ಮರಳಿನ್ನು ದೇಶವೇ!
ಕರ್ತವ್ಯಪಥಕೆ,ಮನುವಿನ ಪಥಕೆ….
ಓ ನನ್ನ ದೇಶವೇ…
ಸಾಕು ಸಾಕಿನ್ನು ಸಂವಿಧಾನ
ಪರಕೀಯ ಜ್ಞಾನ -ವಿಜ್ಞಾನ
ಸಮತೆ ಮಮತೆಗಳು ನಪುಂಸಕ
ಅಭಿವೃದ್ಧಿಗೆ ಮಾರಕ ..
ಕುರುಕ್ಷೇತ್ರದಲ್ಲಿ ಗೆಲ್ಲಲು
ದೇಶ ಕ್ಷತ್ರಿಯವಾಗಬೇಕು..
ಜನರು ಕರ್ತವ್ಯ ಪಾಲಿಸಬೇಕು ..
ಆತ್ಮನಿರ್ಭರವಾಗಬೇಕು
ಹಿಟ್ಲರ -ಮುಸಲೋನಿಗಳಿಗೂ
ಮನುಮಹರ್ಷಿಯೇ
ಪಿತಾಮಹನೆಂದು
ಲೋಕಕ್ಕೆ ತಿಳಿಸಬೇಕು ..
ದೇಶದ ರಥವಿನ್ನು
ಮನುವಿನ ಪಥದಲ್ಲಿ, ಕರ್ತವ್ಯಪಥದಲ್ಲಿ
ಮುನ್ನೆಡಯಬೇಕು
ಕರ್ಮಣ್ಯೇವಾಧಿಕಾರಾಸ್ತೆ
ಮಾಫಲೇಶುಕದಾಚನ
ಹಕ್ಕುಬುಕ್ಕುಗಳು ಹಾಳುಗೆಡವಿದ್ದು ಸಾಕು
ಆರ್ಯತನ..
ಕರ್ತವ್ಯ ಪಾಲನದಿಂದ ಮತ್ತೆ
ಸನಾತನ ಪುನರುತ್ಥಾನ..
ದಲಿತರೇ ಜೀತಕ್ಕೆ ಮರಳಿರಿ
ಮಾತೆಯರೇ ಅಡುಗೆಮನೆಯಲ್ಲಿ ಉಳಿಯಿರಿ
ರೈತರೇ ಬೆಳೆಯಿರಿ,
ಕಾರ್ಮಿಕರೇ ದುಡಿಯಿರಿ..
ಆಗ್ರಹಗಳು ಅರಾಜಕ
ಅವಿಶ್ವಾಸ ವಿಕಾಸಘಾತುಕ
ಅವಿರೋಧ ಪ್ರಜಾತಂತ್ರ
ಅಭಿವೃದ್ಧಿಕಾರಕ ..
ಬನ್ನಿ,
ಆಗ್ರಹಿಸುವುದು ಬಿಟ್ಟು
ಅನುಗ್ರಹ ಕೇಳೋಣ..
ಇಲ್ಲ ಇಲ್ಲ ವೆಂಬ ನಾಸ್ತಿಕತೆಯನ್ನು
ತೊರೆಯೋಣ..
ಇದೆ ಇದೆ ಎನ್ನುತ್ತಾ
ಆಸ್ತಿ ಕರಾಗೋಣ
ಬೃಹತ್ ಡೆಮಾಕ್ರಸಿಯ
ಭವ್ಯ ಮಾಲ್ ರಕ್ಷಿಸುವ
ಸೆಕ್ಯೂರಿಟಿ ಗಾರ್ಡ್ಗಳಾಗೋಣ
ಕುರುಕ್ಷೇತ್ರದಲ್ಲಿ ಆಹುತಿಯಾಗುವ
ಅಗ್ನಿವೀರರಾಗೋಣ…
ಕರ್ತವ್ಯಪಥದಲ್ಲಿ ಮುನ್ನೆಡೆಯೋಣ
ಪಾಲಿಗೆ ಬಂದ
ಪಾಷಾಣವನ್ನು
ಪಂಚಾಮೃತವೆಂದೇ ನಂಬೋಣ…
ಕರ್ತವ್ಯಪಥದಲ್ಲಿ
ಮುನ್ನೆಡೆದು ದೇಶಭಕ್ತ ನಾಗರೀಕರಾಗೋಣ…
ಇಹದಲ್ಲೂ ಪರದಲ್ಲೂ
ಸದ್ಗತಿ ಪಡೆಯೋಣ
- ಶಿವಸುಂದರ್
—
shivasundar
9448659774