ಪಡುಬಿದ್ರಿ: ದಿನಾಂಕ:15-11-2026(ಹಾಯ್ ಉಡುಪಿ ನ್ಯೂಸ್) ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ, ಕಾರಿನಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿದ ಆರೋಪದ ಮೇರೆಗೆ ಆರು ಜನರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಅಂಗಾಕಟ್ಟೆ ನಿವಾಸಿ ನಾಗೇಶ್ (47) ಅವರು ನವೆಂಬರ್ 13ರಂದು ತಮ್ಮ ತಾಯಿ, ಪತ್ನಿ, ಮಕ್ಕಳು ಹಾಗೂ ತಮ್ಮನ ಕುಟುಂಬದವರೊಂದಿಗೆ KA-51-MP-3007 ನಂಬ್ರದ ಕಾರಿನಲ್ಲಿ ಮಂಗಳೂರಿನ ಕೊರಗಜ್ಜ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದರು.
ಮಧ್ಯಾಹ್ನ ಕಾಪು ತಾಲೂಕಿನ ಬಡಾ ಗ್ರಾಮದ ಎರ್ಮಾಳು ಎಂಬಲ್ಲಿ ಅಶೋಕ್ ಎಂಬುವವರ ಹೋಟೆಲ್ ಎದುರು ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಊಟ ಮುಗಿಸಿ ವಾಪಸು ಕಾರಿನ ಬಳಿ ಬಂದಾಗ ಕಿರಣ್ ಕುಮಾರ್ ಹಾಗೂ ಇತರ ಐವರು ಆರೋಪಿಗಳು KA-20-MF-5871 ಮತ್ತು KA-51-MC-8686 ನಂಬ್ರದ ಕಾರುಗಳನ್ನು ಮುಂದೆ ಹಾಗೂ ಹಿಂದೆ ನಿಲ್ಲಿಸಿ, ಅವರ ಕಾರು ಚಲಿಸದಂತೆ ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.
ಈ ವೇಳೆ ಹಣ ವಾಪಸು ನೀಡುವ ವಿಚಾರವಾಗಿ ನಾಗೇಶ್ ಅವರ ತಮ್ಮನೊಂದಿಗೆ ವಾಗ್ವಾದ ನಡೆಸಿ, ಕೆನ್ನೆಗೆ ಕೈಯಿಂದ ಹೊಡೆದಿದ್ದಾರೆ. ಇದರಿಂದ ತಪ್ಪಿಸಿಕೊಂಡು ನಾಗೇಶ್ ಅವರ ತಮ್ಮ ಅಲ್ಲಿಂದ ಓಡಿ ಹೋಗಿದ್ದಾರೆ. ಬಳಿಕ ಆರೋಪಿಗಳು ನಾಗೇಶ್ ಅವರನ್ನು ಕಾರಿನಲ್ಲಿ ಕೂರಿಸಿ ಸುಮಾರು ಹೊತ್ತು ಅಕ್ರಮವಾಗಿ ಬಂಧನದಲ್ಲಿರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಾಗೇಶ್ ಅವರೊಂದಿಗಿದ್ದ ಕುಟುಂಬಸ್ಥರು ಆರೋಪಿಗಳಲ್ಲಿ ಮನವಿ ಮಾಡಿಕೊಂಡ ಬಳಿಕ ಅವರನ್ನು ಕಾರಿನಿಂದ ಕೆಳಗಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ನಾಗೇಶ್ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 140/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 189(2), 191(2), 126(2), 115(2), 127(2), 352 ಜೊತೆಗೆ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
