ಕಾಪು: ದಿನಾಂಕ 28/10/2026 (ಹಾಯ್ ಉಡುಪಿ ನ್ಯೂಸ್) ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ.ಐ ರವರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಟಿ.ಐ,ಅವರು ದಿನಾಂಕ:27-10-2026 ರಂದು ಠಾಣೆಯಲ್ಲಿರುವ ಸಮಯ ಕಾಪು ವೃತ್ತದ Anti NDPS Squad ನ ಮುಖ್ಯಸ್ಥರಾದ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಅಜ್ಮತ್ ಅಲಿ ರವರು ಯಾರೋ ಇಬ್ಬರು ವ್ಯಕ್ತಿಗಳು ಕಾಪು ಹಾಗೂ ಮಟ್ಟು ಬೀಚ್ ಭಾಗಗಳಲ್ಲಿ ಪ್ರವಾಸಕ್ಕೆಂದು ಬರುವ ಪ್ರವಾಸಿಗರಿಗೆ ಗಾಂಜಾದಂತಹ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಪ್ರಸ್ತುತ ಆ ವ್ಯಕ್ತಿಗಳು ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗುಪ್ತ ಮಾಹಿತಿ ಇದ್ದು ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿ ದಾಳಿ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಾಹಿತಿ ಹಾಗೂ ಸೂಚನೆಯನ್ನು ನೀಡಿದ್ದಾರೆ .
ಕಾಪು ಪೊಲೀಸ್ ವ್ರತ್ತ ನಿರೀಕ್ಷಕರ ಸೂಚನೆಯಂತೆ ಪಿಎಸ್ಐ ಯವರು ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳವಾದ ಉಳಿಯಾರಗೋಳಿ ಗ್ರಾಮದ, ಯಾರ್ಡ್ ಬೀಚ್ ಬಳಿ ಇರುವ ಯಾರ್ಡ್ ಫ್ರೆಂಡ್ಸ್ ರಂಗಮಂಟಪದ ಬಳಿ ಹೋದಾಗ ಅದರ ಹಿಂಬದಿಯಲ್ಲಿ ಸಮುದ್ರದ ಪಕ್ಕದಲ್ಲಿ ಇಬ್ಬರು ವ್ಯಕ್ತಿಗಳು ಮಧ್ಯದಲ್ಲಿ ಒಂದು ಬ್ಯಾಗ್ ನ್ನು ಇಟ್ಟುಕೊಂಡು ಮಾತನಾಡುತ್ತಾ ಕುಳಿತುಕೊಂಡಿದ್ದು ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಹಿಡಿದುಕೊಂಡಿದ್ದು, ಅವರನ್ನು ಬಂಧಿಸಿ ಬಳಿಕ ಅವರನ್ನು ವಿಚಾರಿಸಿದಾಗ ಅವರ ಹೆಸರು 1. ಆರೀಫ್ (38), ಬೆಳಪು ಗ್ರಾಮ, ಕಾಪು ಮತ್ತು 2. ಅಕೀಫ್ (34), ಪಡುತೋನ್ಸೆ ಗ್ರಾಮ, ಉಡುಪಿ ಎಂಬುದಾಗಿದ್ದು, ಅವರುಗಳು ಹೈದರಬಾದ್ ನಿಂದ ಗಾಂಜಾವನ್ನು ಖರೀದಿ ಮಾಡಿ ಅದನ್ನು ಉಡುಪಿ ಭಾಗದ ಪಡುಬಿದ್ರಿ, ಕಾಪು, ಮಟ್ಟು, ಮಲ್ಪೆ ಬೀಚ್ ಭಾಗಗಳಲ್ಲಿ ಬರುವ ಪ್ರವಾಸಿಗರಿಗೆ ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಇಬ್ಬರೂ ಬೀಚ್ ಬದಿಯಲ್ಲಿ ಕುಳಿತು ಹಂಚಿಕೊಳ್ಳುತ್ತಿದ್ದೆವು ಎಂಬುದಾಗಿ ತಿಳಿಸಿರುತ್ತಾರೆ.
ಪೊಲೀಸರು ಬಳಿಕ ಅವರನ್ನು ಅಂಗಶೋಧನೆ ನಡೆಸಿದಾಗ ಅಕೀಫ್ ಎಂಬಾತನ ಪ್ಯಾಂಟಿನ ಕಿಸೆಯಲ್ಲಿ realme ಕಂಪನಿಯ ಒಂದು ಪೋನ್ ದೊರೆತಿದ್ದು, ಆರೀಫ್ ಎಂಬಾತನ ಪ್ಯಾಂಟಿನ ಕಿಸೆಯಲ್ಲಿ realme ಕಂಪನಿಯ ಒಂದು ಪೋನ್, Nokia ಕಂಪನಿಯ ಒಂದು ಕೀಪ್ಯಾಡ್ ಪೋನ್ ಹಾಗೂ 225/- ನಗದು ಹಣ ಇರುತ್ತದೆ. ಬಳಿಕ ಅವರ ವಶದಲ್ಲಿದ್ದ ಟೂರಿಸ್ಟ್ ಬ್ಯಾಗ್ ನ್ನು SOCO ಅಧಿಕಾರಿಗಳ ಮುಖೇನ ಪರಿಶೀಲಿಸಿದಾಗ ಬ್ಯಾಗ್ ನಲ್ಲಿ 3 ತುಂಬಿದ ಖಾಕಿ ಬಣ್ಣದ ಪ್ಯಾಕೇಟ್ ಗಳು ಇದ್ದು, ಅವುಗಳನ್ನು ಒಂದೊಂದಾಗಿಯೇ ತೆರೆದು ಪರಿಶೀಲಿಸಿದಾಗ ಅವುಗಳಲ್ಲಿ ಹೂ, ಎಲೆ, ಖಾಂಡ, ಕಟ್ಟಿ, ಭೀಜ ಮಿಶ್ರಿತ ಗಾಂಜಾ ಸೊಪ್ಪು ಇರುವುದು ಕಂಡುಬರುತ್ತದೆ.ಅವುಗಳನ್ನು ಪರಿಶೀಲಿಸಲಾಗಿ ಪ್ರಾಥಮಿಕವಾಗಿ ಇದು ಗಾಂಜಾ ಎಂದು ತಿಳಿದುಬಂದಿರುತ್ತದೆ. ಮೊದಲನೆ ಪ್ಯಾಕೇಟ್ ನಲ್ಲಿ 2.63 kg, ಎರಡನೇ ಪ್ಯಾಕೇಟ್ ನಲ್ಲಿ 1.25 kg, ಮೂರನೇ ಪ್ಯಾಕೇಟ್ ನಲ್ಲಿ 1.83 kg ಯಂತೆ ಒಟ್ಟು 5.710 kg ತೂಕವಿದ್ದು ಗಾಂಜಾದ ಅಂದಾಜು ಮೌಲ್ಯ 2,85,000/- ಆಗಿರುತ್ತದೆ. ಗಾಂಜಾ ಪ್ಯಾಕೇಟ್ ಗಳನ್ನು, ಮೊಬೈಲ್ ಪೋನ್ ಗಳನ್ನು, ನಗದು ಹಣವನ್ನು ಹಾಗೂ ಟೂರಿಸ್ಟ್ ಬ್ಯಾಗನ್ನುಸ್ವಾಧೀನಪಡಿಸಿಕೊಂಡು ಆಪಾದಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2026 ಕಲಂ:8(C) 20(b)(ii)(B) NDPS ACT ರಂತೆ ಪ್ರಕರಣ ದಾಖಲಾಗಿದೆ.
