IMG-20251107-WA0003.jpg
Spread the love

ಎಡಪಂಥ ಎಂಬ ಅದ್ಭುತ ಚಿಂತನೆಯನ್ನು ಅದರ ಅನುಯಾಯಿಗಳು, ಹಿಂಬಾಲಕರು, ಬೆಂಬಲಿಸುವವರು ಅಥವಾ ಅದನ್ನು ಅನುಷ್ಠಾನಗೊಳಿಸುವ ಸೈದ್ಧಾಂತಿಕ ಬದ್ಧತೆಯುಳ್ಳವರು ಪ್ರಾಯೋಗಿಕ ನೆಲೆಯಲ್ಲಿ ಅತ್ಯಂತ ಕಠೋರ, ಕರ್ಮಠ ನಿಲುವುಗಳನ್ನು ತೆಗೆದುಕೊಂಡ ಪರಿಣಾಮ, ಜೊತೆಗೆ ಬದಲಾವಣೆಯನ್ನು ಒಪ್ಪಿಕೊಳ್ಳದೆ, ಪರ್ಯಾಯ ಮಾರ್ಗ ಹುಡುಕದೆ ಟೀಕೆಗಳಿಗೆ ಮಹತ್ವ ನೀಡಿದ ಕಾರಣ, ಇಂದು ಆ ಚಿಂತನೆಗಳು ಜನಪ್ರಿಯತೆ ಕಳೆದುಕೊಂಡಿವೆ. ಈ ಕ್ಷಣದಲ್ಲಿ ಇದು ವಾಸ್ತವ. ಮುಂದೆ ಬದಲಾವಣೆಗಳು ಆಗಲೂಬಹುದು. ಎಡಪಂಥ ಮತ್ತೆ ಮುನ್ನಲೆಗೆ ಬರಲೂಬಹುದು.

ಈಗ ಅದೇ ಅತಿರೇಕದ ಹಾದಿಯಲ್ಲಿ ಬಲಪಂಥೀಯ ಎಂಬ ಚಿಂತನೆಯ ಹಿಂಬಾಲಕರು, ಅನುಯಾಯಿಗಳು, ಭಕ್ತರು ಮತ್ತು ಅದನ್ನೇ ಸೈದ್ಧಾಂತಿಕ ಬದ್ಧತೆಯಾಗಿ ಅನುಸರಿಸುತ್ತಿರುವವರು ಮತ್ತದೇ ಅತಿರೇಕದಲ್ಲಿ ಮುಳುಗಿದ್ದಾರೆ. ಇದು ಬಲಪಂಥೀಯ ಚಿಂತನೆಯ ಅತಿರೇಕ ಮಾತ್ರವಲ್ಲ ಉದ್ದೇಶಪೂರ್ವಕ ದ್ವೇಷದ ಆಕ್ರಮಣವೂ ಆಗಿದೆ.

ಪ್ರಪಂಚದ ನೈತಿಕ ಮೌಲ್ಯಗಳ ಪ್ರತಿನಿಧಿ, ಅದ್ಭುತ ವ್ಯಕ್ತಿ ಮಹಾತ್ಮ ಗಾಂಧಿಯವರನ್ನು ಅಪಮೌಲ್ಯಗೊಳಿಸುತ್ತಾ, ಈ ವಿಶ್ವ ಕಂಡ ಮಹೋನ್ನತ ಸ್ವಂತಿಕೆಯ, ಸ್ವಾಭಾವಿಕ ಚಿಂತಕ ಬುದ್ಧರನ್ನು ಹೆಚ್ಚು ಅನುಷ್ಠಾನಗೊಳ್ಳಲು ಬಿಡದೆ, ಈ ಮಣ್ಣಿನ ನಿಜವಾದ ಸಾಂಸ್ಕೃತಿಕ ರಾಯಭಾರಿ ಸ್ವಾಮಿ ವಿವೇಕಾನಂದರನ್ನು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಗಮನಕ್ಕೆ ತೆಗೆದುಕೊಳ್ಳದೆ, ಮಹಾ ಮಾನವತವಾದಿ ಬಾಬಾ ಸಾಹೇಬರ ಸಾಂವಿಧಾನಿಕ ಮೌಲ್ಯಗಳನ್ನು ಪರೋಕ್ಷವಾಗಿ ದುರ್ಬಲಗೊಳಿಸುತ್ತಾ, ಇದೀಗ ಸಮ ಸಮಾಜದ ಹರಿಕಾರ ಬಸವಣ್ಣನವರನ್ನು ಅಪಮೌಲ್ಯಗೊಳಿಸುವ, ಅವರ ವ್ಯಕ್ತಿತ್ವವನ್ನೇ ದುರ್ಬಲಗೊಳಿಸುವ ಬಲಪಂಥೀಯ ವಿಚಾರಧಾರೆಯ ಜನರ ನಡುವಳಿಕೆ ಖಂಡಿತ ಒಪ್ಪುವಂತಹದಲ್ಲ. ಅದು ಒಳ್ಳೆಯ ಬೆಳವಣಿಗೆಯೂ ಅಲ್ಲ. ಇದೇ ರೀತಿ ಮುಂದುವರೆದರೆ ಅವರು ಜನಪ್ರಿಯತೆ ಕಳೆದುಕೊಳ್ಳಬಹುದು.

ನಮಗೆ ದೊರೆತ ವಚನ ಸಾಹಿತ್ಯದ ಸರ್ವ ಶ್ರೇಷ್ಠ ವಚನಗಳಲ್ಲಿ ಬಸವಣ್ಣನವರು ಅದ್ವಿತೀಯವಾಗಿ ನಿಲ್ಲುತ್ತಾರೆ. ಅವರ ಚಿಂತನೆಗಳು ಸಾಂಸ್ಕೃತಿಕ ನೆಲೆಯಲ್ಲಿ ಮಾನವ ಜನಾಂಗದ ಸಮಾನತೆಗಾಗಿ ಹೋರಾಡಿರುವಂತಹುದು. ಅಂತಹ ವ್ಯಕ್ತಿ ಯಾರೋ ಇತ್ತೀಚೆಗೆ ಬಸವ ಮಂಟಪ ಎಂಬ ಪುಸ್ತಕದಲ್ಲಿ ಬರೆದಿರುವಂತೆ ಕ್ರೂರಿಯೂ, ಆನಾಚಾರಿಯೂ, ರಾಜದ್ರೋಹಿಯೂ, ವಂಚಕರೂ ಆಗಿರಲು ಸಾಧ್ಯವೇ. ಇದು ಸಾಮಾನ್ಯ ಜ್ಞಾನಕ್ಕೆ ನಿಲುಕುವಂಥದ್ದಲ್ಲವೇ….

ಗಾಂಧಿಯಂಥ ವ್ಯಕ್ತಿ ತಮ್ಮ ಬದುಕನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿ, ಸತ್ಯ, ಅಹಿಂಸೆ, ಸರಳತೆಗಳನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟ ವ್ಯಕ್ತಿಯನ್ನು ಯಾವುದೋ ರಾಜಕೀಯ ನಿರ್ಧಾರಗಳಿಗಾಗಿ ಅಪಮೌಲ್ಯಗೊಳಿಸುವುದು ಎಷ್ಟು ಅಪಾಯಕಾರಿಯೋ, ಬಸವಣ್ಣನವರನ್ನು ದುರ್ಬಲಗೊಳಿಸುವುದು ಅಷ್ಟೇ ಅಪಾಯಕಾರಿ……

ದುರಂತವೆಂದರೆ ಗಾಂಧಿಯವರನ್ನು ಅಪಮೌಲ್ಯಗೊಳಿಸುವಾಗ ಸುಮ್ಮನೆ ಕುಳಿತವರು, ಬಸವಣ್ಣನವರನ್ನು ಅಪಮೌಲ್ಯಗೊಳಿಸುವಾಗ ದ್ವನಿ ಎತ್ತುವುದು, ಬಸವಣ್ಣನವರನ್ನು ಅಪಮೌಲ್ಯಗೊಳಿಸುವಾಗ ಅಂಬೇಡ್ಕರ್ ಚಿಂತನೆಯವರು ಮೌನ ವಹಿಸುವುದು, ಅಂಬೇಡ್ಕರ್ ಚಿಂತನೆಯನ್ನು ನಾಶಗೊಳಿಸುವಾಗ ಗಾಂಧಿ, ಬುದ್ಧ, ಬಸವಣ್ಣನವರು ಅನುಯಾಯಿಗಳು ಮೌನ ವಹಿಸುವುದು ಸೈದ್ಧಾಂತಿಕ ಅತಿರೇಕದ, ಅಜ್ಞಾನದ, ಸ್ವಾರ್ಥದ, ಲಾಭಕೋರತನದ ದೃಷ್ಟಿಕೋನ ಮಾತ್ರ ಎಂದು ಕರೆಯಬಹುದು.

ನಾವು ಚಿಂತಿಸಬೇಕಾಗಿರುವುದು ಎಡಬಲಗಳೆಂಬ ಸೈದ್ಧಾಂತಿಕ ವಿಚಾರಗಳನ್ನಾಗಲಿ, ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಎಂಬ ವ್ಯಕ್ತಿಗಳ ವ್ಯಕ್ತಿತ್ವವನ್ನಾಗಲಿ ಅಲ್ಲ. ಈ ಕಾಲಘಟ್ಟಕ್ಕೆ ಯಾವ ಚಿಂತನೆಗಳು ಹೆಚ್ಚು ಜೀವ ಪರವಾಗಿದೆ, ಹೆಚ್ಚು ಪ್ರಸ್ತುತವಾಗಿದೆ, ಹೆಚ್ಚು ನಾಗರೀಕವಾಗಿದೆ, ಅದನ್ನು ಅಳವಡಿಸಿಕೊಂಡು ಹೋಗುವುದೇ ನಿಜವಾದ ಸೈದ್ಧಾಂತಿಕ ಬದ್ಧತೆಯಾಗಬೇಕೆ ಹೊರತು, ತಮ್ಮ ಓದಿನ ಆಳಕ್ಕೆ ನಿಲುಕಿದ ವಿಷಯಗಳನ್ನೇ ದೊಡ್ಡದು ಮಾಡಿ, ತಮ್ಮ ಪಾಂಡಿತ್ಯವನ್ನೇ ಪ್ರದರ್ಶನ ಮಾಡುತ್ತಾ ಮುನ್ನಡೆಯುವುದಲ್ಲ.
ಒಂದು ಸಿದ್ಧಾಂತಕ್ಕಿಂತ ಹಲವು ಸಿದ್ಧಾಂತಗಳ ಸಮ್ಮಿಲನದ ಪ್ರಜ್ಞೆ ಇಂದು ಹೆಚ್ಚು ಸೂಕ್ತವಾಗಿದೆ.

ದ್ವೇಷ, ಅಸೂಯೆಗಳನ್ನೇ ಉಸಿರಾಡುತ್ತಿರುವ ಅಂತಹವರಿಗೆ ವೇದಿಕೆ ಕಲ್ಪಿಸುವ, ಅಂತಹುಗಳನ್ನೇ ವಿಡಿಯೋ, ಬರಹ, ಪುಸ್ತಕಗಳನ್ನಾಗಿ ಮಾಡಿ ಹಂಚುವ, ಅದನ್ನೇ ಒಂದು ಬಹುದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವ ಎಲ್ಲಾ ವ್ಯಕ್ತಿಗಳಿಗೂ ಇದು ಅನ್ವಯಿಸುತ್ತದೆ.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ……

ಸಾಂಸ್ಕೃತಿಕ ನಾಯಕ ಅಥವಾ ವಕ್ತಾರ ಅಥವಾ ರಾಯಭಾರಿ ಎಂದರೆ ಏನು ಎಂಬ ಬಗ್ಗೆ ಸಾಮಾನ್ಯರ ಮನಸ್ಸು ಕೇಳಬಹುದು…

ಒಂದು ಪ್ರದೇಶದ ಅಂದರೆ ಈ‌ ಸಂದರ್ಭದಲ್ಲಿ ಕರ್ನಾಟಕದ ಒಟ್ಟು ಪ್ರಾಕೃತಿಕ ವಾತಾವರಣ, ಇದು ಬೆಳೆದು ಬಂದ ಇತಿಹಾಸ, ಇಲ್ಲಿನ ಆಚಾರ, ವಿಚಾರ, ಸಂಪ್ರದಾಯ, ನಂಬಿಕೆ, ಆಡಳಿತ ಎಲ್ಲವನ್ನೂ ಒಳಗೊಂಡ ಜೀವನಶೈಲಿ, ಈ ನೆಲ, ಈ ಜಲ ಪ್ರತಿಪಾದಿಸುವ ಎಲ್ಲಾ ‌ಮೌಲ್ಯಯುತ ಸೈದ್ಧಾಂತಿಕ ನಿಲುವುಗಳು, ಇಲ್ಲಿನ ಸಂವಿಧಾನ ಮತ್ತು ಧಾರ್ಮಿಕ ಆಚರಣೆಗಳು ಮತ್ತು ಒಟ್ಟಾರೆ ಇಡೀ ಪ್ರದೇಶದ ಸಾಂಸ್ಕೃತಿಕ ವ್ಯಕ್ತಿತ್ವ ಪ್ರತಿಬಿಂಬಿಸುವ ಮತ್ತು ಪ್ರತಿನಿಧಿಸುವ ಆದರ್ಶ ವ್ಯಕ್ತಿಯನ್ನು ‌ಸಾಮಾನ್ಯವಾಗಿ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತದೆ. ಇದಕ್ಕೆ ಇನ್ನಷ್ಟು ಅರ್ಥ – ಆಯಾಮಗಳು ಇರಬಹುದು…..

ಇದೇ ಅರ್ಥದಲ್ಲಿ ಭಾರತದ ‌ಸಾಂಸ್ಕೃತಿಕ ರಾಯಭಾರಿ ಎಂದು ಸ್ವಾಮಿ ವಿವೇಕಾನಂದರನ್ನು ಪರಿಗಣಿಸಲಾಗುತ್ತದೆ‌ ಎಂಬುದನ್ನು ನೆನಪು ಮಾಡಿಕೊಳ್ಳುತ್ತಾ….

ಕರ್ನಾಟಕದ ಇತಿಹಾಸ – ವರ್ತಮಾನದಲ್ಲಿ ಬಸವಣ್ಣನವರನ್ನು ಹೊರತುಪಡಿಸಿ ಬೇರೆ ಯಾರಾದರೂ ಈ ಸ್ಥಾನಕ್ಕೆ ಅರ್ಹರು ಇರಬಹುದೇ ಅಥವಾ ಇದ್ದಾರೆಯೇ ಎಂದು ನಮ್ಮಲ್ಲೇ ಪ್ರಶ್ನಿಸಿಕೊಂಡಾಗ……

ನನ್ನ ವೈಯಕ್ತಿಕ ಜ಼್ಞಾನದ ಮಿತಿಯಲ್ಲಿ, ಸಮಗ್ರ ಚಿಂತನೆಯ ನಂತರ, ಆ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿ ಬಸವಣ್ಣನವರು ಮಾತ್ರ. ಬಹುಶಃ ಅವರಿಗೆ ಸ್ಪರ್ಧೆ ನೀಡುವ ಅಥವಾ ಅವರ ಹತ್ತಿರಕ್ಕೆ ಬರುವ ಯಾವ ವ್ಯಕ್ತಿಯು ಸಿಗುವುದಿಲ್ಲ. ಹಾಗೆಂದು ಕರ್ನಾಟಕದಲ್ಲಿ ಇತರೆ ಸಾಧಕರು ಇಲ್ಲವೆಂದಲ್ಲ. ವಿವಿಧ ಕ್ಷೇತ್ರಗಳ ಅತ್ಯದ್ಭುತ ಸಾಧಕರು ಇದ್ದಾರೆ. ಆದರೆ ಜೀವಪರ ನಿಲುವುಗಳು, ಸಮ ಸಮಾಜದ ಹೋರಾಟಗಳು, ಅನುಭವದ ಅನುಭಾವ ಚಿಂತನೆಗಳು ಬಸವಣ್ಣ ಕರ್ನಾಟಕಕ್ಕೆ ಮಾತ್ರವಲ್ಲ ವಿಶ್ವಕ್ಕೇ ಮಾದರಿಯಾಗಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು.

ಬಸವಣ್ಣನವರ ನಾಗರಿಕ ಸಮಾನತೆ ಎಲ್ಲಾ ಎಲ್ಲೆಗಳನ್ನು ಮೀರಿದ್ದು. ಜೊತೆಗೆ ಅದು ಚಿಂತನೆಯ ರೂಪದಲ್ಲಿ ಮಾತ್ರವಲ್ಲದೆ ಪ್ರಾಯೋಗಿಕವಾಗಿ ಸಹ ಆಚರಣೆಯ ಮಹತ್ವ ಪಡೆದಿದೆ. ಈ ನೆಲದ ಮಣ್ಣಿನ ಗುಣವನ್ನು ಹೊಂದಿದೆ. ಕಾಯಕ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ಬಸವಣ್ಣನವರ ಬಗ್ಗೆ ಈಗಾಗಲೇ ಸಾಕಷ್ಟು ಅಧ್ಯಯನಗಳು ನಡೆದಿವೆ. ಆ ಮಾಹಿತಿಗಳು ಎಲ್ಲರಿಗೂ ಲಭ್ಯವಿದೆ. ಅದನ್ನು ಇನ್ನೊಮ್ಮೆ ಓದಿ ಮನನ ಮಾಡಿಕೊಳ್ಳಬಹುದು……

ಈಗ ನಿಜವಾದ ಬಸವ ಅನುಯಾಯಿಗಳ ಜವಾಬ್ದಾರಿ ಹೆಚ್ಚಾಗಿದೆ. ಇಡೀ ಕರ್ನಾಟಕವನ್ನು ಒಳಗೊಂಡ ಸಮ ಸಮಾಜದ ಕನಸಿಗೆ ಕಾರ್ಯಯೋಜನೆ ರೂಪಿಸಬೇಕಿದೆ. ಜಾತಿ ಪದ್ದತಿಯ ನಿರ್ಮೂಲನೆ ಮಾಡಿ ಅಂತರ್ಜಾತಿಯ ವಿವಾಹಗಳಿಗೆ ವೈಯಕ್ತಿಕ ಮಟ್ಟದಲ್ಲಿ ಆದರ್ಶವಾಗಬೇಕಿದೆ. ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಹಾಗು ಮಲೆನಾಡಿನ ಭಾಗಗಳಲ್ಲಿ ಬಸವ ತತ್ವದ ಪ್ರಾಮುಖ್ಯತೆ ಮನವರಿಕೆ ಮಾಡಿಕೊಡಬೇಕಾಗಿದೆ….

ಬಸವಣ್ಣನವರನ್ನು ವಿಜೃಂಭಿಸುವುದು, ಆರಾಧಿಸುವುದು, ಭಕ್ತಿ ಪೂರ್ವಕವಾಗಿ ಪೂಜಿಸುವುದು, ಅತಿಮಾನುಷ ವ್ಯಕ್ತಿಯಂತೆ ಭಾವಿಸುವುದು, ಪವಾಡ ಪುರುಷರಂತೆ ಹರಕೆ ಹೊರುವುದು, ಸಂಘಟನಾತ್ಮಕವಾಗಿ ಒಗ್ಗೂಡಲು ಅವರ ಹೆಸರನ್ನು ಉಪಯೋಗಿಸಿಕೊಳ್ಳುವುದು, ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳುವುದು, ಪ್ರತಿಮೆಗಳನ್ನು ಸ್ಥಾಪಿಸುವುದು, ಅಧ್ಯಯನ ಪೀಠಗಳನ್ನು ಸೃಷ್ಟಿ ಮಾಡುವುದು, ದೊಡ್ಡ ದೊಡ್ಡ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸುವುದು, ರಸ್ತೆ, ವಿಶ್ವವಿದ್ಯಾಲಯ, ಸಾರಿಗೆ ನಿಲ್ದಾಣಗಳು ಮುಂತಾದುವುಗಳಿಗೆ ಹೆಸರಿಡುವುದು ಇವೆಲ್ಲವುಗಳನ್ನು ಹೊರತುಪಡಿಸಿ ಸಮ ಸಮಾಜದ, ಮಾನವೀಯ ಸಮಾಜದ, ನಾಗರೀಕ ಸಮಾಜದ ನಿರ್ಮಾಣದ ಹಾದಿಯಲ್ಲಿ ಏನಾದರೂ ಹೊಸ ಪ್ರಯತ್ನಗಳು ಸಾಗುತ್ತಿದೆಯೇ ಎಂಬುದನ್ನು ನೋಡಬೇಕಿದೆ……

ಬಸವಣ್ಣನವರು ಸಾಮಾನ್ಯ ಮನುಷ್ಯರೇ. ಆದರೆ ಅಸಾಮಾನ್ಯ ಮನಸ್ಸು ಅಥವಾ ಹೃದಯವುಳ್ಳವರು. ಅತ್ಯಂತ ಜೀವಪರ ನಿಲುವಿನ, ಸಕಲ ಜೀವಾತ್ಮಗಳಿಗೆ ಲೇಸನೆ ಬಯಸಿದ ಪ್ರಾಮಾಣಿಕ, ನಿಷ್ಕಳಂಕ, ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಹೊಂದಿದ ಸಮಾನತೆಯ ಹರಿಕಾರರು…..

ಪ್ರಾಕೃತಿಕ ಮತ್ತು ಸ್ವಾಭಾವಿಕ ಭಿನ್ನತೆಗಳನ್ನು ಹೊರತುಪಡಿಸಿ ಇಡೀ ಮಾನವ ಕುಲ ಒಂದೇ, ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎನ್ನುವ ಅತ್ಯಮೂಲ್ಯ ಚಿಂತನೆಗಳನ್ನು ನಾಡಿಗೆ ನೀಡಿದ ನೈಜ ಸಾಂಸ್ಕೃತಿಕ ನಾಯಕ ಬಸವಣ್ಣ, ನಡೆನುಡಿ ಸಂಸ್ಕೃತಿಯ ಪ್ರತಿಪಾದಕ ಬಸವಣ್ಣ, ಅಸಮಾನತೆಯ ವಿರುದ್ಧ ಬಂಡಾಯವೆದ್ದು ಸಮಾನತೆಗಾಗಿ ಹೋರಾಡಿದ ನೈಜ ಹೋರಾಟಗಾರ ಬಸವಣ್ಣ,……..

ಎಂದಿನಂತೆ ಬಸವಣ್ಣನವರನ್ನು ವಿಭೂತಿ, ಲಿಂಗಗಳ ಮೂಲಕವಾಗಲಿ, ವಚನಗಳ ಕಂಠಪಾಠದಿಂದಾಗಲಿ, ವಚನ ಸಾಹಿತ್ಯದ ಅಧ್ಯಯನದಿಂದಾಗಲಿ, ವಚನ ಸಂಸ್ಕೃತಿಯ ಉಪನ್ಯಾಸ, ಪ್ರವಚನ, ಭಾಷಣ, ಲೇಖನ, ಬರಹಗಳಿಂದಾಗಲಿ ನೈಜ ಬಸವಣ್ಣನವರನ್ನು ಅರಿಯುವುದು ಕೇವಲ ಒಂದು ಜ್ಞಾನಾರ್ಜನೆಯ ವಿಧಾನವಷ್ಟೇ…..

ನಮ್ಮೊಳಗಿನ ಮಾನವ ಪ್ರಜ್ಞೆ, ಹೃದಯ ವೈಶಾಲ್ಯತೆ, ಶುದ್ಧ ಮನಸ್ಥಿತಿ ಮಾತ್ರ ಬಸವಣ್ಣನವರು ನಮಗೆ ಅರ್ಥವಾಗಲು ಇರಬೇಕಾದ ಮೂಲಭೂತ ಅಂಶಗಳು. ಬಸವಣ್ಣನವರಂತಹ ವ್ಯಕ್ತಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಣೆಯಾದ ನಂತರವೂ ಇಲ್ಲಿನ ಜನಜೀವನದಲ್ಲಿ ಯಾವುದೇ ಗಂಭೀರ ಬದಲಾವಣೆಯಾಗದೆ ಎಂದಿನಂತೆ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ, ಗುಂಪುಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದಾದರೆ ಬಸವ ಅನುಯಾಯಿಗಳು ಅಥವಾ ಸಮಸಮಾಜ ಆಶಯದ ಜನರು ಬಸವಣ್ಣನವರನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದೇ ಅರ್ಥೈಸಬೇಕಾಗುತ್ತದೆ……

ಏಕೆಂದರೆ ಹನ್ನೆರಡನೆಯ ಶತಮಾನದ ಕ್ರಾಂತಿಕಾರಿ ವ್ಯಕ್ತಿತ್ವದ ಚಿಂತನೆಗಳು ನಮ್ಮ ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲವಾದರೆ ಎರಡು ರೀತಿಯಲ್ಲಿ ಭಾವಿಸಬೇಕಾಗುತ್ತದೆ. ಅವರ ಚಿಂತನೆಗಳು ಕೇವಲ ಆದರ್ಶಗಳಾಗಿ ವಾಸ್ತವದಿಂದ ದೂರವಿರುವುದರಿಂದ ಆ ಚಿಂತನೆಗಳ ಗಟ್ಟಿತನವನ್ನೇ ಪ್ರಶ್ನಿಸಬೇಕಾಗುತ್ತದೆ ಅಥವಾ ಗಟ್ಟಿತನದ ಚಿಂತನೆಗಳು ಸಾಮಾನ್ಯ ಜನರಿಗೆ ತಲುಪುವಲ್ಲಿಯೇ ವಿಫಲವಾಗಿ ಜನರ ಮಾನಸಿಕ ಗುಣಮಟ್ಟವೇ ಆ ಚಿಂತನೆಯ ಮಟ್ಟದಲ್ಲಿಲ್ಲ ಎಂದು ಜನರನ್ನೇ ಗುರಿ ಮಾಡಿ ಟೀಕಿಸಬೇಕಾಗುತ್ತದೆ……

ವಚನ ಸಂಸ್ಕೃತಿ ಅಥವಾ ಬಸವ ತತ್ವವೆಂಬುದು ಒಂದು ಜೀವನ ವಿಧಾನ, ಒಂದು ಸಾಮಾಜಿಕ ವ್ಯವಸ್ಥೆ. ಅದು ವಾಸ್ತವವಾಗಿ ಅನುಷ್ಠಾನವಾಗಿದ್ದೇ ಆದರೆ ಜನರ ಜೀವನ ಮಟ್ಟ ಅತ್ಯುತ್ತಮವಾಗಿರುತ್ತದೆ. ಯಾವುದೇ ಮೇಲುಕೀಳಿನ ವ್ಯತ್ಯಾಸಗಳಿಲ್ಲದೆ, ಅಸಹಜ ನಡುವಳಿಕೆಗಳಿಲ್ಲದೆ, ಮೋಸ ವಂಚನೆಗಳಿಲ್ಲದೆ, ಒಂದು ಸಮ ಸಂಸ್ಕೃತಿಯ, ಸಮ ಸಮಾಜ ಅಸ್ತಿತ್ವದಲ್ಲಿರುತ್ತದೆ…..

ಆದರೆ ಇಂದಿನ ಸಾಮಾಜಿಕ ವ್ಯವಸ್ಥೆ ಬಹುತೇಕ ಬಸವ ತತ್ವಕ್ಕೆ ವಿರುದ್ಧವಾಗಿಯೇ ಮುಂದುವರಿಯುತ್ತಿದೆ. ಸಾಮಾನ್ಯರನ್ನು ಬಿಡಿ, ಬಸವ ಅನುಯಾಯಿಗಳೇ ಬಸವ ಚಿಂತನೆಯಿಂದ ಬಹು ದೂರ ಸಾಗಿ ಬಂದಿದ್ದಾರೆ. ಬಸವಣ್ಣ ಒಂದು ಭಕ್ತಿಯ ಸಂಕೇತವಾಗಿ ಮಾತ್ರ ಅಸ್ತಿತ್ವದಲ್ಲಿದ್ದಾರೆ. ಒಂದು ಜಾತಿಯಾಗಿ, ಒಂದು ಓಟಿನ ರಾಜಕಾರಣದ ಆಕರ್ಷಣೆಯಾಗಿ ಮಾತ್ರ ಮಹತ್ವದ ಪಾತ್ರ ವಹಿಸುತ್ತಿದ್ದಾರೆ…….

ಇನ್ನೊಂದು ಕಡೆ ಬಸವಣ್ಣನವರನ್ನು
ಸಾಮಾನ್ಯಗೊಳಿಸುವ, ಅಪ್ರಸ್ತುತಗೊಳಿಸುವ ಅಥವಾ ಅವರ ಚಿಂತನೆಗಳನ್ನು ಸರಳೀಕರಣಗೊಳಿಸಿ ನಿರ್ಲಕ್ಷಿಸುವ ಪ್ರಯತ್ನಗಳು ಸಹ ಒಂದಷ್ಟು ಜನರಿಂದ ನಡೆಯುತ್ತಿದೆ. ಏಕೆಂದರೆ ಅವರಿಗೆ ಸಮಸಮಾಜಕ್ಕಿಂತ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯೇ ಬೇಕಾಗಿದೆ….

ಆದ್ದರಿಂದ ಇಂತಹ ಸಂದರ್ಭದಲ್ಲಿ ಕೇವಲ ಬಸವ ಅನುಯಾಯಿಗಳು ಮಾತ್ರವಲ್ಲ, ವೀರಶೈವ ಅಥವಾ ಲಿಂಗಾಯಿತ ಸಮುದಾಯದವರು ಮಾತ್ರವಲ್ಲ, ಇಡೀ ಸಮಾಜ ಬಸವಣ್ಣನವರ ವಚನ ಸಂಸ್ಕೃತಿಯ ಆಶಯವನ್ನು ಸ್ವತಃ ಅಳವಡಿಸಿಕೊಳ್ಳುವ ಮೂಲಕ, ನಡೆನುಡಿ ಸಂಸ್ಕೃತಿಯನ್ನು, ಶ್ರಮ ಸಂಸ್ಕೃತಿಯನ್ನು ಕಿಂಚಿತ್ತಾದರೂ ಕಾರ್ಯರೂಪಕ್ಕೆ ತರುವ ಮೂಲಕ ಈ ಸಂದರ್ಭದಲ್ಲಿ ಒಂದಷ್ಟು ಮನಃಪರಿವರ್ತನೆ ಮಾಡಿಕೊಳ್ಳಬೇಕಾಗಿದೆ…..

ಅದು ಸಾಧ್ಯವಾಗದೇ ಕೇವಲ ಉತ್ಸವಗಳಿಗೆ ಮಾತ್ರ ಸೀಮಿತವಾದರೆ, ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಘೋಷಣೆ ಕಾಗದದ ಮೇಲಷ್ಟೇ ಉಳಿಯುತ್ತದೆ. ನೋಡಿ ಸ್ವಲ್ಪ ಮನಸ್ಸು ಮಾಡಿ. ಬಸವ ತತ್ವವನ್ನು ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅನುಷ್ಠಾನಗೊಳಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ….

ಯಾರು ಈ ಸಾಂಸ್ಕೃತಿಕ ನಾಯಕ ಎಂದು ಹೆಸರಾಗಲು ಪ್ರಯತ್ನಿಸಿದರೋ ಅವರು ಅಧಿಕಾರ ಪ್ರಶಸ್ತಿ ಮೀರಿ ಒಂದಷ್ಟು ತ್ಯಾಗಕ್ಕೆ ಸಿದ್ದರಾಗಬೇಕಿದೆ. ಕೇವಲ ಯಾವುದೋ ಕಟ್ಟಡಗಳಿಗೆ, ನಿಲ್ದಾಣಗಳಿಗೆ, ಪ್ರದೇಶಗಳಿಗೆ,
ಶಿಕ್ಷಣ ಸಂಸ್ಥೆಗಳಿಗೆ, ಪ್ರಶಸ್ತಿಗಳಿಗೆ ಬಸವಣ್ಣನವರ ಹೆಸರು ಘೋಷಿಸುವುದೇ ಒಂದು ಸಾಧನೆಯಾಗಬಾರದು…

ಇನ್ನು ಹತ್ತು ವರ್ಷಗಳಲ್ಲಿ ಚುನಾವಣೆಯಲ್ಲಿ ಜಾತಿ ಮೀರಿದ ಅರ್ಹ ವ್ಯಕ್ತಿ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ಪರಿಸ್ಥಿತಿ ಕರ್ನಾಟಕದ ರಾಜಕೀಯದಲ್ಲಿ ನಿರ್ಮಾಣವಾಗಬೇಕು….

ಮದುವೆಗಳು ಮನುಷ್ಯ ಸಂಬಂಧಗಳ ನಡುವೆ ಆಗಬೇಕೆ ಹೊರತು ಜಾತಿಗಳ ನಡುವೆಯಲ್ಲ……

ಯಾವುದೇ ಮಠ ಮಾನ್ಯಗಳ ಪೀಠಾಧೀಶರಾಗಿ ಯಾವುದೇ ಅರ್ಹ ವ್ಯಕ್ತಿ ಮುಖ್ಯಸ್ಥರಾಗಿ ಬೇಕೆ ಹೊರತು ಆ ಜಾತಿಯವರು ಮಾತ್ರವಲ್ಲ.

ಯಾವುದೇ ಜಾತಿ ಪಂಗಡಗಳು ಆ ಹೆಸರಿನಲ್ಲಿ ಮೀಸಲಾತಿ ಹೋರಾಟ ಮಾಡಬಾರದು. ಎಲ್ಲರೂ ನಮ್ಮವರೇ ಎಂದು ಭಾವಿಸಬೇಕು. ಜಾತಿಯೇ ಇಲ್ಲದಿದ್ದರೆ ಜಾತಿಯ ಮೀಸಲಾತಿ ಪ್ರಶ್ನೆಯೇ ಬರುವುದಿಲ್ಲ. ಮೊದಲು ಹೋರಾಟ ಮಾಡಬೇಕಾಗಿರುವುದು ಜಾತಿ ನಿರ್ಮೂಲನೆಗಾಗಿಯೇ ಹೊರತು ಮೀಸಲಾತಿ ವಿರುದ್ದವಲ್ಲ….

ವಾಸ್ತವವಾಗಿ ಅದು ಲಿಂಗಾಯತ ಧರ್ಮವಲ್ಲ ಮಾನವ ಧರ್ಮ ಮತ್ತು ಇನ್ನೂ ಮುಂದೆ ಸಾಗಿ ಜೀವಪರ ನಿಲುವಿನ ಪ್ರಾಕೃತಿಕ ಧರ್ಮ….

ಜಗತ್ತಿನಲ್ಲಿ ಜೀಸಸ್ ಕ್ರೈಸ್ಟ್ ಅವರನ್ನು ಸಮಾನತೆಯ ವಿಷಯದಲ್ಲಿ ಮೇಲ್ಮಟ್ಟದಲ್ಲಿ ನೋಡಲಾಗುತ್ತದೆ.
” ಶತ್ರುಗಳನ್ನು ಪ್ರೀತಿಸಿ – ನೆರೆಹೊರೆಯವರನ್ನು ಪ್ರೀತಿಸಿ ” ಎಂದು ಹೇಳುವ ಮೂಲಕ ಪ್ರೀತಿಯನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತಾರೆ. ಆದರೆ ‌ವಚನ ಸಂಸ್ಕೃತಿ ಒಂದು ಹಂತದಲ್ಲಿ ಅದನ್ನು ಮೀರಿ ಸಮಾನತೆಯನ್ನು ಪ್ರತಿಪಾದಿಸುತ್ತದೆ ” ಸಕಲ ಜೀವಾತ್ಮಗಳಿಗೆ ಲೇಸನೇ ಬಯಸು “

12 ನೆಯ ಶತಮಾನದ ಆ ಕರ್ಮಠ ಕಾಲದಲ್ಲಿಯೇ ಅಸ್ಪೃಶ್ಯರಿಗು ಬ್ರಾಹ್ಮಣರಿಗು ಮದುವೆ ಸಂಬಂಧ ಏರ್ಪಡಿಸುವುದು, ಈಗಿನ ಸಮಾಜದಲ್ಲೇ ವೇಶ್ಯಯರನ್ನು ನಿಕೃಷ್ಟವಾಗಿ ನೋಡುವಾಗ ವೇಶ್ಯೆಯರಿಗೂ ಅನುಭವ ಮಂಟಪದ ಸದಸ್ಯತ್ವ ನೀಡಿ ಪುರುಷ ಸಮಾನ ಗೌರವ ನೀಡಿ ಸಾಹಿತ್ಯ ರಚಿಸಲು ಅನುವು ಮಾಡಿಕೊಟ್ಟದ್ದು, ಅಪರಾಧಿಗಳು ಸಹ ಶರಣರಾಗುವುದಾದರೆ ಅದನ್ನು ಕ್ಷಮಿಸಿ ಸ್ವೀಕರಿಸಲು ಸಿದ್ದ ಎಂಬ ಸಂದೇಶ ನೀಡಿದ್ದು ಬಹುಶಃ ಜಗತ್ತಿನ ಅದ್ಭುತಗಳಲ್ಲಿ ಒಂದು……

ಇಂತಹ ಸಮಾನತೆಯ ತತ್ವಗಳ ಆಧಾರದ ಮೇಲೆ ಕನಿಷ್ಠ ಕರ್ನಾಟಕದಲ್ಲಾದರೂ ಮಾನವ ಧರ್ಮ ಈಗಾಗಲೇ ದೊಡ್ಡ ಮಟ್ಟದ ಅಸ್ತಿತ್ವ ಕಂಡುಕೊಳ್ಳಬೇಕಿತ್ತು. ಅತ್ಯಂತ ಸರಳ, ಸಹಜ, ಮಾನವ ಪ್ರೀತಿಯ, ಬದುಕಿನ ಸಾರ್ಥಕತೆಯ ಈ ಧರ್ಮ ಇನ್ನೂ ಹೋರಾಟದ ಹಂತದಲ್ಲಿ ಇರುವುದು ವಿಪರ್ಯಾಸ……..

ಜನರ ಅಯೋಗ್ಯತನ, ಅಜ್ಞಾನ, ಅಪ್ರಬುದ್ಧತೆ ಯಾವ ಮಟ್ಟದಲ್ಲಿದೆ ಎಂದರೆ, ಧರ್ಮವೆಂದರೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬುದ್ಧ, ಜೈನ, ಸಿಖ್ ಎಂದೇ ಅರ್ಥ ಮಾಡಿಕೊಳ್ಳುತ್ತಾರೆ. ನಿಜವಾದ ಧರ್ಮವೆಂದರೆ ಒಳ್ಳೆಯತನ, ಸನ್ನಡತೆ, ಉತ್ತಮ ಜೀವನ ಶೈಲಿ ಎಂದು ಭಾವಿಸುವುದೇ ಇಲ್ಲ. ಅದರ ಪರಿಣಾಮ ಬಸವ ತತ್ವ ರಾಜ್ಯವನ್ನು ಸಂಪೂರ್ಣ ಆವರಿಸುವಲ್ಲಿ ವಿಫಲವಾಗಿದೆ.

ಬಸವ ತತ್ವದ ಆಧಾರದ ಮೇಲೆ ಸೃಷ್ಟಿಯಾದ ಮಠ ಮಾನ್ಯಗಳು ಇಂದು ಜಾತೀಯತೆಯ ಪೋಷಕರಾಗಿರುವುದು, ರಾಜಕೀಯ ಬಾಲಂಗೋಚಿಯಾಗಿರುವುದು, ಜಾತಿ ಮೀಸಲಾತಿಯ ಹೋರಾಟ ಮಾಡುವುದು, ಕಮರ್ಷಿಯಲ್ ಕಾಂಪ್ಲೆಕ್ಸ್ ಕಟ್ಟಿಸುವುದು, ಅಸಮಾನತೆ – ಮೌಢ್ಯ ಹೆಚ್ಚಿಸುವ ವಿಚಾರ ಬಿತ್ತುವುದು ಹೀಗೆ ಸಾಗುತ್ತಿರುವಾಗ……..

ಮೂಲಭೂತವಾಗಿ ಮನುಷ್ಯನೇ ಒಂದು ಜಾತಿ ಅಥವಾ ವರ್ಗ ಅಥವಾ ಸಮೂಹ. ಉಳಿದ ಎಲ್ಲಾ
ಪಂಥ ಧರ್ಮಗಳು ನಂತರವೇ ಉಗಮವಾಗಿದೆ. ಆ ಅರ್ಥದಲ್ಲಿ ನಾವೆಲ್ಲರೂ ಒಂದೇ. ಆದರೆ ಕಾಲಾನಂತರ ಭಿನ್ನತೆಗಳು ಪ್ರಾರಂಭವಾದವು.

ಆದರೆ ಬಸವೇಶ್ವರರು ಆಗಿನ ಕಾಲದಲ್ಲಿ ಆಚರಣೆಯಲ್ಲಿದ್ದ ಎಲ್ಲಾ ಅಸಮಾನತೆಯ ಮತ್ತು ಅಮಾನವೀಯ ಸಂಪ್ರದಾಯಗಳನ್ನು ವಿರೋಧಿಸಿ ಮಾನವ ಧರ್ಮವನ್ನು ಪ್ರತಿಪಾದಿಸಿ ಅದರ ನೀತಿ ನಿಯಮಗಳನ್ನು ವಚನಗಳ ಮುಖಾಂತರ ವಿವರಿಸಿದರು. ಸಮಾಜವನ್ನು ಆ ಅಂಶಗಳ ಆಧಾರದಲ್ಲಿ ಒಂದು ಗೂಡಿಸಲು ಪ್ರಯತ್ನಿಸಿದರು. ಅನಂತರದಲ್ಲಿ ಅವರ ಅನುಯಾಯಿಗಳ ಒಂದು ಸಮುದಾಯವೇ ಉಗಮವಾಯಿತು. ಅದೇ ಲಿಂಗಾಯತ ಎಂದು ಜನಪ್ರಿಯವಾಯಿತು…..

ಸುಮ್ಮನೆ ಒಮ್ಮೆ ಆಲೋಚಿಸಿ ನೋಡಿ……

ಈಗಲೂ ಕೆಲವು ಕರ್ಮಠ ಬ್ರಾಹ್ಮಣರು, ಗೌಡರು, ವೀರಶೈವರು, ಕುರುಬರು, ಮುಂತಾದ ಅನೇಕ ಜಾತಿಗಳವರು ಕಮ್ಮಾರ, ಚಮ್ಮಾರ, ಹೊಲೆಯ, ಮಾದಿಗರನ್ನು ಮನೆಯೊಳಗೆ ಸೇರಿಸದ ಪರಿಸ್ಥಿತಿ ಇರುವಾಗ 8 ಶತಮಾನಗಳ ಹಿಂದೆಯೇ ಬಸವಣ್ಣ ಅವರನ್ನು ತನ್ನ ಜೊತೆಯಲ್ಲಿ ಸೇರಿಸಿಕೊಂಡಿದ್ದಲ್ಲದೆ ಅವರ ವಚನ ಸಾಹಿತ್ಯಕ್ಕೆ ಬೆಳಕು ನೀಡಿದ ಎಂಬುದನ್ನು ಊಹಿಸಿಕೊಳ್ಖಲು ಸಾಧ್ಯವೇ…..

ಈಗಲೂ ಮರ್ಯಾದೆ ಹತ್ಯೆಗಳು ನಡೆಯುತ್ತಿರುವಾಗ ಆಗಲೇ ಅಂತರ್ಜಾತಿ ವಿವಾಹಗಳನ್ನು ಮಾಡಿಸಿದ ಬಸವೇಶ್ವರರನ್ನು ಹೇಗೆ ವರ್ಣಿಸುವುದು….

ಈಗ ಸಹ ವಂಶಾಡಳಿತ, ಜಮೀನ್ದಾರಿ ಪದ್ಧತಿ, ಕೆಲವು ಜಿಲ್ಲೆಗಳನ್ನು, ರಾಜ್ಯಗಳನ್ನು ಪಕ್ಷಗಳ ಹೆಸರಿನಲ್ಲಿ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊಂಡ ಉದಾಹರಣೆಗಳು ನಮ್ಮ ಮುಂದಿರುವಾಗ ಆಗಿನ ಕಾಲದಲ್ಲೇ ಅನುಭವ ಮಂಟಪದಲ್ಲಿ ಪ್ರಜಾಪ್ರಭುತ್ವದ ಅಂಶಗಳನ್ನು ಅಡಕಗೊಳಿಸಿದ ಬಸವೇಶ್ವರರ ದೂರದೃಷ್ಟಿ ಕಲ್ಪಿಸಿಕೊಳ್ಳಲು ಸಾಧ್ಯವೇ.

ಪಾದ ಪೂಜೆ, ಅಡ್ಡ ಪಲ್ಲಕ್ಕಿ, ಬೃಹತ್ ಬಂಗಲೆಗಳು, ಶಿಕ್ಷಣದ ವಾಣಿಜ್ಯೀಕರಣ, ಆಸ್ತಿಗಾಗಿ ಹೊಡೆದಾಟ ಬಡಿದಾಟ, ನ್ಯಾಯಾಲಯಕ್ಕೆ ಅಲೆದಾಟ, ಯಾವುದೋ ಪಕ್ಷದ ಅನುಯಾಯಿಗಳಾಗಿ ಸಂಪೂರ್ಣ ಮುಳಗಿರುವ ಅನೇಕ ಮಠಗಳು ಜನಪ್ರಿಯವಾಗಿರುವಾಗ ಮತ್ತೆ ಕಲ್ಯಾಣ ಸಾಧ್ಯವೇ….

ಲೈಂಗಿಕ ಕಾರ್ಯಕರ್ತೆಯರು ಇರಲಿ ಸಾಮಾನ್ಯ ಹೆಣ್ಣುಮಕ್ಕಳನ್ನೇ ದ್ವಿತೀಯ ದರ್ಜೆಯ ರೀತಿ ನಡೆಸಿಕೊಳ್ಳುತ್ತಿರುವಾಗ ಮತ್ತೆ ಕಲ್ಯಾಣ ಯಾವಾಗ,.‌……

ಪ್ರಜಾಪ್ರಭುತ್ವದ ತಳಹದಿ ಚುನಾವಣೆಯೇ ಬಹಿರಂಗವಾಗಿ ಜಾತಿಗಳ ಆಧಾರದ ಮೇಲೆ ನಡೆಯುತ್ತಿರುವಾಗ ಮತ್ತೆ ಕಲ್ಯಾಣ ಎಂದು…..

ಆದರೆ,
ಮತ್ತೆ ಕಲ್ಯಾಣ ಒಂದು ಅದ್ಭುತ ಚಿಂತನೆ.

ಗೆಳೆಯರೆ ಒಮ್ಮೆ ಸಮಾನತೆಯ ಸಮಾಜವನ್ನು ಕಲ್ಪಿಸಿಕೊಳ್ಳಿ.

ಇಡೀ ಕರ್ನಾಟಕದಲ್ಲಿ ಯಾರು ಯಾರನ್ನು ಬೇಕಾದರೂ ಕಾನೂನಿನ ಅಡಿಯಲ್ಲಿ ಜಾತಿಯ ಭೇದವಿಲ್ಲದೆ ಮದುವೆಯಾಗಬಹುದು. ಯಾವುದೇ ಜಾತಿಯ ಸಂಘಟನೆ ಅಥವಾ ಸಮಾವೇಶ ಇರುವುದಿಲ್ಲ. ಜಾತಿಯೇ ಇಲ್ಲದ ಮೇಲೆ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ. ಎಲ್ಲಾ ಮಂದಿರ ಮಸೀದಿ ಚರ್ಚುಗಳು ಎಲ್ಲರಿಗೂ ಮುಕ್ತ ಪ್ರವೇಶ.
ಜಾತಿ ರಹಿತ ಚುನಾವಣೆ. ಅರ್ಹರಿಗಷ್ಟೇ ಮತ. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಹಿಂಸೆ ಇರುವುದೇ ಇಲ್ಲ.
ಅಬ್ಬಾ ಎಷ್ಟೊಂದು ಸುಂದರ ಅಲ್ಲವೇ.

ಮನುಷ್ಯ ನಾಗರಿಕ ಜೀವನ ನಡೆಸಲು ಮತ್ತೆ ಕಲ್ಯಾಣದ ಅವಶ್ಯಕತೆ ಇದೆ. ಆದರೆ ಅದು ಬಸವೇಶ್ವರರ ಸಮಾನತೆಯ ಕಲ್ಪನೆಯಾಗಿರಬೇಕೆ ಹೊರತು ಇಂದಿನ ರಾಜಕಾರಣಿಗಳ ಮಠಾಧೀಶರುಗಳ, ಸ್ವಾರ್ಥ ನಾಯಕರ, ಸಂಕುಚಿತ ವಿಚಾರವಾದಿಗಳ ಕಲ್ಯಾಣವಲ್ಲ.

ಇಡೀ ವ್ಯಕ್ತಿತ್ವವೇ ಎಲ್ಲಾ ವಿಷಯಗಳಲ್ಲಿ ಸಮಾನತೆಯನ್ನು ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ಕಲ್ಯಾಣ ಕೇವಲ ಕನಸಿನ ಮಾತಾಗುತ್ತದೆ. ಆ ನಿಟ್ಟಿನಲ್ಲಿ ಹೋರಾಟಗಳು ನಡೆದರೆ ಅದನ್ನು ಸ್ವಾಗತಿಸುತ್ತಾ……..

ಹೀಗೆ ಇನ್ನೂ ಅನೇಕ ಸಾಧ್ಯತೆಗಳು ಇವೆ. ‌ಅದನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದಕ್ಕೆ ಅರ್ಥವಿರುತ್ತದೆ. ಇಲ್ಲದಿದ್ದರೆ ಔಪಚಾರಿಕತೆಯಿಂದ ನಮ್ಮಂತ ಜನ ಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ…..

ನುಡಿದಂತೆ ನಡೆ ಇರಲಿ ಎಂದು ಮನವಿ ಮಾಡಿಕೊಳ್ಳುತ್ತಾ…..
ಶರಣು ಶರಣಾರ್ಥಿಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!