ಪ್ರೀತಿ ಮಾತ್ರವೇ ಬದುಕಿಸಬಲ್ಲದು ನನ್ನನು – ನಿನ್ನನು ಈ ಪ್ರಪಂಚವನ್ನು….!
ಧರ್ಮವು ಎಲ್ಲರನ್ನೂ ಎತ್ತಿ ಹಿಡಿಯಬೇಕೆನ್ನುತ್ತದೆ. ಅದು ಯಾರನ್ನೂ ಕೆಳಗೆ ಹಾಕಬೇಕೆನ್ನುವುದಿಲ್ಲ. ಅದು ಎಲ್ಲ ಜೀವಗಳನ್ನು ಪ್ರೀತಿಸಬೇಕೆಂದು ಹೇಳುತ್ತದೆ.
ತಾನು ಸುಖದಿಂದ ಇರಬೇಕೆನ್ನುವ ಮನುಷ್ಯನು ಇನ್ನೊಬ್ಬರನ್ನು ಸುಖದಿಂದ ಇರಿಸಬೇಕು. ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ಮನುಷ್ಯನು ಆ ಗುರಿ ಸಾಧನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.
ನಿಜವಾದ ಧರ್ಮವು ಮನಸ್ಸಿಗೆ ಪ್ರಸನ್ನತೆಯನ್ನು ತಂದುಕೊಡುತ್ತದೆ. ಅದು ಮನುಷ್ಯನನ್ನು ಶ್ರೇಷ್ಠತೆಗೆ ಕೊಂಡಯುತ್ತದೆ, ಪಾಳು ಕೊಳ್ಳಕ್ಕೆ ತಳ್ಳುವುದಿಲ್ಲ.
ಮನುಷ್ಯನು ಮಂದಿರಕ್ಕೆ ಮಸೀದಿಗೆ ಗುರುದ್ವಾರಕ್ಕೆ ಇಲ್ಲವೇ ಈಗರ್ಜಿಗೆ ಹೋದಾಗ ಏನು ಮಾಡುತ್ತಾನೆನ್ನುವುದಲ್ಲ. ಆದರೆ, ಅವನು ಅವುಗಳ ಹೊರಗೆ ಇದ್ದಾಗ ಏನು ಮಾಡುತ್ತಾನೆ ಎನ್ನುವುದು ಮುಖ್ಯ. ಅವನು ಪ್ರಾರ್ಥನಾ ಮಂದಿರಕ್ಕೆ ಹೋದಾಗ ಒಳ್ಳೆಯವನಾಗಿ ಇದ್ದೇ ಇರುತ್ತಾನೆ. ಆದರೆ ಅವನು, ತನ್ನ ಪ್ರಾರ್ಥನಾ ಮಂದಿರದ ಹೊರಗೆ ಹೇಗೆ ನಡೆದುಕೊಳ್ಳುತ್ತಾನೆ ಎಂಬುವುದು ಮುಖ್ಯವಾದದ್ದು ಮಹತ್ವವಾದದ್ದು.
ಧರ್ಮ ಯಾವುದೇ ಇದ್ದರೂ ಅದು ಮನುಷ್ಯನನ್ನು ಉತ್ತಮನನ್ನಾಗಿ ಮಾಡಬೇಕು.
ಧರ್ಮದ ಬಗೆಗೆ ತಮ್ಮ ನಿಷ್ಠೆ ಇದೆಯೆಂದು ಹೇಳಿಕೊಂಡು ಜನರು ಬರೆಯುತ್ತಾರೆ, ವಾದ ಮಾಡುತ್ತಾರೆ, ಕಲಹ ಮಾಡುತ್ತಾರೆ, ಹೋರಾಟ ಮಾಡುತ್ತಾರೆ, ಅದಕ್ಕಾಗಿ ಸತ್ತಿದ್ದಾರೆ. ಆದರೆ ಧರ್ಮ ಕ್ಕೋಸ್ಕರ ಬದುಕಿರುವ ಜನರು ಮಾತ್ರ ಕಡಿಮೆ ಇದ್ದಾರೆ.
ಮನುಷ್ಯನು ಆಕಾಶದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲಿತಿದ್ದಾನೆ. ನೀರಿನಲ್ಲಿ ಮೀನಿನಂತೆ ಈಸುವುದನ್ನು ಕಲಿತಿದ್ದಾನೆ ಆದರೆ ಭೂಮಿಯ ಮೇಲೆ ಮನುಷ್ಯನಂತೆ ಬದುಕುವುದನ್ನು ಮಾತ್ರ ಕಲಿತಿಲ್ಲ.
ಯಾವ ಧರ್ಮವು ಮನುಷ್ಯನು ಕೆಟ್ಟವನಾಗಿರಬೇಕು, ಕೆಟ್ಟದ್ದನ್ನು ಮಾಡಬೇಕು ಎಂದು ಹೇಳುವುದಿಲ್ಲ. ಮನುಷ್ಯರು ಒಳ್ಳೆಯವರಾಗಿದ್ದರೆ ಸಾಲದು, ಒಳ್ಳೆಯದನ್ನು ಮಾಡಬೇಕು. ಧರ್ಮದಂತೆ ನಿಜವಾಗಿಯೂ ನಡೆದುಕೊಳ್ಳುವ ಮನುಷ್ಯನ ಧರ್ಮ ಯಾವುದೇ ಇದ್ದರೂ ಆ ಮನುಷ್ಯರು ಸಮಾಜದ ಬಹು ಅಮೂಲ್ಯ ಆಸ್ತಿ ಎನಿಸುತ್ತಾನೆ.
ಧರ್ಮವು ಮನುಷ್ಯನಲ್ಲಿ ಜೀವನದ ಬಗೆಗೆ ಶ್ರದ್ದೆಯನ್ನು ನಿರ್ಮಿಸಬೇಕು. ಜನರನ್ನು ಜನರೆಂದು ಮೆಚ್ಚಿಕೊಳ್ಳುವ ಮನೋಧರ್ಮವನ್ನು ಮೂಡಿಸಬೇಕು. ಧರ್ಮದ ಶ್ರೇಷ್ಠತೆಯು, ಮನುಷ್ಯರಲ್ಲಿ ಶ್ರೇಷ್ಠತೆಯನ್ನು ತರುವುದೇ ಆಗಿದೆ. ಮನುಷ್ಯರು ಧರ್ಮದಿಂದ ಬದುಕಬೇಕು. ಇನ್ನೊಬ್ಬರನ್ನು ಬದುಕಿಸಬೇಕು.
- ಮೈತ್ರಿರೇಣುಕಾ ಸಿಂಗೆ