ದಿನಾಂಕ:28-10-2026(ಹಾಯ್ ಉಡುಪಿ ನ್ಯೂಸ್)
ಮಣಿಪಾಲ: ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯೋರ್ವನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಉಡುಪಿ ಕಿನ್ನಿಮೂಲ್ಕಿಯ ಮಾಂಡವಿ ಪ್ಯಾರಡೈಸ್ ನಿವಾಸಿ ಮಹಮ್ಮದ್ ಪರ್ವೇಜ್ (26) ಎಂದು ಗುರುತಿಸಲಾಗಿದೆ.
ಅ.24ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖೆ) ಶಂಭುಲಿಂಗಯ್ಯ ಎಂ.ಇ. ಅವರು ಗಸ್ತಿನಲ್ಲಿದ್ದಾಗ ದೊರೆತ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಆತನಿಂದ ಸುಮಾರು 20 ಇಂಚು ಉದ್ದದ ನೀಲಿ ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಲಾಂಗ್ ಹಾಗೂ ಸುಮಾರು 16 ಇಂಚು ಉದ್ದದ ಹಸಿರು ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಈಗಾಗಲೇ ಉಡುಪಿ ನಗರ, ಶಿರ್ವ, ಸೆನ್ ಹಾಗೂ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ದಾವೂದ್, ಇಸಾಕ್ ಹಾಗೂ ಗರುಡ ಗ್ಯಾಂಗ್ನ ಕೆಲವರೊಂದಿಗೆ ವೈಮನಸ್ಸು ಹೊಂದಿದ್ದು, ಅವರ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಆಯುಧಗಳನ್ನು ಇಟ್ಟುಕೊಂಡಿರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026ರಂತೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಕಲಂ 4 ಮತ್ತು 25(1B)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
