ಬ್ರಹ್ಮಾವರ: ದಿನಾಂಕ:28-10-2026 (ಹಾಯ್ ಉಡುಪಿ ನ್ಯೂಸ್) ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ರೌಡಿ ಶೀಟರ್ ಸುಜಿತ್ ಪಿಂಟೋ ಎಂಬವನನ್ನು ಇಬ್ಬರು ಯುವಕರು ಸೇರಿ ಕೊಲೆ ನಡೆಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 27/10/2026 ರಂದು ರಾತ್ರಿ ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಎಂಬಲ್ಲಿಗೆ ಸುಜಿತ್ ಪಿಂಟೋ(42) ಹಾಗೂ ಜೀವನ ಪೂಜಾರಿ (31),ಬೈಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಎಂಬವರನ್ನು ಆರೋಪಿತರಾದ ಬೈಕಾಡಿಯ ಪ್ರದೀಪ್ ಪೂಜಾರಿ ಹಾಗೂ ಪ್ರಮೋದ್ ಪೂಜಾರಿಯವರು ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಕರೆಸಿ ಕೊಂಡಿದ್ದಾರೆ .
ಅಲ್ಲಿಗೆ ತೆರಳಿದ ಸುಜಿತ್ ಪಿಂಟೋ ಹಾಗೂ ಜೀವನ ಪೂಜಾರಿ ಗೆ ಅವಾಚ್ಯವಾಗಿ ಬೈದು, ಪ್ರಮೋದ ಪೂಜಾರಿಯು ಒಮ್ಮೆಲೇ ಜೀವನ ಪೂಜಾರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದು, ಪ್ರದೀಪ್ ಪೂಜಾರಿ ಸುಜಿತ್ ಪಿಂಟೋನನ್ನು ಗಟ್ಟಿಯಾಗಿ ಹಿಡಿದುಕೊಂಡಾಗ, ಪುನಃ ಪ್ರಮೋದ ಪೂಜಾರಿಯು ಆತನ ಪ್ಯಾಂಟಿನ ಹಿಂಬದಿ ಸಿಕ್ಕಿಸಿದ್ದ ಸ್ಟೀಲ್ ಪೈಪ್‌ನಿಂದ ಅವನ ತಲೆಗೆ ಮತ್ತೆ ಮತ್ತೆ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದು, ಇದರಿಂದ ಅವನ ತಲೆಗೆ ಹಾಗೂ ಮುಖಕ್ಕೆ ಗಂಭೀರ ರಕ್ತಗಾಯಗಳಾಗಿದ್ದು, ಅಲ್ಲದೇ ಜೀವನ ಪೂಜಾರಿಯು ತಪ್ಪಿಸಿಕೊಂಡು ಓಡುವಾಗ ಆಪಾದಿತರು ಬಿಡದೆ ಬೆನ್ನಟ್ಟಿ ಬಂದು ಜೀವನ ಪೂಜಾರಿ ಯ ಬಲಕೈಗೆ, ಎಡಕಾಲಿನ ಗಂಟಿಗೆ ಅದೇ ಪೈಪ್‌ನಿಂದ ಹೊಡೆದು ಬೆದರಿಕೆ ಹಾಕಿ ಅಲ್ಲಿಂದ ಸ್ಕೂಟಿ ಮತ್ತು ಆಟೋ ರಿಕ್ಷಾದಲ್ಲಿ ಹೋಗಿರುತ್ತಾರೆ. ನಂತರ ಜೀವನ ಪೂಜಾರಿಯು ಪ್ರಾಣ ಭಯದಿಂದ ಭದ್ರಗಿರಿ ಸರ್ಕಲ್ ಬಳಿ ಬಂದು ಅಲ್ಲಿ ರಸ್ತೆಯ ಮೇಲೆ ಬಿದ್ದಿದ್ದ ಸುಜಿತ್ ಪಿಂಟೋನನ್ನು ಉಪಚರಿಸಲು ಹೋದಾಗ ಸುಜಿತ್ ಪಿಂಟೋ ನ ತಲೆಗೆ, ಮುಖಕ್ಕೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ರಕ್ತದ ಮಡುವಿನಲ್ಲಿ ಅಂಗಾತನೇ ಬಿದ್ದು ಮೃತಪಟ್ಟಿದ್ದನು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಜೀವನ ಪೂಜಾರಿ ತಿಳಿಸಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 202/2026 ಕಲಂ: 352, 351(1), 115(2) 118(1) 103 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
