ನಾನು ನನ್ನ ಇದುವರೆಗಿನ ಜೀವನದಲ್ಲಿ, ನೂರಾರು ಪುಸ್ತಕಗಳನ್ನು ಓದಿದ್ದೇನೆ. ಓದಿದ ಹಲವು ಪುಸ್ತಕಗಳ ಹೆಸರೂ ಈಗ ನೆನಪಿಲ್ಲ. ಈ ರೀತಿಯ ಮರೆವಿಗೆ, ನನ್ನಲ್ಲಿರಬಹುದಾದ ಮರೆವು ಅಥವಾ ಕಡಿಮೆ ಇರಬಹುದಾದ ನೆನಪಿನ ಶಕ್ತಿ ಕಾರಣ ಇರಬಹುದಾದರೂ, ಮುಖ್ಯ ಕಾರಣವೆಂದರೆ, ಪುಸ್ತಕಗಳ ಒಳ ಹೂರಣದಲ್ಲಿರುವ ವಿಷಯ – ವಿಚಾರಗಳು ನನ್ನ ಮನಸ್ಸನ್ನು ಪರಿಣಾಮಕಾರಿಯಾಗಿ ತಟ್ಟದಿರುವುದೇ ಕಾರಣವೆನ್ನಬಹುದು ಅನಿಸುತ್ತದೆ.
ಅದರೆ, ಇನ್ನು ಕೆಲವು ಓದಿದ ಪುಸ್ತಕಗಳನ್ನು ಮತ್ತು ಆ ಪುಸ್ತಕಗಳನ್ನು ಬರೆದ ಲೇಖಕರ ಹೆಸರುಗಳನ್ನು ಮರೆಯಲು ಸಾಧ್ಯವಾಗುವುದೇ ಇಲ್ಲ. ಅಂಥ ಪುಸ್ತಕಗಳು, ಪುಸ್ತಕಗಳ ಒಳಗಡೆ ಬರೆಯಲಾದ ವಿಷಯ – ವಿಚಾರಗಳು ಆಗಾಗ ಮನಸ್ಸಿಗೆ ಬಂದು ಹೋಗುತ್ತಿರುತ್ತವೆ. ಹೀಗೆ ಮನಸ್ಸನ್ನು ಮುಟ್ಟಿದ, ತಟ್ಟಿದ, ಬಡಿದೆಬ್ಬಿಸಿದ, ಬದಲಾಯಿಸಿದ, ವ್ಯಕ್ತಿತ್ವವನ್ನು ರೂಪಿಸುವಲ್ಲಿ ತನ್ನದೇ ರೀತಿಯಲ್ಲಿ ಕೆಲಸ ಮಾಡಿದ, ಜ್ಞಾನವನ್ನು ವಿಸ್ತರಿಸುವಲ್ಲಿ ನೆರವಾದ ಇಂಥ ಪುಸ್ತಕಗಳನ್ನು ಮರೆಯುವುದಾದರೂ ಹೇಗೆ ? ಇಂಥ ಅತ್ಯುತ್ತಮ, ಅತ್ಯಮೂಲ್ಯ, ಅಪರೂಪದ ವಿಷಯ – ವಿಚಾರಗಳನ್ನು ನೀಡಿದ ಲೇಖಕರ ಮೇಲಿನ ನಮ್ಮ ಅಭಿಮಾನ, ಗೌರವ ಅಪಾರವಾದುದಾಗಿರುತ್ತದೆ. ಅದನ್ನಿಲ್ಲಿ ಹೀಗೆ ಅಕ್ಷರಗಳಲ್ಲಿ ಚಿತ್ರಿಸಲು ನನಗಂತೂ ಸಾಧ್ಯವಿಲ್ಲ. ಈ ವಿಷಯದಲ್ಲಿ ನಾನು ನಿಜಕ್ಕೂ ಅಸಮರ್ಥನೆ.
ನನ್ನ ಜ್ಞಾನದ ಕ್ಷಿತಿಜವನ್ನು ವೃದ್ಧಿಸಿದ ಲೇಖಕರಲ್ಲಿ ಒಬ್ಬರು, ಸ್ವಾಮೀ ಧರ್ಮ ತೀರ್ಥರು. ಇವರು ಬರೆದ “ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ”.
“ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ”ವನ್ನು ನಾನು ಮೊದಲು ಓದಿದ್ದು ದಶಕದ ಹಿಂದೆ. ಅಂದು, ಹಣ ಕೊಟ್ಟು ಖರೀದಿಸಿ ಓದಿದ ಈ ಪುಸ್ತಕ ಇಂದು ನನ್ನಲ್ಲಿಲ್ಲ. ಎರಡನೇ ಬಾರಿ ಇದೇ ಪುಸ್ತಕವನ್ನು ಕಳೆದ ವರ್ಷ ಓದಿದೆ. ಉಡುಪಿಯ ನನ್ನ ಆತ್ಮೀಯರೂ, ಹಿರಿಯರೂ, ಗೌರವಾನ್ವಿತರೂ ಆದ ಯು. ಆರ್. ಜಯವಂತರಲ್ಲಿ ಕೇಳಿ ಪಡೆದುಕೊಂಡು. ಜಯವಂತರು ಒಬ್ಬರು ಅದ್ಬುತ ಓದುಗರು ಮತ್ತು ಜ್ಞಾನದ ಸಾಗರವೇ ಆಗಿರುವವರು.
“ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸದಲ್ಲಿ ಏನಿದೆ, ಏನಿಲ್ಲ ? ಎಲ್ಲವೂ ಇದೆ. ಇತಿಹಾಸದ ಸತ್ಯಾನ್ವೇಷಿಯೊಬ್ಬನಿಗೆ ಈ ಪುಸ್ತಕ ಒಂದು ಆಕರ ಗ್ರಂಥ. ವೇದಕಾಲದಿಂದ ಆರಂಭಿಸಿ, ಸ್ವತಂತ್ರ ಭಾರತದ ಕಾಲ ಘಟ್ಟದ ವರೆಗಿನ ಭಾರತದ ಇತಿಹಾಸವನ್ನು ಸುಧೀರ್ಘವಾಗಿ ಅಧ್ಯಯನ ಮಾಡಿ ಬರೆಯಲಾದ ಕೃತಿ ಇದು. ಸುಳ್ಳಿನ ಚರಿತ್ರೆಗೆ ಪ್ರತಿಯಾಗಿ ಸತ್ಯದ ಚರಿತ್ರೆಯಾಗಿ ಬಂದು ಶೋಷಕರ ಸಾಮ್ರಾಜ್ಯಕ್ಕೆ ಮರೆಯಲಾಗದ ಹೊಡೆತ ಕೊಟ್ಟ ಕೃತಿಯಿದು.
ಈ ಪುಸ್ತಕ ಬರೆದ ಸ್ವಾಮೀ ಧರ್ಮ ತೀರ್ಥರು ಮೂಲತಹ ಕೇರಳದವರು. ತಿರುಚ್ಚಿಯ ಗುರುವಾಯೂರು ಚಾತ್ತನಾಟ್ಟ್ ತರವಾಡು ಮನೆಯವರಾದ ಇವರು, ಕರುಣಾಕರ ಮೆನನ್ ಎಂಬವರ ಮಗನಾಗಿ 1891ರಲ್ಲಿ ಜನಿಸಿದರು. ಇವರ ಮೊದಲ, ಅಂದರೆ ಇವರಿಗೆ ಮನೆಯವರು ಇಟ್ಟ ಹೆಸರು ಕೆ. ಪರಮೇಶ್ವರನ್ ಮೆನನ್.
ಅದ್ಯಾತ್ಮಿಕದಲ್ಲಿ ಬಾಲ್ಯದಲ್ಲಿಯೇ ಆಸಕ್ತರಾಗಿದ್ದ ಇವರು, ಮದ್ರಾಸ್ ನಲ್ಲಿ ಬಿ. ಎ ಪದವಿಯನ್ನೂ, ಮುಂಬಯಿಯಲ್ಲಿ ಕಾನೂನು ಪದವಿಯನ್ನೂ ಪಡೆದರು. ಕೆಲ ಕಾಲ ಕೊಚ್ಚಿ ಮಹಾರಾಜರ ಅರಮನೆಯ ಮೇಲ್ವಿಚಾರಕರಾಗಿದ್ದರು. ಮತ್ತೊಂದಷ್ಟು ಕಾಲ ನ್ಯಾಯವಾದಿಯಾಗಿಯೂ “ಸೇವೆ” ಸಲ್ಲಿಸಿದ್ದರು.
ಕ್ರಾಂತಿ ಯೋಗಿ ನಾರಾಯಣ ಗುರುಗಳ ವಿಚಾರಗಳಿಂದ ಪ್ರಭಾವಿತರಾದ ಪರಮೇಶ್ವರನ್ ಮೆನನ್ ಗುರುಗಳ ಶಿಷ್ಯರಾದರು, ಸನ್ಯಾಸ ಸ್ವೀಕರಿಸಿ, ಧೀಕ್ಷೆ ಪಡೆದು ಸ್ವಾಮೀ ಧರ್ಮ ತೀರ್ಥರಾದರು.
ಕೆಲ ವರ್ಷಗಳ ಕಾಲ ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಕ್ರಾಂತಿಕಾರಕ ಸಮಾಜ ಸುಧಾರಣೆಗಾಗಿಯೇ ಕೆಲಸ ಮಾಡುತ್ತಿದ್ದ “ಶ್ರೀ ನಾರಾಯಣ ಧರ್ಮ ಸಂಘಂ” ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಸ್ವಾಮೀ ಧರ್ಮ ತೀರ್ಥರು, ನಾರಾಯಣ ಗುರುಗಳ ಕಾರ್ಯಕ್ಷೇತ್ರವಾಗಿದ್ದ ಶಿವಗಿರಿಯಿಂದ ಪ್ರಕಟವಾಗುತ್ತಿದ್ದ “ಧರ್ಮ ಪತ್ರಿಕೆ” ಗೆ 30 ವರ್ಷಗಳ ಕಾಲ ಸಂಪಾದಕರಾಗಿದ್ದರು. ಮಾತ್ರವಲ್ಲ, “ಶ್ರೀ ನಾರಾಯಣ ಗುರುಕುಲಂ” ದಿಂದ ಪ್ರಕಟವಾಗುತ್ತಿದ್ದ “ವ್ಯಾಲ್ಯೂಸ್” ಎಂಬ ಇಂಗ್ಲೀಷ್ ಪತ್ರಿಕೆಯ ಸಂಪಾದಕರೂ ಆಗಿದ್ದವರು. ಇವುಗಳ ಜೊತೆಗೆ, ಶಿವಗಿರಿಗೆ ಸಂಬಂಧಿಸಿದ ಎಲ್ಲಾ ನ್ಯಾಯಾಲಯ ಸಂಬಂಧವಾದ ದಾವೆಗಳಿಗೂ ಸಂಸ್ಥೆಯಿಂದ ನಯಾ ಪೈಸೆಯನ್ನೂ ಪಡೆದುಕೊಳ್ಳದೆ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ ಮಹಾಮಾನವತಾವಾದಿ, ಸ್ವಾಮೀ ಧರ್ಮತೀರ್ಥರು.
ನಾರಾಯಣ ಗುರುಗಳ ತತ್ವ ಪ್ರಚಾರಕ್ಕಾಗಿ ದೇಶಾದ್ಯಂತ ಪರ್ಯಟನೆ ನಡೆಸಿದವರು ಸ್ವಾಮೀ ಧರ್ಮ ತೀರ್ಥರು. 1941 – 46ರ ಅವಧಿಯಲ್ಲಿ ಲಾಹೋರ್ ನ “ಹಿಂದೂ ಮಿಶನರಿ ಸೊಸೈಟಿ” ಯ ಅಧ್ಯಕ್ಷರಾಗಿದ್ದರು. ಪಂಜಾಬಿನಲ್ಲಿ ಹರ ಭಗವಾನ್ ರವರ ನೇತೃತ್ವದಲ್ಲಿ ನಡೆಯುತ್ತಿದ್ದ “ಜಾತಿ ವಿನಾಶ” ಚಳುವಳಿ ಅದ್ಯಾವುದೋ ಕಾರಣಕ್ಕೆ ಬಲಹೀನಗೊಂಡಾಗ, ಈ ಹೋರಾಟಕ್ಕೆ ಸೂಕ್ತ ಮಾರ್ಗದರ್ಶಕರಾಗಿ ಮತ್ತೆ ಜಾತಿ ವಿನಾಶ ಚಳುವಳಿಗೆ ದಿಕ್ಕು ದೆಸೆ ತೋರಿಸಿದವರು ಸ್ವಾಮೀ ಧರ್ಮ ತೀರ್ಥರು. ಇದೇ ಸಂದರ್ಭದಲ್ಲಿ ಇವರು ರಾಜಮಂದ್ರಿಯಲ್ಲಿದ್ದು ರಚಿಸಿದ ಕೃತಿಯೇ “the menace of hindu imperialism”. (“ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ”). ಇದೇ ಕಾಲದಲ್ಲಿ ಇವರ ಈ ಕ್ರಾಂತಿಕಾರಿ ಕೃತಿಯನ್ನು, “ಮನುಷ್ಯತ್ವ ರಹಿತ ಶೋಷಕ ಸಮುದಾಯ”ದ ಜನರು ಸತ್ಯ ಬರೆದರೆಂದ ಸಿಟ್ಟಿನಲ್ಲಿ, ಧ್ವೇಷದಿಂದ ಸುಟ್ಟು ಹಾಕಿದ ಘಟನೆಯೂ ನಡೆದಿತ್ತು.
“ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ” ಮೂಲ ಇಂಗ್ಲೀಷ್ ಕೃತಿ ಮೊತ್ತ ಮೊದಲು ಪ್ರಕಟವಾಗಿದ್ದು 1941ರಲ್ಲಿ ಲಾಹೋರ್ ನಲ್ಲಿ. 1946ರಲ್ಲಿ ಎರಡನೇ ಬಾರಿ ಮತ್ತು 1948ರಲ್ಲಿ ಮೂರನೆಯ ಮುದ್ರಣ ಕಂಡಿತು. 1969ರಲ್ಲಿ ತಿರುವನಂತಪುರದಲ್ಲಿ ನಾಲ್ಕನೇ ಆವೃತ್ತಿ ಪ್ರಕಟಗೊಂಡಿತು. ಮದ್ರಾಸ್ ನಲ್ಲಿ 1992ರಲ್ಲಿ ಐದನೆಯ ಆವೃತ್ತಿ ಪ್ರಕಟವಾಯಿತು. 1990ರಲ್ಲಿ ಈ ಅತ್ಯಮೂಲ್ಯ ಕೃತಿಯನ್ನು ಮೊದಲ ಬಾರಿಗೆ ಆಗ ಮೈಸೂರಿನ ಮಹಾರಾಜ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಕೆ. ಎಸ್. ಭಗವಾನ್ ಅವರು ಅನುವಾದಿಸಿದರು. ಮೈಸೂರಿನ ಮಹಿಮಾ ಪ್ರಕಾಶನ, ಭಗವಾನರ ಅನುವಾದಿತ ಕೃತಿಯನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆ. ಕನ್ನಡದಲ್ಲಿ ಈ ಕೃತಿ ಹಲವು ಮುದ್ರಣಗಳನ್ನು ಕಂಡಿರುವುದು ಕೃತಿಯ ಮಹತ್ವಕ್ಕೆ ಸಾಕ್ಷಿಯಾಗಿದೆ.
“prophet of peace” (ಶಾಂತಿಯ ಪ್ರವಾದಿ), “ಮಹಾನ್ ರಾಷ್ಟ್ರ ನಿರ್ಮಾತ” ಸಹಿತ ಇನ್ನೂ ಕೆಲವು ಅಮೂಲ್ಯ ಕೃತಿಗಳನ್ನು ನಾಡಿಗೆ ನೀಡಿದ ಸ್ವಾಮೀ ಧರ್ಮತೀರ್ಥರು, ಕೊನೆಗೆ ಕ್ರೈಸ್ತ ಮತಕ್ಕೆ ಮತಾಂತರಗೊಂಡು ಜೋನ್ ಧರ್ಮತೀರ್ಥರಾದರು. ಇವರು ನಾರಾಯಣ ಗುರುಗಳ ಮೇಲೆ ಬರೆದ ಅಪರೂಪದ ಇಂಗ್ಲೀಷ್ ಕೃತಿ “prophet of peace” ನ್ನು 1941ರಲ್ಲಿ ಮುಂಬಯಿಯ ಪೋರ್ಟ್ ಫ್ರಿ ನೆಟ್ ಹೈಸ್ಕೂಲಿನ ಕನ್ನಡ ಮತ್ತು ಸಂಸ್ಕೃತ ಅಧ್ಯಾಪಕರಾಗಿದ್ದ ಬಿ. ಪಿ. ಆಚಾರ್ಯ ಅವರು “ಶಾಂತಿಯ ಪ್ರವಾದಿ” ಎಂಬ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದು, ಮುಂಬಯಿಯ ಬಿಲ್ಲವರ ಎಸೋಸಿಯೇಶನ್ ಪ್ರಕಟಿಸಿದೆ.
ನನ್ನ ಮೆಚ್ಚಿದ ಕೃತಿಗಳಲ್ಲಿ “ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ” ಒಂದು. ಮೂಲದಿಂದ ಕನ್ನಡಕ್ಕೆ ಅನುವಾದಿಸಿ ಮಹದುಪಕಾರ ಮಾಡಿದ ಪ್ರೊ ಕೆ. ಎಸ್. ಭಗವಾನ್ ರವರನ್ನು ಅಭಿನಂದಿಸುತ್ತಲೇ, ಮೂಲ ಕೃತಿಯನ್ನು ದಿಟ್ಟತೆಯಿಂದಲೂ, ನಿರ್ಭೀತಿಯಿಂದಲೂ ಬರೆದ ನನ್ನ ಹೆಮ್ಮೆಯ, ಅಭಿಮಾನದ, ಗೌರವಾದರಗಳಿಗೂ, ಪ್ರೀತಿಗೂ ಪಾತ್ರರಾದ ಸ್ವಾಮೀ ಧರ್ಮ ತೀರ್ಥರು ಸಮಾಧಿಯಾದ ದಿನವಾದ ಜುಲೈ 18ರಂದು (ಸಮಾಧಿ ದಿನ: 18/07/1976) ವಿಶೇಷವಾಗಿ ಸ್ಮರಿಸುತ್ತೇನೆ.
~ ಶ್ರೀರಾಮ ದಿವಾಣ, ಉಡುಪಿ.
(ಮಾಹಿತಿ ಮೂಲ: “ಶ್ರೀ ನಾರಾಯಣ ಗುರು ವಿಜಯ ದರ್ಶನ” ಮತ್ತು “ಹಿಂದೂ ಸಾಮ್ರಾಜ್ಯಶಾಹಿಯ ಇತಿಹಾಸ”.)