Spread the love

(ಕವನ)

”””’””””””””””””””””””””””””””
ಅವನು ಹೆಂಡತಿಯನ್ನು ಬಿಟ್ಟು ಹೋದವನು
ಪ್ರೀತಿಸುವ ಒಂದು ಹೆಣ್ಣು ಹೃದಯವನ್ನು ಕೂಡಾ ಗೆಲ್ಲದಾದವನು!
ಹುಟ್ಟಿಸಿ ಹೆತ್ತು ಹೊತ್ತ ಅಮ್ಮನನ್ನೂ ಬಿಟ್ಟು ಹೋದ ಇವನಿಗೆ
ಹೆಣ್ಣಿನ ಒಲುಮೆ ದಕ್ಕುವುದಿನ್ನೆಲ್ಲಿ?!

ಅವನು ಹೆಂಡತಿಯನ್ನು ಬಿಟ್ಟು ಹೋದವನು
ಪ್ರೀತಿಸುವ ಒಂದು ಹೆಣ್ಣು ಹೃದಯವನ್ನು ಕೂಡಾ ಗೆಲ್ಲದಾದವನು!
ಹುಟ್ಟಿಸಿ ಹೆತ್ತು ಹೊತ್ತ ಅಮ್ಮನನ್ನೂ ಬಿಟ್ಟು ಹೋದ ಇವನಿಗೆ
ಹೆಣ್ಣಿನ ಒಲುಮೆ ದಕ್ಕುವುದಿನ್ನೆಲ್ಲಿ?!

ಅವನು ಒಡಹುಟ್ಟಿದ ಅಣ್ಣತಮ್ಮ ಅಕ್ಕತಂಗಿ ಯಾರೆಂದು ಕಣ್ಣೆತ್ತಿಯೂ ನೋಡದವನು,
ಸರೀಕರನ್ನು ತನ್ನವರೆಂದು
ಭಾವಿಸುವ ಕಣ್ಣಿ
ಲ್ಲದವನು,
ಇವನ ನೋವಿಗೆ ಮಿಡಿವ ಹೃದಯ ಸಿಕ್ಕುವುದಿನ್ನೆಲ್ಲಿ?

ಅವನು ತನ್ನ ನೆರಳಾಸರೆಗೆ ಮನೆಯನ್ನು ಕಟ್ಟದೆ ಹೋದವನು,
ಬೀದಿಯೊಳಾಡುವ ನೆರೆಯ ಮಗುವನೂ
ತನ್ನದೇ ಎದೆ ಮೇಲೆ ಚಿಗುರಿದ
ಒಲವಿನ ಬಳ್ಳಿಯಂತೆ ಎದೆಗೊತ್ತಿ
ಓಲಾಡಿಸಿ ಮುದ್ದಿಸಿದ
ತನ್ನಮ್ಮನ ಬೆವರ ಗಂಧವ ಮೂಸಲಾರದೆ
ವಾಕರಿಸಿ ವಾಂತಿ ಮಾಡಿಕೊಂಡವನು,
ಇವನ ನೆತ್ತಿಯ ಬಂಪಿಗೆ ಕೈಎಣ್ಣೆ ಹಚ್ಚುವ ಅಜ್ಜಿಯೊಬ್ಬಳು ಸಿಗುವಳಿನ್ನೆಲ್ಲಿ?

ಅವನು ಅನ್ಯ ಧರ್ಮೀಯರನ್ನು ಶಂಕಿಸಿ ಅವರ ಮೈಮೇಲಿನ ಬಟ್ಟೆಗೂ ಬೆಂಕಿ ಹಚ್ಚಿ ಮನೆ ಬಾಗಿಲು ಕಿಟಕಿಗೆ ಕಲ್ಲೆಸೆದವನು, ಇವನು
ನೀರಡಿಸಿದಾಗ
ಮನೆಯೊಳಗಿದ್ದ ಪುಣ್ಯಾತ್ಮರ ಹೆಂಗೂಸುಗಳು ಕದ ತೆರೆದು ಒಳ ಕರೆದು
ಒಳಲೆಯಷ್ಟು ಕುಡಿನೀರು ಕೊಡಲು ಪ್ರೀತಿಯ ಒರತೆ ಕಣ್ದೆರೆಯುವುದಿನ್ನೆಲ್ಲಿ?
ಹೆಣ್ಣುಮಕ್ಕಳ ಕಣ್ಣೀರನ್ನು ಕುಡಿಯುವುದಷ್ಟೇ ಇವನಿಗೆ ಬಲು ಇಷ್ಟವಂತೆ!

ಅವನು ಶಾಲೆ ಕಾಲೇಜಿನ ಮೆಟ್ಟಿಲನ್ನು ಮುಟ್ಟದೆ ಪುಸ್ತಕ ಹರಿದೆಸೆದು
ಸಿಲೋಟು ಒಡೆದು ಪುಡಿಗುಟ್ಟಿ ಶಾಲೆಯ ದಾರಿಯಿಂದ
ದೆಸೆಗೆಟ್ಟು ಹಿಂದಕ್ಕೆ ಓಡಿ ಬಂದವನು,
ಜ್ಞಾನದ ಗುಡಿಯ ದಾರಿಯೂ ಕಾಣದೆ ಗಾವಿಲನಾದ!
ಮೇಷ್ಟ್ರುಗಳು ವಿಚಾರವನ್ನು ಹಂಚಲು ಹಿಂದೇಟು ಹಾಕುತ್ತಾರೆ
ಆಚಾರಗೆಟ್ಟ ಇವನಿಗೆ
ಅಕ್ಷರದ ಹಸಿವೆ ಅನ್ನದಷ್ಟೇ ಮಿಗಿಲೆಂದು
ಅರಿವಾಗುವುದಿನ್ನೆಲ್ಲಿ?

ಅವನು ಹಾದಿಬೀದಿಯ ಜನರ ಟೀಕೆಗಳ ಸಹಿಸದೆ ಟೀಕಿಸಿದವರ ವಿರುದ್ಧ ದಂಡುದಾಳು ಕಟ್ಟಿಕೊಂಡು ಎರಗಿದವನು,
ಅವರೂ ತನ್ನಂತೆಯೇ
ಮನುಷ್ಯರೆಂಬುದ ತಿಳಿಯದೇ ಜೀವಗಳನ್ನು
ಹುರಿದು ಮುಕ್ಕಿದವನು
ಇವನು ಸುಳಿಯಲ್ಲಿ ಮುಳುಗುವಾಗ
ಈಜಿ ದಡ ಸೇರಿಸುವ ಈಜುಗಾರ ಬರುವನೆಲ್ಲಿಂದ?

ಅವನು ಒಡಗೂಡಿ ಆಟವಾಡುತ್ತಾ
ಸನಿಹದಲ್ಲಿ ಬೆಳೆದ ಗೆಳೆಯ ಗೆಳತಿ ಯಾರೊಬ್ಬರೂ ಸಾಕ್ಷಿಯಿಲ್ಲದವನು,
ದುಡ್ಡು ದುಗ್ಗಾಣಿ ಪಟ್ಟೆಪೀತಾಂಬರ ಮಣ್ಣುಮಸಿ ಸಂಪಾದಿಸಲು
ನಿಂತ ನೆಲದ ಗುರುತು ಅರಿಯದೆ
ಹೊರಟ ಇವನಿಗೆ
ಗೆಳೆತನದ ತಂಪು ಸಿಕ್ಕುವುದಿನ್ನೆಲ್ಲಿ!

ಅವನು ಗೋಕಟ್ಟೆ ಹಳ್ಳಕೊಳ್ಳಗಳಲ್ಲಿ
ಈಜಲು ಹೋದವನಲ್ಲ,
ದನಕರು ಕುರಿಮಂದೆ ಬೆಕ್ಕು ನಾಯನ್ನೂ ಸಾಕಿ ಸಲಹದವನಲ್ಲ,
ನೆಲದ ಬುರುದೆ ಮೈಗೆ ಹತ್ತದ
ಇವನ ಮೈ ದುರ್ಗಂಧ ರಾಚುತ್ತಿದೆ
ಆಕ್ವೇರಿಯಂನಲ್ಲಿದ್ದ ಮೀನನ್ನು ಕೂಡಾ ಬಿಡದೆ ಕೊಂದು ತಿಂದವನು ಸಮುದ್ರಕ್ಕೂ ಡೈನಮೈಟ್ ಇಕ್ಕಿ ನಕ್ಕವನು,
ತನ್ನನ್ನು ತಾನೇ ಸ್ಫೋಟಿಸಿಕೊಳ್ಳುತ್ತಿರಲು, ಇವನನ್ನು ರಕ್ಷಿಸಿ ಸಲಹುವ ಧಾತಾರ ಬರುವನೆಲ್ಲಿಂದ?

ಅವನು ಜೀವದ ಹಂಗು ತೊರೆದು ಶತೃಗಳ ವಿರುದ್ಧ ರಣರಂಗದಲ್ಲಿ ಕಾಯಲಾರದೆ ಓಡಿ ಬಂದು ಹೇಡಿ ಅನ್ನಿಸಿಕೊಂಡವನು
ಕ್ಷೇಮವಾಗಿರುವ ಜನರ ಕಂಡು ಸೈರಿಸದೆ
ಊರಿಗೆ ಕೊಳ್ಳಿ ಇಟ್ಟವನು
ತನ್ನ ಕಿಚ್ಚಿನಿಂದ ತಾನೇ ದಹಿಸಿಕೊಳ್ಳುತ್ತಿರಲು, ಇವನನ್ನು
ಕಾಪಾಡಲು ಉದಕವಿನ್ನೆಲ್ಲಿ?

~~~ಡಾ.ವಡ್ಡಗೆರೆ ನಾಗರಾಜಯ್ಯ

error: No Copying!