Spread the love

ಸಾಮಾನ್ಯವಾಗಿ ಸ್ವಲ್ಪ ಹೆಚ್ಚು ಕಡಿಮೆ ಬೆಳಗಿನ 6 ಗಂಟೆಗೆ ಭಾರತ ನಿದ್ದೆಯಿಂದ ಎದ್ದು ಕಣ್ಣ ರೆಪ್ಪೆ ತೆರೆಯುತ್ತದೆ.
( ಆ – ಮುಂಜಾನೆಯ 3/4/5 ಗಂಟೆಯ ಹೊತ್ತಿಗೆಲ್ಲಾ ಏಳುವ ಅಥವಾ ರಾತ್ರಿ ಇಡೀ ಕೆಲಸ ಮಾಡುವ ಅನೇಕ ಜನರು ಇದ್ದಾರೆ )

ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಒಂದು ರೀತಿಯಲ್ಲಿ ಸಿದ್ದರಾಗುತ್ತಾರೆ. ಕೆಲವರು ಸ್ವಯಂ ಆಗಿ ಮತ್ತೆ ಕೆಲವರು ಪೋಷಕರ ಸಹಾಯದಿಂದ ತಯಾರಾಗುತ್ತರೆ. ಮನೆಯ ಹೆಣ್ಣು ಮಕ್ಕಳು ಮುಖ್ಯವಾಗಿ ತಾಯಂದಿರು ಅವರಿಗೆ ಬೇಕಾದ ಉಪಹಾರ ತಯಾರಿಸುವುದರಲ್ಲೇ ಬೆಳಗಿನ ಚಟುವಟಿಕೆ ಆರಂಭಿಸುತ್ತಾರೆ. ಹಾಗೆಯೇ ಗಂಡ ಅಥವಾ ಹೆಂಡತಿ ಅಥವಾ ಇಬ್ಬರೂ ಉದ್ಯೋಗಕ್ಕೆ ಹೋಗುವುದಾದರೆ ಅವರ ಮನೆಯಲ್ಲಿ ಹಿರಿಯರಿದ್ದರೆ ಅಥವಾ ಯಾರು ಇಲ್ಲದಿದ್ದಾಗ ಬೇರೆಯದೇ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಒಟ್ಟಿನಲ್ಲಿ ಬಹುತೇಕ ಭಾರತದ ಜನಸಂಖ್ಯೆ ಬೆಳಗ್ಗೆ ಶಿಕ್ಷಣ ಉದ್ಯೋಗ ವ್ಯಾಪಾರಕ್ಕಾಗಿ ಮನೆಯಿಂದ ಹೊರಡುವ ಗಡಿಬಿಡಿಯಲ್ಲಿರುತ್ತಾರೆ.

ಕೃಷಿ ಅವಲಂಬಿತ ರೈತರು ಸಹ ಇದೇ ಸಮಯದಲ್ಲಿ ಹೊರಡುತ್ತಾರಾದರೂ ಇಷ್ಟೊಂದು ಗಡಿಬಿಡಿ ಇರುವುದಿಲ್ಲ. ಆದರೆ ಹೈನುಗಾರಿಕೆ – ಮೀನುಗಾರಿಕೆ ಮಾಡುವವರಲ್ಲಿ ಸ್ವಲ್ಪ ಹೆಚ್ಚಿನ ಚಟುವಟಿಕೆ ಕಂಡುಬರುತ್ತದೆ.

ವೈವಿಧ್ಯಮಯ ಭಾರತದಲ್ಲಿ ಸಾರಿಗೆಯೂ ಅಷ್ಟೇ ವೈವಿಧ್ಯಮಯವಾಗಿದೆ ಮತ್ತು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದೆ. ನಡಿಗೆಯಿಂದ ವಿಮಾನದವರೆಗೆ. ಆದರೂ ಆಧುನಿಕತೆಯ ಪರಿಣಾಮದಿಂದ ದ್ವಿಚಕ್ರ ವಾಹನ ಕಾರು ಬಸ್ಸು ರೈಲು ತುಂಬಾ ಹೆಚ್ಚಾಗಿ ಬಳಸಲ್ಪಡುತ್ತದೆ.

ಬೆಸಿಲೇರಿದಂತೆ ಇಡೀ ದೇಶದ ಕೆಲಸಗಳ ವಿರಾಟ್ ರೂಪ ಕಾಣುತ್ತದೆ. ಕೂಲಿಯಿಂದ ರಾಷ್ಟ್ರಪತಿಯವರೆಗೆ, ಅಗೆಯುವುದರಿಂದ ಸಹಿ ಹಾಕುವವರೆಗೆ, ಕಲ್ಲುಗಣಿಯಿಂದ ಸಾಫ್ಟ್‌ವೇರ್ ವರೆಗೆ, ಗಟಾರದಿಂದ ಹೃದಯ ಶಸ್ತ್ರಚಿಕಿತ್ಸೆಯವರೆಗೆ, ಮಗುವಿನ ಜನನದಿಂದ ಹೆಣ ಹೂಳುವುವರೆಗೆ, ಆಟದಿಂದ ಪಾಠದವರೆಗೆ ಬಹುಶಃ ವರ್ಣಿಸಲು- ಊಹಿಸಲು ತುಂಬಾ ತುಂಬಾ ಕಷ್ಟವಾಗುವಷ್ಟು ವೃತ್ತಿಗಳು ಕೆಲಸಗಳು ಮೈ ಬಿಚ್ಚಿಕೊಳ್ಳುತ್ತವೆ.

ಸಾಮಾನ್ಯವಾಗಿ ಮಧ್ಯಾಹ್ನ ಎಂಬುದು ಊಟದ ಸಮಯ. ಕನ್ಯಾಕುಮಾರಿಯಿಂದ ಕಾಶ್ಮೀರದ ಹಿಮಾಲಯದವರೆಗೂ, ಪೂರ್ವದಿಂದ ಪಶ್ಚಿಮದವರೆಗೂ ಎಷ್ಟೊಂದು ಆಹಾರದ ವೈವಿಧ್ಯತೆ. ಗಂಜಿಯಿಂದ ಮೃಷ್ಟಾನ್ನದವರೆಗೆ, ಮೀನಿನಿಂದ ದನದವರೆಗೆ, ಹಣ್ಣು ತರಕಾರಿ ಬೇಳೆಕಾಳುಗಳು ಸಿರಿ ಧಾನ್ಯ ಎಲ್ಲವೂ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗುತ್ತಾ ಆ ಪ್ರದೇಶದ ಮಣ್ಣಿನ ಸೊಗಡಿನೊಂದಿಗೆ ದೇಹ ಸೇರುತ್ತದೆ.

ಸಂಜೆಯ ಹೊತ್ತಿಗೆ ಮತ್ತದೇ ಗಡಿ ಬಿಡಿ. ಮನಸ್ಸುಗಳಲ್ಲಿ ಮಾತ್ರ ಭಿನ್ನ ಭಾವ. ಸಂತೋಷ ದುಃಖ ಕೋಪ ಅಸೂಯೆ ಅತೃಪ್ತಿ ಸೋಲು ಗೆಲುವು ಲಾಭ ನಷ್ಟ ಎಲ್ಲವೂ ಪ್ರತಿ ಜೀವಿಯಲ್ಲಿ ಪ್ರತ್ಯೇಕವಾದ ಕ್ರಿಯೆ ಪ್ರತಿಕ್ರಿಯೆಗಳು ಮುಖಭಾವದಲ್ಲಿ ಮೂಡುತ್ತಿರುತ್ತದೆ. ಅದು ತೀರಾ ಖಾಸಗಿ ಮತ್ತು ಆ ಸನ್ನಿವೇಶಗಳ ಮನಸ್ಥಿತಿ ಅವಲಂಬಿಸಿರುತ್ತದೆ. ಜೊತೆಗೆ ಸಂಜೆಯಲ್ಲಿ ಸಾರಿಗೆ ವ್ಯಾಪಾರ ವಹಿವಾಟು ಜನದಟ್ಟಣೆ ಎಲ್ಲವೂ ಸ್ವಲ್ಪ ಹೆಚ್ಚು.

ಭಾರತೀಯರ ರಾತ್ರಿಗಳ ಪ್ರಾರಂಭದ ಕೆಲವು ಗಂಟೆಗಳು‌ ಸಾಮಾನ್ಯವಾಗಿ ಚೇತೋಹಾರಿ ಉಲ್ಲಾಸದಾಯಕ ಮನರಂಜನೆ ಮತ್ತು ಮಾತುಕತೆಗಳೇ ತುಂಬಿರುತ್ತದೆ. ವಿದ್ಯಾರ್ಥಿಗಳು ಓದು ಬರಹ ಹೋಂ ವರ್ಕ್ ಗಳಲ್ಲಿ ತಲ್ಲೀನ, ಗೃಹಿಣಿಯರು ಅಡುಗೆ ಕೆಲಸ ಮತ್ತು ಧಾರಾವಾಹಿಗಳ ವೀಕ್ಷಣೆ, ಪುರುಷರು ಮದ್ಯಪಾನ, ವಾರ್ತೆಗಳು, ಅಕ್ಕಪಕ್ಕದ ಸಮಾನ ಮನಸ್ಕರೊಂದಿಗೆ ಲೋಕಾಭಿರಾಮದ ಮಾತುಗಳು , ಕಷ್ಟ ಸುಖಗಳ ಹಂಚಿಕೆ ಹೀಗೆ ‌ಸಿಕ್ಕ ಸ್ವಲ್ಪ ಸಮಯದಲ್ಲಿ ಹರಟೆಗೇ ಮೀಸಲು. ಒಂದಷ್ಟು ಜನ ಓದು ಬರಹ‌ ಅಧ್ಯಯನ ಮುಂತಾದ ಗಂಭೀರವಾದ ವಿಷಯಗಳಲ್ಲಿ ಸಹ ಮಗ್ನರಾಗಿರುತ್ತಾರೆ.

ರಾತ್ರಿಯ ಊಟದ ನಂತರ ಸುಮಾರು 10 ಗಂಟೆಗೆ ಭಾರತ ನಿದ್ರೆಗೆ ಜಾರುತ್ತದೆ. ಮತ್ತೆ ಬೆಳಗಿನ 6 ಗಂಟೆಯಿಂದ ಎಂದಿನ ಚಟುವಟಿಕೆ ಪ್ರಾರಂಭ.

ಹಾಗೆಯೇ ಸಾಮಾನ್ಯ ಜನ ರಾತ್ರಿ ನಿದ್ರೆಗೆ ಜಾರಿದರು ಒಂದಷ್ಟು ಜನ ಇಡೀ ರಾತ್ರಿ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿರುತ್ತಾರೆ. ಅದು ಅನಿವಾರ್ಯವೂ ಆಗಿರಬಹುದು ಅಥವಾ ಅವಶ್ಯಕತೆಯೂ ಆಗಿರಬಹುದು ಅಥವಾ ಹವ್ಯಾಸವೂ ಆಗಿರಬಹುದು.

ಇದಲ್ಲದೇ ಕೊಲೆಗಳು, ದರೋಡೆಗಳು, ಅತ್ಯಾಚಾರಗಳು, ಭ್ರಷ್ಟಾಚಾರಿಗಳು ಮುಂತಾದ ಅತ್ಯಂತ ನೀಚ ಕೆಲಸ ಮಾಡುವ ಒಂದಷ್ಟು ಜನರು ಹಾಗೆಯೇ ಧೈರ್ಯವಂತರು, ತ್ಯಾಗ ಜೀವಿಗಳು, ಸೇವಾ ಮನೋಭಾವದವರು, ಅದ್ಭುತ ಪ್ರತಿಭಾವಂತರು ಹೀಗೆ ಮತ್ತೊಂದಿಷ್ಟು ಜನರು ತಮ್ಮದೇ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಹಳಷ್ಟು ಭಾರತೀಯರ ಜೀವನಶೈಲಿ ನನ್ನ ಅನುಭವದಲ್ಲಿ ಕಂಡದ್ದು……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!