ಬ್ರಹ್ಮಾವರ: ತಾಲೂಕು ಕಚ್ಚೂರು ಗ್ರಾಮದ ಹಾಲೆಕೊಡಿ ಎಂಬಲ್ಲಿ ನಡೆಯುತ್ತಿದ್ದ ಕೋಳಿ ಅಂಕ ಜುಗಾರಿಗೆ ದಾಳಿ ನಡೆಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಪಿಎಸ್ಐ ಅಶೋಕ್ ಮಾಲಬಾಗಿ ಅವರು ಕೋಳಿ ಅಂಕದಲ್ಲಿ ನಿರತರಾಗಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ತಾಲೂಕು ಕಚ್ಚೂರು ಗ್ರಾಮದ ಹಾಲೆಕೊಡಿ ಎಂಬಲ್ಲಿ ಕೆಲವು ಜನರು ಸೇರಿಕೊಂಡು ಕೋಳಿಗಳನ್ನು ಹಿಂಸಾತ್ಮಕವಾಗಿ, ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿ ಯಂತೆ ಪಿಎಸ್ಐಯವರು ಸಿಬ್ಬಂದಿಗಳೊಂದಿಗೆ ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ ಮಾಹಿತಿ ಬಂದ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಕೋಳಿಗಳ ಕಾಲಿಗೆ ಬಾಳ್ (ಕತ್ತಿ) ಅನ್ನು ಕಟ್ಟಿ ಹಿಂಸಾತ್ಮಕವಾಗಿ ಅವುಗಳು ಕಾದಾಡುವಂತೆ ಮಾಡಿ ಅವುಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಗೆದ್ದ ಕೋಳಿಯ ಮಾಲಕ ಲಾಭಗಳಿಸುತ್ತಿರುವುದು ಹಾಗೂ ಉಳಿದವರು ಕೋಳಿಗಳ ಕಾದಾಟವನ್ನು ನೋಡುತ್ತಾ ಕೋಳಿ ಅಂಕ ಜುಗಾರಿ ಆಟದಲ್ಲಿ ಹಣವನ್ನು ಪಣವಾಗಿ ಕಟ್ಟುತ್ತಾ ಇರುವುದು ಕಂಡು ಬಂದಿದ್ದು ಕೂಡಲೇ ಸಿಬ್ಬಂದಿಯವರ ಜೊತೆ ದಾಳಿ ನಡೆಸಿದಾಗ ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಅಲ್ಲಿ ಸೇರಿದ್ದ ಜನರು ಕಾದಾಟ ಮಾಡುತ್ತಿದ್ದ ಕೋಳಿಗಳನ್ನು ಮರಕ್ಕೆ ಕಟ್ಟಿದ್ದ ಮತ್ತು ಅವರ ಬಳಿ ಇದ್ದ ಕೋಳಿಗಳನ್ನು ಹಿಡಿದುಕೊಂಡು ಓಡಿ ಹೋಗಲು ಪ್ರಯತ್ನಿಸಿದ್ದು, ಅವರುಗಳನ್ನು ಪೊಲೀಸರು ಸುತ್ತುವರೆದು ಹಿಡಿದು ಬಂಧಿಸಿ ಹೆಸರು ವಿಳಾಸ ವಿಚಾರಿಸಿದಾಗ 1) ಭಾಸ್ಕರ್, 2) ಮೋಹನ್ ಪೂಜಾರಿ ಎಂದು ತಿಳಿಸಿರುತ್ತಾರೆ. ಅಲ್ಲಿಂದ ಓಡಿ ಹೋದವರಲ್ಲಿ ಒಬ್ಬನ ಹೆಸರು ಪ್ರಕಾಶ್ ಎಂಬುದಾಗಿದ್ದು, ಉಳಿದವರ ಹೆಸರು ತಿಳಿದಿರುವುದಿಲ್ಲ. ನಂತರ ಸ್ಥಳದಲ್ಲಿದ್ದ ಕೋಳಿ-5, ಬಾಳ್-2, ಬಾಳ್ ಕಟ್ಟಲು ಉಪಯೋಗಿಸಿದ ಹಗ್ಗದ ತುಂಡು-2, ವೀವೋ ಕಂಪನಿಯ ತಿಳಿ ಕಂದು ಬಣ್ಣದ ಅಂಡ್ರಾಯಿಡ್ ಮೊಬೈಲ್ ಫೋನ್-1, KA-20-HG-3975 ನೇ ನಂಬ್ರದ ಚೇತಕ್ ಇಲೆಕ್ಟ್ರಿಕ್ ಸ್ಕೂಟರ್-1(ಅಂದಾಜು ಮೌಲ್ಯ ರೂ. 40,000/-), KA-20-EL-3481 ನೇ ನಂಬ್ರದ ಪಲ್ಸರ್ ಮೋಟಾರ್ ಸೈಕಲ್-1(ಅಂದಾಜು ಮೌಲ್ಯ ರೂ. 20,000/-) ಮತ್ತು ಕೋಳಿ ಅಂಕ ಆಟಕ್ಕೆ ಉಪಯೋಗಿಸಿದ 2,005/- ರೂಪಾಯಿ ಹಣವನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ 05 ಕೋಳಿಗಳ ಅಂದಾಜು ಮೌಲ್ಯ ತಲಾ 500/- ರೂ ನಂತೆ ಒಟ್ಟು 2,500/- ರೂ. ಆಗಬಹುದು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
