ಕಾರ್ಕಳ: ದಿನಾಂಕ:21-11-2026(ಹಾಯ್ ಉಡುಪಿ ನ್ಯೂಸ್) ಮನೆಗೆ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬನನ್ನು ತಡೆದು ನಿಲ್ಲಿಸಿ, ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದ ಮೇಲಿನ ಕುಕ್ಕುಜೆ ಹಾಡಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದವರು ಮೇಲಿನ ಕುಕ್ಕುಜೆ ನಿವಾಸಿ ಶೇಖ್ ನಜೀರ್ ಅವರ ಪುತ್ರ ಇರ್ಷಾದ್ ಶೇಖ್ (21) ಎಂದು ಗುರುತಿಸಲಾಗಿದೆ.
ನ. 19ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಇರ್ಷಾದ್ ಅವರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ, ಅವರ ಚಿಕ್ಕಪ್ಪನ ಮಗ ರಿಮಾನ್ ಎಂಬಾತ ತನ್ನ ತಂದೆ ರಿಯಾಜ್ಗೆ ಫೋನ್ ಮಾಡಿ ಇರ್ಷಾದ್ ಬರುತ್ತಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ.
ನಂತರ ರಿಯಾಜ್ ಮತ್ತು ರಿಫಾನ್ ಗ್ರೇ ಬಣ್ಣದ ಸ್ಕೂಟರ್ನಲ್ಲಿ ಸ್ಥಳಕ್ಕೆ ಬಂದಿದ್ದು, ರಿಹಾನ್ ಕೂಡ ಅಲ್ಲಿಗೆ ಆಗಮಿಸಿದ್ದಾನೆ. ಈ ವೇಳೆ ರಿಯಾಜ್ ಇರ್ಷಾದ್ ಅವರನ್ನು ತಡೆದು ನಿಲ್ಲಿಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಕೈಯಿಂದ ದೂಡಿ ಕೆಳಗೆ ಬೀಳಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ರಿಹಾನ್ ಮತ್ತು ರಿಮಾನ್ ಕಾಲಿನಿಂದ ಬೆನ್ನಿಗೆ ಹಾಗೂ ಎದೆಗೆ ತುಳಿದು ಹಲ್ಲೆ ನಡೆಸಿದ್ದು, ನಾಲ್ವರು ಸೇರಿ ಕೈಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ರಿಹಾನ್ ತಂದಿದ್ದ ಕಬ್ಬಿಣದ ಮಂಡೆ ಕತ್ತಿಯಿಂದ ಬೀಸಿದಾಗ ಇರ್ಷಾದ್ ತಪ್ಪಿಸಿಕೊಂಡಿದ್ದಾರೆ. ಬಳಿಕ ರಿಯಾಜ್ ಆ ಕತ್ತಿಯನ್ನು ರಿಹಾನ್ನಿಂದ ಪಡೆದು ಅದರ ಹಿಡಿಯಿಂದ ಇರ್ಷಾದ್ ಅವರ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಇರ್ಷಾದ್ ಬೊಬ್ಬೆ ಹಾಕಿದಾಗ ಅವರ ಚಿಕ್ಕಪ್ಪ ಜಾಹಿರ್, ತಾಯಿ ಶಬಾನಾ ಬಾನು ಹಾಗೂ ನೆರೆಮನೆಯ ಬಿಲಾಲ್ ಸ್ಥಳಕ್ಕೆ ಧಾವಿಸಿದ್ದು, ಅವರನ್ನು ಕಂಡ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಇರ್ಷಾದ್ ಅವರನ್ನು ಕುಟುಂಬಸ್ಥರು ಹಾಗೂ ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 99/2026ರಂತೆ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 126(2), 115(2), 118(1), 352, 351(2) ಹಾಗೂ 3(5)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
