ಕುಂದಾಪುರ: ದಿನಾಂಕ:21-11-2026(ಹಾಯ್ ಉಡುಪಿ ನ್ಯೂಸ್) ಅಂಗಡಿಗೆ ಗುಟ್ಕಾ ತರಲು ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಇಬ್ಬರು ವ್ಯಕ್ತಿಗಳು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಜ್ಜಾಡಿ ಗ್ರಾಮದ ನಾಯಕವಾಡಿ–ಸಂಗಮೇಶ್ವರ ರಸ್ತೆಯ ಬಳಿ ನವೆಂಬರ್ 20ರಂದು ರಾತ್ರಿ ನಡೆದಿದೆ.
ಗುಜ್ಜಾಡಿ ಗ್ರಾಮದ ಉದಯ (35) ಹಲ್ಲೆಗೊಳಗಾದವರು. ಅವರು ರಾತ್ರಿ ಸುಮಾರು 8:30 ಗಂಟೆಗೆ ಅಂಗಡಿಗೆ ಗುಟ್ಕಾ ತರಲು ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ರವಿ ಮತ್ತು ಸುರೇಶ್ ಮನೆಯ ಕಡೆಯಿಂದ ಏಕಾಏಕಿ ರಸ್ತೆಗೆ ಓಡಿ ಬಂದು ಬಟ್ಟೆಯಲ್ಲಿ ಸುತ್ತಿದ ಕಬ್ಬಿಣದ ರಾಡ್ನಿಂದ ತಲೆಗೆ ಹಾಗೂ ಕೈಕಾಲುಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ಉದಯ ಅವರ ಬಲ ಕಾಲಿನ ಮುಂಗಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿದ್ದು, ಎಡಕೈಗೂ ನೋವುಂಟಾಗಿದೆ. ಗಾಯಾಳುವನ್ನು ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಇದಲ್ಲದೆ, ಆರೋಪಿಗಳು ಉದಯ ಅವರ ಮನೆ ಬಳಿಗೆ ಪದೇಪದೇ ಬಂದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 118(1), 352, 351(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
