IMG_20261108_234444.png
Spread the love

ಕೋಟ: ದಿನಾಂಕ:08-11-ರಬ್ಬರ್ ತೋಟಕ್ಕೆ ಮಧ್ಯರಾತ್ರಿ ಅಕ್ರಮವಾಗಿ ಪ್ರವೇಶಿಸಿ ರಬ್ಬರ್ ಕಳವು ಮಾಡಲು ಯತ್ನಿಸಿದ ವಿಚಾರವಾಗಿ ಉಂಟಾದ ಗಲಾಟೆ ವಿಕೋಪಕ್ಕೆ ತಿರುಗಿ, ತೋಟದ ಮಾಲೀಕನ ತಮ್ಮನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದಲ್ಲಿ ನಡೆದಿದೆ.


ಚಿಕ್ಕಮಗಳೂರಿನ ಜಾನಿ (58) ಎಂಬವರ ತಮ್ಮ ಸಂತೋಷ ಅವರು ಬಿಲ್ಲಾಡಿ ಗ್ರಾಮದ ತಮ್ಮ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ನವೆಂಬರ್ 5ರಂದು ರಾತ್ರಿ 11:30ರಿಂದ 12 ಗಂಟೆಯ ನಡುವಿನ ಅವಧಿಯಲ್ಲಿ ಪಕ್ಕದ ರಬ್ಬರ್ ತೋಟದ ಕೆಲಸಗಾರರಾದ ಅಜಯನ್ ಮತ್ತು ಮುರುಳಿ ಅವರು ಸಂತೋಷ ಅವರ ತೋಟಕ್ಕೆ ಅಕ್ರಮವಾಗಿ ಪ್ರವೇಶಿಸಿ ರಬ್ಬರ್ ಕಳವು ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.


ಈ ವಿಚಾರವಾಗಿ ಸಂತೋಷ ಅವರ ತೋಟದ ಕೆಲಸಗಾರರಾದ ಸುರೇಶ್ ಹಾಗೂ ಇತರರು ಆರೋಪಿತರನ್ನು ಪ್ರಶ್ನಿಸಿದ್ದು, ಈ ವೇಳೆ ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಆರೋಪಿತರು ಕೆಲಸಗಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸುರೇಶ್ ಅವರು ಸಂತೋಷ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸಂತೋಷ ಸ್ಥಳಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಅಜಯನ್ ಮತ್ತು ಮುರುಳಿ ಚಾಕು ಹಾಗೂ ರಾಡ್ ಹಿಡಿದುಕೊಂಡು ತೋಟದ ಮಾಲೀಕ ಮ್ಯಾತ್ಯೂಸ್ ಮತ್ತು ಅವರ ಪುತ್ರ ಬಿಬಿನ್ ಅವರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಸ್ಥಳಕ್ಕೆ ಬಂದ ಮ್ಯಾತ್ಯೂಸ್ ಮತ್ತು ಬಿಬಿನ್ ಕೂಡ ಸಂತೋಷ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ಗುರಿ ತಪ್ಪಿ ಕುತ್ತಿಗೆಗೆ ಬೀಸಿದ ಏಟು ಗಲ್ಲಕ್ಕೆ ತಾಗಿ ರಕ್ತಗಾಯವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಎರಡೂ ಕಡೆಯವರ ನಡುವಿನ ಹಣಕಾಸಿನ ವ್ಯವಹಾರವೇ ಘಟನೆಗೆ ಕಾರಣವೆಂದು ಪಿರ್ಯಾದಿದಾರರು ತಿಳಿಸಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 177/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 329(3), 109, 352, 351 ಮತ್ತು 191(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!