IMG_20261118_134345.png
Spread the love

ಉಡುಪಿ: ದಿನಾಂಕ:18-11-2026(ಹಾಯ್ ಉಡುಪಿ ನ್ಯೂಸ್) ಸಿಬಿಐ ಹಾಗೂ ದೆಹಲಿ ಪೊಲೀಸರೆಂದು ಪರಿಚಯಿಸಿಕೊಂಡು, ಮನಿ ಲಾಂಡರಿಂಗ್‌, ಡ್ರಗ್ಸ್‌ ಮತ್ತು ಮಕ್ಕಳ ಅಪಹರಣ ಪ್ರಕರಣದಲ್ಲಿ ನಿಮ್ಮ ಹೆಸರಿದೆ ಎಂದು ಬೆದರಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 15,98,976 ರೂ. ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ವರದಿಯಾಗಿದೆ.
ಉಡುಪಿಯ ಶೇಷಾಚಲ (51) ಎಂಬವರಿಗೆ 2026ರ ಅಕ್ಟೋಬರ್ 18ರಂದು ಅಪರಿಚಿತ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ಕರೆ ಮಾಡಿ, ದೆಹಲಿಯಲ್ಲಿ ಅವರ ಹೆಸರಿನ ಐಸಿಐಸಿಐ ಬ್ಯಾಂಕ್ ಪಾಸ್‌ಬುಕ್ ಪತ್ತೆಯಾಗಿದ್ದು, ಅದು ಪಂಕಜ್ ಶರ್ಮಾ ಎಂಬಾತನ ಮನಿ ಲಾಂಡರಿಂಗ್‌, ಡ್ರಗ್ಸ್‌ ಹಾಗೂ ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ತಿಳಿಸಿದ್ದಾನೆ.
ಅಲ್ಲದೆ, ತಾನು ದೆಹಲಿ ಸಿಬಿಐ ಪೊಲೀಸ್ ಎಂದು ಪರಿಚಯಿಸಿಕೊಂಡು, ನಿಮ್ಮನ್ನು ಬಂಧಿಸಲು ನ್ಯಾಯಾಲಯದಿಂದ ಆದೇಶ ಬಂದಿದೆ. ತಕ್ಷಣ ದೆಹಲಿಗೆ ಬರಬೇಕು ಅಥವಾ ವಿಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಬೆದರಿಸಿದ್ದಾನೆ. ಬಳಿಕ ಪಿರ್ಯಾದಿದಾರರ ಪತ್ನಿಯ ಮೊಬೈಲ್‌ಗೆ ವಿಡಿಯೋ ಕರೆ ಮಾಡಿ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ತಾನು ದೆಹಲಿ ಪೊಲೀಸರ ತನಿಖಾಧಿಕಾರಿ ಎಂದು ನಂಬಿಸಿದ್ದಾನೆ. ಇನ್ನೊಬ್ಬ ವ್ಯಕ್ತಿಯೂ ಕರೆ ಮಾಡಿ ಪ್ರತಿ ಗಂಟೆಗೊಮ್ಮೆ ಮಾಹಿತಿ ನೀಡಬೇಕು ಹಾಗೂ ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಎಚ್ಚರಿಸಿದ್ದಾನೆ.

ನಂತರ ಆರೋಪಿತರು ಪಿರ್ಯಾದಿದಾರರ ಹಣ, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು, ಆರ್‌ಬಿಐ ತನಿಖೆಯ ನೆಪದಲ್ಲಿ ಹಣವನ್ನು ತಾವು ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಶೇಷಾಚಲ ಅವರು ಅಕ್ಟೋಬರ್ 31ರಂದು ಯೆಸ್ ಬ್ಯಾಂಕ್ ಖಾತೆಗೆ 11 ಲಕ್ಷ ರೂ. ಹಾಗೂ ನವೆಂಬರ್ 5ರಂದು ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 4,98,976 ರೂ.ಗಳನ್ನು ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.
ಹೀಗೆ ಪೊಲೀಸ್ ಅಧಿಕಾರಿಗಳೆಂದು ನಂಬಿಸಿ, ಬಂಧನದ ಭಯವೊಡ್ಡಿ ಒಟ್ಟು 15,98,976.40 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4), 319(2), 308(2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!