Spread the love

ಜಪಾನ್ ದೇಶದ ಬಗ್ಗೆ ‌ಸ್ವಲ್ಪ ಮಾಹಿತಿ ಇರುವವರಿಗೆ ನಿನ್ನೆ ಅಲ್ಲಿನ ಮಾಜಿ ಪ್ರಧಾನಿ ಶಿಂಬೋ ಅಬೆಯವರ ಹತ್ಯೆ ಅತ್ಯಂತ ಆಶ್ಚರ್ಯ ಉಂಟುಮಾಡಿರುತ್ತದೆ.

ಬಹುಶಃ ಜಗತ್ತಿನ ಕೆಲವೇ‌‌ ಸುಸಂಸ್ಕೃತ ದೇಶಗಳಲ್ಲಿ ಜಪಾನ್ ಸಹ ಒಂದು. ಅಲ್ಲಿನ ಶ್ರಮ ಸಂಸ್ಕೃತಿ, ಪ್ರಾಮಾಣಿಕತೆ, ಕಷ್ಟ ಸಹಿಷ್ಣುತೆ, ಕಡಿಮೆ ಹಿಂಸೆ ಮತ್ತು ಭ್ರಷ್ಟಾಚಾರ, ಕಡಿಮೆ ಕೊಲೆ ದರೋಡೆಗಳು, ದೀರ್ಘಾಯುಷ್ಯ, ಸಂಶೋಧನಾ ಮನೋಭಾವ, ತಾಂತ್ರಿಕ ಪ್ರಗತಿ ಎಲ್ಲವೂ ಅನುಕರಣೀಯ.

ಎರಡನೇ ಮಹಾಯುದ್ಧದ ಸಮಯದಲ್ಲಿ ಹಿರೋಷಿಮಾ ನಾಗಸಾಕಿಯ ಅಣುಬಾಂಬಿನ ಆಕ್ರಮಣಕ್ಕೆ ಒಳಗಾಗಿ ಅನುಭವಿಸಿದ ಯಾತನೆ, ಹಿನ್ನಡೆ, ಸಾವು ನೋವು, ಅದರ ಪರಿಣಾಮ ವಿಶ್ವ ಇತಿಹಾಸದ ಕರಾಳ ದುರಂತಗಳಲ್ಲಿ ಒಂದು. ಜೊತೆಗೆ ಈಗಲೂ ಆಗಾಗ ಸಂಭವಿಸುವ ಪ್ರಾಕೃತಿಕ ವಿಕೋಪಗಳಾದ ಭೂಕಂಪ ಸುನಾಮಿಗಳು, ನೆರೆಯ ಬಲಿಷ್ಠ ಚೀನಾದ ತಂಟೆ ತಕರಾರುಗಳ ನಡುವೆ ಹೋರಾಡುತ್ತಾ ಜಗತ್ತಿನ ಸದೃಢ ಆರ್ಥಿಕತೆಯನ್ನು ಹೊಂದಿದೆ.

ಇಂತಹ ‌ದೇಶದಲ್ಲಿ ಇದು ಅತ್ಯಂತ ಅನಿರೀಕ್ಷಿತ ಮತ್ತು ಆಘಾತಕಾರಿ. ಇದು ಆ ದೇಶದ ಮೇಲೆ ದೀರ್ಘಕಾಲ ಕೆಟ್ಟ ಪರಿಣಾಮ ಬೀರುತ್ತದೆ.

ಒಂದು ಕುಟುಂಬವೇ ಆಗಲಿ, ಸಂಘ ಸಂಸ್ಥೆಗಳೇ‌ ಆಗಲಿ, ಒಂದು ದೇಶವೇ ಆಗಿರಲಿ ಅಲ್ಲಿ ಶಾಂತಿ ಭದ್ರತೆ ನೆಮ್ಮದಿ ನೆಲೆಸಿರುವಾಗ ಅದು ಸಹಜವಾಗಿ ಅಭಿವೃದ್ಧಿಯಾಗಿತ್ತಾ ಸಾಗುತ್ತದೆ. ಆದರೆ ಕಾರಣವೇನೇ ಇರಲಿ ಹಿಂಸೆ, ಅನುಮಾನ, ಅಸಮಾಧಾನ, ಅಭದ್ರತೆ ಕಾಡತೊಡಗಿದರೆ ಅದರ ಅವನತಿಯ ಬಾಗಿಲುಗಳು ತೆರೆಯಲ್ಪಡುತ್ತವೆ.

ಜಪಾನ್ ದೇಶ ಎಲ್ಲಾ ಎಡರು ತೊಡರುಗಳ ನಡುವೆಯೂ ಶಾಂತಿಯಿಂದ ದೇಶದ ಅಭಿವೃದ್ಧಿಯಲ್ಲಿ ತೊಡಗಿತ್ತು. ಅದರ ಆಂತರಿಕ ಭದ್ರತೆ, ವಿದೇಶಾಂಗ ವ್ಯವಹಾರ ಅತ್ಯುತ್ತಮವಾಗಿತ್ತು. ನಂಬಿಕೆಗೆ ಅರ್ಹವಾಗಿತ್ತು. ಒಳ್ಳೆಯ ಹೆಸರನ್ನು ಪಡೆದಿತ್ತು.

ಈಗ ಅದಕ್ಕೆ ಪೆಟ್ಟಾಗಿರುವುದಷ್ಟೇ ಅಲ್ಲದೇ ಆಂತರಿಕ ಭದ್ರತೆಯ ಹೊಣೆಗಾರಿಕೆ ಅದರ ಮೇಲೆ ಗದಾಪ್ರಹಾರ ಮಾಡಿದೆ. ಇನ್ನು ಮುಂದೆ ತನ್ನ ದೇಶದ ಒಳಗಡೆಯೇ ತನ್ನದೇ ಜನಗಳ ಮೇಲೆ ಅನುಮಾನದಿಂದ ಹೇರುವ ನಿರ್ಬಂಧಗಳು ಸ್ವಾಭಿಮಾನಿಗಳಿಗೆ ಹಿಂಸಾತ್ಮಕ ಅನುಭವ ನೀಡುತ್ತದೆ. ಕೆಲವೇ ದುಷ್ಪರಿಗಾಗಿ ಇಡೀ ದೇಶದ ಜನರನ್ನು ತಪಾಸಣೆಗೆ ಒಳಪಡಿಸುವುದು ಅನಿವಾರ್ಯ ಅನ್ಯಾಯ.

ಅಮೆರಿಕ ಚೀನಾ ಭಾರತ ಪಾಕಿಸ್ತಾನ ಬ್ರೆಜಿಲ್ ಫ್ರಾನ್ಸ್ ಅರಬ್ ಒಕ್ಕೂಟ ಆಫ್ರಿಕಾ ಮುಂತಾದ ದೇಶಗಳಲ್ಲಿ ಇದು ಅತ್ಯಂತ ಸಹಜ ಪ್ರಕ್ರಿಯೆಯಾಗಿದೆ. ಜನರು ಯಾವುದೇ ಭಾವನೆಗಳಿಗೆ ಒಳಗಾಗದೆ ತಪಾಸಣೆಗೆ ಒಳಪಡುತ್ತಾರೆ. ಇದು ತಮ್ಮ ಅನಿವಾರ್ಯ ಕರ್ತವ್ಯ ಎಂದೇ ಭಾವಿಸುತ್ತಾರೆ.

ನಮ್ಮ ದೇಶದಲ್ಲಿ ಅನೇಕ ಖಾಸಗಿ ಕಂಪನಿಗಳು, ಕೈಗಾರಿಕೆಗಳು, ವ್ಯಾಪಾರ ಸ್ಥಳಗಳಲ್ಲಿ ದಿನದ ಕೆಲಸ ಪ್ರಾರಂಭ ಮತ್ತು ಮುಕ್ತಾಯವಾದಾಗ ಪ್ರವೇಶ ದ್ವಾರದಲ್ಲಿ ಕೇವಲ ಭದ್ರತಾ ತಪಾಸಣೆ ಮಾತ್ರವಲ್ಲ ವಸ್ತು ಕಳ್ಳತನದ ತಪಾಸಣೆ ಸಹ ಮಾಡುತ್ತಾರೆ. ಅಂದರೆ ಕಳ್ಳರಿರಬಹುದು ಎಂಬ ಅನುಮಾನ ಸದಾ ಕಾಡುತ್ತಿರುತ್ತದೆ. ಚಿನ್ನ ಬೆಳ್ಳಿ ಅಂಗಡಿ, ಗಾರ್ಮೆಂಟ್ಸ್, ಶಾಪಿಂಗ್ ಮಾಲ್ಗಳಲ್ಲಿ ಇದು ಹೆಚ್ಚು.

ಇದಕ್ಕಾಗಿ ಒಂದು ದೇಶ ಸಾಕಷ್ಟು ಹಣ ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಬೇಕು. ಆ ಒತ್ತಡಕ್ಕೆ ಈಗ ಜಪಾನ್ ಬೀಳುತ್ತದೆ. ಆಂತರಿಕ ಭದ್ರತಾ ಕ್ರಮಗಳು ಹೆಚ್ಚಾದಷ್ಟೂ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತದೆ. ಏಕೆಂದರೆ ಕೊಲೆಯಾಗಿರುವುದು‌ ದೇಶವನ್ನು ದೀರ್ಘಕಾಲ ಆಡಳಿತ ನಡೆಸಿದ ಮಾಜಿ ಪ್ರಧಾನಿ.

ಆದ್ದರಿಂದಲೇ ‌ಸಾಕಷ್ಟು ಸಲ ತಜ್ಞರು ಅಭಿಪ್ರಾಯ ಪಡುವುದು ಒಂದು ದೇಶದಲ್ಲಿ ಕಾರಣಗಳು ಏನೇ ಇರಲಿ ಹಿಂಸೆಗೆ, ಗಲಭೆಗಳಿಗೆ, ಆಂತರಿಕ ಸಂಘರ್ಷಗಳಿಗೆ ಆಸ್ಪದ ಕೊಡಬಾರದು. ಅದು ಭಸ್ಮಾಸುರನಂತೆ ತನ್ನನ್ನೇ ನಾಶ ಪಡಿಸುತ್ತದೆ.

ಜಪಾನ್ ಈ ಘಟನೆಯನ್ನು ಸಹ ನಿಭಾಯಿಸಿ ಮತ್ತೆ ಚೇತರಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಆದರೆ ಕೆಟ್ಟ ಪರಿಣಾಮಗಳು ಕಪ್ಪು ಕಪ್ಪು ಚುಕ್ಕೆಗಳಾಗಿ ಕಲೆಯಾಗಿ ಉಳಿದುಕೊಂಡು ಬಿಡುತ್ತದೆ. ಭಾರತದಲ್ಲಿ ಈ‌ ಕಪ್ಪು ಕಲೆಗಳು ದೊಡ್ಡದಾಗಿ ರಂಧ್ರಗಳು ಉಂಟಾಗಿವೆ. ದಯವಿಟ್ಟು ಜಾಗೃತ ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ.

ನಮಗೆ ದೊರೆತ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಿದೆ. ದೂರದ ಘಟನೆಗಳು ನಮಗೆ ಎಚ್ಚರಿಕೆಯ ಪಾಠವಾಗಬೇಕು.‌ ಅದನ್ನು ಅರ್ಥಮಾಡಿಕೊಳ್ಳದಿದ್ದರೆ ಅದರ ಪರಿಣಾಮ ನಾವು ಅನುಭವಿಸಲೇ ಬೇಕು. ದಯವಿಟ್ಟು ತಾಳ್ಮೆಯಿಂದ ಯೋಚಿಸಿ……

ಶಿಂಬೋ ಅಬೆಯವರಿಗೆ ಹೃದಯ ಪೂರ್ವಕ ಶ್ರದ್ಧಾಂಜಲಿ ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068……

error: No Copying!