ಬೆಂಗಳೂರು: ಜೂನ್ ೨೨(ಹಾಯ್ ಉಡುಪಿ ನ್ಯೂಸ್) ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾಜಿ ಪ್ರಧಾನಿ ದೇವೇಗೌಡರು ಸರಕಾರಕ್ಕೆ ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಹೇಳಿದ್ದಾರೆ.
ಪಠ್ಯ ಪುಸ್ತಕ ಪರಿಷ್ಕರಣೆ ವಾಪಸ್ ಗೆ ಆಗ್ರಹಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದು,ಈ ಕುರಿತು ಆರ್ ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಾಜಿ ಪ್ರಧಾನಿ ದೇವೇಗೌಡರು ಬರೆದಿರುವ ಪತ್ರದ ವಿವರಗಳ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇವೆ. ಮಾಜಿ ಪ್ರಧಾನಿಗಳು ನಮಗೆಲ್ಲರಿಗೂ ಹಿರಿಯರು. ಅವರು ಪಠ್ಯ ಕ್ರಮದ ಬಗ್ಗೆ ಪತ್ರ ಬರೆದಿದ್ದಾರೆ. ನಾನು ನಾಳೆ ಶಿಕ್ಷಣ ಇಲಾಖೆ ಮುಖ್ಯಸ್ಥರ ಜತೆ ಚರ್ಚಿಸುತ್ತೇನೆ ಎಂದರು. ದೇವೇಗೌಡರು ಬರೆದಿರುವ ಪತ್ರದ ಸಾರವನ್ನು ಸಂಪೂರ್ಣವಾಗಿ ಅವಲೋಕಿಸುತ್ತೇವೆ. ಅವರು ಏನೆಲ್ಲ ಸಲಹೆ ಕೊಟ್ಟಿದ್ದಾರೋ ಅವುಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಏನೆಲ್ಲ ಬದಲಾವಣೆ ಮಾಡಲು ಸಾಧ್ಯವೋ ಅದರ ಸಂಬಂಧ ತೀರ್ಮಾನಗಳನ್ನು ಮಾಡುತ್ತೇವೆ ಮತ್ತು ಅವರಿಗೆ ಉತ್ತರವನ್ನು ಗೌರವಪೂರ್ವಕವಾಗಿ ಬರೆಯುತ್ತೇನೆ ಎಂದು ಹೇಳಿದರು. ಜನದ್ರೋಹ ಮಾಡಿ ಯೋಗ ಮಾಡಲು ರಾಜ್ಯಕ್ಕೆ ಮೋದಿಯವರು ಬಂದಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದ ಸಿಎಂ ಬೊಮ್ಮಾಯಿ ; ಇವತ್ತೇನಾದರೂ ಕೋವಿಡ್ ಅನ್ನು ಇಡೀ ದೇಶದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಅಂದರೆ ಅದು ಮೋದಿಯವರು. ಕರ್ನಾಟಕಕ್ಕೆ ಕೋವಿಡ್ ನಿರ್ವಹಣೆಗೆ ಸಾವಿರಾರು ಕೋಟಿ ಹಣವನ್ನು ಕೊಟ್ಟಿದ್ದಾರೆ. ಔಷಧ, ಲಸಿಕೆ, ಉಪಕರಣಗಳು, ಆಕ್ಸಿಜನ್, ಆಕ್ಸಿಜನ್ ಉತ್ಪಾದಿಸುವ ಯಂತ್ರಗಳನ್ನು, ವೆಂಟಿಲೇಟರ್ ಗಳನ್ನು ಕಳಿಸಿದ್ದಾರೆ. ರಾಜಕೀಯವಾಗಿ ಮಾತನಾಡಬೇಕು ಅಂತ ಮಾತನಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಜನರಿಗೆ ಎಲ್ಲವೂ ನೆನಪು ಇರುತ್ತದೆ. ಮೋದಿಯವರು ರಾಜ್ಯಕ್ಕೆ ಏನು ಸಹಾಯ ಮಾಡಿದ್ದಾರೆ ಅಂತ ಜನಕ್ಕೆ ಗೊತ್ತಿದೆ. ಅವರ ಜನಪ್ರಿಯತೆ ನೋಡಿ ಈ ತರಹ ಸಿದ್ದರಾಮಯ್ಯನವರು ಮಾತನಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.