ಶ್ರೀಲಂಕಾದ ಕ್ಷೋಭೆಗೆ ಕಾರಣಗಳನ್ನು ಹುಡುಕುವ ಸಮಯ ಇದಲ್ಲ. ಅದರ ಮರು ಸ್ಥಾಪನೆಯ ಮಾರ್ಗಗಳ ಹುಡುಕಾಟ ಅತ್ಯಂತ ಮಹತ್ವದ್ದು………
ಪರಿಸ್ಥಿತಿ ಕೈ ಮೀರಿದೆ ನಿಜ. ಆದರೆ ಅದೇ ಪರಿಸ್ಥಿತಿ ಮತ್ತೆ ನಿಧಾನವಾಗಿ ಚೇತರಿಕೆ ಕಾಣುತ್ತದೆ ಅದು ಸಹ ವಾಸ್ತವ. ಆದರೆ ಈ ನಡುವೆ ಆಗಬಹುದಾದ ದುರಂತಗಳನ್ನು ಕಡಿಮೆ ಮಾಡುವ ಪ್ರಯತ್ನ ಬಹಳ ಮುಖ್ಯ.
ಶ್ರೀಲಂಕಾ ಎಂಬ ದ್ವೀಪ ರಾಷ್ಟ್ರಕ್ಕೆ ತತ್‌ಕ್ಷಣವೇ ಒಂದು ರಾಷ್ಟ್ರೀಯ ಸರ್ಕಾರದ ಅವಶ್ಯಕತೆ ಇದೆ. ಬಹುಶಃ ಅಲ್ಲಿನ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷರು ಅಥವಾ ಆ ದೇಶದ ಅತ್ಯುತ್ತಮ ಆರ್ಥಿಕ ತಜ್ಞರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಬೇಕಿದೆ. ಏಕೆಂದರೆ ಶ್ರೀಲಂಕಾದ ಕುಸಿತಕ್ಕೆ ಮೂಲ ಆರ್ಥಿಕ ಕಾರಣ ನಂತರ ರಾಜಕೀಯ. ಇಡೀ ಮಂತ್ರಿ ಮಂಡಲ ಪುನರ್ ರಚಿಸಿ ಆಡಳಿತಾತ್ಮಕ ಅನುಭವಿಗಳನ್ನು ಪಕ್ಷಾತೀತವಾಗಿ ನೇಮಿಸಬೇಕು.
ರಾಷ್ಟ್ರದಲ್ಲಿ ಎಂದಿನಂತೆ ಆರ್ಥಿಕ ತುರ್ತುಸ್ಥಿತಿ ಅನಿವಾರ್ಯವಾಗಿ ಹೇರಲೇ ಬೇಕು. ಜೊತೆಗೆ ಉತ್ತಮ ಸಂವಹನ ಮತ್ತು ವಿದೇಶಾಂಗ ನೀತಿಯ ಅರಿವಿರುವ ವ್ಯಕ್ತಿಗೆ ವಿದೇಶಾಂಗ ಸಚಿವರನ್ನಾಗಿ ಮಾಡಿ ಎಷ್ಟು ಸಾಧ್ಯವೋ ಅಷ್ಟು ನೆರವನ್ನು ವಿದೇಶಗಳಿಂದ ಪಡೆಯಲು ಪ್ರಯತ್ನಿಸಬೇಕು.
ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸಿ ಮತ್ತೆ ದೇಶ ಕಟ್ಟಲು ಅಲ್ಲಿನ ಕ್ರೀಡಾ ಪಟುಗಳು, ಸಿನಿಮಾ ಸಂಗೀತ ಕಲಾವಿದರು, ಧಾರ್ಮಿಕ ಮುಖಂಡರುಗಳನ್ನು ಉಪಯೋಗಿಸಿಕೊಂಡು ರಾಷ್ಟ್ರೀಯತೆಯನ್ನು ಜಾಗೃತಗೊಳಿಸಬೇಕು.
ಪ್ರವಾಸೋದ್ಯಮ ಆಕರ್ಷಿಸಲು, ಭ್ರಷ್ಟಾಚಾರ ಕಡಿಮೆ ಮಾಡಲು ಅತ್ಯಂತ ಸರಳ ಮತ್ತು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು.
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅವರಲ್ಲಿ ಮನವಿ ಮಾಡಿಕೊಂಡು ಹೆಚ್ಚು ಹೆಚ್ಚು ಅಂತರಾಷ್ಟ್ರೀಯ ಕ್ರಿಕೆಟ್ ಆಡಿಸಬೇಕು. ಇದು ಪರೋಕ್ಷವಾಗಿ ಆರ್ಥಿಕ ಚೇತರಿಕೆಗೆ ಸ್ವಲ್ಪ ಸಹಾಯ ಮಾಡುತ್ತದೆ.
ದೇಶದ ಅವಶ್ಯಕ ವಸ್ತುಗಳ ರಫ್ತು ಹೆಚ್ಚಿಸಲು ಒಂದು ಹೊಸ ಇಲಾಖೆಯನ್ನೇ ಸ್ಥಾಪಿಸಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು.
ಔಷಧಿ ಮತ್ತು ಆಹಾರವನ್ನು ಸಾಧ್ಯವಾದಷ್ಟು ಭಾರತದಿಂದ ಪಡೆಯಲು ಪ್ರಯತ್ನಿಸಬೇಕು.
ಪೆಟ್ರೋಲ್ ಡೀಸೆಲ್ ಗಳನ್ನು ಅರಬ್ ದೇಶಗಳಿಂದ ಕಡಿಮೆ ಬೆಲೆಗೆ ಪಡೆಯಲು ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು.
ಬಹುಶಃ ಭಾರತದ ಆರ್ಥಿಕ ತಜ್ಞರ ಸಲಹೆ ಪಡೆಯುವುದರ ಜೊತೆಗೆ ಇಲ್ಲಿನ ದೊಡ್ಡ ಕಂಪನಿಗಳು ತಮ್ಮ ದೇಶದಲ್ಲಿ ಹೂಡಿಕೆ ಮಾಡಲು ದೊಡ್ಡ ಮಟ್ಟದ ಪ್ರಯತ್ನ ಮಾಡಬೇಕು ಮತ್ತು ಅವರಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಇದು ಉತ್ಪಾದನೆ ಹೆಚ್ಚಿಸಲು ಮತ್ತು ಉದ್ಯೋಗ ಸೃಷ್ಟಿಸಲು ಅವಕಾಶ ನೀಡುತ್ತದೆ.
ಭಾರತದ ಮನರಂಜನಾ ಕ್ಷೇತ್ರದ ಜನರನ್ನು ಹೆಚ್ಚು ಆಧ್ಯತೆ ಮೇಲೆ ಶ್ರೀಲಂಕಾಗೆ ಕರೆಸಿ ಅವರನ್ನು ದೇಶದ ವಿವಿಧ ಜಾಗಗಳಲ್ಲಿ ಕಾರ್ಯಕ್ರಮ ನೀಡಲು ಮನವಿ ಮಾಡಿಕೊಳ್ಳಬೇಕು. ಇದು ಆರ್ಥಿಕ ಮತ್ತು ಮಾನಸಿಕ ಚೇತರಿಕೆಗೆ ಅತ್ಯವಶ್ಯಕ.
ಕೃಷಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲು ಭಾರತದ ಸಹಾಯ ಪಡೆಯಬೇಕು.
ಹಾಗೆಂದು ಚೀನಾ ದೇಶವನ್ನು ನಿರ್ಲಕ್ಷಿಸ ಬೇಕಿಲ್ಲ. ಅದರ ಹಿತಾಸಕ್ತಿಗೂ ತೊಂದರೆ ಯಾಗದಂತೆ ಬ್ಯಾಲೆನ್ಸ್ ಮಾಡಬೇಕು. ಇದು ದೊಡ್ಡ ಸವಾಲು ನಿಜ. ಆದರೆ ಅನಿವಾರ್ಯ. ಅನಿವಾಸಿ ಶ್ರೀಲಂಕಾ ಪ್ರಜೆಗಳು ಮತ್ತು ಮುಖ್ಯವಾಗಿ ತಮಿಳುನಾಡಿನ ಜೊತೆ ಮಾನವೀಯ ಸಹಾಯಕ್ಕೆ ಮನವಿ ಮಾಡಬೇಕು.
ಮೀನುಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಮತ್ತು ಶ್ರೀಲಂಕಾದ ಕರಕುಶಲ ವಸ್ತುಗಳನ್ನು ಹೆಚ್ಚು ರಪ್ತು ಮಾಡಲು ಪ್ರಯತ್ನಿಸಬೇಕು.
ಅಂತರಾಷ್ಟ್ರೀಯ ನೆರವಿಗೆ ತಕ್ಷಣವೇ ಮನವಿ ಮಾಡಿಕೊಳ್ಳಬೇಕು ಮತ್ತು ಹೀಗೆ ಹರಿದು ಬರುವ ನೆರವನ್ನು ಅತ್ಯಂತ ದಕ್ಷವಾಗಿ ಉಪಯೋಗಿಸಿಕೊಳ್ಳಲು ಪ್ರಯತ್ನಿಸಬೇಕು.
ಇದನ್ನು ಸಮರೋಪಾದಿಯಲ್ಲಿ ಶ್ರೀಲಂಕಾ ಸರ್ಕಾರ ಮಾಡಿದರೆ ಆದಷ್ಟು ಬೇಗ ಮೊದಲಿನ ಸ್ಥಿತಿಗೆ ಬರುವ ಸಾಧ್ಯತೆ ಇರುತ್ತದೆ.
ಕಷ್ಟಗಳು ಮಾನವ ಸಹಜ ಗುಣಲಕ್ಷಣಗಳು. ಆದರೆ ಅದನ್ನು ಎದುರಿಸುವ ಸಮಾಜದ ನಾಗರಿಕ ಪ್ರಜ್ಞೆ ಬಹಳ ಮುಖ್ಯ. ಅದನ್ನು ಶ್ರೀಲಂಕಾ ಜನತೆ ತೋರಿಸಬೇಕು. ಈ ಸಮಯದಲ್ಲಿ ಭಾರತ ಸರ್ಕಾರ ಮತ್ತು ದಕ್ಷಿಣದ ರಾಜ್ಯಗಳು ಹಾಗೂ ಇಲ್ಲಿನ ಜನತೆ ಶ್ರೀಲಂಕಾದ ಜನರಿಗೆ ಸಹಾಯದ ಹಸ್ತ ಚಾಚಬೇಕು.
ಕೊರೋನಾ ನಂತರ ಅನೇಕ ದೇಶಗಳು ನಿಧಾನವಾಗಿ ಆಂತರಿಕ ಕ್ಷೋಭೆಗೆ ಒಳಗಾಗುತ್ತಿವೆ. ಭಾರತದ ಪ್ರಜೆಗಳಾದ ನಾವು ಅತ್ಯಂತ ಜಾಗರೂಕತೆಯಿಂದ ಮುನ್ನಡೆಯಬೇಕು. ಭಾರತದಲ್ಲಿ ಸಹ ಸಾಮಾಜಿಕ ಪ್ರಕ್ಷುಬ್ಧ ವಾತಾವರಣ ಪ್ರಾರಂಭಿಕ ಹಂತದಲ್ಲಿ ಇದೆ.
ಎಚ್ಚರ….. ಎಚ್ಚರ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……