ಇದೊಂದು ವಿಚಿತ್ರ ತರ್ಕ. ವ್ಯಕ್ತಿಗಳ ವೈಯಕ್ತಿಕ ಮನೋಭಾವ ಕುಟುಂಬ ಸಂಘ ಸಂಸ್ಥೆ ಸಿದ್ದಾಂತಗಳೊಂದಿಗೆ ಹೇಗೆ ತಳುಕು ಹಾಕಿಕೊಂಡಿದೆ ಎಂಬುದನ್ನು ಗಮನಿಸಿದರೆ ನಮಗೆ ಅರಿವಾಗಬಹುದು.
ಸ್ವಂತಿಕೆ, ತನ್ನತನ, ಕ್ರಿಯಾಶೀಲತೆ ಹೆಚ್ಚು ಇರುವ ವ್ಯಕ್ತಿಗಳಲ್ಲಿ ಸಹಕಾರ ಮತ್ತು ಹೊಂದಾಣಿಕೆಯ ಕೊರತೆ ಇರುತ್ತದೆ. ಕುಟುಂಬದಿಂದ ದೇಶದವರೆಗೆ ಎಲ್ಲಾ ವಿಷಯಗಳಲ್ಲೂ ಒಂದಷ್ಟು ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಈ ಮನೋಭಾವದ ವ್ಯಕ್ತಿಗಳನ್ನು ಸೇರಿಸಿ ಸಂಸ್ಥೆ, ಸಂಘಟನೆ, ಚಳವಳಿ, ಹೋರಾಟ ರೂಪಿಸುವುದು ತುಂಬಾ ಕಷ್ಟ. ಅದು ವಿಫಲವಾಗುವ ಸಾಧ್ಯತೆಯೇ ಹೆಚ್ಚು. ಇವರು ಬಹುತೇಕ ಸದಾ ಅತೃಪ್ತ ಆತ್ಮಗಳು.
ಇದಕ್ಕೆ ವಿರುದ್ಧವಾಗಿ,
ಸ್ವಂತಿಕೆ, ತನ್ನತನ,ಕ್ರಿಯಾಶೀಲತೆ ಹೆಚ್ಚು ಇಲ್ಲದ ಜನರು ಒಳ್ಳೆಯ ಸಹಕಾರ ಮತ್ತು ಹೊಂದಾಣಿಕೆಯ ಮನೋಭಾವದವರಾಗಿರುತ್ತಾರೆ. ಹೆಚ್ಚು ಚರ್ಚೆ ವಿರೋಧಗಳಿಲ್ಲದೆ ಎಲ್ಲವನ್ನು ಒಪ್ಪುತ್ತಾರೆ. ಇವರು ಹೆಚ್ಚು ಧಾರ್ಮಿಕ, ಸಿದ್ದಾಂತದ, ಸಂಪ್ರದಾಯವಾದಿಗಳಾಗಿರುತ್ತಾರೆ. ಇವರ ಸಂಘಟನಾತ್ಮಕ ಚಟುವಟಿಕೆಗಳು ಹೆಚ್ಚು ಬಲಿಷ್ಠ ಮತ್ತು ಯಶಸ್ಸನ್ನು ಗಳಿಸುತ್ತವೆ.
ಕೌಟುಂಬಿಕ ಕಲಹಗಳ ಮೂಲ ಕಾರಣವೇ ತನ್ನ ತನದ ಹುಡುಕಾಟ ಮತ್ತು ಅಹಂ. ಇಲ್ಲಿಯೂ ಸ್ವಂತಿಕೆ ಇಲ್ಲದ ಕುಟುಂಬಗಳು ಹೆಚ್ಚು ಆತ್ಮೀಯವಾಗಿಯೂ, ಸ್ವತಂತ್ರ ಮನೋಭಾವದ ಕುಟುಂಬಗಳು ಸದಾ ಕಿರಿಕಿರಿಯನ್ನು ಅನುಭವಿಸುತ್ತವೆ. ಅದರ ಪರಿಣಾಮವೇ ಹೆಚ್ಚು ಹೆಚ್ಚು ವಿಘಟನೆಗಳು. ಹೊಂದಾಣಿಕೆ ತೀರಾ ಅಪರೂಪವಾಗುತ್ತಿದೆ.
ಸಾಮಾಜಿಕವಾಗಿಯೂ ಇದನ್ನು ಗುರುತಿಸಬಹುದು. ಸಂಘ ಪರಿವಾರ, ಕಮ್ಯೂನಿಸಂ ಸಿದ್ದಾಂತಗಳು , ಧಾರ್ಮಿಕ ಸಂಸ್ಥೆಗಳು, ಧರ್ಮಗಳು ಮುಂತಾದವುಗಳಲ್ಲಿ ಸ್ವತಂತ್ರ ಚಿಂತನೆಗೆ ಹೆಚ್ಚಿನ ಅವಕಾಶಗಳು ಇರುವುದಿಲ್ಲ. ಅವು ಸ್ಥಾಪಿತ ವಿಚಾರಗಳ ಮತ್ತು ಮೇಲಿನ ಆದೇಶದ ಪಾಲನೆಯನ್ನು ಮಾತ್ರ ಮಾಡುತ್ತವೆ ಅಥವಾ ಅದನ್ನು ಹೇರಲ್ಪಟ್ಟಿರುತ್ತದೆ. ಪ್ರಶ್ನಿಸುವ ಮನೋಭಾವ ಇಲ್ಲಿ ಬಹಳ ಕಡಿಮೆ. ಬಹುತೇಕ ಸೈನಿಕರಂತೆ ಮೇಲಿನ ಆದೇಶ ಪಾಲಿಸುತ್ತಾರೆ.
ಆದರೆ,
ಅಂಬೇಡ್ಕರ್ ವಾದಿಗಳು, ಬಸವ ಚಿಂತಕರು, ಪರಿಸರ ಪ್ರೇಮಿಗಳು, ಬುದ್ದಿ ಜೀವಿಗಳು ಎಂದು ಕರೆಯಲ್ಪಡುವವರಲ್ಲಿ ಈ ರೀತಿಯ ಆದೇಶ ಪಾಲನೆ ತುಂಬಾ ಕಷ್ಟ. ಇಲ್ಲಿ ಎಲ್ಲರೂ ಯೋಚಿಸಲು ಪ್ರಾರಂಭಿಸುತ್ತಾರೆ. ವಿಷಯಗಳಲ್ಲಿ ವಿಭಿನ್ನ ಆಯಾಮಗಳನ್ನು ಗುರುತಿಸಿ ಹೊಸ ಹೊಸ ರೂಪ ನೀಡುತ್ತಾರೆ. ಆಜ್ಞಾಪಾಲನೆಯನ್ನು ದಿಕ್ಕರಿಸುವುದೇ ನಮ್ಮ ಸ್ವಂತಿಕೆ ಎಂದು ಭಾವಿಸುತ್ತಾರೆ. ಸಮೂಹ ಪ್ರಜ್ಞೆಗಿಂತ ವಿಚಾರ ಮತ್ತು ತನ್ನ ವೈಯಕ್ತಿಕ ಅಸ್ತಿತ್ವದ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಅದರಿಂದಾಗಿಯೇ ಈ ಹೋರಾಟಗಳು ಹೆಚ್ಚು ಯಶಸ್ವಿಯಾಗಿಲ್ಲ. ಕೇವಲ ಅಕ್ಷರಗಳಲ್ಲಿ, ಭಾಷಣಗಳಲ್ಲಿ, ಕಲೆಗಳಲ್ಲಿ ಮಾತ್ರ ತೀಕ್ಷ್ಣವಾಗಿ ಕಂಡುಬರುತ್ತದೆ.
ಈ ವೈರುಧ್ಯದ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ಸಮನ್ವಯ ಸಾಧ್ಯವಾಗುತ್ತಿಲ್ಲ. ಇಬ್ಬರ ನಡುವಿನ ಅಂತರ ಸಹಜ ಭಿನ್ನಾಭಿಪ್ರಾಯ ಮೀರಿ ದ್ವೇಷದ ಕಡೆಗೆ ಸಾಗುತ್ತಿದೆ.
ಎಲ್ಲಾ ಅಪಸ್ವರಗಳ ನಡುವೆ ವಾಸ್ತವಿಕ ನೆಲೆಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಸ್ವಂತಿಕೆಯನ್ನು ಉಳಿಸಿಕೊಂಡು, ಕ್ರಿಯಾಶೀಲತೆ ಬೆಳೆಸಿಕೊಂಡು,
ಸ್ವತಂತ್ರ ಅನುಭವಿಸಿಕೊಂಡು ಸಹ ಸಹಕಾರ ಸಮನ್ವಯ ಸಾಧಿಸುವ ಗುಣಗಳನ್ನು ಕಲಿಯಬೇಕಿದೆ. ಇದು ತುಂಬಾ ತುಂಬಾ ಕಷ್ಟ. ಆದರೆ ಕುಟುಂಬ, ಸಂಘಟನೆ, ಸಮಾಜ, ದೇಶದ ಹಿತದೃಷ್ಟಿಯಿಂದ ಇದು ಅತ್ಯಗತ್ಯ. ಆ ನಿಟ್ಟಿನಲ್ಲಿ ಒಂದಷ್ಟು ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……