ಗಂಗೊಳ್ಳಿ: ದಿನಾಂಕ:09-11-2026 (ಹಾಯ್ ಉಡುಪಿ ನ್ಯೂಸ್) ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದರೂ, ಸಂಬಂಧಪಟ್ಟ ಜಾಗಕ್ಕೆ ಜೆಸಿಬಿ ತಂದು ಕಬ್ಬಿಣದ ತಂತಿ ಬೇಲಿಯನ್ನು ಹಾನಿಗೊಳಿಸಿ, ಪ್ರಶ್ನಿಸಲು ಬಂದ ವೃದ್ಧ ದಂಪತಿಗೆ ನಿಂದಿಸಿ, ದೂಡಿ ಬೆದರಿಕೆ ಹಾಕಿರುವ ಘಟನೆ ಗಂಗೊಳ್ಳಿಯ ಮುಬಾರಕ್ ಮೊಹಲ್ಲಾದಲ್ಲಿ ನಡೆದಿದೆ.
ಗಂಗೊಳ್ಳಿಯ ಫಾತಿಮ ಕಂಪೌಂಡ್ ಚರ್ಚ್ ರಸ್ತೆಯ ನಿವಾಸಿ, 75 ವರ್ಷದ ನಾಕುದಾ ಶಾವುಲ್ ಹಮೀದ್ ಎಂಬವರಿಗೆ ಗಂಗೊಳ್ಳಿಯ ಮುಬಾರಕ್ ಮೊಹಲ್ಲಾದ ಸರ್ವೆ ನಂಬ್ರ 111/6P2ರಲ್ಲಿ ಪಿತ್ರಾರ್ಜಿತವಾಗಿ 1.01 ಎಕರೆ ಜಾಗವಿದೆ. ಈ ಜಾಗದ ವಿಚಾರವಾಗಿ ಹಮೀದ್ ಮತ್ತು ಸ್ಥಳೀಯ ನಿವಾಸಿ ಹಸೀಬ್ ಎಂಬವರ ನಡುವೆ ವಿವಾದವಿದ್ದು, ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ ಎನ್ನಲಾಗಿದೆ.
ಜಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದರಿಂದ ಅಕ್ಟೋಬರ್ 30ರಂದು ಹಮೀದ್ ಅವರು ಅವುಗಳನ್ನು ಸ್ವಚ್ಛಗೊಳಿಸಿ, ಕಾಂಕ್ರೀಟ್ ಕಂಬಗಳನ್ನು ಅಳವಡಿಸಿ ಕಬ್ಬಿಣದ ಸರಿಗೆ ಬೇಲಿ ನಿರ್ಮಿಸಿದ್ದರು.
ನವೆಂಬರ್ 7ರಂದು ಸಂಜೆ ಸುಮಾರು 4 ಗಂಟೆಗೆ ಅಬ್ದುಲ್ ಸಲಾಂ ಎಂಬವರು KA-06-N-2814 ಸಂಖ್ಯೆಯ ಜೆಸಿಬಿಯನ್ನು ತಂದು ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಕಬ್ಬಿಣದ ತಂತಿ ಬೇಲಿಯನ್ನು ಹಾನಿಗೊಳಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಹಮೀದ್ ಮತ್ತು ಅವರ ಪತ್ನಿ ಸಾಬೀರಾ ಬಾನು ಅವರು ಪ್ರಶ್ನಿಸಲು ತೆರಳಿದಾಗ, ಅವರನ್ನು ಮುಂದೆ ಹೋಗದಂತೆ ತಡೆದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ದೂಡಿ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 51/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 329(3), 324(4), 126(2), 352 ಮತ್ತು 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
