ಕೋಟ: ದಿನಾಂಕ:17-11-2026(ಹಾಯ್ ಉಡುಪಿ ನ್ಯೂಸ್)ಪತಿ ಹಾಗೂ ಎರಡನೇ ಪತ್ನಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ಶ್ರೀನಿವಾಸ ಮೂರ್ತಿ ಹೆಚ್. (53) ಹಾಗೂ ಅವರ ಎರಡನೇ ಪತ್ನಿ ಗಂಗಾ (48) ಮೃತಪಟ್ಟವರು.
ಶ್ರೀನಿವಾಸ ಮೂರ್ತಿ ಅವರು ಸುಮಾರು 17–18 ವರ್ಷಗಳ ಹಿಂದೆ ಗಂಗಾ ಅವರನ್ನು ಎರಡನೇ ವಿವಾಹವಾಗಿದ್ದು, ಇಬ್ಬರೂ ಕೊರಟಗೆರೆ ಸಮೀಪ ಪ್ರತ್ಯೇಕವಾಗಿ ವಾಸವಾಗಿದ್ದರು ಎನ್ನಲಾಗಿದೆ.
ನವೆಂಬರ್ 6ರಂದು ಕಟೀಲು, ಕೊಲ್ಲೂರು ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವುದಾಗಿ ತಿಳಿಸಿ ಇಬ್ಬರೂ ಮನೆಯಿಂದ ತೆರಳಿದ್ದರು. ನವೆಂಬರ್ 14ರಂದು ಬೆಳಿಗ್ಗೆ 10.30ಕ್ಕೆ ಕೊನೆಯದಾಗಿ ಕುಟುಂಬದವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ.
ನವೆಂಬರ್ 15ರಂದು ಬೆಳಿಗ್ಗೆ ಶ್ರೀನಿವಾಸ ಮೂರ್ತಿ ಅವರ ಪುತ್ರ ನಿಖಿಲೇಶ್ ಅವರಿಗೆ ಗಂಗಾ ಅವರ ಸಹೋದರ ಗೋವಿಂದರಾಜು ಕರೆ ಮಾಡಿ, ದಂಪತಿ ಮೃತಪಟ್ಟಿರುವ ವಿಚಾರ ತಿಳಿಸಿದ್ದು, ಮಾಬುಕಳ ಸಮೀಪದ ಹಂಗಾರಕಟ್ಟೆ ಸೇತುವೆ ಬಳಿ ನಡೆದ ಘಟನೆಯ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ರೀನಿವಾಸ ಮೂರ್ತಿ ಅವರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರೆ, ಗಂಗಾ ಅವರು ಆರೋಗ್ಯ ಸಮಸ್ಯೆ ಹಾಗೂ ಮಕ್ಕಳಿಲ್ಲದ ವಿಚಾರದಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 49/2026, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
