ಬೆಂಗಳೂರು: ದಿನಾಂಕ:14-10-2026(ಹಾಯ್ ಉಡುಪಿ ನ್ಯೂಸ್) ಭಿಕ್ಷಾಟನೆಗೆ ಮಕ್ಕಳ ಬಳಕೆ ವಿರುದ್ಧ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಕಾರ್ಯಾಚರಣೆಯಲ್ಲಿ ಅಪ್ರಾಪ್ತ ವಯಸ್ಸಿನ 13 ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದು ಗ್ರಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನ ಯಲಹಂಕ ವ್ಯಾಪ್ತಿಯಲ್ಲಿ ಹೊರರಾಜ್ಯಗಳಿಂದ ಅಪ್ರಾಪ್ತ ಮಕ್ಕಳನ್ನು ಕರೆತಂದು ಟ್ರಾಫಿಕ್ ಸಿಗ್ನಲ್ಗಳಲ್ಲಿ ಭಿಕ್ಷಾಟನೆಗೆ ತಳ್ಳುತ್ತಿದ್ದ ಅಮಾನವೀಯ ಜಾಲವನ್ನು ಪತ್ತೆಹಚ್ಚಿದ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಂಟಿ ಕಾರ್ಯಾಚರಣೆ ಅತ್ಯಂತ ಶ್ಲಾಘನೀಯ ಎಂದು ಸಚಿವರು ಹೇಳಿದರು.
ಸಿಸಿಬಿ ಪಡೆ ದಾಳಿ ನಡೆಸಿ 13 ಅಪ್ರಾಪ್ತ ಮಕ್ಕಳನ್ನು ರಕ್ಷಿಸಿ, ಈ ದಂಧೆಯಲ್ಲಿದ್ದ ಹೊರರಾಜ್ಯದ 4 ಮಂದಿ ಆರೋಪಿಗಳನ್ನು ಬಂಧಿಸಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿ ಸುರಕ್ಷಿತ ಪುನರ್ವಸತಿಗೆ ಕ್ರಮ ಕೈಗೊಳ್ಳಲಾಗಿದೆ.
ಮಕ್ಕಳ ಸುರಕ್ಷತೆ ಮತ್ತು ಪ್ರತಿಯೊಂದು ಮಗುವಿಗೂ ಭದ್ರವಾದ, ಹಸನಾದ ಬಾಲ್ಯ ರೂಪಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಮಕ್ಕಳನ್ನು ಭಿಕ್ಷಾಟನೆಗೆ ಅಥವಾ ಕಾನೂನುಬಾಹಿರ ಕೆಲಸಗಳಿಗೆ ಬಳಸಿಕೊಳ್ಳುವ ಯಾವುದೇ ಜಾಲಗಳ ವಿರುದ್ಧ ಕಠಿಣ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕರು ನಿಮ್ಮ ಸುತ್ತಮುತ್ತ ಮಕ್ಕಳ ಶೋಷಣೆ ಅಥವಾ ಭಿಕ್ಷಾಟನೆ ಕಂಡುಬಂದಲ್ಲಿ ತಕ್ಷಣವೇ 1098 ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಸಚಿವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
