IMG_20261105_180516.png
Spread the love

ಬೈಂದೂರು: ದಿನಾಂಕ:05-11-2026(ಹಾಯ್ ಉಡುಪಿ ನ್ಯೂಸ್) ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60 ವರ್ಷದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿ, ಕೊಲೆ ಬೆದರಿಕೆ ಹಾಕಿದ ಘಟನೆ ಬೈಂದೂರು ತಾಲೂಕಿನ ನಾವುಂದ ಕೋಯಾನಗರದಲ್ಲಿ ನಡೆದಿದೆ.
ನಾವುಂದ ಕೋಯಾನಗರ ನಿವಾಸಿ ಜಿ.ಎಂ. ಸತ್ತಾರ್ (60) ಎಂಬವರು ನವೆಂಬರ್ 4ರಂದು ಬೆಳಿಗ್ಗೆ ಸುಮಾರು 9:30ರ ವೇಳೆಗೆ ತಮ್ಮ ಸ್ಕೂಟರ್‌ನಲ್ಲಿ ಮನೆಯಿಂದ ನಾವುಂದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಖತೀಜಾ ಅವರ ಮನೆಯ ಗೇಟಿನ ಬಳಿ ಎದುರಿನಿಂದ ಸ್ಕೂಟರ್‌ನಲ್ಲಿ ಬಂದ ಸವದ್ ಅಲಿಯಾಸ್ ಅಚ್ಚು ಹಾಗೂ ಇತರ ಇಬ್ಬರು ವ್ಯಕ್ತಿಗಳು ಸತ್ತಾರ್ ಅವರ ವಾಹನಕ್ಕೆ ಅಡ್ಡವಾಗಿ ಬಂದು ಅವರನ್ನು ತಡೆದಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಆರೋಪಿ ತನ್ನ ಸ್ಕೂಟರ್‌ನಲ್ಲಿದ್ದ ತಲವಾರನ್ನು ತೆಗೆದು ಸತ್ತಾರ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಸಿ ಹಲ್ಲೆಗೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರಿಂದ ತಪ್ಪಿಸಿಕೊಂಡ ಸತ್ತಾರ್ ಅವರು ಖತೀಜಾ ಅವರ ಮನೆಯ ಆವರಣದೊಳಗೆ ಓಡಿ ಹೋಗಿದ್ದು, ಆರೋಪಿಗಳು ಕೂಡ ಅವರನ್ನು ಬೆನ್ನಟ್ಟಿ ಆವರಣದೊಳಗೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎನ್ನಲಾಗಿದೆ.
ಬಳಿಕ ಸತ್ತಾರ್ ಅವರು ಮನೆಯೊಳಗೆ ತೆರಳಿ ತಪ್ಪಿಸಿಕೊಂಡಿದ್ದು, ಆರೋಪಿಗಳು ಅಲ್ಲಿಂದ ತೆರಳುವಾಗ ಅದೇ ದಿನ ರಾತ್ರಿ ಕೊಲೆ ಮಾಡುವುದಾಗಿ ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಸತ್ತಾರ್ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 160/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 126(2), 329(3), 352, 351(3), 109 ಹಾಗೂ 3(5)ರಂತೆ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

error: No Copying!