IMG_20261129_140528.png
Spread the love

ಬ್ರಹ್ಮಾವರ: ದಿನಾಂಕ:29-11-2026(ಹಾಯ್ ಉಡುಪಿ ನ್ಯೂಸ್) ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ಓಮಿನಿ ವಾಹನದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ 8 ಕ್ವಿಂಟಾಲ್‌ 21 ಕೆ.ಜಿ. ಪಡಿತರ ಅಕ್ಕಿಯನ್ನು ಬ್ರಹ್ಮಾವರ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನವೆಂಬರ್ 28ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಸಿಬ್ಬಂದಿಗೆ ಉಪ್ಪೂರು ಗ್ರಾಮದ ಜಾತಬೆಟ್ಟು ಎಂಬಲ್ಲಿ ಓಮಿನಿ ವಾಹನದಲ್ಲಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕ ಬಿ. ಶರತ್ ಶೆಟ್ಟಿ (44) ಅವರಿಗೆ ಮಾಹಿತಿ ನೀಡಲಾಗಿತ್ತು.
ಅದರಂತೆ ಸ್ಥಳಕ್ಕೆ ತೆರಳಿದಾಗ ಓಮಿನಿ ವಾಹನದ ಚಾಲಕ ವಾಹನವನ್ನು ನಿಲ್ಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಪಂಚರ ಸಮಕ್ಷಮ ವಾಹನವನ್ನು ಪರಿಶೀಲಿಸಿದಾಗ KA-20-C-1287 ನೋಂದಣಿ ಸಂಖ್ಯೆಯ ಮಾರುತಿ ಸುಜುಕಿ ಓಮಿನಿ ವಾಹನದಲ್ಲಿ 29 ಚೀಲಗಳಲ್ಲಿ ಒಟ್ಟು 8 ಕ್ವಿಂಟಲ್ 21 ಕೆ.ಜಿ. ಅಕ್ಕಿ ಪತ್ತೆಯಾಗಿದೆ.
ಈ ಅಕ್ಕಿಯು ಸರಕಾರದ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅನ್ನಭಾಗ್ಯ ಯೋಜನೆಯಲ್ಲಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅಕ್ಕಿಯಾಗಿರುವುದು ಕಂಡುಬಂದಿದೆ.

ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ 19,704 ರೂ., ಓಮಿನಿ ವಾಹನದ ಮೌಲ್ಯ 1 ಲಕ್ಷ ರೂ. ಹಾಗೂ ತೂಕದ ಯಂತ್ರದ ಮೌಲ್ಯ 2 ಸಾವಿರ ರೂ. ಸೇರಿದಂತೆ ಒಟ್ಟು 1,21,704 ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಪಂಚರ ಸಮಕ್ಷಮ ಮಹಜರು ನಡೆಸಿ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 218/2026ರಂತೆ ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಪಿಡಿಎಸ್ ನಿಯಂತ್ರಣ ಆದೇಶದ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದೆ.

error: No Copying!