ಹುಚ್ಚರ ಸಂತೆ ಕಣಣ್ಣ,
ಇದು ಹುಚ್ಚರ ಸಂತೆ……..
ಅಲ್ಲೊಬ್ಬ ಸಿನಿಮಾ ನಟನ ಕಟೌಟ್ ಗೆ ಲೀಟರ್ಗಟ್ಟಲೆ ಹಾಲು ಸುರಿಯುವನಣ್ಣ,
ಇಲ್ಲೊಬ್ಬ ದೇವರ ವಿಗ್ರಹಕ್ಕೆ ಕೇಜಿಗಟ್ಟಲೆ ತುಪ್ಪದ ನೈವೇದ್ಯ ಮಾಡುವನಣ್ಣ,
ಅಲ್ಲೊಬ್ಬಳು 60 ರೂಪಾಯಿ ಎಳನೀರಿಗೆ ಚೌಕಾಸಿ ಮಾಡುವಳಣ್ಣ,
ಇಲ್ಲೊಬ್ಬಳು ಬ್ಯೂಟಿಪಾರ್ಲರ್ ನಲ್ಲಿ 500 ರೂಪಾಯಿ ಟಿಪ್ಸ್ ಎಸೆಯುವಳಣ್ಣ,
ಅವನೊಬ್ಬ ಸಾವಿರಾರು ಕೋಟಿ ವಂಚಿಸಿ ಓಡಿ ಹೋಗುವನಣ್ಣ,
ಇವನೊಬ್ಬ 10000 ರೂಪಾಯಿ ಸಾಲಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವನಣ್ಣ,
ಹೋಟೆಲ್ ನಲ್ಲಿ ಚಮಚ ಕದ್ದವನನ್ನು ಜನ ಅಟ್ಟಾಡಿಸಿ ಹೊಡೆದರಣ್ಣ,
ಅತ್ಯಾಚಾರ ಮಾಡಿ 5 ವರ್ಷ ಜೈಲಲ್ಲಿದ್ದು ಬಂದವನನ್ನು ಎತ್ತಿ ಮುದ್ದಾಡಿದರಣ್ಣ,
ಶ್ರಮದ, ಆದರೆ ಲೆಕ್ಕವಿಡದ ಚಿಕ್ಕ ಹಣವೂ ಕಪ್ಪಾಗುವುದಣ್ಣ,
ಚಾಣಾಕ್ಷ ವಂಚಕ ವ್ಯಾಪಾರಿಯ ಸಾವಿರಾರು ಕೋಟಿ ಬಿಳಿಯಾಗುವುದಣ್ಣ,
ಕಣ್ಣು ಮಿಟುಕಿಸಿ, ನಾಲಿಗೆ ಹೊರಳಿಸಿ, ದೇಹ ಕುಣಿಸಿ, ಬೆರಳಲ್ಲಿ ಅಕ್ಷರ ಮೂಡಿಸುವವನಿಗೆ ಪ್ರತಿಭಾವಂತನೆಂದು ಕೋಟಿ ಕೊಡುವರಣ್ಣ,
ಮೂಟೆ ಹೊತ್ತು, ಬೆವರು ಸುರಿಸಿ ರಕ್ತ ಬಸಿಯುವವನಿಗೆ 300 ರ ಕೂಲಿ ಕೊಡುವರಣ್ಣ,
ಹೊಟ್ಟೆ ಪಾಡಿಗೆ ತನ್ನ ಮೈಮಾರಿ ಬದುಕುವವಳನ್ನು ಛೀ, ಥೂ ಅನ್ನುವರಣ್ಣ,
ಕೈನೋಡಿ, ಮೈನೋಡಿ, ಸುಳ್ಳು ಭವಿಷ್ಯ ಹೇಳುವವನನ್ನು ದೇವರೆನ್ನುವರಣ್ಣ,
ನೀನೊಬ್ಬ ಗೆದ್ದಲು ಹುಳುವಿಗೆ ಆಹಾರವಾಗುವ, ಬೆಂಕಿಗೆ ಸುಟ್ಟು ಬೂದಿಯಾಗುವ, ಮೂಳೆ ಮಾಂಸದ ಮುದ್ದೆ ಎಂದರೆ ಕಲ್ಲಿನಲ್ಲಿ ಹೊಡೆಯುವರಣ್ಣ,
ಹಿಂದಿನ ಜನ್ಮದಲ್ಲಿ ರಾಜನಾಗಿದ್ದೆ, ಮುಂದಿನ ಜನ್ಮದಲ್ಲಿ ಪ್ರಧಾನಿಯಾಗುವೆ ಎಂದರೆ ಹಣಕೊಟ್ಟು ಕಾಲಿಗೆ ಬೀಳುವರಣ್ಣ,
ಸಾಕ್ಷಿ ಉಳಿಸದೆ ಕೊಲೆ ಮಾಡಿ,
ಕಣ್ಣ ಮುಂದೆ ಜನರ ಮೇಲೆ ಕುಡಿದು ಕಾರು ಹತ್ತಿಸಿದರೂ, ಹಣಕೊಟ್ಟು ಸುಳ್ಳು ವಾದಿಸಿದರೆ ನಿರಪರಾಧಿ ಎನ್ನುವರಣ್ಣ,
ಸಾಕ್ಷಿ ಕೊಟ್ಟರೂ, ನಿರಪರಾಧಿಯಾದರೂ, ಹಣವಿಲ್ಲದ್ದರಿಂದ ಜೈಲಿನಲ್ಲಿ ಕೊಳೆಯುತ್ತಿರುವರಣ್ಣ,
ಬೆನ್ನಿಗೆ ಚೂರಿ ಇರಿಯುವವರನ್ನು ತ್ಯಾಗಿಗಳು ಎನ್ನುವರಣ್ಣ,
ಸಮಾಜ ಸೇವಕರನ್ನು ಸ್ವಾರ್ಥಿಗಳು ಎನ್ನುವರಣ್ಣ,
ಚೆನ್ನಾಗಿ ಮಾತನಾಡುವವರನ್ನು ಬುದ್ದಿವಂತರೆನ್ನುವರಣ್ಣ,
ಚೆನ್ನಾಗಿ ಕೆಲಸ ಮಾಡುವವರನ್ನು ಮೂರ್ಖರೆನ್ನುವರಣ್ಣ,
ಸತ್ಯ ಹೇಳುವವನು ಹುಚ್ಚನಾಗುವ,
ಸುಳ್ಳು ಹೇಳುವವನು ರಾಜನಾಗುವ,.
ಹುಚ್ಚರ ಸಂತೆ ಕಣಣ್ಣ ಇದು ಹುಚ್ಚರ ಸಂತೆ,
ಈ ಹುಚ್ಚರ ಸಂತೆಯಲ್ಲಿ ಕನಸು ಮಾರುವ ದೊಡ್ಡ ಹುಚ್ಚ ನಾನೇ ಕಣಣ್ಣ…….
ಮನಸ್ಸಿನ ಏರಿಳಿತಗಳು……..
ಮನಸ್ಸೆಂಬುದು Re chargeable battery ಇದ್ದಂತೆ.
Full charge ಆದಾಗ ಲವಲವಿಕೆಯಿಂದ ಇರುತ್ತದೆ.
ಬ್ಯಾಟರಿ Low ಆಗುತ್ತಿದ್ದಂತೆ ಉತ್ಸಾಹ ಕಡಿಮೆಯಾಗುತ್ತಾ ಸಾಗುತ್ತದೆ. ಸಂಪೂರ್ಣ ಕಡಿಮೆಯಾಗಿ Dead level ಗೆ ಬಂದಾಗ ಜೀವನವೇ ಬೇಸರವಾಗುತ್ತದೆ.
ಅದನ್ನು ಮತ್ತೆ ಮತ್ತೆ Charge ಮಾಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದೇ.
ಎಷ್ಟೋ ಜನರಿಗೆ ಬದುಕಿನ ಅನಿವಾರ್ಯತೆಯಿಂದಾಗಿ ಅಥವಾ ಆಕಸ್ಮಿಕಗಳಿಂದಾಗಿ ಅಥವಾ ದುರಾದೃಷ್ಟದಿಂದಾಗಿ ಜೀವನ ಪ್ರಪಾತಕ್ಕೆ ಕುಸಿಯುತ್ತದೆ. ಕೆಲವೊಮ್ಮೆ ನಿಧಾನವಾಗಿ ಮತ್ತೆ ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಸಂಭವಿಸುತ್ತದೆ.
ಒಮ್ಮೊಮ್ಮೆ ಅದರ ತೀವ್ರತೆ ಎಷ್ಟಿರುತ್ತದೆ ಎಂದರೆ ನಾಳೆ ನನಗೆ ಬದುಕಿನ ಕೊನೆ ದಿನವಾಗಿರುತ್ತದೆ ಎಂದೇ ಭಾಸವಾಗುತ್ತದೆ. ದೇವರೋ – ರಕ್ತ ಸಂಬಂಧಿಗಳೋ – ಆತ್ಮೀಯರೋ ಅಥವಾ ಇನ್ಯಾರೋ ಬಂದು ನಮ್ಮನ್ನು ಕಾಪಾಡಬಹುದು ಎಂಬ ನಿರೀಕ್ಷೆ ಹುಸಿಯಾದಾಗ ನಮ್ಮ ಮನಸ್ಸಿನ ಬ್ಯಾಟರಿ All most dead level ಗೆ ಬಂದಿರುತ್ತದೆ.
ಇಂತಹ ಕಠಿಣ ಸಂದರ್ಭದಲ್ಲಿಯೇ ನಾವು ಯಾರಿಗೂ ಕಾಯದೆ ಆ ಸಂಕಷ್ಟದಿಂದ ಹೊರಬರುವವರೆಗೂ ಪ್ರತಿ ರಾತ್ರಿ ಮಲಗುವಾಗ ಮತ್ತು ಪ್ರತಿದಿನ ಬೆಳಗ್ಗೆ ಏಳುವಾಗ ನಮ್ಮ ಒಳಗಿನ ಆತ್ಮಶಕ್ತಿಯಿಂದಲೇ ಮನಸ್ಸೆಂಬ ಬ್ಯಾಟರಿಯನ್ನು ಸ್ವತಃ Charge ಮಾಡಿಕೊಳ್ಳಬೇಕು.
ಇಲ್ಲದಿದ್ದರೆ ನಮ್ಮ ಅವಸಾನ ಬಹುತೇಕ ನಿಶ್ಚಿತವಾಗುತ್ತದೆ.
ಅದರಲ್ಲೂ ಭಾರತೀಯ ಮಧ್ಯಮ ವರ್ಗದವರ ಜೀವನದಲ್ಲಿ ಇದು ಒಂದಲ್ಲ ಒಂದು ಸಮಯದಲ್ಲಿ ಎದುರಾಗತ್ತಲೇ ಇರುತ್ತದೆ. ಅವರ ಮನಸ್ಸಿನ ಬ್ಯಾಟರಿಯ ಏರಿಳಿತ ತುಂಬಾ ಇರುತ್ತದೆ.
ಮನಸ್ಸು ಕೂಡ ಸದಾ ದ್ವಂದ್ವ ಮತ್ತು ಚಂಚಲತೆಯಿಂದಲೇ ಕೂಡಿರುತ್ತದೆ.
ವಿದ್ಯಾಭ್ಯಾಸದ ಸಮಯದಲ್ಲಿ ಒಂದು ಮನಸ್ಸು ಓದುವ, ಇನ್ನೊಂದು ಮನಸ್ಸು ಆಟವಾಡಲು ಪ್ರೇರೇಪಿಸುತ್ತದೆ. ಯೌವನದಲ್ಲಿ ಒಂದು ಪ್ರೀತಿಸುವ, ಇನ್ನೊಂದು ದ್ವೇಷಿಸುವ ಒತ್ತಡ ಹೇರುತ್ತದೆ. ಕೆಲವೊಮ್ಮೆ ನಮಗೆ ಅನ್ಯಾಯ ಅಥವಾ ವಂಚನೆ ಅಥವಾ ನೋವಾದಾಗ ಉದ್ವೇಗಕ್ಕೆ ಒಳಗಾಗುವ ನಾವು ಅದಕ್ಕೆ ಕಾರಣವಾದವರನ್ನು ಕೊಲ್ಲಲು ಒಂದು ಮನಸ್ಸು ಸೂಚಿಸುತ್ತದೆ. ಅದೇ ಸಂದರ್ಭದಲ್ಲಿ ನಮ್ಮೊಳಗೇ ಅಡಗಿರುವ ಇನ್ನೊಂದು ಮನಸ್ಸು,
ಛೆ, ಬೇಡ ಕೊಲೆ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಅದಕ್ಕೆ ಬದಲಾಗಿ ಇರಬಹುದಾದ ಇತರ ಪರ್ಯಾಯಗಳನ್ನು ಸೂಚಿಸುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ನಾವು ಕೈಗೊಳ್ಳುವ ನಿರ್ಧಾರ ಅಥವಾ ಯಾವ ಮನಸ್ಸಿನ ಮಾತನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂಬುದು ಬಹುತೇಕ ನಮ್ಮ ಭವಿಷ್ಯವನ್ನು ಮತ್ತು ಜೀವನದ ವಿಧಾನವನ್ನು ನಿರ್ಧರಿಸುತ್ತದೆ.
ನಮ್ಮ ಮನಸ್ಸೇ ನಮಗೆ ಗುರು,
ನಮ್ಮ ಮನಸ್ಸೇ ನಮಗೆ ಮಿತ್ರ,
ನಮ್ಮ ಮನಸ್ಸೇ ನಮಗೆ ಶತ್ರು,
ನಮ್ಮ ಮನಸ್ಸೇ ನಮಗೆ ಮಾರ್ಗದರ್ಶಕ,
ಅದರ ಆಯ್ಕೆಯ ಅವಕಾಶವೂ ನಮಗಿರುತ್ತದೆ. ಯಾವುದನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಅಪ್ಪಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನಶೈಲಿ ನಿರ್ಧಾರವಾಗುತ್ತದೆ.
ಅರಿವೆಂಬ ಜ್ಞಾನದ ಮತ್ತು ಅಂತರಾತ್ಮದ ವಿದ್ಯುತ್ತಿನಿಂದ ನಮ್ಮ ಮನಸ್ಸೆಂಬ Re chargeable battery ಯನ್ನು ಸದಾ ಚಾರ್ಜ್ ಮಾಡಿಕೊಳ್ಳುತ್ತಾ ನೂರು ವರ್ಷಗಳ ವಾರಂಟಿ ಮತ್ತು ಗ್ಯಾರಂಟಿ ಮುಗಿಯುವವರೆಗೂ ಉತ್ತಮ ರೀತಿಯಲ್ಲಿ ಕಾಪಾಡೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
