Spread the love

ತಿರುವನಂತಪುರ: ಜುಲೈ 14(ಹಾಯ್ ಉಡುಪಿ ನ್ಯೂಸ್) ಕೇರಳದಲ್ಲಿ ಶಂಕಿತ ಮಂಕಿಪಾಕ್ಸ್ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ.

ವಿದೇಶದಿಂದ ಆಗಮಿಸಿದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಸೋಂಕಿನ ರೋಗಲಕ್ಷಣಗಳು ಪತ್ತೆಯಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಶಂಕಿತ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯ ಮಾದರಿಯನ್ನು ರಾಷ್ಟ್ರೀಯ ವೈರಾಣು ಸಂಸ್ಥೆಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಫಲಿತಾಂಶ ಬಂದ ಬಳಿಕವಷ್ಟೇ ರೋಗದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ರೋಗಿಯ ಕುರಿತಂತೆ ಹೆಚ್ಚಿನ ಮಾಹಿತಿ ನೀಡದ ವೀಣಾ ಜಾರ್ಜ್, ಆತ ವಿದೇಶದಲ್ಲಿ ಮಂಕಿ ಪಾಕ್ಸ್ ರೋಗಿಯ ಸಂಪರ್ಕಕ್ಕೆ ಬಂದಿರುವುದು ತಿಳಿದುಬಂದಿದೆ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಎಚ್‌ಒ) ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಝೂನೊಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಸಿಡುಬು ರೋಗಿಗಳಲ್ಲಿ ಹಿಂದೆ ಕಂಡುಬರುತ್ತಿದ್ದ ರೋಗಲಕ್ಷಣಗಳನ್ನು ಹೋಲುತ್ತದೆ. ಆದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರತೆ ಹೊಂದಿರುತ್ತದೆ ಎನ್ನಲಾಗಿದೆ.

error: No Copying!