Spread the love

ಸಂತೋಷ ಮತ್ತು ನೆಮ್ಮದಿಯ ವಿಷಯದಲ್ಲಿ ಭಾರತ ಅತ್ಯಂತ ಕೆಳಮಟ್ಟದಲ್ಲಿದೆ……….

ವಿಶ್ವಸಂಸ್ಥೆ ಪ್ರಕಟಿಸಿರುವ ಅಧೀಕೃತ ವರದಿಯಲ್ಲಿ ಇದನ್ನು ಹೇಳಲಾಗಿದೆ…….

ಕೆಲವು ಮಾನದಂಡಗಳ ಆಧಾರದಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಶೋಧನೆ ಮಾಡಿ ಈ ವರದಿ ತಯಾರಿಸಲಾಗಿದೆ.

ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ ಭಾರತದ ‌ಸಾಮಾಜಿಕ ವ್ಯವಸ್ಥೆ ಮತ್ತು ಇಲ್ಲಿನ ಜನರ ಸದ್ಯದ ಮಾನಸಿಕ ಆರೋಗ್ಯವನ್ನು ಗಮನಿಸಿದಾಗ ಭಾರತದ ನೆಮ್ಮದಿಯ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂದು ಉದಾಹರಣೆ ಸಮೇತ ಖಚಿತಪಡಿಸಬಲ್ಲೆ.

ಅದರಲ್ಲೂ ಜಾಗತೀಕರಣದ ನಂತರ ಸರಿಸುಮಾರು 2೦೦೦ ಇಸವಿಯ ಮೇಲೆ ‌ಭಾರತದ ಜನರ ಸಂತೋಷ ಕಡಿಮೆಯಾಗುತ್ತಾ ಸಾಗಿದೆ. ಅತೃಪ್ತಿ ದುರಾಸೆ ಅಸಹನೆ ಅಸೂಯೆ ಆಕ್ರೋಶ ಮತ್ತು ಇದರಿಂದಾಗಿ ಕೌಟುಂಬಿಕ ಕಲಹ ಹಾಗು ಅನಾರೋಗ್ಯ ದಿನೇ ದಿನೇ ಹೆಚ್ಚಾಗುತ್ತಿದೆ.

ಮೊದಲನೆಯದಾಗಿ,
ಆಧುನಿಕ ಭಾರತೀಯರಲ್ಲಿ ಶೇಕಡಾ 5೦% ಕ್ಕೂ ಹೆಚ್ಚು ಜನ ಅಸಮಾಧಾನ ಹೊಂದಿರುವುದು ಜಾತಿಯ ತಾರತಮ್ಯದ ಕಾರಣಕ್ಕಾಗಿ. ದಲಿತರು ಮತ್ತು ಹಿಂದುಳಿದವರು ಮೇಲ್ಜಾತಿಯ ಜನ ಹುಟ್ಟಿನಿಂದ ಬರುವ ಜಾತಿಯ ಕಾರಣಕ್ಕೆ ನಮ್ಮನ್ನು ಕೀಳಾಗಿ ಕಾಣಲಾಗುತ್ತಿದೆ ಎಂಬ ಕೀಳರಿಮೆ ಹೊಂದಿದ್ದಾರೆ. ಕೆಲವರು ಇದನ್ನು ಒಪ್ಪುವುದಿಲ್ಲ. ಈಗ ಜಾತಿ ಪದ್ದತಿ ಇಲ್ಲವೇ ಇಲ್ಲ ಎನ್ನುತ್ತಾರೆ. ಆದರೆ ಭಾರತೀಯರ ರಕ್ತದಲ್ಲಿಯೇ ಅದು ಬೆರೆತು ಹೋಗಿದೆ. ಅಸಹನೆ ಮನಸ್ಸುಗಳಲ್ಲಿ ತಾಂಡವವಾಡುತ್ತಿದೆ. ಮೀಸಲಾತಿಯ ಪರ ಮತ್ತು ವಿರೋಧ ಬಣದ ಇಬ್ಬರೂ ಬಹಿರಂಗವಾಗಿ ಟೀಕೆ ಮಾಡುತ್ತಾರೆ. ಇದೇ ಕಾರಣಕ್ಕಾಗಿ ಮೇಲ್ವರ್ಗದವರು ಸಹ ಅತೃಪ್ತಿ ಹೊಂದಿದ್ದಾರೆ.

ಎರಡನೆಯದಾಗಿ,
ಧಾರ್ಮಿಕ ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ನಮ್ಮನ್ನು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳಂತೆ ನೋಡಲಾಗುತ್ತಿದೆ. ನಮ್ಮ ದೇಶಭಕ್ತಿಯನ್ನು ಅನುಮಾನಿಸಲಾಗುತ್ತಿದೆ. ಇದು ಆಗಾಗ ಗಲಭೆಗಳ ರೂಪದಲ್ಲಿ ಪ್ರಕಟವಾಗುತ್ತದೆ ಎಂಬ ಅಸಹನೆ ಹೊಂದಿದ್ದಾರೆ. ದೇಶದ ಜನಸಂಖ್ಯೆಯ ಸುಮಾರು 25/30 ಕೋಟಿಯಷ್ಟು ಅಲ್ಪಸಂಖ್ಯಾತ ಭಾರತೀಯ ಪ್ರಜೆಗಳಲ್ಲಿ ಈ ರೀತಿಯ ಅಭಿಪ್ರಾಯವಿದೆ.

ಮೂರನೆಯದಾಗಿ,
ಸುಮಾರು 100 ಕೋಟಿಯಷ್ಟಿರುವ ಬಹುಸಂಖ್ಯಾತ ಹಿಂದೂಗಳು, ಈ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಅತಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ‌. ಇದು ಹೀಗೇ ಮುಂದುವರೆದರೆ ಹಿಂದೂಗಳೇ ಅಲ್ಪಸಂಖ್ಯಾತರಾಗುವ ಸಾಧ್ಯತೆ ಇದೆ ‌. ಕ್ರಿಶ್ಚಿಯನ್ನರ ಮತಾಂತರ ಮತ್ತು ಮುಸ್ಲಿಮರ ಆಕ್ರಮಣ ಭವಿಷ್ಯದಲ್ಲಿ ಹಿಂದೂ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂದು ಅಸಹನೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಹುಸಂಖ್ಯಾತರೇ ಆತಂಕದಲ್ಲಿರುವ ವಿಶ್ವದ ಏಕೈಕ ದೇಶ ಭಾರತವೇ ಇರಬೇಕು.

ನಾಲ್ಕನೆಯದಾಗಿ,
ಸಂಪತ್ತಿನ ಅಸಮಾನ ಹಂಚಿಕೆಯಿಂದಾಗಿ ಬಡವ ಶ್ರೀಮಂತರ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿದೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾ, ಬಡವರು ಮತ್ತಷ್ಟು ಬಡವರಾಗುತ್ತಿರುವ ಈ ವ್ಯವಸ್ಥೆಯ ಬಗ್ಗೆ ಬಹಳಷ್ಟು ಜನ ಅಸಹಾಯಕತೆ ಮತ್ತು ತಾರತಮ್ಯದಿಂದ ಕುಪಿತರಾಗಿದ್ದಾರೆ. ಗುಡಿಸಲು ಮತ್ತು ಮಹಡಿಗಳ ನಡುವಿನ ಅಂತರ ತುಂಬಾ ದೊಡ್ಡದಿದೆ. ಕೆಳ ಮಧ್ಯಮ ವರ್ಗದವರು‌ ಶ್ರೀಮಂತರ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಐದನೆಯದಾಗಿ,
ಸುಶಿಕ್ಷಿತ ವರ್ಗ ರೈತರು ಮತ್ತು ಅನಕ್ಷರಸ್ಥರನ್ನು ತಿರಸ್ಕಾರದಿಂದ ನೋಡುವ, ಅವರ ಬಗ್ಗೆ ಲಘುವಾಗಿ ಮಾತನಾಡುವ, ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಮತ್ತು ಸೌಕರ್ಯಗಳನ್ನು ತಮಗಿರುವ ಬುದ್ದಿಯ ಬಲದಿಂದ ತಾವೇ ಉಪಯೋಗಿಸಿಕೊಳ್ಳುವ ಮನೋ ಭಾವದಿಂದಾಗಿ ರೈತಾಪಿ ವರ್ಗ ತುಂಬಾ ಬೇಸರಗೊಂಡಿದೆ. ಅನಿಶ್ಚಿತ ಕೃಷಿ ವಲಯದ ಏರಿಳಿತ ಮತ್ತು ಆಹಾರದ ಪ್ರಾಮುಖ್ಯತೆಯ ಹೊರತಾಗಿಯೂ ಆ ವರ್ಗವನ್ನು ಕೀಳಾಗಿ ಕಾಣುತ್ತಿರುವುದು ಅವರಲ್ಲಿ ತೀವ್ರ ಸ್ವರೂಪದ ನೋವನ್ನು ಉಂಟುಮಾಡಿದೆ. ತಮ್ಮ ಸಹಚರರ ಆತ್ಮಹತ್ಯೆಗಳು ಅವರಲ್ಲಿ ತೀವ್ರ ನೋವನ್ನು ಉಂಟು ಮಾಡಿದೆ.

ಆರನೆಯದಾಗಿ,
ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಿಂದ,
ಹಳ್ಳಿಯಿಂದ ದಿಲ್ಲಿಯವರೆಗೂ ಜಾಗೃತವಾದ ಮಹಿಳೆಯರ ಸಮಾನತೆ ಮತ್ತು ಸ್ವಾತಂತ್ರ್ಯದ ಅರಿವು, ಅವರಿಗೆ ಪುರುಷ ಸಮಾಜದ ನಿರಂತರ ಮತ್ತು ವಿಧ ವಿಧದ ಶೋಷಣೆಯನ್ನು ನೆನಪಿಸಿ ಅವರಲ್ಲಿ ಆಕ್ರೋಶ ಉಂಟು ಮಾಡಿದೆ. ಬೇರೆ ಬೇರೆ ರೂಪದಲ್ಲಿ ಅದು ನಮ್ಮ ಸಮಾಜದಲ್ಲಿ ಪ್ರತಿ ಕ್ಷಣ ವ್ಯಕ್ತವಾಗುತ್ತಿದೆ. ಲಿಂಗ ತಾರತಮ್ಯ ನಮ್ಮ ದೇಶದ ಬಹುದೊಡ್ಡ ಸಮಸ್ಯೆಯಾಗಿ ಪರಿವರ್ತನೆಯಾಗುತ್ತಿದೆ.

ಏಳನೆಯದಾಗಿ,
ಅನಾದಿಕಾಲದಿಂದಲೂ ಅಸ್ತಿತ್ವದಲ್ಲಿ ಇದ್ದ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳು ಕಣ್ಣ ಮುಂದೆಯೇ ಕುಸಿದು ಬೀಳುತ್ತಿರುವುದನ್ನು ಗಮನಿಸುತ್ತಿರುವ ಬಹುಸಂಖ್ಯೆಯ ಧರ್ಮ ನಿಷ್ಠ ವರ್ಗ ಯುವಜನರ ವರ್ತನೆಯ ಬಗ್ಗೆ ಅಸಹನೆ ಮತ್ತು ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದೆ.

ಎಂಟನೆಯದಾಗಿ,
ಬುದ್ದ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಲೋಹಿಯಾ ಮುಂತಾದವರ ಚಿಂತನೆಗಳಿಂದ ಪ್ರೇರಿತವಾದ ವರ್ಗ ಶತಶತಮಾನಗಳ ಶೋಷಣೆ ಮತ್ತು ದಬ್ಬಾಳಿಕೆಯನ್ನು ಅರಿತು ಧಾರ್ಮಿಕ ಅನುಯಾಯಿಗಳಿಗೆ ಸವಾಲೆಸೆಯುವ ಮೂಲಕ ತಮ್ಮ ಅಸಮಾಧಾನ ಮತ್ತು ಕೋಪ ಹೊರಹಾಕುತ್ತಿದೆ.

ಒಂಬತ್ತನೆಯಾದಾಗಿ,
ಆರೋಗ್ಯ ಶಿಕ್ಷಣ ನೀರು ಗಾಳಿ ಆಹಾರ ಸಂಬಂದ ಪ್ರೀತಿ ಎಲ್ಲವೂ ಅತಿ ಹೆಚ್ಚು ವಾಣಿಜ್ಯೀಕರಣವಾಗುತ್ತಿರುವುದನ್ನು ಕಂಡು ಮೌಲ್ಯಗಳನ್ನು ಪ್ರೀತಿಸುವ ಒಂದು ವರ್ಗ ಆಂತರ್ಯದಲ್ಲಿ ಮೌನವಾಗಿ ರೋದಿಸುತ್ತಿದೆ.

ಹತ್ತನೆಯದಾಗಿ,
ಈ ಎಲ್ಲಾ ಒತ್ತಡಗಳು ಕುಟುಂಬದ ಜೀವನದ ಮೇಲೆ ಅಪಾರ ಪ್ರಮಾಣದ ಒತ್ತಡ ಹೇರಿ ಒಟ್ಟು ಮನುಷ್ಯನ ಮಾನಸಿಕ ಸ್ಥಿಮಿತತೆಯನ್ನೇ ಹಾಳು ಮಾಡಿದೆ. ಇವು ಸಂತೋಷ ಮತ್ತು ನೆಮ್ಮದಿಯ ಮಟ್ಟವನ್ನು ಭಾರತದಲ್ಲಿ ಕುಸಿಯುವಂತೆ ಮಾಡಿದೆ.

ಇದಲ್ಲದೆ ಇನ್ನೂ ಹಲವಾರು ಕಾರಣಗಳಿಗಾಗಿ ಭಾರತೀಯ ಪ್ರಜೆಗಳು ಅತೃಪ್ತಿ ಅಸಮಾಧಾನ ಹೊಂದಿದ್ದಾರೆ. ಅದಕ್ಕಾಗಿಯೇ ನೆಮ್ಮದಿಯ ವಿಷಯದಲ್ಲಿ ಕುಸಿತ ಉಂಟಾಗುತ್ತಿರುವುದು.

ಈ ಪರಿಸ್ಥಿತಿ ವಿಶ್ವದ ಇತರ ದೇಶಗಳಲ್ಲಿಯೂ ಇದೆ. ಆದರೆ ಆಧ್ಯಾತ್ಮಿಕ ಚಿಂತನೆಯ ಮೃದು ಸ್ವಭಾವದ, ಮುಗ್ದ ಮನಸ್ಸಿನ ಬೃಹತ್ ವೈವಿಧ್ಯಮಯ ದೇಶ ಭಾರತದಲ್ಲಿ ಅಸಹನೆ ಅಸಮಾಧಾನ ತೀವ್ರ ರೂಪದಲ್ಲಿ ಏರಿ, ಅಭಿವೃದ್ಧಿ ಆತನ ನೆಮ್ಮದಿ ಮತ್ತು ಸಂತೋಷವನ್ನೇ ಕಿತ್ತುಕೊಳ್ಳುತ್ತಿದೆ ಎಂಬುದು ವಿಪರ್ಯಾಸ, ಎಚ್ಚರಿಕೆ ಮತ್ತು ಸವಾಲು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!