ಶಿರೂರು ಗಾಂಧಿ ಮೈದಾನದಲ್ಲಿ ಘಟನೆ; ಯುವಕ ಸೇರಿ ಸ್ನೇಹಿತರಿಗೆ ಗಾಯ, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೈಂದೂರು: ದಿನಾಂಕ:13-11-2026(ಹಾಯ್ ಉಡುಪಿ ನ್ಯೂಸ್) ಶಿರೂರು ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದ ಯುವಕ ಹಾಗೂ ಆತನ ಸ್ನೇಹಿತರ ಮೇಲೆ 11 ಮಂದಿಯ ತಂಡವೊಂದು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.
ನವೆಂಬರ್ 10ರಂದು ಸಂಜೆ ಸುಮಾರು 4.30 ಗಂಟೆಗೆ ಸಾಯಿರಾಮ್ (22) ಎಂಬವರು ಶಿರೂರು ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ನಡೆಸುತ್ತಿದ್ದ ವೇಳೆ, ಆರೋಪಿಗಳಾದ ಶಶಿಕುಮಾರ್ ಮೇಸ್ತ, ತಿಮ್ಮಪ್ಪ ಮೇಸ್ತ, ಸೌಮ್ಯ ತಿಮ್ಮಪ್ಪ ಮೇಸ್ತ ಸೇರಿದಂತೆ ಒಟ್ಟು 11 ಮಂದಿ ಸ್ಥಳಕ್ಕೆ ಆಗಮಿಸಿ, ಅಂಗಡಿ ನಡೆಸಲು ಬಿಡುವುದಿಲ್ಲ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.
ಬಳಿಕ ಅಂಗಡಿಯಲ್ಲಿದ್ದ ಪಟಾಕಿಗಳನ್ನು ಎಸೆದು, ಸಾಯಿರಾಮ್ ಹಾಗೂ ಅವರ ಸ್ನೇಹಿತರಾದ ದರ್ಶನ ಮತ್ತು ಪಿಯೂಷ ಅವರನ್ನು ದೂಡಿ, ಕೌಂಟರ್‌ನಲ್ಲಿದ್ದ ಟೇಬಲ್ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಯಲ್ಲಿ ಸಾಯಿರಾಮ್ ಅವರ ಕಾಲಿಗೆ ಹಾಗೂ ದರ್ಶನ ಅವರ ಎದೆಗೆ ಗಾಯಗಳಾಗಿದ್ದು, ಇತರ ಸ್ನೇಹಿತರಿಗೂ ಗಾಯಗಳಾಗಿವೆ ಎಂದು ದೂರಲಾಗಿದೆ.
ಈ ಸಂಬಂಧ ಸಾಯಿರಾಮ್ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 167/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 118(1), 352, 351(2) ಜೊತೆಗೆ 190ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
