ಕಲಿಯುತ್ತಿದ್ದೇನೆ ನಾನು…
ಇತಿಹಾಸದ ಪುಟಗಳಿಂದ,
ಅನುಭವದ ಪಾಠಗಳಿಂದ,
ಓದಿನ ಅಭ್ಯಾಸದಿಂದ,
ಹಿರಿಯರ ಹಿತವಚನದಿಂದ,
ಕಿರಿಯರ ಕನಸುಗಳಿಂದ…..
ಕಲಿಯಲೇ ಬೇಕಲ್ಲವೇ…
ಇರುವುದನ್ನು ಉಳಿಸಲು,
ಉಳಿದದ್ದನ್ನು ಬೆಳೆಸಲು,
ಬೆಳೆದದ್ದನ್ನು ಮುನ್ನಡೆಸಲು,
ಮುನ್ನಡೆದು ಗುರಿತಲುಪಲು…..
ಹೊಸದನ್ನು ಸೃಷ್ಟಿಸಲು ನಾನೇನು ಸೃಷ್ಟಿಕರ್ತನೇ……
ಇಲ್ಲಿ ಯಾವುದನ್ನೂ ಸೃಷ್ಟಿಸಲು ಸಾಧ್ಯವಿಲ್ಲ,
ಇಲ್ಲಿ ಯಾವುದನ್ನೂ ನಾಶ ಪಡಿಸಲು ಸಾಧ್ಯವಿಲ್ಲ,
ರೂಪವನ್ನು ಬದಲಾಯಿಸಬಹುದು,
ಗುಣಗಳನ್ನು ಅಳವಡಿಸಿಕೊಳ್ಳಬಹುದು..
ಬದಲಾಗಲೇ ಬೇಕಲ್ಲವೇ..
ಬದಲಾಗದಿದ್ದರೆ ಬದುಕಿಗೆ ಅರ್ಥವಿದೆಯೇ….
ಬೆತ್ತಲೆ ಜಗತ್ತಿನಿಂದ ವಜ್ರವೈಡೂರ್ಯದವರೆಗೆ,
ಕತ್ತಲೆ ಜಗತ್ತಿನಿಂದ ವಿದ್ಯುತ್ ದೀಪಗಳವರೆಗೆ,
ಕಾಲ್ನಡಿಗೆಯಿಂದ ರಾಕೆಟ್ ಯುಗದವರೆಗೆ,
ಕಲ್ಲಿನ ಗುಹೆಗಳಿಂದ ಬೃಹತ್ ಬಂಗಲೆಯವರೆಗೆ…..
ಕಲಿತಿರುವುದು ಏನನ್ನು…..
ಪರರ ಆಸ್ತಿಯನ್ನು ವಂಚಿಸುವುದು,
ಸ್ತ್ರೀಯರನ್ನು ಶೋಷಿಸುವುದು,
ಅಧಿಕಾರವನ್ನು ಮೋಹಿಸುವುದು,
ಪರಿಸರವನ್ನು ನಾಶ ಮಾಡುವುದು…..
ಕಲಿಯಬೇಕಾಗಿರುವುದು ಏನನ್ನು………
ಜೀವಪರ ಮೌಲ್ಯಗಳನ್ನು,
ಶಾಂತಿಯ ಮಂತ್ರಗಳನ್ನು,
ನೆಮ್ಮದಿಯ ತಂತ್ರಗಳನ್ನು,
ಸಹನೆ ಸಭ್ಯತೆಯ ಪಾಠಗಳನ್ನು……
ಮುನ್ನಡೆಯಬೇಕಿದೆ ಜೀವನದ ಸಾರ್ಥಕತೆಯೆಡೆಗೆ…….
ಕಲಿಯುತ್ತಾ, ಕಲಿಸುತ್ತಾ,
ಅನುಭಾವದಲಿ
ಅನುಭವಿಸುತ್ತಾ,
ಸಾರ್ಥಕತೆಯೆಡೆಗೆ……
ಅದುವೇ ಮಾನವ ಜೀವನ……
ಬೆಳಗಿನ ಬಿಸಿಲೇರಿದಂತೆ ಕನಸುಗಳ ಗೋಪುರ ಕಟ್ಟುತ್ತೇನೆ…..
ಮಧ್ಯಾಹ್ನ ಕನಸುಗಳ ಗೋಪುರದ ವಿನ್ಯಾಸ ಕಲ್ಪಿಸಿಕೊಳ್ಳುತ್ತೇನೆ……..
ಸಂಜೆಯ ಇಳಿಗತ್ತಲಿನಲ್ಲಿ ಕನಸುಗಳ ಗೋಪುರ ಛಿದ್ರವಾಗುತ್ತದೆ…….
ಪ್ರತಿದಿನವೂ ಹೊಸ ಹೊಸ ಕನಸುಗಳು……
ಪ್ರತಿ ರಾತ್ರಿಗಳು ನಿರಾಸೆಯ ನಿಟ್ಟುಸಿರು…..
ಮಧ್ಯರಾತ್ರಿಗಳ ದಿಢೀರ್ ಎಚ್ಚರದಲ್ಲಿ ಹಿಂಸಾತ್ಮಕ ನರಳಾಟ….
ಬೆಳಗಿನ ಜಾವದ ಕೆಟ್ಟ ಕನಸುಗಳು…..
ಓಡುತ್ತಿದ್ದೇನೆ ಕನಸುಗಳ ಹಿಡಿಯಲು….
ಎಡವುತ್ತೇನೆ, ಬೀಳುತ್ತೇನೆ, ಚೀರುತ್ತೇನೆ ಕನಸುಗಳ ಹಿಡಿಯಲಾಗದೆ……
ಸುತ್ತಲೂ ನೋಡುತ್ತೇನೆ, ಯಾರಾದರೂ ಇದ್ದಾರೆಯೇ ಎಂದು….
ಕನಸುಗಳು ನನ್ನ ಸ್ವಂತದವು, ಪಾಪ ಅದಕ್ಕೆ ಯಾರ ಸಹಾಯವೂ ಸಾಕಾಗುವುದಿಲ್ಲ….
ಮತ್ತೆ ಏಳುತ್ತೇನೆ, ಸಮಾಧಾನ ಪಡಿಸಿಕೊಳ್ಳುತ್ತೇನೆ……
ಓಡುತ್ತೇನೆ, ನೋಯುತ್ತೇನೆ, ಕೋಪಗೊಳ್ಳುತ್ತೇನೆ, ನಿರಾಶನಾಗುತ್ತೇನೆ, ಕುಸಿಯುತ್ತೇನೆ….
ಮನಸ್ಸು ಕೇಳುವುದಿಲ್ಲ. ದೇಹದ ಆಯಾಸವನ್ನು ಲೆಕ್ಕಿಸದೆ ಮುನ್ನುಗ್ಗಲು ಪ್ರೇರೇಪಿಸುತ್ತದೆ…..
ಮತ್ತೆ ಚಿಗುರುತ್ತೇನೆ, ಬೆಳೆಯುತ್ತೇನೆ, ನಡೆಯುತ್ತೇನೆ, ಓಡುತ್ತೇನೆ,
ಕೈ ಚಾಚುತ್ತೇನೆ……
ಕನಸುಗಳ ಹಿಡಿಯಲು……
ಕನಸುಗಳು ಸಿಗುವವರೆಗೂ,
ಅದನ್ನು ನಿಮಗೆ ತಲುಪಿಸುವವರೆಗೂ ಧಣಿವರಿಯದೆ ಓಡುತ್ತಲೇ ಇರುತ್ತೇನೆ….
ಆತ್ಮಸಾಕ್ಷಿಯಾಗಿ ಹೇಳುತ್ತೇನೆ…..
ಒಳಗೆ ಜ್ವಾಲಾಮುಖಿ ಹೊರಗೆ ಸಹನೆಯ ಮುಖವಾಡ ತೊಟ್ಟು,
ನಾನು ಹಿಡಿಯಲು ಹೊರಟಿರುವ ಕನಸುಗಳು…
ಪ್ರೀತಿಯ ಕನಸುಗಳು,
ಸ್ನೇಹದ ಕನಸುಗಳು,
ಸೌಹಾರ್ಧತೆಯ ಕನಸುಗಳು,
ಸಭ್ಯತೆಯ ಕನಸುಗಳು,
ಕರುಣೆಯ ಕನಸುಗಳು,
ಕ್ಷಮಾಗುಣದ ಕನಸುಗಳು,
ಸ್ವಾತಂತ್ರ್ಯದ ಕನಸುಗಳು,
ಸಮಾನತೆಯ ಕನಸುಗಳು,
ಸ್ವಾಭಿಮಾನದ ಕನಸುಗಳು,
ಮಾನವೀಯತೆಯ ಕನಸುಗಳು,
ನೆಮ್ಮದಿಯ ಬದುಕಿಗಾಗಿ ಇರುವ ಮಾರ್ಗಗಳನ್ನು ಹುಡುಕುವಾ ಕನಸುಗಳು…….
ಅದು ನನಗಾಗಿಯಲ್ಲ,
ನಿಮಗಾಗಿ,
ಈ ಸಮಾಜಕ್ಕಾಗಿ…..
ಕನಸುಗಳ ಹುಡುಕುವುದೇ ನನ್ನ ಕಾಯಕ….
ಸಿನಿಮಾ ಹಾಡೊಂದನ್ನು ಗುನುಗುತ್ತಾ ಮತ್ತೆ ಓಡುತ್ತೇನೆ…….
” ಗೆದ್ದೇ ಗೆಲ್ಲುವೆ ಒಂದು ದಿನ,
ಗೆಲ್ಲಲೇ ಬೇಕು ಒಳ್ಳೆತನ “
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
