IMG-20251107-WA0003.jpg
Spread the love

ಗಾಂಧಿ ಹತ್ಯೆ ಹಿಂದಿನ ಸತ್ಯ,
ಲಾಲ್ ಬಹದ್ದೂರ್ ಶಾಸ್ತ್ರಿ ಸಾವಿನ ಸತ್ಯ,
ಬಸವಣ್ಣನವರ ಮರಣದ ಹಿಂದಿನ ಸತ್ಯ,
ಟಿಪ್ಪು ಸುಲ್ತಾನ್ ಹತ್ಯೆ ಮಾಡಿದ ಕೈಗಳ ಸತ್ಯ,
ಸುಭಾಷ್ ಚಂದ್ರ ಬೋಸ್ ಅಪಘಾತದ ಸತ್ಯ,
ಭಗತ್ ಸಿಂಗ್ ನೇಣುಗಂಬಕ್ಕೇರಲು ಕಾರಣವಾದವರ ಸತ್ಯ,
ಭಾರತದ ವಿಭಜನೆಗೆ ಸಹಕರಿಸಿದವರ ಸತ್ಯ,
ಬೌದ್ಧ ಮತ್ತು ಸನಾತನ ಧರ್ಮದ ಸಂಘರ್ಷದ ಸತ್ಯ,
ಚಾಮುಂಡೇಶ್ವರಿ ಮತ್ತು ಮಹಿಷರ ಉಗಮದ ಸತ್ಯ…..

ಹೀಗೆ ಇತಿಹಾಸದ ಎಲ್ಲಾ ಸತ್ಯಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ.

ಯಾವ ಸತ್ಯ ಬೇಕು ಹೇಳಿ.
ಜೊತೆಗೆ ಆ ಸತ್ಯಗಳನ್ನು ನಿಮಗೆ ಒಪ್ಪಿಗೆಯಾಗುವ, ಇಷ್ಟವಾಗುವ ಗ್ರಾಹಕ ಸ್ನೇಹಿ ( customise ) ರೀತಿಯಲ್ಲಿ ರಚಿಸಿಕೊಡಲಾಗುತ್ತದೆ. ಅದನ್ನು ಪುಸ್ತಕ ಮಾಡಬಹುದು, ನಾಟಕ ಮಾಡಬಹುದು, ಧಾರಾವಾಹಿ ಮಾಡಬಹುದು, ಸಿನಿಮಾ ಮಾಡಬಹುದು, ಬಯಲಾಟ, ಯಕ್ಷಗಾನ, ದೊಂಬರಾಟ, ಬೀದಿ ನಾಟಕ, ಚಿತ್ರಕಲೆ ಮುಂತಾದ ಯಾವ ರೂಪದಲ್ಲಿ ಬೇಕಾದರೂ ಉಪಯೋಗಿಸಿಕೊಳ್ಳಬಹುದು………

ಭಾರತದ ಅಭಿವ್ಯಕ್ತಿ ಸ್ವಾತಂತ್ರ್ಯದ ಮಹೋನ್ನತ ಕಾಲಘಟ್ಟದಲ್ಲಿ ನಾವು ನೀವು……

ಅರಿವೆಂದರೆ, ತನಗೆ ಏನು ತಿಳಿದಿದೆ, ಎಷ್ಟು ತಿಳಿದಿದೆ ಎಂಬುದರ ಜೊತೆಗೆ, ನನಗೆ ಏನು ತಿಳಿದಿಲ್ಲ ಎಂಬುದೂ ಅಷ್ಟೇ ಮುಖ್ಯ. ಜೊತೆಗೆ ನನ್ನ ಅರಿವಿನ ಪ್ರಮಾಣ, ಅದರ ಮಿತಿ, ಮತ್ತೆ ಅದರೊಳಗಿನ ಇತರೆ ನಿಲುಕದ ಸತ್ಯಗಳು ಎಲ್ಲದರ ಅರಿವಿರಬೇಕಾಗುತ್ತದೆ. ಏಕೆಂದರೆ ಸತ್ಯ ಅತ್ಯಂತ ಆಳವಾದದ್ದು ವಿಶಾಲವಾದದ್ದು.

ಸತ್ಯದಲ್ಲಿಯೂ ಹಲವಾರು ಆಯಾಮಗಳಿವೆ.

ಸಾರ್ವಕಾಲಿಕ ಸತ್ಯ,
ಸಾರ್ವತ್ರಿಕ ಸತ್ಯ,
ತಾತ್ಕಾಲಿಕ ಸತ್ಯ,
ಘಟನೆಯ ಸತ್ಯ,
ಸಾಂದರ್ಭಿಕ ಸತ್ಯ,
ಅರಿವಿನ ಸತ್ಯ,
ಊಹಾತ್ಮಕ ಸತ್ಯ,
ವ್ಯಾವಹಾರಿಕ ಸತ್ಯ,
ಭಕ್ತಿ ಭಾವಗಳ ಸತ್ಯ,
ವೈಚಾರಿಕ ಸತ್ಯ,
ಈ ಕ್ಷಣದ ಸತ್ಯ,
ವಾಸ್ತವಿಕ ಸತ್ಯ……
ಹೀಗೆ ಸತ್ಯವೂ ಒಂದಷ್ಟು ರೂಪದಲ್ಲಿ ಸಿಗುತ್ತದೆ.

” ಸತ್ಯದ ಜೊತೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ ” ಸಾಕ್ರೆಟಿಸ್………

ಕ್ರಿಸ್ತ ಪೂರ್ವ 399 ಇಸವಿಯ ಆಸುಪಾಸಿನಲ್ಲಿ ಬದುಕಿದ್ದ ಪಾಶ್ಚಾತ್ಯ ಸಂಸ್ಕೃತಿಯ ಅತ್ಯದ್ಬುತ ಚಿಂತಕ, ಗ್ರೀಕ್ ದೇಶದ ಅಥೆನ್ಸ್ ನ ಈ ಸಾಕ್ರೆಟಿಸ್. ಮತ್ತೊಬ್ಬ ಅದ್ಭುತ ತತ್ವಜ್ಞಾನಿ ಪ್ಲೋಟೋ ಕೂಡ ಇವರ ಶಿಷ್ಯರೇ ಆಗಿದ್ದರು. ಬಹುತೇಕ ಭಾರತದ ಗೌತಮ ಬುದ್ಧ, ಚೀನಾದ ಕನ್ಫ್ಯೂಷಿಯಸ್, ಲಾವೋತ್ಸೇ ಎಂಬ ಜಗತ್ತಿನ ಅತ್ಯದ್ಭುತ ಚಿಂತಕರ ರೀತಿಯಲ್ಲಿಯೇ ಕ್ರಿಸ್ತಪೂರ್ವ ಕಾಲಘಟ್ಟದ, ನಾಗರಿಕತೆಯ ಪ್ರಾರಂಭದ ಹಂತದಲ್ಲೇ ಮನುಷ್ಯನ ಅಂತಃಶಕ್ತಿ ಮತ್ತು ಸಾಮಾಜಿಕ ವ್ಯವಸ್ಥೆಯ ಬಗ್ಗೆ ಅತ್ಯಮೂಲ್ಯ ಸಾರ್ವತ್ರಿಕ ವಾಸ್ತವಗಳನ್ನು ಹೇಳಿದ್ದಾರೆ. ಅವುಗಳಲ್ಲಿ ಒಂದು ಸತ್ಯದ ಜೊತೆಗೆ ಬದುಕುವವನು ಯಾರಿಗೂ ಹೆದರಬೇಕಾಗಿಲ್ಲ.

ಇದೀಗ 2026ರಲ್ಲಿ 21ನೆಯ ಶತಮಾನದ ಕಾಲು ಭಾಗ ಪೂರೈಸಿ ಬದುಕುತ್ತಿರುವ ಈ ಸಂದರ್ಭದಲ್ಲಿ ಈ ವಾಕ್ಯವನ್ನು ಮರು ವ್ಯಾಖ್ಯಾನ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ.

ಸತ್ಯ ಎಂದರೇನು ಎಂಬುದೇ ಪ್ರಶ್ನಾರ್ಥಕವಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಸತ್ಯ ಒಂದೇ ಎಂಬುದೇನೋ ಸಾರ್ವಕಾಲಿಕ ಸ್ಥಿರ ಭಾವ ನಿಜ, ಆದರೆ ಈ ಕಾಲಘಟ್ಟದಲ್ಲಿ ಸತ್ಯದ ವಾಸ್ತವಿಕ ಅರ್ಥವೇ ಬದಲಾಗಿದೆ. ಅನೇಕ ವಿಭಿನ್ನ ದೃಷ್ಟಿಕೋನಗಳು ಸತ್ಯವನ್ನೇ ಮರೆಮಾಚುತ್ತಿವೆ. ಸತ್ಯವನ್ನೇ ವಿವಿಧ ದೃಷ್ಟಿಯಲ್ಲಿ ವ್ಯಾಖ್ಯಾನಿಸುತ್ತಿವೆ, ಸತ್ಯವನ್ನೇ ಮರು ಚಿಂತನೆಗೆ ಒಳಪಡಿಸುತ್ತಿವೆ, ಸತ್ಯವನ್ನೇ ಹೊಸದಾಗಿ ಅರ್ಥೈಸಲಾಗುತ್ತಿದೆ.

ಮಹಾತ್ಮ ಗಾಂಧಿಯವರ ತಮ್ಮ ಬದುಕಿನಲ್ಲಿ ಸತ್ಯದೊಂದಿಗೆ ಮಾಡಿದ ಪ್ರಯೋಗವೇ ಪ್ರಶ್ನಾರ್ಹ ಮತ್ತು ಹುಚ್ಚುತನದ ಪರಮಾವಧಿ ಎನ್ನುವಂತೆಯೂ ಚಿತ್ರಿಸಲಾಗುತ್ತಿದೆ.

ಸತ್ಯಕ್ಕೆ ಸಾವಿಲ್ಲ, ನಿಜ.
ಆದರೆ ಸತ್ಯಕ್ಕೆ ಆಗಾಗ ಸಾಂಕ್ರಾಮಿಕ ಖಾಯಿಲೆ ಬರುತ್ತದೆ. ಕೆಲವೊಮ್ಮೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಹಲವೊಮ್ಮೆ ತಿರಸ್ಕರಿಸಲ್ಪಡುತ್ತದೆ. ಸುಳ್ಳಿಗೆ ಬೆದರುತ್ತದೆ. ದ್ವೇಷಕ್ಕೆ ಬಲಿಯಾಗುತ್ತದೆ. ಕೋಪಕ್ಕೆ ತುತ್ತಾಗುತ್ತದೆ. ಅಸೂಯೆಗೆ ಮಣಿಯುತ್ತದೆ. ಸ್ವಾರ್ಥಕ್ಕೆ ಸೆರೆಯಾಗುತ್ತದೆ. ಅದು ಸತ್ಯದ ನಿಶ್ಯಕ್ತಿಯಲ್ಲ, ಸತ್ಯ ಅತ್ಯಂತ ಪ್ರಬಲ, ಅದು ಜನರ ಮಾನಸಿಕ ದೌರ್ಬಲ್ಯ.

ಯಾರಿಗೂ, ಎಂದಿಗೂ ಸ್ಪಷ್ಟವಾಗದ ಸತ್ಯದ ನಾನಾ ಮುಖಗಳು ಅಗ್ನಿ ಪರೀಕ್ಷೆಗೆ ಒಳಗಾಗುತ್ತಾ ತನ್ನ ಅಸ್ತಿತ್ವಕ್ಕಾಗಿ ಸದಾ ಹೋರಾಡುತ್ತಲೇ ಇರುತ್ತದೆ.

ಏಕೆಂದರೆ ಈ ಜಗತ್ತು ಮೌಲ್ಯಗಳನ್ನು ದಾಟಿ ಕೃತಕ ಬುದ್ಧಿಮತ್ತೆಯ ಸಂದರ್ಭದಲ್ಲಿ, ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿರುವ ಸ್ಥಿತಿಯಲ್ಲಿದೆ. ಈಗಿನ ಕಾಲದಲ್ಲಿ ಊಹಿಸಲು ಸಾಧ್ಯವಾಗದ ಆಧುನಿಕ ತಂತ್ರಜ್ಞಾನ, ಅತಿಯಾದ ಸ್ವೇಚ್ಛಾಚಾರ, ಹಿಂಸೆ, ವಂಚನೆ, ಇಡೀ ಸಮಾಜದ ನೈತಿಕತೆ ಕೆಳ ಹಂತಕ್ಕೆ ಇಳಿದು
” Success at any cost ” ಎಂಬ ಯಶಸ್ಸಿನ ಸಿದ್ದಾಂತ, ಅಪಾರ ಕೃತ್ರಿಮತೆ, ಹಣ ಕೇಂದ್ರೀಕೃತ ಸಮಾಜವಾಗಿ ದೇಹ, ಮನಸ್ಸುಗಳು ಮಲಿನಗೊಂಡಿವೆ.

ಗಾಂಧಿಯನ್ನು ನಾನೇಕೆ ಕೊಂದೆ ಎಂದು ಸಮರ್ಥಿಸಿಕೊಳ್ಳುವ ನಾಥುರಾಮ್ ಗೋಡ್ಸೆ ಅಥವಾ ನಿರ್ಭಯಳನ್ನು ನಾವೇಕೆ ಅತ್ಯಾಚಾರ ಮಾಡಿದೆವು ಎಂಬುದನ್ನು ಸಮರ್ಥಿಸಿಕೊಳ್ಳುವ ದೆಹಲಿಯ ನೇಣುಗಂಬಕ್ಕೇರಿದ ಅಪರಾಧಿಗಳು, ಇವರನ್ನು ಸಮರ್ಥಿಸುವ ಕೆಲವರು, ಹೀಗೆ ಸಮಾಜ ಬದಲಾಗುತ್ತಾ ಹೋದರೆ ಎಲ್ಲಾ ಕೊಲೆಗಳಿಗೂ, ಎಲ್ಲಾ ಅತ್ಯಾಚಾರಿಗಳಿಗೂ, ಎಲ್ಲಾ ಭ್ರಷ್ಟಾಚಾರಿಗಳಿಗೂ ಒಂದು ವೇದಿಕೆ ಕಲ್ಪಿಸಿ ಕೊಟ್ಟಂತೆ ಆಗುತ್ತದೆ.

ಕಾರಣಗಳು ಏನೇ ಇರಬಹುದು. ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ದೇಶದ್ರೋಹ ಎಲ್ಲವೂ ಅಪರಾಧಗಳೇ. ಕಾರಣಗಳು ನೆಪಗಳಾಗುವುದನ್ನು ನಾವು ತಿರಸ್ಕರಿಸದಿದ್ದರೆ ದೇಶದ ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು.

ಎಲ್ಲರಿಗೂ ಸಂಯಮ ಅಗತ್ಯ
ಚರ್ಚೆ ಮಾಡಬೇಕು ನಿಜ, ವಾದ ವಿವಾದ ಮಾಡಬೇಕು, ನಿಜ ಮಂಥನವಾಗಬೇಕು ನಿಜ. ಆದರೆ ಎಲ್ಲವೂ ಪ್ರಬುದ್ಧತೆಯಿಂದ ಕೂಡಿರಬೇಕು. ದ್ವೇಷ ಅಸೂಯೆಯಿಂದ ಕೂಡಿರಬಾರದು. ಸೈದ್ಧಾಂತಿಕತೆ, ಪ್ರಶಸ್ತಿ, ಪ್ರಚಾರ, ಶ್ರೇಷ್ಠತೆಯ ವ್ಯಸನಕ್ಕೆ ಒಳಗಾಗಿ ತಿರುಚುತ್ತಾ ಇತಿಹಾಸವನ್ನು ಗ್ರಹಿಸುವುದು ಅತ್ಯಂತ ಅಪಾಯಕಾರಿ.

ಸತ್ಯದ ಸಾಕ್ಷಾತ್ಕಾರ ………………

ಸತ್ಯದ ಶುಧ್ಧತೆ ಮತ್ತು ಪ್ರಾಮಾಣಿಕ ಸತ್ಯದ ನಿಷ್ಕಳಂಕ ವ್ಯಕ್ತಿತ್ವವನ್ನು
ಸ್ಪಷ್ಟವಾಗಿ ಸಾರುವ ಒಂದು ಸಣ್ಣ ಕಥೆ ಮಹಾತ್ಮ ಗಾಂಧಿಯವರ ದೃಷ್ಟಿಕೋನದಲ್ಲಿ.
ಎಲ್ಲೋ ಓದಿದ್ದು…..‌

ಒಮ್ಮೆ ಬ್ರಿಟಿಷ್ ವ್ಯಕ್ತಿಯೊಬ್ಬ ಗಾಂಧಿಯವರ ಬಳಿ ಅವರ ಸತ್ಯ ನಿಷ್ಠೆಯನ್ನು ಪ್ರಶ್ನೆ ಮಾಡುವ ಅಥವಾ ಅವಹೇಳನ ಮಾಡುವ ರೀತಿಯಲ್ಲಿ ಅವರಿಗೆ ಹೀಗೆ ಹೇಳುತ್ತಾನೆ.
” ಗಾಂಧಿಯವರೆ, ನಿಮ್ಮ ಕಠೋರ ಸತ್ಯ ಎಷ್ಟೊಂದು ಅಮಾನವೀಯ ಗೊತ್ತೆ. ಒಮ್ಮೆ ಒಬ್ಬ ಬೇಟೆಗಾರ ಒಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬರುತ್ತಾನೆ. ಅವನಿಂದ ತಪ್ಪಿಸಿಕೊಂಡು ಓಡುತ್ತಾ ಬರುವ ಜಿಂಕೆ ದಾರಿಯಲ್ಲಿ ಒಂದು ಮರದ ಕೆಳಗೆ ತಪಸ್ಸು ಮಾಡುತ್ತಾ ಕುಳಿತಿದ್ದ ಮಹಾನ್ ಸತ್ಯಸಂಧ ಮುನಿಯ ಬಳಿ
” ಅಯ್ಯಾ ಋಷಿ , ಬೇಟೆಗಾರನೊಬ್ಬ ನನ್ನನ್ನು ಕೊಲ್ಲಲು ಬರುತ್ತಿದ್ದಾನೆ. ದಯವಿಟ್ಟು ರಕ್ಷಿಸು. ತಪ್ಪಿಸಿಕೊಳ್ಳಲು ಜಾಗ ತೋರಿಸು ” ಎಂದು ಕೇಳಿಕೊಳ್ಳುತ್ತದೆ.

ಆಗ ಋಷಿ ‘ ಆಯಿತು. ಇಲ್ಲೇ ನನ್ನ ಹಿಂದೆ ಇರುವ ಆ ಗುಹೆಯಲ್ಲಿ ಅಡಗಿಕೋ’ ಎಂದು ಹೇಳುತ್ತಾನೆ.

ಸ್ವಲ್ಪ ಹೊತ್ತಿನಲ್ಲಿ ಜಿಂಕೆಯನ್ನು ಹುಡುಕುತ್ತಾ ಅದೇ ದಾರಿಯಲ್ಲಿ ಬಂದ ಬೇಟೆಗಾರ ಅಲ್ಲಿದ್ದ ಅದೇ ಮುನಿಯನ್ನು
” ಋಷಿವರ್ಯ ನಾನೊಂದು ಜಿಂಕೆಯನ್ನು ಬೇಟೆಯಾಡಲು ಅಟ್ಟಿಸಿಕೊಂಡು ಬಂದೆ ನೀವೇನಾದರೂ ನೋಡಿದಿರೆ “

ಅದಕ್ಕೆ ಎಂದೂ ಸುಳ್ಳಾಡದ ಆ ಮುನಿ
‘ ಹೌದು ನೋಡಿದೆ ‘ ಎನ್ನುತ್ತಾನೆ. ಬೇಟೆಗಾರ ‘ ಹಾಗಾದರೆ ಎಲ್ಲಿ ಹೋಯಿತು’

ಆಗ ಮುನಿ ‘ ನನ್ನನ್ನು ರಕ್ಷಣೆಗಾಗಿ ಕೇಳಿಕೊಂಡಿತು. ನಾನೇ ಹಿಂದೆ ಇರುವ ಗುಹೆಯಲ್ಲಿ ಬಚ್ಚಿಟ್ಟುಕೊಳ್ಳಲು ಹೇಳಿದ್ದೇನೆ’

ಅದನ್ನು ಕೇಳಿದ ಬೇಟೆಗಾರ ಗುಹೆಗೆ ಹೋಗಿ ಜಿಂಕೆಯನ್ನು ಕೊಂದು ಹೊತ್ತೊಯ್ಯುತ್ತಾನೆ.”

ಈ ಕಥೆಯನ್ನು ಗಾಂಧಿಗೆ ಹೇಳಿದ ಆ ಬ್ರಿಟಿಷ್ ” ನೋಡಿದಿರಾ ಗಾಂಧಿ, ಸಾಮಾನ್ಯ ಸಮಯ ಪ್ರಜ್ಞೆ ಇಲ್ಲದ ಮುನಿ ಒಂದು ಸಣ್ಣ ಸುಳ್ಳು ಹೇಳಿದ್ದರೆ ಆ ಅಮಾಯಕ ಜಿಂಕೆಯ ಪ್ರಾಣ ಉಳಿಸಬಹುದಿತ್ತು. ನಿಮ್ಮ ಆ ಸತ್ಯ ಕೂಡ ಕೆಲವೊಮ್ಮೆ ಎಷ್ಟೊಂದು ಕಠೋರ “

ಅದಕ್ಕೆ ಗಾಂಧಿಯ ಉತ್ತರ
” ಗೆಳೆಯ, ನಿಮ್ಮ ಕಥೆಯಲ್ಲಿ ತಪ್ಪು ಸತ್ಯದ್ದಲ್ಲ. ಅದು ಋಷಿಮುನಿಯದು. ಒಂದು ವೇಳೆ ನಾನು ಋಷಿಯ ಜಾಗದಲ್ಲಿದ್ದಿದ್ದರೆ ಬೇಟೆಗಾರ ಬಂದು ಕೇಳಿದಾಗ
‘ ಹೌದು ಜಿಂಕೆಯನ್ನು ನಾನೇ ಬಚ್ಚಿಟ್ಟಿದ್ದೇನೆ, ಅದು ಇರುವ ಜಾಗ ತಿಳಿದಿದೆ. ಆದರೆ ಅದನ್ನು ನೀನು ಕೊಲ್ಲುವುದರಿಂದ ಅದು ಎಲ್ಲಿದೆ ಎಂದು ಹೇಳುವುದಿಲ್ಲ. ಅದಕ್ಕಾಗಿ ನನ್ನ ಪ್ರಾಣ ತ್ಯಾಗಕ್ಕೂ ಸಿದ್ದ ಎಂದೇ ಹೇಳುತ್ತೇನೆ. ಸಮಸ್ಯೆ ಇರುವುದು ಸತ್ಯದ ಆಳದಲ್ಲಿ ಅಲ್ಲ. ಅದರ ಆಚರಣೆಗಳ ಪ್ರಾಮಾಣಿಕತೆಯಲ್ಲಿ.” ಎನ್ನುತ್ತಾರೆ.

ಮುಂದಿನ ವಿವರಣೆ ಬೇಕಿಲ್ಲ ಅಲ್ಲವೇ ?

ಸತ್ಯದ ದೈವಿಕತೆಯ ಸಾಕ್ಷಾತ್ಕಾರವೆಂದರೆ ಇದೇ….

ಮಾತಿಗಿಂತ – ಬರಹಕ್ಕಿಂತ ಬದುಕಿನ ರೀತಿಯೇ ಮುಖ್ಯ.
ಮೌಲ್ಯಗಳ ಪ್ರವಚನಕ್ಕಿಂತ ಅಳವಡಿಕೆಯೇ ನಮ್ಮ ಗುರಿಯಾಗಲಿ ಎಂಬ ಆಶಯದೊಂದಿಗೆ….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.

error: No Copying!