IMG_20261109_180422.png
Spread the love

ಬ್ರಹ್ಮಾವರ: ದಿನಾಂಕ:09-11-2026(ಹಾಯ್ ಉಡುಪಿ ನ್ಯೂಸ್) ಯಾವುದೇ ಪರವಾನಿಗೆ ಇಲ್ಲದೆ ಸ್ವರ್ಣ ನದಿಯಿಂದ ಮರಳು ತೆಗೆದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಟಾಟಾ 407 ಮಿನಿ ಟಿಪ್ಪರ್ ವಾಹನವನ್ನು ಬ್ರಹ್ಮಾವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನ. 8ರಂದು ಬೆಳಗಿನ ಜಾವ 3.30ರ ಸುಮಾರಿಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಶೋಕ ಮಾಳಬಗಿ ಅವರು ಸಿಬ್ಬಂದಿಯೊಂದಿಗೆ ಇಲಾಖಾ ವಾಹನದಲ್ಲಿ ರಾತ್ರಿ ಗಸ್ತಿನಲ್ಲಿದ್ದಾಗ ಕೆ.ಜಿ. ರಸ್ತೆ ಕಮಾನು ಬಳಿ ಮರಳು ತುಂಬಿದ ಟಿಪ್ಪರ್ ರಾಷ್ಟ್ರೀಯ ಹೆದ್ದಾರಿಯ ಕಡೆಗೆ ಸಂಚರಿಸುತ್ತಿರುವುದು ಕಂಡುಬಂದಿದೆ. ತಕ್ಷಣ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ KA-20-AB-7694 ನೋಂದಣಿ ಸಂಖ್ಯೆಯ ಟಾಟಾ 407 ಮಿನಿ ಟಿಪ್ಪರ್‌ನಲ್ಲಿ ಮರಳು ತುಂಬಿರುವುದು ಪತ್ತೆಯಾಗಿದೆ.

ಚಾಲಕನನ್ನು ವಿಚಾರಿಸಿದಾಗ, ವಾಹನದ ಮಾಲೀಕ ಹಂಗಾರಕಟ್ಟೆಯ ಆಶೀಕ ಹಾಗೂ ಆತನ ಸ್ನೇಹಿತ ಪ್ರದೀಪ ಅವರ ಸೂಚನೆಯಂತೆ ಉಪ್ಪೂರಿನ ಪ್ರಜ್ವಲ್ ಮತ್ತು ಕಾರ್ಮಿಕರು ಸ್ವರ್ಣ ನದಿಯಿಂದ ಮರಳು ತೆಗೆದು ವಾಹನಕ್ಕೆ ತುಂಬಿಸಿಕೊಟ್ಟಿದ್ದು, ಅದನ್ನು ಬ್ರಹ್ಮಾವರ ಕಡೆಗೆ ಸಾಗಿಸುತ್ತಿದ್ದುದಾಗಿ ತಿಳಿಸಿದ್ದಾನೆ. ಮರಳು ಸಾಗಾಟಕ್ಕೆ ಯಾವುದೇ ಪರವಾನಿಗೆ ಇಲ್ಲವೆಂದು ಚಾಲಕ ಒಪ್ಪಿಕೊಂಡಿದ್ದಾನೆ.
ಪಂಚರ ಸಮಕ್ಷಮ ವಾಹನವನ್ನು ಪರಿಶೀಲಿಸಿದಾಗ ಸುಮಾರು 9,000 ರೂ. ಮೌಲ್ಯದ 1.5 ಯುನಿಟ್ ಮರಳು ಇರುವುದು ಕಂಡುಬಂದಿದ್ದು, ಮರಳು ಸಹಿತ ಟಿಪ್ಪರ್ ವಾಹನವನ್ನು ಪೊಲೀಸರು ಮಹಜರು ಮೂಲಕ ವಶಪಡಿಸಿಕೊಂಡಿದ್ದಾರೆ.
ಸರ್ಕಾರದ ರಾಜಧನ ಪಾವತಿಸದೆ ಹಾಗೂ ಅಗತ್ಯ ಪರವಾನಿಗೆ ಪಡೆಯದೆ ಸರ್ಕಾರಿ ಸ್ವತ್ತಾದ ಮರಳನ್ನು ಅಕ್ರಮವಾಗಿ ತೆಗೆದು ಸಾಗಾಟ ಮಾಡಿರುವ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 207/2026ರಂತೆ Mines and Minerals Regulation of Development Act 1957ರ ಕಲಂ 4(1), 4(1A), 21(1), ಕರ್ನಾಟಕ ಸಣ್ಣ ಖನಿಜ ನಿಯಮಗಳು ಹಾಗೂ BNS ಕಲಂ 303(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!