ಕುಂದಾಪುರ: ದಿನಾಂಕ:06-11-2026(ಹಾಯ್ ಉಡುಪಿ ನ್ಯೂಸ್) ಪಾರ್ಟ್ಟೈಮ್ ಉದ್ಯೋಗದ ಆಮಿಷವೊಡ್ಡಿ ಮಹಿಳೆಗೆ 1.86 ಲಕ್ಷ ರೂ. ವಂಚನೆ
ಕುಂದಾಪುರ: ಫೇಸ್ಬುಕ್ನಲ್ಲಿ ಪಾರ್ಟ್ಟೈಮ್ ಉದ್ಯೋಗದ ಜಾಹೀರಾತು ನೀಡಿ, ಟಾಸ್ಕ್ಗಳನ್ನು ಪೂರ್ಣಗೊಳಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ 1,86,570 ರೂ. ವಂಚಿಸಿರುವ ಘಟನೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಸೌಕೂರು ಗುಲ್ವಾಡಿ ಗ್ರಾಮದ ರೇಣುಕಾ ಗಣೇಶ ದೇವಾಡಿಗ (ಮೋರಿಕಾರ್ ಮನೆ) ವಂಚನೆಗೊಳಗಾದವರು.
16-08-2026ರಂದು ರೇಣುಕಾ ಅವರು ಮೊಬೈಲ್ನಲ್ಲಿ ಫೇಸ್ಬುಕ್ ಬಳಸುತ್ತಿದ್ದಾಗ ‘MEESHO NEED STAFF’ ಎಂಬ ಹೆಸರಿನಲ್ಲಿ ಪಾರ್ಟ್ಟೈಮ್ ಉದ್ಯೋಗದ ಜಾಹೀರಾತು ಕಾಣಿಸಿಕೊಂಡಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ವಾಟ್ಸಾಪ್ ಸಂಪರ್ಕವಾಗಿದ್ದು, ಬಳಿಕ ವೈಯಕ್ತಿಕ ಮಾಹಿತಿಯನ್ನು ಪಡೆದು ಟೆಲಿಗ್ರಾಮ್ ಖಾತೆಗೆ ಸೇರಿಸಲಾಗಿದೆ.
ಅಲ್ಲಿ ಟಾಸ್ಕ್ಗಳನ್ನು ಪೂರ್ಣಗೊಳಿಸಿದರೆ ಹಣ ಗಳಿಸಬಹುದು ಎಂದು ನಂಬಿಸಿ, ಮೊದಲ ಟಾಸ್ಕ್ ಪೂರ್ಣಗೊಳಿಸಿದಾಗ 120 ರೂ. ಪಾವತಿಸಲಾಗಿದೆ. ನಂತರ ಹಂತ ಹಂತವಾಗಿ ಟಾಸ್ಕ್ಗಳನ್ನು ನೀಡಿ ಒಟ್ಟು 10,130 ರೂ. ಹಿಂದಿರುಗಿಸಲಾಗಿದೆ. ಹೆಚ್ಚಿನ ಹಣ ಗಳಿಸುವ ಆಮಿಷವೊಡ್ಡಿ ಮಹಿಳೆಯಿಂದ ಹಂತ ಹಂತವಾಗಿ ಒಟ್ಟು 1,86,570 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2026ರಂತೆ BNS ಕಲಂ 316(2), 318(4) ಹಾಗೂ IT Act ಕಲಂ 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
