀವನ ಅಧ್ಯಯನ ಮಾಡಿಲ್ಲ.)
ಅಮಿತಾಭ್ ತೆಂಡೂಲ್ಕರ್ ಅಂಬಾನಿ ಅದಾನಿ ಟಾಟಾ ಮುಂತಾದ ಅತಿಗಣ್ಯ ವ್ಯಕ್ತಿಗಳು, ಬೇರೆ ವಿದೇಶಗಳ ಅಧ್ಯಕ್ಷರುಗಳು, ವಿಶ್ವದ ಬೃಹತ್ ಕಂಪನಿಗಳ ಸಿಇಓ ಗಳು ಮುಂತಾದ ಅತಿ ಜನಪ್ರಿಯ ವ್ಯಕ್ತಿಗಳ ಒಡನಾಟಕ್ಕೆ ಕಾತರಿಸುವ ಮೋದಿಯವರ ಅಂತರಾಳದಲ್ಲಿ ಬಡವರು ನಿರ್ಗತಿಕರು ದೈನೇಸಿಗಳ ಬಗ್ಗೆ ನಿರ್ಲಕ್ಷ್ಯ ಮತ್ತು ಅಸಹನೆ ಸೂಕ್ಷ್ಮವಾಗಿ ಗಮನಿಸುವ ಎಲ್ಲರಿಗೂ ತಿಳಿಯುತ್ತದೆ.
ಬಡತನ ಒಂದು ಶಾಪ ಎಂಬುದಕ್ಕಿಂತ ಬಡವನೇ ಈ ದೇಶದ ಶತ್ರು ಎಂಬ ಅಭಿಪ್ರಾಯ ಅವರಲ್ಲಿ ಅಡಕವಾಗಿದೆ. ಅವರ ಬಹುತೇಕ ಕನಸಿನ ಯೋಜನೆಗಳಲ್ಲಿ ಇದು ವ್ಯಕ್ತವಾಗುತ್ತದೆ.
ಮೇಲ್ನೋಟಕ್ಕೆ ಎಲ್ಲಾ ವಿಷಯಗಳ ಬಗ್ಗೆ ತಿಳಿದಿದೆ ಎಂಬ ಧೈರ್ಯ ಅವರಿಗೆ ಇದ್ದರೂ ವಿಷಯಗಳ ಆಳದ ಕೊರತೆ ಎದ್ದು ಕಾಣುತ್ತದೆ. ಆ ಕಾರಣಕ್ಕಾಗಿಯೇ ಭಾಷಣಗಳಲ್ಲಿ ಪ್ರವಚನ ರೂಪದ ಆದರ್ಶಗಳಿಗೆ ಒತ್ತು ಕೊಟ್ಟು ಭಾವನಾತ್ಮಕ ವಿಷಯಗಳನ್ನು, ಸ್ಥಳಿಯ ವಿಷಯಗಳನ್ನು ಪ್ರಸ್ತಾಪಿಸಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ಚಿಂತನೆಯ ರೂಪದ ಆಳಕ್ಕೆ ಇಳಿಯುವುದಿಲ್ಲ.
ಅಪಾರ ನೆನಪಿನ ಶಕ್ತಿ,
ಧಣಿವರಿಯದ ಉತ್ಸಾಹ,
ದೇಶವನ್ನು ವಿಶ್ವ ದರ್ಜೆಯ ಮಟ್ಟಕ್ಕೆ ಏರಿಸಬೇಕೆಂಬ ಹಂಬಲ, ಆಧುನಿಕ ಭಾರತದ ಶಿಲ್ಪಿ ತಾನಾಗಬೇಕು ಎಂಬ ಹಿರೋಹಿಸಂ ಸ್ವಭಾವ ಅವರಲ್ಲಿರುವ ಉತ್ತಮ ಗುಣಮಟ್ಟದ ಪ್ರಾಮಾಣಿಕ ಆಶಯಗಳು.
ಆದರೆ,……
ವಾಸ್ತವದಲ್ಲಿ ಅದನ್ನು ಅನುಷ್ಠಾನಕ್ಕೆ ತರಲು ಬೇಕಾದ ಶೈಕ್ಷಣಿಕ ಸಾಮಾಜಿಕ ಆರ್ಥಿಕ ಚಿಂತನಾ ಸಾಮರ್ಥ್ಯ, ಅಧ್ಯಯನ, ಭಾರತೀಯ ಸಮಾಜದ ನೈಜ ಚಿತ್ರಣ ಅವರ ಗ್ರಹಿಕೆಗೆ ಸಿಗುತ್ತಿಲ್ಲ.
ನಿಮಗೆ ಆಶ್ಚರ್ಯವಾಗಬಹುದು,
ಕೋಪಬರಬಹುದು, ಹುಚ್ಚುತನ ಎನಿಬಹುದು,
ಸಾಮಾನ್ಯವಾಗಿ ಎಲ್ಲಾ ಹಂತಗಳಲ್ಲೂ ಪ್ರಾಮಾಣಿಕ ಎಂದು ನಂಬಿರುವ ವ್ಯಕ್ತಿ ಇತರರನ್ನು ಅಪ್ರಾಮಾಣಿಕರು ಎಂಬ ಅನುಮಾನದಿಂದಲೇ ನೋಡುತ್ತಾನೆ. ಇದೇ ಸ್ವಭಾವ ಮೋದಿಯವರಲ್ಲಿ ಇರುವುದರಿಂದ ಅವರು ಭಾರತ ಸಾಮಾನ್ಯ ಜನರು ನಂಬಿಕೆಗೆ ಅರ್ಹರಲ್ಲ ಎಂದೇ ಭಾವಿಸಿ ಅವರ ಸ್ವಾತಂತ್ರ್ಯ ಕಸಿದುಕೊಂಡು ಆರ್ಥಿಕ ಅಭಿವೃದ್ಧಿಯ ಹೆಸರಿನಲ್ಲಿ ಪರೋಕ್ಷವಾಗಿ ಮತ್ತು ಕಡ್ಡಾಯವಾಗಿ ಡಿಜಿಟಲ್ ಇಂಡಿಯಾ ಆಡಳಿತ ವ್ಯವಸ್ಥೆ ರೂಪಿಸಲು ನಿರ್ಧರಿಸಿರುವುದು ಜೊತೆಗೆ ತೆರಿಗೆ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮುಖಾಂತರ ದೇಶದ ಜನರನ್ನು ನಿಯಂತ್ರಣಕ್ಕೆ ಪ್ರಯತ್ನಿಸುತ್ತಿರುವುದು. ಇದರಲ್ಲಿ ಬಹುತೇಕ ವಿಫಲರಾಗುತ್ತಿರುವುದನ್ನು ಸಹ ಕಾಣಬಹುದು.
ಇದು ಮೇಲ್ನೋಟಕ್ಕೆ ಆಧುನಿಕ ಅಭಿವೃದ್ಧಿಯ ಅತ್ಯುತ್ತಮ ವಿಧಾನವೆನಿಸಿದರೂ ವಾಸ್ತವದಲ್ಲಿ ಈಗಾಗಲೇ ಕಲಿತ, ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿದ ಕೆಲವೇ ಜನರು ಬಹುಸಂಖ್ಯೆಯ ಅಜ್ಞಾನಿಗಳು, ಅನಕ್ಷರಸ್ಥರು, ಬದಲಾವಣೆ ಬಯಸದ ಸಂಪ್ರದಾಯವಾದಿಗಳು, ತಾಂತ್ರಿಕತೆಗೆ ಮಾನಸಿಕವಾಗಿ ಒಗ್ಗಿಕೊಳ್ಳದ ಕೋಟ್ಯಾಂತರ ಜನರು, ಗೃಹಿಣಿಯರು,ರೈತರು ಮುಂತಾದ ಜನರನ್ನು ಸಹಜ ಬದುಕಿನ ಸಂಕಷ್ಟಕ್ಕೆ ದೂಡುವ ಮತ್ತು ಅವರನ್ನು ಶೋಷಿಸುವ ಪರೋಕ್ಷ ವಿಧಾನ ಎನ್ನಬಹುದು.
ಪಾಶ್ಚಾತ್ಯ ದೇಶಗಳಲ್ಲಿ ಇದು ಸಹಜ ವಿಧಾನವಾದರೆ ಭಾರತಕ್ಕೆ ಇದು ಒಂದು ಹೊರೆ. ಇದೇ ವಾಸ್ತವ . ಇನ್ನೂ ಸಣ್ಣ ಅರ್ಜಿಗಳನ್ನು ತುಂಬಿಸಲು ಸಾಧ್ಯವಾಗದ ಅಸಂಖ್ಯಾತ ಜನರನ್ನು ನೋಡುತ್ತಿದ್ದೇನೆ.
ತಾಂತ್ರಿಕ ಬದಲಾವಣೆ ಅವಶ್ಯ ನಿಜ. ಆದರೆ ಅದು ಸ್ವ ಇಚ್ಛೆಯ ಅನುಕೂಲಕರ ಕ್ರಮವಾಗಬೇಕೆ ಹೊರತು ಕಾನೂನು ರೂಪದ ಒತ್ತಾಯ ಅಸಹಾಯಕರ ಶೋಷಣೆಗೆ ದಾರಿ ಮಾಡಿಕೊಡುತ್ತದೆ.
ಗೌರವಾನ್ವಿತ ನರೇಂದ್ರ ಮೋದಿಯವರು ಭಾರತವನ್ನು ಮೇಲಿನಿಂದ ನೋಡುತ್ತಿದ್ದಾರೆ, ಇಲ್ಲಿನ ಸಂಸ್ಕೃತಿ, ಮಾನವ ಸಂಪನ್ಮೂಲ, ಅಪಾರ ಪ್ರಾಕೃತಿಕ ಸಂಪತ್ತು ಮತ್ತು ಅದರ ಉಪಯೋಗಗಳ ಬಗ್ಗೆ ಹೆಚ್ಚಿನ ಭಾವನಾತ್ಮಕ ಪ್ರಾಮುಖ್ಯತೆ ನೀಡುತ್ತಿದ್ದಾರೆ ಮತ್ತು ಹಾಗೆಯೇ ಬಿಂಬಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ನಿಜವಾದ ಭಾರತವನ್ನು ನೋಡಬೇಕಿರುವುದು ಕೆಳಸ್ತರದ ಜೀವನಮಟ್ಟದಿಂದ. ಬಹುತೇಕ ಜನರ ಜೀವನ ಶೈಲಿ ಅದೇ ಮಟ್ಟದಲ್ಲಿ ಇದೆ. ಆಗ ಅವರು ರೂಪಿಸುವ ಕಾರ್ಯಕ್ರಮಗಳ ರೀತಿ ಬದಲಾಗಬಹುದು. ಇಲ್ಲದಿದ್ದರೆ ಶ್ರೀಮಂತರ ತೆವಲಾದ ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಸ್ವಚ್ಛ ಭಾರತ್ ಬುಲೆಟ್ ಟ್ರೈನ್ ಮುಂತಾದ ವಿಷಯಗಳೇ ಪ್ರಾಮುಖ್ಯತೆ ಪಡೆಯುತ್ತದೆ.
ಈ ಯೋಜನೆಗಳ ಬಗ್ಗೆ ಬೇಸರವಿಲ್ಲ. ಆದರೆ ಭಾರತದ ಜನರ ಅವಶ್ಯಕತೆ ಇದನ್ನು ಮೀರಿದ್ದು. ಟಾಟಾ ಬಿರ್ಲಾ ಅಕ್ಷಯ್ ಕುಮಾರ್ ಕೊಹ್ಲಿ ಅವರಿಗೆ ಸ್ವಚ್ಚತೆ ಮುಖ್ಯವಾಗಬಹುದು. ಈ ದೇಶದ ಇನ್ನೂ ಅಸಂಖ್ಯಾತ ಜನರಿಗೆ ಕನಿಷ್ಠ ಅವಶ್ಯಕತೆ ಪೂರೈಕೆಯ ಬದುಕೇ ಮುಖ್ಯವಾಗಿದೆ.
ಇಂದಿನ ಯುವ ಜನಾಂಗದಲ್ಲಿ ಕಂಡು ಬರುವ ಪ್ರಾರಂಭದ ಅತ್ಯುತ್ಸಾಹ, ಸೋಷಿಯಲ್ ಮೀಡಿಯಾ ವ್ಯಸನ, ದಿಢೀರ್ ಶ್ರೀಮಂತಿಕೆಯ ಹಂಬಲ, ನಾನೇ – ನನ್ನಿಂದಲೇ ಎನ್ನುವ ಅಹಂ, ಹಣ ಅಧಿಕಾರದಿಂದಲೇ ಎಲ್ಲಾ ಸಾಧ್ಯ ಎನ್ನುವ ತಪ್ಪು ಕಲ್ಪನೆ, ಆತುರ ಮತ್ತು ಬೇಗ ಫಲಿತಾಂಶದ ನಿರೀಕ್ಷೆ, ಸೋಲನ್ನು ಒಪ್ಪಿಕೊಳ್ಳದ ಅಸಹನೆ ಮುಂತಾದ ಕೆಲವು ದುಡುಕು ಸ್ವಾಭಾವದ ಸಾಂಕೇತಿಕ ರೂಪದಂತೆ ಮೋದಿಯವರು ಕಾಣುತ್ತಾರೆ.
ಆರ್ಥಿಕ ಕುಸಿತ, ಪ್ರಾಕೃತಿಕ ವಿಕೋಪಗಳು,ಜನ ಸಾಮಾನ್ಯರ ಸಂಕಷ್ಟಗಳು ಮುಂತಾದ ವಿಷಯಗಳನ್ನು ಕುರಿತು ಯೋಚಿಸಿ ಅದರ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ವಿದೇಶಾಂಗ ನೀತಿ ಮತ್ತು ಸೈನ್ಯದ ಬಲವರ್ಧನೆಗೆ ಹೆಚ್ಚಿನ ಮಹತ್ವ ನೀಡಿ ಜನರನ್ನು ಭಾವುಕವಾಗಿ ಸೆಳೆಯುವ ತಂತ್ರಗಾರಿಕೆಯ ಆಡಳಿತ ನೀಡುತ್ತಿರುವುದು ಸಹ ಗಮನಿಸಬಹುದಾದ ಅಂಶ.
ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಶಾಸಕರ ಖರೀದಿ ಮತ್ತು ಪಕ್ಷಾಂತರ ನಿರಂತರವಾಗಿ ನಡೆಯುತ್ತಲೇ ಇದೆ. ಅಧಿಕಾರಿಗಳ ಹಣ ದಾಹ ಹೆಚ್ಚಾಗುತ್ತಲೇ ಇದೆ. ಆ ಕಾರಣದಿಂದಾಗಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯನ್ನು ಅವರು ಉಳಿಸಿಕೊಂಡಿಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಯದಲ್ಲಿ ಕೆಂಪುಕೋಟೆಯ ಮೇಲಿನ ಭಾಷಣದಲ್ಲಿ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಈ ದೇಶದ ಶಾಪ ಎಂದು ಹೇಳಿ ಆತ್ಮ ವಂಚನೆ ಮಾಡಿಕೊಂಡಿದ್ದಾರೆ ಎಂದೇ ಹೇಳಬೇಕು. ಏಕೆಂದರೆ ಅಧಿಕಾರದ ತುತ್ತ ತುದಿಯಲ್ಲಿ ಇರುವ ಅವರೂ ಸಹ ಇದರ ಭಾಗಿಗಳು.
ಇರಲಿ,
ಹಾಗೆಂದು ಹಿಂದಿನ ಪ್ರಧಾನಿಗಳೆಲ್ಲಾ ಸರ್ವಗುಣ ಸಂಪನ್ನರು ಎಂಬುದು ನನ್ನ ಅಭಿಪ್ರಾಯವಲ್ಲ. ಎಲ್ಲರಲ್ಲೂ ಸಾಮರ್ಥ್ಯ ಮತ್ತು ಮಿತಿಗಳು ಇದ್ದೇ ಇರುತ್ತದೆ. ಈ ಕ್ಷಣದಲ್ಲಿ ಭಾರತದ ಪ್ರಭಾವಿ ಪ್ರಧಾನಿ ನರೇಂದ್ರ ಮೋದಿಯವರು ಆಗಿರುವುದರಿಂದ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಬಗ್ಗೆ ಮಾತ್ರ ಒಂದು ಸಣ್ಣ ಅಭಿಪ್ರಾಯ ಅದೂ ಮಾಧ್ಯಮಗಳಲ್ಲಿ ಅವರ ಬಗ್ಗೆ ಗಮನಿಸಿದ ಮಾಹಿತಿಯಂತೆ.
ನಿಮ್ಮ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದ್ದರೆ ಅದನ್ನೂ ಗೌರವಪೂರ್ವಕವಾಗಿ ಸ್ವಾಗತಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……