ಉಡುಪಿ: ದಿನಾಂಕ:29-10-2026(ಹಾಯ್ ಉಡುಪಿ ನ್ಯೂಸ್) ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಅಂಗಡಿ ಮಾಲಕರೋರ್ವರ ಮೇಲೆ ಮನೆ ಬಾಡಿಗೆ ಅಡ್ವಾನ್ಸ್ ಹಿಂತಿರುಗಿಸುವ ವಿಚಾರದಲ್ಲಿ ವ್ಯಕ್ತಿಯೋರ್ವ ಯಾಸಿಡ್ ಎರಚಿ ಕೊಲೆ ಯತ್ನ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಶಿವಳ್ಳಿ ಗ್ರಾಮದ ನಿವಾಸಿ ನವೀನ್ ಕುಮಾರ್ (58) ಎಂಬವರು ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿರುವ ಅಂಗಡಿ ಮಾಡಿಕೊಂಡಿದ್ದು, ನವೀನ್ ಕುಮಾರ್ ರವರ ವಿಷ್ಣುಮೂರ್ತಿ ನಗರದಲ್ಲಿರುವ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆದಾರರಾದ ಸುರೇಶ ಆಚಾರ್ಯ ರವರು ಪ್ರಸ್ತುತ ಮನೆ ಖಾಲಿ ಮಾಡಿದ್ದು ಮನೆಗೆ ಮುಂಗಡವಾಗಿ 20 ಸಾವಿರ ಹಣವನ್ನು ಕೊಟ್ಟಿದ್ದು ನವೀನ್ ಕುಮಾರ್ ರವರು ಮನೆಯನ್ನು ನೋಡಿದಾಗ ಗೋಡೆ , ಟ್ಯಾಪ್ ಹಾಳು ಮಾಡಿದ್ದು ಈ ಬಗ್ಗೆ ಮುಂಗಡ ಹಣದಲ್ಲಿ 2 ತಿಂಗಳ ಬಾಡಿಗೆ ಹಾಗೂ ದುರಸ್ತಿ ಹಣವನ್ನು ಕಡಿತಗೊಳಿಸಿಕೊಡುವುದಾಗಿ ಹೇಳಿದ್ದು, ಅದಕ್ಕೆ ಅರೋಪಿ ಸುರೇಶ ಆಚಾರ್ಯ ಒಪ್ಪದೆ 20 ಸಾವಿರ ರೂಪಾಯಿ ಕೂಡ ಕೊಡಬೇಕು ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಹೇಳಿ ದಿನಾಂಕ 23/10/2026 ರಂದು ನವೀನ್ ಕುಮಾರ್ ರ ಅಂಗಡಿಗೆ ಬಂದು ಬೆದರಿಕೆ ಹಾಕಿ ಹೋಗಿರುತ್ತಾರೆ .
ದಿನಾಂಕ 28/10/2026 ರಂದು ಸಂಜೆ 3:30 ಗಂಟೆಗೆ ನವೀನ್ ಕುಮಾರ್ ರವರು ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ಬಳಿ ಅಂಗಡಿಯಲ್ಲಿ ಕೆಲಸ ಮಾಡುವಾಗ ಸುರೇಶ ಆಚಾರ್ಯ ಅಂಗಡಿಗೆ ಬಂದು ನವೀನ್ ಕುಮಾರ್ ರಲ್ಲಿ ಮನೆಯ ಬಾಡಿಗೆ ಮುಂಗಡ ಹಣದ ವಿಚಾರದಲ್ಲಿ ಮಾತನಾಡುತ್ತಾ ಏರು ಧ್ವನಿಯಲ್ಲಿ ಜಗಳ ಮಾಡಿದ್ದು ನಂತರ ಹೊರಗೆ ಹೋಗಿ ಸ್ಕೂಟರ್ ನಿಂದ ಬಾಟಲಿ ಹಾಗೂ ದೊಡ್ಡ ಕತ್ತಿಯೊಂದನ್ನು ತಂದು ಆಸಿಡ್ ಇದನ್ನು ನಿನಗೆ ಹಾಕಿ ಸುಟ್ಟು ನಿನ್ನನ್ನು ಕೊಂದು ಬಿಡುತ್ತೇನೆ ಆಮೇಲೆ ಕತ್ತಿಯಿಂದ ಕಡಿದು ಹಾಕುತ್ತೇನೆ ಎಂದು ಹೇಳಿ ನವೀನ್ ಕುಮಾರ್ ರನ್ನು ಕೊಲ್ಲುವ ಉದ್ದೇಶದಿಂದ ಆಸಿಡ್ ನ್ನು ಅವರ ಮೈಮೇಲೆ ಹಾಕಿದ್ದು ನಂತರ ಕತ್ತಿಯನ್ನು ಹಿಡಿದು ಕಡಿಯಲು ಬಂದಾಗ ನವೀನ್ ಕುಮಾರ್ ಅವಿತುಕೊಂಡಿದ್ದು , ಆಸಿಡ್ ನಿಂದಾಗಿ ನವೀನ್ ಕುಮಾರ್ರ ಬಲ ಕೈ , ಸೊಂಟ ಹೊಟ್ಟೆ, , ಪಾದ ಮುಖ , ಎಡ ಕೈ ಸುಟ್ಟಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ನವೀನ್ ಕುಮಾರ್ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 147/2026 ಕಲಂ: 124(1), 109 BNS ರಂತೆ ಪ್ರಕರಣ ದಾಖಲಾಗಿದೆ.
