ಸುಮಾರು ಮೂವತ್ತು-ಮೂವತೈದು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಿಬಿಡ ವನರಾಶಿಗಳ ನಡುವೆ ಸಮೃದ್ಧ ನಾಗ ಬನಗಳಿದ್ದವು. ಭೀಮಗಾತ್ರದ ಗಗನಚುಂಬಿ ಮರಗಳಿಂದಾವೃತವಾದ ನೆರಳಿನಡಿಯಲ್ಲಿ ನಾಗ ದೇವರ ಸಾನಿಧ್ಯವಿತ್ತು. ಹತ್ತಿರದಲ್ಲಿ ಕೆರೆಯೋ,ನದಿಯೋ ಇರುವಂತ ಜಾಗದಲ್ಲೇ ಇಂತಹ ನಾಗ ಬನಗಳು ಹೆಚ್ಚಾಗಿ ಇರುತ್ತಿದ್ದವು. ಬಿರು ಬೆಸುಗೆಯಲ್ಲೂ ಈ ಬನ ಪ್ರದೇಶದಲ್ಲಿ ಆಹ್ಲಾದಕರ ತಂಪು ನಮ್ಮ ಮೈಯನ್ನು ಮೆತ್ತಿಕೊಳ್ಳುತಿತ್ತು. ಕೇದಗೆ, ರೆಂಜ ಮುಂತಾದ ಹೂಗಳ ಪರಿಮಳ ಹೊತ್ತ ತಂಗಾಳಿ, ಅಲ್ಲಿನ ಅನೂಹ್ಯ ಆಧ್ಯಾತ್ಮಿಕ ಮತ್ತು ದೈವಿಕ ಶಕ್ತಿಯ ಸಾಧ್ಯತೆಯನ್ನು ಪುಷ್ಟೀಕರಿಸುತಿತ್ತು.
ಆಧುನಿಕತೆಯ ಗಾಳಿ ಸೋಕದೆ, ಪ್ರಕೃತಿಯ ಜೀವ ಜಾಲದ ತೊಟ್ಟಿಲನ್ನು ತೂಗುತಿದ್ದ ಈ ನಾಗ ಬನಗಳಿಗೆ ಅಕಾಲ ಶ್ರೀಮಂತಿಕೆಯ ಆಡಂಬರದ ಪೂಜೆಗಳು ಮುತ್ತಿಕೊಳ್ಳಲು ಶುರು ಮಾಡಿದವು. ಕೇವಲ ತನು ತಂಬಿಲಗಳಿಂದ ಸಂತೃಪ್ತನಾಗುತಿದ್ದ ನಾಗದೇವರಿಗೆ ಅದ್ದೂರಿಯ ನಾಗಮಂಡಲಗಳೇ ಬೇಕಾಯ್ತು. ಸಾನಿಧ್ಯ ವೃದ್ಧಿಗೆ ಪ್ರಶ್ನಾ ಚಿಂತನೆ ನಡೆಯಿತು. ಅಷ್ಟಮಂಗಲ ಪ್ರಶ್ನೆ, ತಾಂಬೂಲ ಪ್ರಶ್ನೆ ಮುಂತಾದ ಪ್ರಶ್ನಾಚಿಂತನೆ ಮಾಡುವವರನ್ನು ಸ್ವಯಂ ನಾಗದೇವರೇ ನಮ್ಮ ಪ್ರಶ್ನೆಗಳಿಗೆ ಉತ್ತರಿಸುತಿದ್ದಾರೆ ಎನ್ನುವ ಮಟ್ಟಿಗೆ ಅಂದಿನ ಶ್ರೀಮಂತವರ್ಗ ನಂಬಿತ್ತು. ಪ್ರಶ್ನಾ ಚಿಂತನೆಗೆ ಬಂದವರು ನಾಗಬನದ ಸುತ್ತಮುತ್ತಲಿನ ಮರಗಳನ್ನು ಕಡಿದು ಹಿಂದಿನ ಚಿತ್ರಕೂಟಗಳನ್ನೂ ತೆಗೆದು ಹೊಸದಾಗಿ ನಿರ್ಮಿಸಲು ಅನುಮತಿ ಕೊಟ್ಟರು. ಭೀಮಗಾತ್ರದ ಮರಗಳು ಧರಾಶಾಯಿಯಾದವು. ಹಳೆಯ ನಾಗನ ಕಲ್ಲುಗಳನ್ನು ಕಿತ್ತೆಸೆದು ಚಿತ್ರವಿಚಿತ್ರ ನಾಗಶಿಲ್ಪಗಳಿರುವ ಶಿಲೆಗಳನ್ನು ಪ್ರತಿಷ್ಠಾಪಿಸಲಾಯಿತು. ಮಣ್ಣಿನ ಮತ್ತು ಮುರಕಲ್ಲಿನ ಚಿತ್ರಕೂಟಗಳನ್ನು ನೆಲಸಮ ಮಾಡಿ ಕಾಂಕ್ರೀಟ್ ಮಂದಿರಗಳ ಅಡಿಯಲ್ಲಿ ನಾಗ ದೇವರು ಪ್ರತಿಷ್ಠೆಗೊಂಡರು. ಬಹುತೇಕ ಕಡೆ ನಾಗ ಬನದ ಪಕ್ಕದ ಕೆರೆಗಳಿಗೆ ಮಣ್ಣು ತುಂಬಿಸಿ ಅಲ್ಲೊಂದು ಸಣ್ಣ ಬಾವಿಯನ್ನು ನಿರ್ಮಿಸಲಾಯಿತು. ವರ್ಷದ ಎಂಟತ್ತು ತಿಂಗಳು ನೀರುಣಿಸುತಿದ್ದ ಕೆರೆಗಳ ಭವಿಷ್ಯವನ್ನು ಐದಡಿ ವ್ಯಾಸದ ಬಾವಿಗಳು ನುಂಗಿದವು. ನಾಗಬನದ ಸುತ್ತ ಸಿಮೆಂಟ್ ತುಂಬಿಸಿ, ಭವಿಷ್ಯದಲ್ಲಿ ಪೂಜೆ ಮಾಡುವವರಿಗಾಗಲಿ, ಪೂಜೆ ನೀಡುವವರ ಮೈಗಾಗಲಿ ಮಣ್ಣು ಮೆತ್ತಿಕೊಳ್ಳದಂತೆ ಜಾಗ್ರತೆ ವಹಿಸಿದವರು ಬನದ ಸುತ್ತ ಕಲ್ಲಿನ ಗೋಡೆ ಕಟ್ಟಿ ಧನ್ಯರಾದರು.
ಬಹಳಷ್ಟು ಕಡೆ ದರ್ಶನಕ್ಕೆ ಬಂದ ನಾಗಪಾತ್ರಿಗಳೇ “ಬನದ ಸುತ್ತಮುತ್ತಲಿನ ಮರಗಳನ್ನು ತೆಗೆಯಬೇಕು. ನೆಲವನ್ನು ಮೂರಡಿಗಿಂತ ಹೆಚ್ಚು ಅಗೆಯಬಾರದು. ನನಗೆ ಹೊಸ ಚಿತ್ರಕೂಟವಾಗಬೇಕು. ಹಳೆಯ ಶಿಲೆಗಳನ್ನು ತೆಗೆದು ಹೊಸ ಶಿಲಾಪ್ರತಿಷ್ಠೆ, ಆಶ್ಲೇಷ ಬಲಿ ಸೇವೆ ನಡೆಯಬೇಕು. ಇದಾಗದೆ ಸಂಸಾರಕ್ಕೆ ಸುಖ ನೆಮ್ಮದಿ ಫಲಿಸುವುದಿಲ್ಲ” ಎಂದದ್ದನ್ನು ನಾನೇ ನೋಡಿದ್ದೇನೆ. ಅಲ್ಲೋ, ಇಲ್ಲೋ ಒಂದಿಬ್ಬರು ಅಶಿಕ್ಷಿತ ಹಿರಿಯರು “ಮರ ಕಡಿಯುವುದು ಬೇಡ, ನಮ್ಮ ತಲೆಮಾರುಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಹಾಗೆಯೇ ಮುಂದುವರಿಯಲಿ” ಎಂದದ್ದು ಅರಣ್ಯರೋಧನವಾಯ್ತೆ ವಿನಃ ಬುದ್ಧಿವಂತರ ಕಿವಿಗೆ ಅದು ಮುಟ್ಟಲೇ ಇಲ್ಲ. ಅಂತೂ ಇಂತೂ ಅಖಂಡ ತುಳುನಾಡಿನ ಬೆರಳೆಣಿಕೆಯ ನಾಗಬನಗಳನ್ನು ಬಿಟ್ಟರೆ, ಬೇರೆಲ್ಲ ನಾಗಬನಗಳು ಆಧುನಿಕತೆಯ ಭರಾಟೆಯಲ್ಲಿ ಸ್ಮಶಾನ ಸದೃಶ್ಯ ಕ್ಯಾಂಕ್ರೀಟ್ ಕಾಡುಗಳಾದವು. ನಮ್ಮ ಸುತ್ತಮುತ್ತಲಿನ ಬಾವಿ ಕೆರೆಗಳ ನೀರು ಬತ್ತಿ ಹೋಗಲು ಬಿಸಿಲಿಗೆ ಛತ್ರಿಯಂತೆ ನಿಂತಿದ್ದ ಮರಗಳ ಮಾರಣ ಹೋಮ ಕಾರಣವಾಯಿತು. ನಮ್ಮ ಹಿರಿಯ ಹತ್ತಿಪ್ಪತ್ತು ತಲೆಮಾರುಗಳನ್ನು ಕಂಡಿದ್ದ ಮರಗಳೆಲ್ಲವೂ ನಮ್ಮ ಅವಿವೇಕಿತನ ಕೊಡಲಿಯೇಟಿಗೆ ಬಲಿಯಾದದ್ದು ನಮ್ಮ ಆ ಕಾಲದ ದುರಂತ.
ಈ ದುರಂತಗಳ ಸಾಲಿಗೆ ಸೇರಿಕೊಂಡದ್ದು ಅಕೇಶಿಯಾ ಮತ್ತು ಮ್ಯಾಂಜಿಯಂ ಎನ್ನುವ ವಿದೇಶದ ಬರಗಾಡಿನ ಮರಗಳು. ಪ್ರಕೃತಿ ತನ್ನೊಡಲಲ್ಲಿನ ಜೀವ ರಾಶಿಗಳನ್ನೂ ಯಾವ ಯಾವ ಪ್ರದೇಶದಲ್ಲಿಟ್ಟು ಸಲಹಬೇಕೆನ್ನುವುದನ್ನು ಮೊದಲೇ ನಿರ್ಧರಿಸಿರುತ್ತದೆ. ಪ್ರಾಕೃತಿಕ ವೈಚಿತ್ರಗಳ ಉದ್ದಗಲಗಳ ತಿಳುವಳಿಕೆ ಇಲ್ಲದ ಮೂರ್ಖ ರಾಜಕಾರಣಿಗಳು ಮತ್ತು ಅವಿವೇಕಿ ಅಧಿಕಾರಿಗಳು ಈ ವಿದೇಶಿ ಮರಗಳನ್ನು ತಂದು ನಮ್ಮ ಜಿಲ್ಲೆಯ ಉದ್ದಗಲಕ್ಕೂ ನೆಟ್ಟರು. ಇಪ್ಪತೈದು ವರ್ಷಗಳ ಹಿಂದೆ ವನಮಹೋತ್ಸವ ಎಂದರೆ ಅಕೇಸಿಯಾ ಮತ್ತು ಮ್ಯಾಂಜಿಯಂ ಸಸಿಗಳನ್ನು ನೆಡುವುದು ಎನ್ನುವಷ್ಟರ ಮಟ್ಟಿಗೆ ಅರಣ್ಯ ಇಲಾಖೆಯ ಪರಿಸರ ಪ್ರೇಮ ಗಟ್ಟಿಯಾಗಿತ್ತು. ನೀರಿನಾಸರೆ ಇಲ್ಲದ ಬರಡು ಜಮೀನಿನಲ್ಲಿ ಬೆಳೆಯುವ ಈ ವೃಕ್ಷಗಳಿಗೆ ನಮ್ಮೂರ ಫಲವತ್ತಾದ ಮಣ್ಣು ಹೊಟ್ಟೆಗಿಲ್ಲದವನಿಗೆ ಮೃಷ್ಟಾನ್ನ ಭೋಜನ ಸಿಕ್ಕಿದ ಹಾಗಾಯಿತು. ಗಾಳಿಯಲ್ಲಿ ಹಾರಿ ಬಿದ್ದು ಬೀಜ ಪಸರಿಸಲು ಈ ಜಾತಿಯ ಮರಗಳಿಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಹೇಗೂ ನಗರೀಕರಣದ ಭರಾಟೆಯಲ್ಲಿ ಮತ್ತು ನಮ್ಮ ದೈವೀ ಕಾರ್ಯದ ಮೌಢ್ಯಗಳ ಜೊತೆಗೆ ನಾವು ಸ್ಥಳೀಯ ವೃಕ್ಷ ಸಂಪತ್ತನ್ನು ನಾಶ ಮಾಡಿ ಸಮತಟ್ಟು ಮಾಡಿಟ್ಟ ಜಾಗಗಳಿದ್ದವು. ಅಲ್ಲೆಲ್ಲ ನಿರಾತಂಕವಾಗಿ ಬೆಳೆದ ಈ ಮರಗಳ ಬೇರು ನೀರಿನಾಸರೆಯನ್ನು ಹುಡುಕಿಕೊಂಡು ಹೋಗಿ ನೆಲವನ್ನು ಬರಡು ಭೂಮಿಯಾಗಿಸಿದವು. ಈ ಮರಗಳಲ್ಲಿ ಸುವಾಸನೆಯ ಹೂಗಳಿಲ್ಲ. ಪ್ರಾಣಿ ಪಕ್ಷಿಗಳಿಗೆ ಹಣ್ಣು ಸಿಗುವುದಿಲ್ಲ. ಅದರಿಂದ ಬೀಳುವ ತರಗೆಲೆಗಳು ಗೊಬ್ಬರಕ್ಕೂ ಆಗುವುದಿಲ್ಲ. ಕನಿಷ್ಠ ಹಕ್ಕಿಗಳು ಆ ಮರದಲ್ಲಿ ಗೂಡು ಕಟ್ಟುವುದಿಲ್ಲ ಎಂದಾದರೆ ಈ ಜಾತಿಯ ಮರಗಳು ಎಷ್ಟೊಂದು ಅನೈಸರ್ಗಿಕವಾಗಿ ನಮ್ಮ ಪರಿಸರದಲ್ಲಿ ಸೇರಿಕೊಂಡವು ಎನ್ನುವುದು ಅರ್ಥವಾಗಬೇಕಿತ್ತು. ಐದರಿಂದ ಏಳು ವರ್ಷಗಳಲ್ಲಿ ಅಕೇಸಿಯಾ ಮರವೊಂದು ಐವತ್ತು ವರ್ಷ ಪ್ರಾಯದ ಬೋವಿನ ಮರದ ಸುತ್ತಳತೆಗೆ ಬೆಳೆದು ನಿಲ್ಲುತ್ತದೆ ಎನ್ನುವುದನ್ನು ತಿಳಿದರೆ ನಮ್ಮ ಪರಿಸರ ಎಷ್ಟೊಂದು ಅಪಾಯದ ಹಂತದಲ್ಲಿದೆ ಎನ್ನುವುದು ಅರಿವಾಗಬಹುದು.
ನಾನು ಕಳೆದ ಮೂವತ್ತು ವರ್ಷಗಳಿಂದ ಕಂಡು ಕೊಂಡ ಪ್ರಕಾರ ನಮ್ಮ ಸ್ಥಳೀಯ ಮರಕಾಡುಗಳು ದಟ್ಟವಾಗಿರುವ ಕಡೆ ಈ ಅಕೇಸಿಯಾ ಮ್ಯಾಂಜಿಯಂ ತಲೆ ಎತ್ತುವುದಿಲ್ಲ. ಆದರೆ ಒಮ್ಮೆಈ ಮರಗಳು ಖಾಲಿ ನೆಲವನ್ನು ಆಕ್ರಮಿಸಿಕೊಂಡರೆ ಮುಂದೆ ಅವುಗಳಡಿಯಲ್ಲಿ ಇನ್ಯಾವ ಮರ ಗಿಡಗಳೂ ಬೆಳೆಯಲು ಅದು ಆಸ್ಪದ ಕೊಡುವುದಿಲ್ಲ. ಬೇಕಾದರೆ ನಮ್ಮ ಉಭಯ ಜಿಲ್ಲೆಯಾದ್ಯಂತ ಈ ರಕ್ತಬೀಜ ಸಂತಾನ ಬೆಳೆದ ವೇಗವನ್ನು ಮತ್ತು ಹರಡಿಕೊಂಡಿರುವ ಪ್ರದೇಶಗಳನ್ನೊಮ್ಮೆ ನೋಡಿ. ವಾಸ್ತವ ಅರಿವಾದೀತು. ಈಗೇನೋ ಸರಕಾರ ಅಕೇಸಿಯಾ, ಮ್ಯಾಂಜಿಯಂ ಮರಗಳನ್ನು ಬೆಳೆಯುವುದನ್ನು ನಿರ್ಬಂಧಿಸಿದೆ. ಊರು ಸೂರೆ ಹೋದ ಮೇಲೆ ಕೋಟೆಯ ಬಾಗಿಲು ಹಾಕಿದೆ .ಅದೂ ಪೂರ್ಣ ಪ್ರಮಾಣದಲ್ಲಿ ಕಾನೂನು ಬಹುಶಃ ಇನ್ನೂ ಜಾರಿಯಾಗಿಲ್ಲ.
ಇರಲಿ ನಮ್ಮ ಹಿಂದಿನವರಿಗೆ ಪ್ರತೀ ಹತ್ತಿಪ್ಪತ್ತು ಮನೆಗಳಿಗೊಂದರಂತೆ ನಾಗ ಬನಗಳ ಅವಶ್ಯಕತೆ ಯಾಕಿತ್ತು ಎನ್ನುವುದು ಈ ಹಂತದಲ್ಲಿ ನಮಗೆ ಅರ್ಥವಾಗುತ್ತಿದೆ. ಜೊತೆಗೆ ಅಂದು ಇದೆ ನಾಗ ಬನಗಳನ್ನು ನಾಶ ಮಾಡಲು ಅಷ್ಟಮಂಗಲ ಮತ್ತು ಆರೂಢ ಪ್ರಶ್ನೆಗಳ ಮೂಲಕ ಸಲಹೆ ಕೊಟ್ಟ ಅಯೋಗ್ಯ ಪ್ರಶ್ನಾ ಚಿಂತಕರಿಗೆ ಮತ್ತು ಅವಿವೇಕಿ ಧನಾಡ್ಯರಿಗೆ ಯಾವ ಶಿಕ್ಷೆ ನೀಡಬೇಕೆನ್ನುವುದನ್ನು ನಾವೇ ನಿರ್ಧರಿಸಬೇಕು. ಅಂದು ನಾಗ ದರ್ಶನದ ಪಾತ್ರಿಗಳ ಮೇಲೆ ನಿಜವಾಗಿಯೂ ನಾಗ ದೇವರೇ ಆಕರ್ಷಣೆಗೊಂಡದ್ದೇ ಆಗಿದ್ದರೆ, ದೇವರು ಖಂಡಿತಾ ಇಂತಹ ಪರಿಸರ ನಾಶಕ್ಕೆ ಅವಕಾಶ ಕೊಡುತ್ತಲೇ ಇರಲಿಲ್ಲ. ಆದರೂ ನಮಗೆ ಅಂದಿನ ನಮ್ಮ ಹಿರಿಯರು ಮೋಸ ಹೋದ ವಾಸ್ತವ ಇಂದಿಗೂ ಅರ್ಥವಾಗುತ್ತಿಲ್ಲ. ಅಂದಿನಂತೆ ಇಂದಿನ ದಿನಗಳಲ್ಲೂ ನಾವು, ಹಣ ಕೊಟ್ಟು ತಲೆ ಮೇಲೆ ಟೋಪಿ ಇಡಿಸಿಕೊಳ್ಳುತಿದ್ದೇವೆ. ನೆನಪಿರಲಿ. ನಮಗೆ ನಮ್ಮ ಮುಂದಿನ ತಲೆಮಾರು ಕೇಳುವ ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡ ಬೇಕಾದ ಅನಿವಾರ್ಯತೆಯೂ ಇದೆ. ಪರಿಸರವನ್ನು ಉಳಿಸಿದರೆ ಪರಿಸರ ನಮ್ಮನ್ನು ಉಳಿಸುತ್ತದೆ. ಇಲ್ಲದಿದ್ದರೆ ಈಗಿನಂತೆ ಕಾಂಕ್ರೀಟ್ ಕಾಡಿನೊಳಗೆ ಅವಿತುಕೊಂಡು ಪರಿಸರ ಸ್ರಷ್ಟಿಸುವ ಸಾಂಕ್ರಾಮಿಕ ರೋಗಗಳಿಗೆ ಆಹುತಿಯಾಗದೆ ನಮಗೆ ಬೇರೆ ದಾರಿಯಿಲ್ಲ. ಕಾಣದ ವಿಷ ಕ್ರಿಮಿಯನ್ನು ಸಂಹರಿಸುವ ದೇವರು ಬೇರೆಲ್ಲೋ ಇಲ್ಲ. ಆತ ನಮ್ಮ ನಡುವಿನ ಪ್ರಕೃತಿಯಲ್ಲೇ ಇದ್ದಾನೆ. ಆದರೆ ನಾವು ಮಾತ್ರ ಅವನಿಂದ ತುಂಬಾ ದೂರ ಸಾಗಿ ಬಂದಿದ್ದೇವೆ ಅಷ್ಟೇ.
✍🏼: ಹರೀಶ್ಚಂದ್ರ ಶೆಟ್ಟಿ, ಕೌಡೂರು