ಮೋಸದ ಎಂತಹ ಅಸಹ್ಯಕರ ಸಮರ್ಥನೆ……
ಧನ್ಯ ಭಾರತ ಮಾತೆಯೆ ಧನ್ಯ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ರಾಜಕೀಯ ನೀತಿಗೆ ಧನ್ಯ……
ಹಿಂದಿನಿಂದಲೂ ಈ ಪರಂಪರೆ ಸ್ವಲ್ಪ ಮಟ್ಟಿಗೆ ನಡೆದುಕೊಂಡು ಬಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ……..
ಅಬ್ಬಾ ಅಬ್ಬಬ್ವಾ…….
ಗೋವಾ ಮಣಿಪುರದಂತ ಚಿಕ್ಕ ರಾಜ್ಯಗಳೇ ಇರಲಿ, ಮಧ್ಯಪ್ರದೇಶ, ಮಹಾರಾಷ್ಟ್ರ ಕರ್ನಾಟಕ ಸೇರಿ ದೊಡ್ಡ ದೊಡ್ಡ ರಾಜ್ಯಗಳು ಮತ್ತು ಇದೀಗ ಬಿಹಾರ… ಎಲ್ಲವೂ ಅಯಾರಾಂ ಗಯಾರಂ……..
ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಚುನಾವಣೆ ಆಧಾರಿತ ಐದು ವರ್ಷಗಳ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆಯನ್ನು ಸಂವಿಧಾನದಲ್ಲಿ ರೂಪಿಸಲಾಗಿದೆ. 1835 ದಿನಗಳ ಸಮಯಾವಕಾಶವಿದು. ಸಾಮಾನ್ಯವಾಗಿ ತನ್ನ ತತ್ವ ಸಿದ್ದಾಂತ ವಿಚಾರ ಭರವಸೆ ನಂಬಿಕೆಗಳ ಮೇಲೆ ಒಂದು ಪಕ್ಷ ಮತ್ತು ಅದರ ಜನ ಪ್ರತಿನಿಧಿಗಳು 5 ವರ್ಷ ಆಡಳಿತ ನೀಡಿ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಜನ ಅದೇ ಪಕ್ಷ ಅಥವಾ ಅದರ ಕೆಲಸ ತೃಪ್ತಿಕರವಾಗಿ ಇಲ್ಲದಿದ್ದರೆ ಮತ್ತೊಂದು ಪಕ್ಷ ಅಥವಾ ಇತ್ತೀಚಿಗೆ ಕೆಲವು ಪಕ್ಷಗಳನ್ನು ಗೆಲ್ಲಿಸುತ್ತಾರೆ. ಇದು ಒಂದು ವ್ಯವಸ್ಥೆ.
ಆದರೆ ಈಗ ಈ 5 ವರ್ಷಗಳಲ್ಲೇ ಜನಪ್ರತಿನಿಧಿಗಳು ಮಾಡಬಾರದ ಸಂವಿಧಾನ ವಿರೋಧಿ ಕೆಲಸ, ಆಡಬಾರದ ಮಾನವೀಯತೆಗೆ ವಿರುದ್ಧವಾದ ಆಟ ಆಡಲು ಶುರು ಮಾಡಿದ್ದಾರೆ. ಇದನ್ನು ಎಷ್ಟು ಸೂಕ್ಷ್ಮವಾಗಿ ಮಾಡುತ್ತಾರೆಂದರೆ ಕಾನೂನಿನ ಒಳಗೆ ನುಗ್ಗಿ ಅದನ್ನೇ ಗುರಾಣಿಯಾಗಿಸಿ ಕೆಲವು ಕಡೆ, ಮತ್ತೆ ಕೆಲವು ಕಡೆ ಜನರ ಮತಗಳನ್ನೇ ನೇರವಾಗಿ ಪಡೆದು ಸಾರ್ವಜನಿಕರ ಅರಿವಿಗೆ ಬಾರದಂತೆ ಬೆನ್ನಿಗೆ ಚೂರಿ ಹಾಕುತ್ತಾರೆ.
ಮತ್ತೆ ದೇವರು ಧರ್ಮದ ಹೆಸರಿನಲ್ಲಿ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸುವುದು ಮತ್ತೆ ಭ್ರಷ್ಟಾಚಾರಕ್ಕೆ ಕೈ ಹಾಕುವುದು.
ಎಂತಾ ಮೋಸ. ಒಂದೆರಡು ವರ್ಷ ಒಂದು ಪಕ್ಷದ ಸಿದ್ದಾಂತಗಳನ್ನು ಬಾಯಿಗೆ ಬಂದಂತೆ ತೆಗಳುವುದು ಮತ್ತೆರಡು ವರ್ಷ ಅದರ ಪಾದಗಳಿಗೆ ನಮಸ್ಕರಿಸುವುದು.
ನೀವು ಕಾಂಗ್ರೆಸ್ ನವರೇ ಆಗಿರಿ, ಬಿಜೆಪಿ ಜೆಡಿಎಸ್ ಶಿವಸೇನೆ ಜೆಡಿಯು ಆಗಿರಿ, ಹಿಂದುತ್ವ ಲೋಹಿಯಾ ಅಂಬೇಡ್ಕರ್ ವಾದಿಯೇ ಆಗಿರಿ ಅಧಿಕಾರಕ್ಕಾಗಿ ಸೈದ್ಧಾಂತಿಕ ಸಮರ್ಥನೆ ಮಾಡಿ ಈ ರೀತಿಯ ದ್ರೋಹ ಮಾಡುವುದು ಅಕ್ಷಮ್ಯ ಅಪರಾಧ.
ನನ್ನ ಪ್ರಕಾರ ಈ ರೀತಿಯ ನಮಕ್ ಹರಾಮ್ ಗಳು ಮತ್ತು ಅವರಿಗೆ ಮತ್ತೆ ಮತ್ತೆ ಓಟು ಹಾಕುವವರು ಭಾರತದ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣಕ್ಕೆ ಅನರ್ಹರು.
ಸಂವಿಧಾನ ಮತ್ತು ಧರ್ಮ ಇರುವುದು ತಪ್ಪುಗಳು ಆಗದಂತೆ ತಡೆಯಲು. ಒಳ್ಳೆಯ ಮನಸ್ಸು ಮತ್ತು ಜ್ಞಾನ ಇರುವವರಿಗೆ ಕಾನೂನು ಬೇಕಿಲ್ಲ ಧರ್ಮವೂ ಬೇಕಿಲ್ಲ. ಏಕೆಂದರೆ ನಿಜ ನಾಗರಿಕ ಮನುಷ್ಯ ಅರಿವಿನಿಂದ ಬದುಕುತ್ತಾನೆ. ಆ ಅರಿವಿನಲ್ಲೇ ಕಾನೂನು ಧರ್ಮ ಎಲ್ಲವೂ ಅಡಗಿರುತ್ತದೆ. ಮೋಸಗಾರರು ವಂಚಕರಿಗೆ ಅವರನ್ನು ಭಯ ಪಡಿಸಲು ಮತ್ತು ಶಿಕ್ಷಿಸಲು ಮಾತ್ರ ಕಾನೂನು ಧರ್ಮ ಬೇಕಾಗುತ್ತದೆ. ಆ ಕಾನೂನು ಮತ್ತು ಧರ್ಮಗಳನ್ನೇ ಅನಾಚಾರಕ್ಕೆ ಹೊದಿಕೆ ಮಾಡಿಕೊಳ್ಳುವ ಇವರನ್ನು ಏನೆಂದು ಕರೆಯುವುದು…..
ಒಂದು ಸ್ಪಷ್ಟವಾಗಬೇಕಿದೆ…..
ರಾಜಕೀಯವೆಂದರೆ……..
ಮೋಸ ವಂಚನೆ ದ್ರೋಹ ಮೋಹ ಲಾಲಸೆ ಸ್ವಾರ್ಥ ಎಲ್ಲವನ್ನೂ ಒಳಗೊಂಡ ಅಧಿಕಾರ…
ಅಥವಾ
ಸೇವೆ ತ್ಯಾಗ ಪ್ರಾಮಾಣಿಕತೆ ದಕ್ಷತೆ ಶ್ರಮ ಮಾನವೀಯತೆ ನಿಸ್ವಾರ್ಥ ಅರ್ಥವನ್ನೊಳಗೊಂಡ ಅತ್ಯುತ್ತಮ ಕ್ಷೇತ್ರ….
ಶಾಶ್ವತ ಶತ್ರುಗಳು ಇಲ್ಲ ಶಾಶ್ವತ ಮಿತ್ರರು ಇಲ್ಲ ಎಂದು ಹೇಳಲು ಇದು ನಿಮ್ಮ ಖಾಸಗಿ ಬದುಕಲ್ಲ. ಶತ್ರುತ್ವ ಮಿತ್ರತ್ವ ಮುಖ್ಯವಲ್ಲ. ಇದು ಕೌಟುಂಬಿಕ ಸಂಬಂಧಗಳಲ್ಲ. ಇದು ಸಾರ್ವಜನಿಕ ಜವಾಬ್ದಾರಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಶತ್ರುತ್ವ ಅಥವಾ ಮಿತ್ರತ್ವ ಬೆಳೆಸಲು….
ಸಾಮಾನ್ಯ ಜನ ಅಥವಾ ಕಡು ಬಡವರು ಚುನಾವಣಾ ಸಮಯದಲ್ಲಿ ಎಲ್ಲೋ ಮೂರು ನಾಲ್ಕು ವರ್ಷಗಳಿಗೆ ಒಮ್ಮೆ ಚೂರು ಪಾರು ದುಡ್ಡು ಹೆಂಡ ಬಟ್ಟೆ ಪಡೆಯುವುದೇ ಮಹಾ ಅಪರಾಧ ಎಂದು ಹೇಳುವ ಮಾಧ್ಯಮಗಳು ಈ ಮೌಲ್ಯಗಳ ಮತ್ತು ಸರ್ಕಾರದ ತಿಜೋರಿಗೆ ಕನ್ನ ಹಾಕುವುದನ್ನು ಚಾಣಾಕ್ಷ ನೀತಿ ಎಂದು ಕರೆಯುವುದು ಎಷ್ಟು ಹಾಸ್ಯಾಸ್ಪದವಲ್ಲವೇ….
ನೀವು ನಿಜಕ್ಕೂ ಈ ದೇಶದ ಅಭಿವೃದ್ಧಿ ಮತ್ತು ಮೌಲ್ಯಗಳನ್ನು ಇಷ್ಟಪಡುವವರೇ ಆದರೆ ಇನ್ನು ಮೇಲೆ
” ಒಳ್ಳೆಯವರನ್ನು ಪ್ರೋತ್ಸಾಹಿಸಿ ಮತ್ತು ಕೆಟ್ಟವರನ್ನು ನಿರ್ಲಕ್ಷಿಸಿ ” ಇದು ಒಂದು ಸಂಕಲ್ಪವಾಗಲಿ.
ಇಲ್ಲದಿದ್ದರೆ ನೀವು ನಾವು ಸಮಾಜ ಮತ್ತು ದೇಶವೇ ಕೆಟ್ಟದಾಗುತ್ತದೆ ಎಚ್ಚರ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……