FB_IMG_1794447501491.jpg
Spread the love

ಅಮೆರಿಕ…… ಅಮೆರಿಕ…..

ಪ್ರಾಣಿಯೊಂದು ತನ್ನ ಚಿಪ್ಪಿನಲ್ಲಿ ಅಡಗಿಕೊಳ್ಳಲು ಪ್ರಯತ್ನಿಸಿದಂತೆ ತನ್ನ ದೇಶದ ವಿಶಾಲ ಗುಣಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ನಾಯಕತ್ವವನ್ನು ಜಗತ್ತಿನಲ್ಲಿ ಎತ್ತಿಹಿಡಿಯದೆ ಸಂಕುಚಿತ ಮನೋಭಾವ ಪ್ರದರ್ಶಿಸಿ ಅಮೆರಿಕದ ಘನತೆಗೆ ಸ್ವಲ್ಪ ಮಟ್ಟಿಗೆ ಧಕ್ಕೆ ತಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಮತದಾರರು ಬಹುತೇಕ ತಿರಸ್ಕರಿಸಿರುವ ಸುದ್ದಿಗಳು ಬರುತ್ತಿವೆ.

ಯಾವಾಗಲೂ ದೂರದೃಷ್ಟಿಯ ಕೊರತೆಯ ನಾಯಕ ಕೇವಲ ತನ್ನ ಮಾತು, ತಂತ್ರಗಾರಿಕೆ ಮತ್ತು ಆಕ್ರಮಣಕಾರಿ ಮನೋಭಾವದ ಮೂಲಕ ತಾತ್ಕಾಲಿಕವಾಗಿ ಒಂದಷ್ಟು ಯಶಸ್ಸು ಗಳಿಸಬಹುದು. ಆದರೆ ಅದರ ಬಣ್ಣ ನಿಧಾನವಾಗಿ ಕಳಚುತ್ತಾ ಹೋಗುತ್ತದೆ. ಕೊನೆಗೆ ಉಳಿಯುವುದು ನಿಜ ಬಣ್ಣ ಮಾತ್ರ.

ನಿಜಕ್ಕೂ ವಿಶ್ವದ ಆಗುಹೋಗುಗಳನ್ನು ಗಮನಿಸುತ್ತಿದ್ದ ಜನರಿಗೆ ಎರಡು ವರ್ಷಗಳ ಹಿಂದೆ ಅಮೆರಿಕ ಚುನಾವಣಾ ಫಲಿತಾಂಶ ಆತಂಕವನ್ನು ಉಂಟುಮಾಡಿತ್ತು. ಅದರಲ್ಲೂ ಪ್ರಜಾಪ್ರಭುತ್ವವನ್ನು ಇಷ್ಟಪಡುವ ಅನೇಕರಿಗೆ ಇದು ಅರಗಿಸಿಕೊಳ್ಳುವುದು ಕಷ್ಟವಾಯಿತು. ಇದೇನಿದು ವಿಶ್ವದ ದೊಡ್ಡಣ್ಣ ಅಮೆರಿಕದ ಮತದಾರ ಈ ರೀತಿಯ ನಿರ್ಧಾರ ಏಕೆ ಮಾಡಿದ ಎಂಬ ಪ್ರಶ್ನೆ ಕಾಡಿತು. ಆ ಪ್ರಶ್ನೆಗಳಿಗೆ ಉತ್ತರ ದೊರೆಯಲು ಬಹಳ ಸಮಯವೇನು ಹಿಡಿಯಲಿಲ್ಲ….

ಭಾರತೀಯರಿಗೆ ಇದ್ದ ವೀಸಾ ಸೌಲಭ್ಯಗಳಾಗಲಿ, ಒಂದಷ್ಟು ಹಿನ್ನೆಲೆಗೆ ಸರಿದಿದ್ದ ವರ್ಣಭೇದ ಘರ್ಷಣೆಗಳಾಗಲಿ, ಪ್ಯಾರಿಸ್ ನಲ್ಲಿ ಆದ ವಿಶ್ವ ತಾಪಮಾನ ಏರಿಕೆಯ ನಿಯಂತ್ರಣ ಒಪ್ಪಂದದ ಅನುಷ್ಠಾನದ ಜವಾಬ್ದಾರಿಯಾಗಲಿ, ವಿಶ್ವಸಂಸ್ಥೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಅಮೆರಿಕ ಹೊಂದಿದ್ದ ನಿಯಂತ್ರಣದಲ್ಲಾಗಲಿ, ಅಮೆರಿಕ ಚುನಾವಣಾ ಪ್ರಚಾರದ ಘನತೆಯಲ್ಲಾಗಲಿ, ತೆರಿಗೆ, ಯುದ್ಧ ಮುಂತಾದ ಇತರ ಕೆಲವು ಪ್ರಮುಖ ವಿದೇಶಾಂಗ ನೀತಿಗಳಲ್ಲಾಗಲಿ ಡೊನಾಲ್ಡ್ ಟ್ರಂಪ್ ಅಮೆರಿಕದ ನಿಜ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಲಿಲ್ಲ ಎಂದು ಭಾಸವಾಗುತ್ತದೆ. ಅನಾಯಾಸವಾಗಿ ವಿಶ್ವದ ನಾಯಕತ್ವಕ್ಕೆ ಚೀನಾ ದೊಡ್ಡ ಸ್ಪರ್ಧೆ ಒಡ್ಡಲು ದಾರಿ ಮತ್ತು ಅವಕಾಶ ಮಾಡಿಕೊಟ್ಟರು.

ಹುಲಿ ಹುಲ್ಲು ತಿನ್ನುವುದಿಲ್ಲ ಮತ್ತು ತಿನ್ನಬಾರದು. ಅದು ತನ್ನ ಸಹಜತೆಯನ್ನು ಕಾಪಾಡಿಕೊಳ್ಳಬೇಕು. ಹೌದು, ಸಂಕಷ್ಟಗಳು, ಸವಾಲುಗಳು ಸದಾ ಎದುರಾಗುತ್ತದೆ. ಅದಕ್ಕೆ ಹೊಸ ಕಾರ್ಯತಂತ್ರದ ಅವಶ್ಯಕತೆ ಇರುತ್ತದೆ. ಆದರೆ ತನ್ನ ಮೂಲ ಗುಣಲಕ್ಷಣಗಳಿಗೆ ವಿರುದ್ಧವಾದ, ಉಡಾಫೆಯ ಪ್ರಯೋಗಗಳಿಗಿಂತ ವೈಚಾರಿಕ, ಆಧುನಿಕ, ವಿಶಾಲ ಮನೋಭಾವದ ಮತ್ತು ತನ್ನ ಸಾಮರ್ಥ್ಯದ ಅರಿವಿನ ಮೇಲೆ ಪ್ರಯೋಗಗಳಿಗೆ ಪ್ರಯತ್ನಿಸಬೇಕು.

ಡೊನಾಲ್ಡ್ ಟ್ರಂಪ್ ಈ ವಿಷಯದಲ್ಲಿ ಎಡವಿದರು ಎನಿಸುತ್ತದೆ. ಇತ್ತೀಚೆಗಷ್ಟೇ ಭಾರತವನ್ನು ಡರ್ಟಿ ಕಂಟ್ರೀಸ್ ಎಂದು ಸಾರ್ವಜನಿಕವಾಗಿ ಹೇಳುವ ಮಟ್ಟದ ಬಾಲಿಶ ಮತ್ತು ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸಿದರು. ಅಮೆರಿಕದ ಅಧ್ಯಕ್ಷ ಎಂಬ ಬಹುದೊಡ್ಡ ಹುದ್ದೆಯಲ್ಲಿ ಇದ್ದರು ಮನಸ್ಸಿನ ನಿಯಂತ್ರಣ ಸಾಧಿಸದೆ ಸಾಮಾಜಿಕ ಜಾಲತಾಣದ ಪ್ರಮುಖ ಸಂಪರ್ಕ ಮಾಧ್ಯಮ ಟ್ರುತ್ ನಲ್ಲಿ ಎಳೆಯ ಯುವಕರಂತೆ ಅತಿಯಾದ ಕ್ರೇಜಿ ಮನೋಭಾವದಿಂದ ಏನೇನೋ ಆ ಕ್ಷಣದ ಘಟನೆಗಳಿಗೆ ತಕ್ಷಣ ಪ್ರತಿಕ್ರಿಯಿಸಿ ಬಾಲಿಶ ವರ್ತನೆ ತೋರಿದರು.

ಯಾವುದೇ ವಿಷಯದಲ್ಲಿ ಕಾರ್ಯಯೋಜನೆಯ ರೂಪಿಸುವುದಕ್ಕಿಂತ ಇತರರ ವಿರುದ್ಧ ದ್ವೇಷದ ಮಾತುಗಳಲ್ಲಿ ಸಮಯವನ್ನು ವ್ಯರ್ಥ ಮಾಡಿ, ತಜ್ಞರ ಅಭಿಪ್ರಾಯಕ್ಕಿಂತ ತಾವೇ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದೂ ಭಾಸವಾಗುತ್ತಿದೆ.
ಕುಗ್ಗಿಸಿದವು. ಇರಾನ್ ಮೇಲಿನ ಯುದ್ಧದಿಂದಾಗಿ ಎಲ್ಲವನ್ನೂ ಜಯಿಸಬಲ್ಲ ಅಮೆರಿಕ ಎಂಬ ಸಾಮಾನ್ಯ ಅಭಿಪ್ರಾಯ ಬದಲಾಗಿ ಅವರು ಸಹ ನಮ್ಮಂತೆ ಎನ್ನುವಲ್ಲಿಗೆ ಅದರ ಹೆಸರನ್ನು ಡೊನಾಲ್ಡ್ ಟ್ರಂಪ್ ಕೆಳಗಿಳಿಸಿದರು.

ಅಮೆರಿಕ ದೇಶ ವಿಶ್ವದಲ್ಲೇ ಬಲಿಷ್ಠ ದೇಶವಾಗಿರಬಹುದು, ವಿಶ್ವದ 200 ದೇಶಗಳಲ್ಲಿ ಸುಮಾರು 150ಕ್ಕೂ ಹೆಚ್ಚು ದೇಶಗಳೊಳಗೆ ನುಗ್ಗಿ ಅದರ ಮುಖ್ಯಸ್ಥರನ್ನು ಬಂಧಿಸುವ ಶಕ್ತಿಯೂ ಇರಬಹುದು. ಆದರೆ ಮಾನವ ಸಮಾಜದ ಇಂದಿನ ಆಧುನಿಕ ಕಾಲದಲ್ಲಿ ವಿಶ್ವಕ್ಕೇ ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿಯ ಬಗ್ಗೆ ಮಾರ್ಗದರ್ಶನ ಮಾಡಬೇಕಾದ ದೊಡ್ಡಣ್ಣನ ಸ್ಥಾನದಲ್ಲಿರುವ, ಪ್ರಜಾಪ್ರಭುತ್ವ ದೇಶದ ಅಧ್ಯಕ್ಷನೊಬ್ಬ ವೆನಿಜುಲಾ ಮೇಲಿನ ರೀತಿಯ ಮಿಲಿಟರಿ ಕಾರ್ಯಾಚರಣೆ ನಡೆಸುವುದು ಅತ್ಯಂತ ಖಂಡನೀಯ.

ನಮಗೆ ಶಕ್ತಿ ಇದ್ದ ಮಾತ್ರಕ್ಕೆ ದುರ್ಬಲರ ಮೇಲೆ ಅಥವಾ ಇನ್ನೊಬ್ಬರ ಸ್ವಾತಂತ್ರ್ಯದ ಮೇಲೆ ಯಾವುದೋ ನೆಪ ಹೇಳಿ ದಾಳಿ ಮಾಡುವುದು ಒಳ್ಳೆಯ ಲಕ್ಷಣವಲ್ಲ. ಏಕೆಂದರೆ ಇದೇ ತಂತ್ರವನ್ನು ರಷ್ಯಾ ಮಾಡಿರುವಾಗ ಅದನ್ನು ಖಂಡಿಸುತ್ತೇವೆ. ಅಮಾಸ್ ಮೇಲೆ ಇಸ್ರೇಲ್ ನ ಅಷ್ಟು ದೊಡ್ಡ ದಾಳಿಯನ್ನು ಖಂಡಿಸುತ್ತೇವೆ, ತೈವಾನನ್ನು ವಶಪಡಿಸಿಕೊಳ್ಳುವ ಚೀನಾದ ಹುನ್ನಾರವನ್ನೂ ಖಂಡಿಸುತ್ತೇವೆ.

ಜಾಗತೀಕರಣದ ನಂತರ ಮುಕ್ತ ಮಾರುಕಟ್ಟೆಗೆ ಎಲ್ಲಾ ದೇಶಗಳು ಸಹಿ ಹಾಕಿದ ಮೇಲೆ ಹೇಗೋ ಏನೋ ಒಂದಷ್ಟು ಬಡ ದೇಶಗಳ ಶೋಷಣೆಯ ನಡುವೆಯೂ ವಿಶ್ವದಲ್ಲೇ ವ್ಯಾಪಾರ ವಹಿವಾಟುಗಳಲ್ಲಿ ಕ್ರಾಂತಿಯಾಗಿದ್ದೇನೋ ನಿಜ. ಒಂದು ರೀತಿಯಲ್ಲಿ ತಂತ್ರಜ್ಞಾನ ಮತ್ತು ಆಧುನಿಕತೆ ಎಲ್ಲಾ ದೇಶಗಳಲ್ಲೂ ವಿಸ್ತರಿಸಿ ಜನರ ಜೀವನ ಮಟ್ಟ ಸುಧಾರಣೆಯ ಒಂದಷ್ಟು ಅಭಿವೃದ್ಧಿ ಆಗಿದ್ದು ನಿಜ. ಆದರೆ ಅದನ್ನು
ಅರಗಿಸಿಕೊಳ್ಳದ ಕೆಲವು ಬಲಾಢ್ಯ ದೇಶಗಳು ಮತ್ತಷ್ಟು ಅಸೂಯೆ ಮತ್ತು ದುರಾಸೆಗೆ ಬಿದ್ದು ಮತ್ತೆ ಬಿಲದೊಳಗೆ ಸೇರಿಕೊಳ್ಳುವ ಮಾತುಗಳನ್ನು ಆಡುತ್ತಿವೆ. ಮತ್ತದೇ ನಾವೇ ಶ್ರೇಷ್ಠರು, ನಮ್ಮ ದೇಶವೇ ಶ್ರೇಷ್ಠ ಎನ್ನುವ ರಾಷ್ಟ್ರೀಯತೆಯ ಅತಿರೇಕಕ್ಕೆ ಸಿಲುಕುತ್ತಿರುವ ಸೂಚನೆಗಳಿವೆ. ಅದಕ್ಕೆ ತಕ್ಕಂತೆ ಅಮೆರಿಕ ಅಧ್ಯಕ್ಷ ತಾನು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎನ್ನುವ ಬಾಲಿಶತನಕ್ಕೆ ಬಲಿಯಾಗಿದ್ದಾರೆ.

ಯಾವುದೇ ಪ್ರಜಾಪ್ರಭುತ್ವ ದೇಶದಲ್ಲಿ ಆ ದೇಶದ ಜನಪ್ರತಿನಿಧಿಗಳಾಗಿ ಅಥವಾ ಆ ದೇಶದ ಮುಖ್ಯಸ್ಥರಾಗಿ ಪ್ರಧಾನಿ ಅಥವಾ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವಾಗ ಮತದಾರರು ಸಮಗ್ರವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ಬಗ್ಗೆ ಚಿಂತಿಸಿ ಮತ ಚಲಾಯಿಸಬೇಕಾಗುತ್ತದೆ. ಯಾವುದೋ ಧರ್ಮ, ಜಾತಿ, ರಾಷ್ಟ್ರೀಯತೆ, ಅಭಿವೃದ್ಧಿಯ ಭರವಸೆ ಮುಂತಾದ ಭ್ರಮಾತ್ಮಕ ವಿಷಯಗಳಿಗೆ ಮರುಳಾಗಿ ವಿವೇಚನೆ ಇಲ್ಲದೆ ನೈತಿಕತೆ ಇಲ್ಲದ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಮಾಡಿದರೆ ಅದರ ಪರಿಣಾಮ ಇಡೀ ದೇಶ ಅನುಭವಿಸಬೇಕಾಗುತ್ತದೆ.

ಆ ರೀತಿಯ ಅಚಾತುರ್ಯವೊಂದು ವಿಶ್ವದ ಮಹತ್ವದ ಪ್ರಜಾಪ್ರಭುತ್ವ ದೇಶ ಅಮೆರಿಕಾದ ಮತದಾರರಿಂದ ನಡೆದು ಹೋಗಿತ್ತು. ನಿಜಕ್ಕೂ ಮೊದಲನೆಯ ಬಾರಿಯಾಗಿರಲಿ ಅಥವಾ ಈಗ ಆಯ್ಕೆ ಆಗಿರುವ ಎರಡನೆಯ ಬಾರಿ ಆಗಿರಲಿ ಅಮೆರಿಕಾದಂತಹ ದೇಶಕ್ಕೆ ಅಧ್ಯಕ್ಷರಾಗುವ ವ್ಯಕ್ತಿತ್ವ ಮತ್ತು ನೈತಿಕತೆ ಖಂಡಿತ ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿ ಹೊಂದಿಲ್ಲ ಎಂಬುದು ವಿಶ್ವದ ಬಹುತೇಕ ಸಂವೇದನಾಶೀಲ ಮನಸ್ಸುಗಳ ಅನಿಸಿಕೆ.

ಟ್ರಂಪ್ ಶ್ರೀಮಂತನಿರಬಹುದು, ಧೈರ್ಯಸ್ತನಿರಬಹುದು, ತನ್ನ ದೇಶದ ಬಗ್ಗೆ ಅಪಾರ ಕಾಳಜಿ ಉಳ್ಳವನೇ ಇರಬಹುದು ಅಥವಾ ತಾನೊಬ್ಬ ಅತ್ಯಂತ ಬಲಿಷ್ಠ ವ್ಯಕ್ತಿಯಾಗಿರಬಹುದು, ಆದರೆ ಪ್ರಬುದ್ಧತೆ ಇಲ್ಲದಿದ್ದಲ್ಲಿ ಆ ಎಲ್ಲಾ ಗುಣಗಳು ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚು.

ಮೇಲ್ನೋಟಕ್ಕೆ ಕೆಲವು ರಾಜಕೀಯ ಮತ್ತು ಆರ್ಥಿಕ ತಜ್ಞರು ಡೊನಾಲ್ಡ್ ಟ್ರಂಪ್ ನೀತಿಗಳು ಸರಿ ಇರಬಹುದೇನೋ ಎನ್ನುವ ರೀತಿಯಲ್ಲಿ ಚರ್ಚೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಅಮೆರಿಕ ವಿಶ್ವದ ದೊಡ್ಡಣ್ಣ. ಅದಕ್ಕೆ ಅನಧಿಕೃತವಾಗಿ ದೊಡ್ಡ ಜವಾಬ್ದಾರಿಯೂ ಇದೆ. ವಿಶ್ವದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಒಂದಷ್ಟು ಹೊಣೆಗಾರಿಕೆಯೂ ಇದೆ.

ಅಮೆರಿಕಾದ ಘನತೆಯನ್ನು ಉಳಿಸಿಕೊಳ್ಳುವಲ್ಲಿ ಡೊನಾಲ್ಡ್ ಟ್ರಂಪ್ ಎಡವುತ್ತಿದ್ದಾರೆ. ಜೊತೆಗೆ ದೊಡ್ಡಣ್ಣನಾಗುವ ಅವಕಾಶವನ್ನು ಅದರ ಪ್ರತಿಸ್ಪರ್ಧಿ ಚೀನಾ ಉಪಯೋಗಿಸಿಕೊಳ್ಳುವಂತೆ ವೇದಿಕೆ ಕಲ್ಪಿಸುತ್ತಿದ್ದಾರೆ. ಇದು ಒಳ್ಳೆಯ ಲಕ್ಷಣವಲ್ಲ. ಈ ಅಹಂಕಾರ ಅತಿಯಾಯಿತು. ಈಗಾಗಲೇ ಅಮೆರಿಕಾದ ಎಲ್ಲಾ 50 ರಾಜ್ಯಗಳಲ್ಲಿ ಇವರ ನೀತಿಗಳ ವಿರುದ್ಧ ಪ್ರತಿಭಟನೆಗಳಾಗಿದೆ. ಇದು ಹೀಗೆಯೇ ಮುಂದುವರಿಯಲಿ. ಈ ವ್ಯಕ್ತಿಯನ್ನು ಕನಿಷ್ಠ ಈಗಲಾದರೂ ಒಂದು ನಿಯಂತ್ರಣಕ್ಕೆ ಒಳಪಡಿಸಿರುವುದು ಅಮೆರಿಕಾದ ಮತದಾರರ ಜಾಗೃತಿಗೆ ಸಾಕ್ಷಿ……

ಅಮೆರಿಕ ಮೊದಲು ಎಂಬ ಅವರ ನೀತಿಯೇ ಸಂಕುಚಿತ ಮನೋಭಾವದಿಂದ ಕೂಡಿದೆ. ಏಕೆಂದರೆ ಈಗಲೂ ವಿಶ್ವದಲ್ಲಿ ಅಮೆರಿಕವೇ ಎಲ್ಲ ರೀತಿಯಲ್ಲೂ ಮೊದಲನೆಯ ಸ್ಥಾನದಲ್ಲಿದೆ. ಅಮೆರಿಕವೇ ಅತ್ಯಂತ ಬಲಿಷ್ಠವಾಗಿದೆ. ಆರ್ಥಿಕವಾಗಿ ಮಾರುಕಟ್ಟೆಯ ದೃಷ್ಟಿಯಿಂದ ಅಮೆರಿಕವೇ ವಿಶ್ವದ ಹೆಚ್ಚು ಕಡಿಮೆ ಎಲ್ಲಾ ಆಗುಹೋಗುಗಳನ್ನು ನಿರ್ಧರಿಸುತ್ತದೆ. ಅಂತಹ ಸಂದರ್ಭದಲ್ಲಿ ತಾನು ವಹಿಸಬೇಕಾದ ದೃಢ ನಾಯಕತ್ವದ ರೀತಿಯಲ್ಲಿ ಮುನ್ನಡೆಯದೆ ಯಾವುದೋ ಆತುರಕ್ಕೆ ಬಿದ್ದ ಸಾಮಾನ್ಯ, ಮಧ್ಯಮ ದರ್ಜೆಯ ದೇಶದಂತೆ ವರ್ತಿಸುತ್ತಿರುವುದು ಅಷ್ಟೇನೂ ಒಳ್ಳೆಯ ಲಕ್ಷಣವಲ್ಲ.

ತನ್ನ ದೇಶಕ್ಕೆ ಭವಿಷ್ಯದಲ್ಲಿ ತೊಂದರೆಯಾಗಬಹುದು ಎನಿಸಿದಾಗ ಈಗ ತೆಗೆದುಕೊಳ್ಳುತ್ತಿರುವ ಆಕ್ರಮಣಕಾರಿ ನಿರ್ಧಾರಗಳಿಗಿಂತ ಉತ್ತಮ ನಿರ್ಧಾರಗಳು, ಆಯ್ಕೆಗಳು ಖಂಡಿತ ಅದರ ಮುಂದಿದೆ.

ಜನರಲ್ಲಿ ಅತಿಯಾದ ಭರವಸೆ ಮೂಡಿಸಿ ಅವರ ನಿರೀಕ್ಷೆಯ ಮಟ್ಟಕ್ಕೆ ಏರಲಾಗದೆ ವಿಫಲವಾದ ಅನೇಕ ನಾಯಕರನ್ನು ವಿಶ್ವದ ರಾಜಕೀಯ ಇತಿಹಾಸ ಗುರುತಿಸಿದೆ.
ಇದನ್ನು ಸ್ವಲ್ಪ ಗಮನಿಸಿ,
” ಮೊದಲಿಗೆ ನಾಯಕನಾಗಿದ್ದ ವ್ಯಕ್ತಿ ಕ್ರಮೇಣ ಖಳನಾಯಕನಾಗುವ ಅನಂತರದಲ್ಲಿ ಹಾಸ್ಯಾಸ್ಪದವಾಗುವ ಪರಿವರ್ತನೆ “ಕೆಲವು ಸಂದರ್ಭಗಳಲ್ಲಿ ಘಟಿಸಿದೆ. ಅದು ನಾಯಕರಿಗೆ ಎಚ್ಚರಿಕೆಯ ಪಾಠವಾಗಬೇಕು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!